ಚುಂಚನಕಟ್ಟೆ ಜಾತ್ರೆಯಲ್ಲಿ ಎತ್ತುಗಳದ್ದೇ ದರ್ಬಾರ್!  

ಚುಂಚನಕಟ್ಟೆ ಜಾತ್ರೆಯಲ್ಲಿ ಎತ್ತುಗಳದ್ದೇ ದರ್ಬಾರ್!  

LK   ¦    Jan 07, 2019 12:11:55 PM (IST)
ಚುಂಚನಕಟ್ಟೆ ಜಾತ್ರೆಯಲ್ಲಿ ಎತ್ತುಗಳದ್ದೇ ದರ್ಬಾರ್!   

ಮೈಸೂರು: ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಜಾತ್ರೆಯು ಹಳೆ ಮೈಸೂರು ಭಾಗದಲ್ಲಿ ಪ್ರಖ್ಯಾತಿ ಪಡೆದಿದ್ದು, ಇಲ್ಲಿ ನಡೆಯುವ ದನಜಾತ್ರೆ ಪ್ರಮುಖ ಆಕರ್ಷಣೆಯಾಗಿದ್ದು, ಈ ಜಾತ್ರೆಗೆ ಸುತ್ತಮುತ್ತಲ ಗ್ರಾಮಗಳಲ್ಲದೆ, ಹೊರ ಜಿಲ್ಲೆ ರಾಜ್ಯಗಳಿಂದ ಜಾನುವಾರುಗಳನ್ನು ತರುವುದು ಮತ್ತು ಖರೀದಿಸುವುದು ನಡೆಯುತ್ತದೆ. 

ಇನ್ನು ಜಾತ್ರೆಯಲ್ಲಿ ತಮ್ಮದೇ ಆದ ಕೊಬ್ಬಿದ ಎತ್ತುಗಳ ಪ್ರದರ್ಶನ ನಡೆಸುವುದು ಮತ್ತೊಂದು ವಿಶೇಷವಾಗಿದೆ. ಜಾತ್ರೆ ಈಗಾಗಲೇ ಆರಂಭವಾಗಿದ್ದು, ಜನವರಿ 18ರಂದು ಜಾತ್ರೆಗೆ ತೆರೆಬೀಳಲಿದೆ. ಚುಂಚನಕಟ್ಟೆ ಜಾತ್ರೆ ಮುಗಿಯುತ್ತಿದ್ದಂತೆಯೇ ಈ ಭಾಗದಲ್ಲಿ ಹಲವು ಜಾತ್ರೆಗಳು ನಡೆಯಲಿವೆ. ಹಿಂದಿನಿಂದಲೂ ಈ ಭಾಗದ ಜನರಿಗೆ ಚುಂಚನಕಟ್ಟೆ ಜಾತ್ರೆ ಎಂದರೆ ಎಲ್ಲಿಲ್ಲದ ಸಂತೋಷ. ರೈತಾಪಿ ವರ್ಗಕ್ಕೆ ಈ ಜಾತ್ರೆಯಲ್ಲಿ ತಮ್ಮ ರಾಸುಗಳನ್ನು ಕಟ್ಟಿ ಪ್ರದರ್ಶಿಸುವುದು, ಮಾರಾಟ ಮಾಡುವುದು, ತಮಗೆ ಬೇಕಾದ ಎತ್ತುಗಳನ್ನು ಖರೀದಿ ಮಾಡುವ ಸಂಭ್ರಮ ಎದ್ದು ಕಾಣುತ್ತಿದೆ. 

