ಓಮನ್ ಪೊಲೀಸರಿಂದ ಬಂಧಿಸಲ್ಪಟ್ಟ ಮೀನುಗಾರರು

ಓಮನ್ ಪೊಲೀಸರಿಂದ ಬಂಧಿಸಲ್ಪಟ್ಟ ಮೀನುಗಾರರು

SB   ¦    Oct 11, 2018 06:49:25 PM (IST)
ಓಮನ್ ಪೊಲೀಸರಿಂದ ಬಂಧಿಸಲ್ಪಟ್ಟ ಮೀನುಗಾರರು

ಕಾರವಾರ: ಕಳೆದ ಎರಡು ತಿಂಗಳ ಹಿಂದೆ ದುಬೈನಿಂದ ಮೀನುಗಾರಿಕೆಗೆ ತೆರಳಿದ್ದ ವೇಳೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಕುಮಟಾ ತಾಲೂಕುಗಳ 17 ಮೀನುಗಾರರನ್ನು ಓಮನ್ ಪೊಲೀಸರು ಸಿನಾವ್ ಎಂಬಲ್ಲಿ ಬಂಧಿಸಿದ್ದಾರೆ ಎನ್ನುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಭಟ್ಕಳ ತಾಲೂಕಿನ ಮುರ್ಡೇಶ್ವರದ ಇಬ್ರಾಹಿಂ ಮುಲ್ಲಾ ಫಖೀರಾ, ಮುಹಮ್ಮದ್ ಅನ್ಸಾರ್ ಬಾಪು, ನಯೀಮ್ ಭಾಂಡಿ, ತೆಂಗಿನಗುಂಡಿಯ ಖಲೀಲ್ ಪಾನಿಬುಡು, ಉಸ್ಮಾನ್ ಇಸಾಖ್, ಅಬ್ದುಲ್ ಹುಸೇನ್, ಮುಹಮ್ಮದ್ ಬಾಪು, ಅಬ್ದುಲ್ಲಾ ಡಾಂಗಿ, ಕುಮಟಾ ತಾಲೂಕಿನ ಅತಿಖ್ ಧಾರು, ಯಾಖೂಬ್ ಶಮು, ಇಲ್ಯಾಸ್ ಅಂಬಾಡಿ, ಇಲ್ಯಾಸ್ ಘರಿ, ಇನಾಯತ್ ಶಮ್ಸು, ಖಾಸಿಮ್ ಶೇಖ್, ಅಜ್ಮಲ್ ಶಮನಿ ಬಂಧಿತ ಮೀನುಗಾರರು ಎಂಬ ಮಾಹಿತಿ ದೊರೆತಿದೆ.

ಕಳೆದ ಎರಡು ತಿಂಗಳ ಹಿಂದೆ ಅಂದರೆ ಮೀನುಗಾರಿಕೆಯ ಮೇಲೆ ನಿರ್ಬಂಧ ಹೇರಿದ್ದ ಸಮಯದಲ್ಲಿಯೇ ದುಬೈನಿಂದ ಮೀನುಗಾರರು 3 ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಓಮನ್‌ನ ಸಿನಾವ್ ಕಡಲಿನಲ್ಲಿ ಮೀನುಗಾರಿಕೆ ನಡೆಸಿ ಸುಮಾರು 800 ಕೆ.ಜಿ. ಕಿಂಗ್‌ಫಿಶ್ ಬೇಟೆಯಾಡಿದ್ದರು.

ಆ ಸಂದರ್ಭದಲ್ಲಿ ಓಮನ್ ಪೊಲೀಸರು ಹಾಗೂ ಕೃಷಿ ಮತ್ತು ಮೀನುಗಾರಿಕೆ ಸಚಿವಾಲಯದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಒಂದು ಮೀನುಗಾರಿಕಾ ದೋಣಿಯಲ್ಲಿದ್ದವರನ್ನು ಬಂಧಿಸಿ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಇನ್ನೊಂದು ದೋಣಿಯಲ್ಲಿದ್ದ ಮೀನುಗಾರರನ್ನು ಮರಳಿ ದುಬೈಗೆ ತೆರಳದಂತೆಯೂ ಸಮುದ್ರ ಮಧ್ಯದಲ್ಲೆ ನಿರ್ಬಂಧವನ್ನು ಹೇರಿದ್ದಾರೆ. ಅವರಲ್ಲಿ 17 ಮಂದಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಹಾಗೂ ಒಬ್ಬ ಉಡುಪಿ ಜಿಲ್ಲೆಯವರೂ ಸೇರಿದ್ದಾರೆ ಎನ್ನಲಾಗಿದೆ.

ಭಟ್ಕಳದ ತಂಝೀಮ್ ಸಂಸ್ಥೆಯಿಂದ ಸುಷ್ಮಾ ಸ್ವರಾಜ್‌ಗೆ ಮನವಿ:

ಬಂಧನಕ್ಕೊಳಗಾದವರ ಕುಟುಂಬದವರು ಬಂಧಿತರನ್ನು ಬಿಡಿಸಿಕೊಂಡು ಭಾರತಕ್ಕೆ ಮರಳಿಸುವ ವ್ಯವಸ್ಥೆ ಮಾಡಬೇಕೆಂದು ತಂಝೀಮ್ ಸಂಸ್ಥೆಗೆ ಮಾನವಿ ಮಾಡಿದ್ದಾರೆ ಎಂದು ಭಟ್ಕಳದ ಮಜ್ಲಿಸೆ ಇಸ್ಲಾಹ್- ವ- ತಂಝೀಮ್‌ನ ಉಪಾಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಓಮನ್ ಪೋಲಿಸರು ಬಂಧಿತರನ್ನು ಬಿಡುತ್ತೇವೆ ಎಂದು ಹೇಳಿ ತಿಂಗಳುಗಳು ಕಳೆದರೂ ಇದುವರೆಗೂ ಬಿಡುಗಡೆ ಮಾಡಿಲ್ಲ. ಆದ್ದರಿಂದ ಈ ಬಗ್ಗೆ ಕ್ರಮ ಕೈಗೊಂಡು ಅವರನ್ನು ಮರಳಿ ಭಾರತಕ್ಕೆ ಕರೆತರಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡುತ್ತೇವೆ. ಭಟ್ಕಳ ಉಪವಿಭಾಗಾಧಿಕಾರಿ ಮೂಲಕ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.