ಕೊರೋನ ತಡೆಗೆ ಗ್ರಾಮೀಣರಲ್ಲಿ ಜಾಗೃತಿ ಕಾರ್ಯಕ್ರಮ

ಕೊರೋನ ತಡೆಗೆ ಗ್ರಾಮೀಣರಲ್ಲಿ ಜಾಗೃತಿ ಕಾರ್ಯಕ್ರಮ

LK   ¦    Mar 26, 2020 07:02:28 PM (IST)
ಕೊರೋನ ತಡೆಗೆ ಗ್ರಾಮೀಣರಲ್ಲಿ ಜಾಗೃತಿ ಕಾರ್ಯಕ್ರಮ

ಮಂಡ್ಯ: ಕೊರೋನಾ ವೈರಸ್ ತಡೆ ಕುರಿತಂತೆ ಜನ ಜಾಗೃತಿ ನಡೆಸಲಾಗುತ್ತಿದ್ದು ಯಾರೂ ಕೂಡ ಮನೆಯಿಂದ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರೂ ನಗರಗಳಲ್ಲಿ ಸುಖಾ ಸುಮ್ಮನೆ ಹೊರಗೆ ಬಂದು ಪೊಲೀಸರ ಲಾಠಿ ಏಟು ತಿನ್ನುತ್ತಿರುವವರು ಒಂದು ಕಡೆಯಾದರೆ ಹಳ್ಳಿಗಳಲ್ಲಿ ತಾವೇ ಜಾಗೃತರಾಗುವುದರೊಂದಿಗೆ ಇತರರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿರುವುದು ಕಂಡುಬರುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿದ್ದು, ನಗರದಲ್ಲಿ ಅದನ್ನು ಕಠಿಣವಾಗಿ ಜಾರಿಗೆ ತರಲು ಪ್ರಯತ್ನಿಸುತ್ತಿದ್ದರೆ, ಇತ್ತ ಮಳವಳ್ಳಿ ತಾಲೂಕಿನ ಬೆಳಕವಾಡಿ  ಎಂಬ ಗ್ರಾಮದಲ್ಲಿ ಗ್ರಾ.ಪಂ. ಅಧ್ಯಕ್ಷ ಪಿ.ಸೋಮು ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಬೆಳಕವಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೊರೋನಾ ವೈರಸ್ ತಡೆಗಟ್ಟಲು ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಾದ ಬಾವಿ, ಕೆರೆ, ನದಿ, ಬೀದಿಗಳಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಸೇರಬಾರದು, ಪ್ರತಿಯೊಬ್ಬರೂ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು, ಪರಸ್ಪರ ಒಬ್ಬರು ಮತ್ತೊಬ್ಬರನ್ನು ಮುಟ್ಟಬಾರದು, ಕೊರೋನಾ ವೈರಸ್ ಬಗ್ಗೆ ಗ್ರಾಮಗಳಲ್ಲಿ ಸುಳ್ಳು ವದಂತಿ ಹಬ್ಬಿಸಬಾರದು. ಮದುವೆ, ಜಾತ್ರೆ, ಗುಂಪು ಚಟುವಟಿಕೆಯನ್ನು ಮಾಡಬಾರದು.

ಹತ್ತು ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷದ ಹಿರಿಯ ನಾಗರಿಕರು, ಗರ್ಭಿಣಿಯರು, ಬಾಣಂತಿಯರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು, ಸಾರ್ವಜನಿಕರಿಗೆ ಕೆಮ್ಮು ನೆಗಡಿ ತಲೆನೋವು ಜ್ವರ ಗಂಟಲು ನೋವು, ಉರಿ, ಊತ ಕಾಣಿಸಿಕೊಂಡರೆ ಹತ್ತಿರದ ಸಾರ್ವಜನಿಕ ಆಸ್ಪತ್ರೆಯನ್ನು ಸಂಪರ್ಕಿಸಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಸಾರ್ವಜನಿಕರಿಗೆ ಆಟೋದಲ್ಲಿ ಗ್ರಾಮದಾದ್ಯಂತ ಸಂಚರಿಸಿ ಪ್ರಚಾರ ಮಾಡುತ್ತಾ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಈ ಕಾರ್ಯದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಸ್ವಾಮಿ, ಸಿಬ್ಬಂದಿ ಮಹದೇವಸ್ವಾಮಿ ಸೇರಿದಂತೆ ಹಲವರು ಜತೆಗಿದ್ದು ಸಹಕಾರ ನೀಡುತ್ತಿದ್ದಾರೆ. ಇದು ಇವತ್ತಿನ ದಿನಗಳಲ್ಲಿ ಅಗತ್ಯವಾಗಿದ್ದು, ಕೊರೊನ ತಡೆಗೆ ಗ್ರಾಮೀಣ ಪ್ರದೇಶದಿಂದ ನಗರದವರೆಗೆ ಪ್ರತಿಯೊಬ್ಬರೂ ಜವಬ್ದಾರಿಯಿಂದ ವರ್ತಿಸುವುದು ಅನಿವಾರ್ಯವಾಗಿದೆ.