ಈಗಾಗಲೇ ಕೃಷಿ ಕಾರ್ಯಕ್ಕೆ ಯಂತ್ರಗಳು ಬಂದಿದ್ದರೂ ಬಹಳಷ್ಟು ರೈತರಿಗೆ ಎತ್ತುಗಳ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ತಮ್ಮೊಂದಿಗೆ ಒಂದಾಗಿ ದುಡಿಯುವ ಅವುಗಳನ್ನು ಜತನದಿಂದ ನೋಡಿಕೊಳ್ಳುತ್ತಾ ಬರುತ್ತಿದ್ದಾರೆ. ತಮಗೆ ಬೇಡದ ಮತ್ತು ಮನೆಯಲ್ಲಿ ಹೆಚ್ಚಿಗೆ ಇರುವ ಎತ್ತುಗಳನ್ನು ಜಾತ್ರೆಗೆ ಕೊಂಡೊಯ್ದು ಕೆಲವರು ಮಾರಿದರೆ ಮತ್ತೆ ಕೆಲವರು ಜಾತ್ರೆಯಲ್ಲಿ ತಮಗೆ ಬೇಕಾದ ಎತ್ತುಗಳನ್ನು ಖರೀದಿಸಿ ತರುತ್ತಾರೆ. ಇಲ್ಲಿ ಜೋಡಿ ಎತ್ತುಗಳಿಗೆ ಮೂವತ್ತು ಸಾವಿರದಿಂದ ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಇರುವುದು ಕಂಡು ಬರುತ್ತದೆ. 

ಸಾಮಾನ್ಯವಾಗಿ ಬೇರೆಡೆ ನಡೆಯುವ ಜಾತ್ರೆಯಲ್ಲಿ ದನಗಳ ಜಾತ್ರೆ ನಡೆಯುತ್ತದೆಯಾದರೂ ಅಲ್ಲಿ ಹಸು, ಕರು, ಎತ್ತು ಹೀಗೆ ಎಲ್ಲ ರೀತಿಯ ಜಾನುವಾರುಗಳು ಇರುತ್ತವೆ. ಆದರೆ ಚುಂಚನಕಟ್ಟೆ ಜಾತ್ರೆಯಲ್ಲಿ ಮಾತ್ರ ಹಾಗಿಲ್ಲ. ಇಲ್ಲಿ ಎತ್ತುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಹೀಗಾಗಿ ಇಲ್ಲಿನ ದನಜಾತ್ರೆಯನ್ನು ಎತ್ತಿನ ಜಾತ್ರೆ ಎಂದು ಕರೆದರೂ ತಪ್ಪಾಗಲಾರದು. 

ಈಗಾಗಲೇ ಜಾತ್ರೆ ಆರಂಭವಾಗಿರುವ ಕಾರಣ ಎಲ್ಲ ಕಡೆಗಳಿಂದಲೂ ರೈತರು ತಮ್ಮ ಎತ್ತುಗಳೊಂದಿಗೆ ಚುಂಚನಕಟ್ಟೆಗೆ ಬಂದಿದ್ದು ಬಿಡಾರ ಹೂಡಿದ್ದಾರೆ. ಸಾವಿರಾರು ಎತ್ತುಗಳು ಇಲ್ಲಿದ್ದು ಅವುಗಳ ಮಾಲೀಕರು ಪಕ್ಕದಲ್ಲಿಯೇ ಬಿಡಾರ ಹಾಕಿಕೊಂಡು ಅವುಗಳನ್ನು ನೋಡಿಕೊಳ್ಳುತ್ತಿದ್ದಾರೆ. ಎತ್ತುಗಳಿಗೆ ಹುಲ್ಲು ಹಾಕುವುದು, ನೀರು ಕುಡಿಸುವುದು, ಬರುವ ಗಿರಾಕಿಗಳೊಂದಿಗೆ ವ್ಯವಹಾರ ಕುದುರಿಸುವುದು ಹೀಗೆ ನಡೆಯುತ್ತಲೇ ಇದೆ. 

ಇನ್ನು ಈ ಜಾತ್ರೆಗೆ ಉತ್ತರ ಕರ್ನಾಟಕದ ಗದಗ, ಹುಬ್ಬಳಿ, ಧಾರವಾಡ, ಗುಲ್ಬರ್ಗ, ವಿಜಾಪುರ, ದಾವಣಗೆರೆ ಹಾಗೂ ಹೊರ ರಾಜ್ಯಗಳಾದ ಆಂಧ್ರಪ್ರದೇಶ, ಮಹರಾಷ್ಟ್ರ, ತಮಿಳುನಾಡು, ಕೇರಳ ಕಡೆಗಳಿಂದಲೂ ಜನ ಬರುತ್ತಿದ್ದು, ಎತ್ತುಗಳನ್ನು ಖರೀದಿಸಿ ತಮ್ಮ ಊರಿಗೆ ಕೊಂಡೊಯ್ಯುತ್ತಾರೆ. 

