ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಮತ್ತಷ್ಟು ಅರ್ಹರ ಸೇರ್ಪಡೆ: ಕೇರಳ ಸಚಿವ ಚಂದ್ರಶೇಖರನ್

ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಮತ್ತಷ್ಟು ಅರ್ಹರ ಸೇರ್ಪಡೆ: ಕೇರಳ ಸಚಿವ ಚಂದ್ರಶೇಖರನ್

SK   ¦    Sep 14, 2018 07:55:43 PM (IST)
ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಮತ್ತಷ್ಟು ಅರ್ಹರ ಸೇರ್ಪಡೆ: ಕೇರಳ ಸಚಿವ ಚಂದ್ರಶೇಖರನ್

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತ ಪಟ್ಟಿಯಲ್ಲಿ ಇನ್ನಷ್ಟು ಅರ್ಹರನ್ನು ಸೇರ್ಪಡೆಗೊಳಿಸಲು ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್ ಸಂತ್ರಸ್ಥರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಂತ್ರಸ್ಥ ಪಟ್ಟಿಯಲ್ಲಿ 77 ಮಂದಿಯನ್ನು ಹೊಸದಾಗಿ ಸೇರ್ಪಡೆಗೊಳಿಸಲು ಶಿಫಾರಸು ಮಾಡಲಾಗಿದೆ.
2017ರ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡ 287 ಮಂದಿಯನ್ನು ಸಂತ್ರಸ್ಥ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಇದರಿಂದ ಶಿಬಿರದಲ್ಲಿ ಪಾಲ್ಗೊಂಡ 364 ಮಂದಿಯನ್ನು ಇದುವರೆಗೆ ಸೇರ್ಪಡೆಗೊಳಿಸಲಾಗಿದೆ. ಶಿಬಿರಕ್ಕೆ ಹಾಜರಾದ 1618 ಮಂದಿಯನ್ನು ಸೇರ್ಪಡೆ ಕುರಿತು ಪರಿಶೀಲಿಸಲು 2018ರ ಫೆಬ್ರವರಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸೆಲ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಈ ಪೈಕಿ 77 ಮಂದಿಯನ್ನು ಸೇರ್ಪಡೆಗೊಳಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗಿದೆ. ಉಳಿದ 1037 ಮಂದಿಯನ್ನು ಸೇರ್ಪಡೆಗೊಳಿಸಲು ಅರ್ಹತೆ ಹೊಂದಿಲ್ಲ ಎಂದು ಅಧಿಕಾರಿಗಳು ಸಭೆಯಲ್ಲಿ ವರದಿ ಮುಂದಿಟ್ಟರು.

ಇದರಿಂದ 2017ರ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ 1037 ಮಂದಿ ಸಂತ್ರಸ್ತ ಯಾದಿಯಿಂದ ಹೊರಗುಳಿಯುವಂತಾಯಿತು. 369 ಮಂದಿಯ ಸೇರ್ಪಡೆಯಿಂದ ಎಂಡೋಸಲ್ಫಾನ್ ಸಂತ್ರಸ್ತ ಪಟ್ಟಿಯಲ್ಲಿ ಸೇರ್ಪಡೆಯಾದವರ ಸಂಖ್ಯೆ 6212ಕ್ಕೆ ತಲುಪಿದೆ.

ಎಂಡೋ ಸಂತ್ರಸ್ಥ ವಲಯದ ಮುಳಿಯಾರ್ ನ 25 ಎಕರೆ ಸ್ಥಳದಲ್ಲಿ ನಿರ್ಮಿಸಲುದ್ದೇಶಿಸಿರುವ ಪುನರ್ವಸತಿ ಗ್ರಾಮದ ಬಗ್ಗೆ ಅಕ್ಟೋಬರ್ 15ರ ಮೊದಲು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ಆದೇಶಿಸಲಾಯಿತು. ವರದಿ ಲಭಿಸಿದ ಬಳಿಕ ಕಾಮಗಾರಿ ಪ್ರಕ್ರಿಯೆ ಆರಂಭಿಸಲಾಗುವುದು.

ನಬಾರ್ಡ್ ಆರ್ ಐಡಿಎಫ್ ಯೋಜನೆಗೆ ಸಂಬಂಧಪಟ್ಟಂತೆ ಇದುವರೆಗೆ 151 ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. 21 ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಭೆಗೆ ತಿಳಿಸಲಾಯಿತು. ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಶೀಘ್ರ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಂತ್ರಸ್ತರ ಮೂರು ಲಕ್ಷ ರೂ. ತನಕದ ಸಾಲ ಮನ್ನಾ ಮಾಡಲು 7.63 ಲಕ್ಷ ರೂ. ಒದಗಿಸಲು ಸರಕಾರ ತೀರ್ಮಾನಿಸಿದೆ.

ಬ್ಯಾಂಕು ಗಳು ಸಾಲ ಮರುಪಾವತಿಗೆ ನೀಡಿರುವ ಕಾಲಾವಧಿ ಅಕ್ಟೊಬರ್ 25ಕ್ಕೆ ಕೊನೆಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ದೂರುಗಳಿದ್ದಲ್ಲಿ ಜಿಲ್ಲಾಧಿಕಾರಿಗೆ ನೀಡುವಂತೆ ಸಚಿವರು ಹೇಳಿದರು.

ಸಭೆಯಲ್ಲಿ ಶಾಸಕರಾದ ಕೆ. ಕುಞರಾಮನ್, ಎನ್. ಎ. ನೆಲ್ಲಿಕುನ್ನು, ಎಂ. ರಾಜಗೋಪಾಲ್, ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು, ಎಂಡೋ ಸೆಲ್ ಉಪ ಜಿಲ್ಲಾಧಿಕಾರಿ ಕೆ. ಜಯಲಕ್ಷ್ಮಿ ಹಾಗೂ ಸೆಲ್ ಸದಸ್ಯರು ಉಪಸ್ಥಿತರಿದ್ದರು.