ಇದೆಲ್ಲದರ ನಡುವೆ ಸುತ್ತಮುತ್ತಲಿನ ರೈತರು ತಮ್ಮ ಎತ್ತುಗಳನ್ನು ಔತಣಕೂಟವನ್ನ ಏರ್ಪಡಿಸಿ ವಾದ್ಯಗೋಷ್ಠಿ ಮತ್ತು ಅದ್ದೂರಿ ಮೆರವಣಿಗೆಯಲ್ಲಿ ತರುವ ಸಂಭ್ರಮವನ್ನು ನೋಡುವುದೇ ಮಜಾ ಎನಿಸುತ್ತದೆ. ಈಗಾಗಲೇ ಭತ್ತದ ಕೊಯ್ಲು ಮುಗಿಸಿದ ರೈತರು ಧವಸ ಧಾನ್ಯವನ್ನು ಮನೆಗೆ ಸೇರಿಸಿದ್ದು, ಸ್ವಲ್ಪ ನಿರಾಳರಾಗಿದ್ದಾರೆ. ಹೀಗಾಗಿ ಎಲ್ಲರೂ ಜಾತ್ರೆಯಲ್ಲಿ ಪಾಲ್ಗೊಂಡು ಮಜಾ ಪಡೆಯುತ್ತಿದ್ದಾರೆ. 

ಜಾತ್ರೆಗೆ ಬರೀ ರೈತರು ಮತ್ತು ರೈತಾಪಿ ಕುಟುಂಬದವರಲ್ಲದೆ ದೂರ ಊರಿನಿಂದ ಹಲವರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಜಾತ್ರೆಯಲ್ಲಿ ಪಾಲ್ಗೊಂಡು ಖುಷಿಪಡುತ್ತಾರೆ. ಅಷ್ಟೇ ಅಲ್ಲದೆ ಇಲ್ಲಿನ ಸುತ್ತಮುತ್ತಲಿರುವ ಫಾಲ್ಸ್, ದೇವಾಲಯಗಳಿಗೆ ಭೇಟಿ ನೀಡಿ ಹಿಂತಿರುಗುತ್ತಾರೆ. 

ಇನ್ನು ಜಾತ್ರೆಗೆ ಬರುವರಿಗೆ ಮೈಸೂರಿನಿಂದ ಕೆ.ಆರ್.ನಗರಕ್ಕೆ ಬಸ್ ಸೌಲಭ್ಯವಿದೆ. ಹಾಸನದ ಕಡೆಯಿಂದಲೂ ಬರಬಹುದಾಗಿದೆ. ಜ.3ರಿಂದ ಆರಂಭವಾಗಿರುವ ಜಾತ್ರೆ ಜ.18ರವರೆಗೆ ನಡೆಯಲಿದ್ದು, ಜ.13ರಂದು ಸೀತಾಕಲ್ಯಾಣೋತ್ಸವ ಹಾಗೂ ಜ.16ರಂದು ಬ್ರಹ್ಮ ರಥೋತ್ಸವ, ಜ.18 ರಂದು ಶ್ರೀರಾಮ ದೇವರ ತೆಪ್ಪೋತ್ಸವ ನಡೆಯಲಿದೆ. 

ತನ್ನದೇ ಆದ ವಿಶೇಷತೆ ಮತ್ತು ಹಳ್ಳಿ ಸೊಗಡನ್ನು ಉಣಬಡಿಸುವ, ರೈತಾಪಿ ವರ್ಗಕ್ಕೆ ಮುದ ನೀಡುವ ಚುಂಚನಕಟ್ಟೆ ನಿಜಕ್ಕೂ ಸಂಭ್ರಮ ತರುವ ಜಾತ್ರೆ ಎನ್ನುವುದರಲ್ಲಿ ಎರಡು ಮಾತಿಲ್ಲ.