ರಾಜವೈಭದ ಪ್ರತೀಕ ಮೈಸೂರಿನ ರತ್ನಖಚಿತ ಸಿಂಹಾಸನ

ರಾಜವೈಭದ ಪ್ರತೀಕ ಮೈಸೂರಿನ ರತ್ನಖಚಿತ ಸಿಂಹಾಸನ

B.M.Lavakumar   ¦    Sep 25, 2019 11:50:58 AM (IST)
ರಾಜವೈಭದ ಪ್ರತೀಕ ಮೈಸೂರಿನ ರತ್ನಖಚಿತ ಸಿಂಹಾಸನ

ಮೈಸೂರು: ಮೈಸೂರು ದಸರಾ ಎಂದರೆ ಬರೀ ಜಂಬೂಸವಾರಿಯಲ್ಲ ಸಾಂಸ್ಕೃತಿಕ ಮೆರವಣಿಗೆ ಮತ್ತು ರಾಜವೈಭದ ಪ್ರತೀಕ ಎಂಬುದಂತು ಸತ್ಯ. ದಸರಾ ವೇಳೆ ಮೈಸೂರಿಗೆ ಭೇಟಿ ನೀಡಿದರೆ ಇಲ್ಲಿನ ಸಂಸ್ಕೃತಿ, ಪರಂಪರೆ ಕಣ್ಣಿಗೆ ಕಾಣಿಸುತ್ತದೆ.

ಸಾಂಸ್ಕೃತಿಕ ಮತ್ತು ಪಾರಂಪರಿಕ ನಗರವಾಗಿರುವ ಮೈಸೂರಿಗೆ ‘ದಸರಾ’ ರಾಜರ ಕೊಡುಗೆ. ತಮ್ಮ ಆಳ್ವಿಕೆಯ ದಿನಗಳಲ್ಲಿ ರಾಜವೈಭವವನ್ನು ನವರಾತ್ರಿ ಸಂದರ್ಭದಲ್ಲಿ ಹೇಗೆ ಮೆರೆಯುತ್ತಿದ್ದರು ಎಂಬುದಕ್ಕೆ ದಸರಾ ಸಂದರ್ಭ ನವರಾತ್ರಿಯ ದಿನಗಳಲ್ಲಿ ಮೈಸೂರು ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಸಾಕ್ಷಿಯಾಗಿದೆ.

ರಾಜಮನೆತನದ ಸಂಪ್ರದಾಯದಂತೆ ಈ ದರ್ಬಾರ್‍ ನ್ನು ನಡೆಸಿಕೊಡುವ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಸೀನರಾಗುವ ರತ್ನಖಚಿತ ಸಿಂಹಾಸನವೂ ಕೂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ನವರಾತ್ರಿ ಕಳೆದ ಬಳಿಕ ಈ ಸಿಂಹಾಸನವನ್ನು ಬಿಚ್ಚಿ ಭದ್ರತಾ ಕೊಠಡಿಯಲ್ಲಿರಿಸಲಾಗುತ್ತದೆ. ಪ್ರತಿವರ್ಷ ನವರಾತ್ರಿಗೆ ಮುನ್ನ ಬಿಗಿಭದ್ರತೆಯಲ್ಲಿ ಜೋಡಿಸಲಾಗುತ್ತದೆ.

ಈಗಾಗಲೇ ಈ ಸಿಂಹಾಸನವನ್ನು ಜೋಡಿಸಲಾಗಿದ್ದು, ಅರಮನೆಯ ದರ್ಬಾರ್ ಹಾಲ್‍ನಲ್ಲಿರಿಸಲಾಗಿದೆ. ದಸರಾ ಉದ್ಘಾಟನೆ ದಿನ ಅಂದರೆ ಸೆ.29ರಂದು ಈ ಆಸನಕ್ಕೆ ಸಿಂಹಗಳನ್ನು ಜೋಡಣೆ ಮಾಡಿ ಪೂಜೆ ನೆರವೇರಿಸಿದ ನಂತರ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಿ ಕಂಕಣಧಾರರಾಗಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೋಹಣ ಮಾಡಿ ಬಳಿಕ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಖಾಸಗಿ ದರ್ಬಾರ್ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿಲ್ಲವಾದರೂ ನಿಗದಿತ ಸಮಯದಲ್ಲಿ ಅರಮನೆಗೆ ಭೇಟಿ ನೀಡುವ ಸಾರ್ವಜನಿಕರಿಗೆ ರತ್ನಖಚಿತ ಸಿಂಹಾಸನವನ್ನು ನೋಡಲು ಅವಕಾಶ ಮಾಡಿಕೊಡಲಾಗಿದೆ.

ಈ ಸಿಂಹಾಸನ ಅಂತಿಂಥ ಸಿಂಹಾಸನವಲ್ಲ. ಇದಕ್ಕೆ ತನ್ನದೇ ಆದ ಇತಿಹಾಸ ಮತ್ತು ಮಹತ್ವ ಇರುವುದನ್ನು ನಾವು ಕಾಣಬಹುದಾಗಿದೆ.ಇದು ಪಾಂಡವರ ಕಾಲದೆನ್ನಲಾಗಿದ್ದು, ಆ ಕಾಲದಲ್ಲಿ ಕಂಪುಲ ರಾಜನು ಇದನ್ನು ತಂದು ಪೆನಗೊಂಡದಲ್ಲಿ ಹೂತಿಟ್ಟಿದ್ದನು ಎನ್ನಲಾಗಿದೆ. 1338ರಲ್ಲಿ ಮಹರ್ಷಿ ವಿದ್ಯಾರಣ್ಯರು ಧ್ಯಾನದೃಷ್ಠಿಯಿಂದ ಇದನ್ನು ಅರಿತು ವಿಜಯನಗರದ ಚಕ್ರಾಧಿಪತ್ಯದ ಸ್ಥಾಪಕ ಹರಿಹರನಿಗೆ ತಿಳಿಸಿದರೆಂದು ಅದರಂತೆ ಹೊರತೆಗೆದು 150 ವರ್ಷಗಳ ಕಾಲ ಆನೆಗೊಂದಿಯಲ್ಲಿ ಅಲಂಕರಿಸಿದರೆಂದೂ, ಬಳಿಕ ವಿಜಯನಗರದ ಅವನತಿಯ ವೇಳೆಗೆ ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ರಾಯಬಾರಿಯ ಅರಮನೆಗೆ ಸಾಗಿಸಲಾಯಿತೆಂದು ಹೇಳಲಾಗಿದೆ. ಆ ಬಳಿಕ 1609ರಲ್ಲಿ ಆಗಿನ ಮೈಸೂರು ಅರಸರಾದ ರಾಜಒಡೆಯರ್ ಶ್ರೀರಂಗರಾಜುಲುರನ್ನು ತಲಕಾಡಿಗೆ ಓಡಿಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. 1610ರಲ್ಲಿ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಾಗ ಸಿಂಹಾಸನವನ್ನು ಮೈಸೂರಿನ ಅರಮನೆಗೆ ಸಾಗಿಸಲಾಯಿತು ಎಂಬುದು ಸಿಂಹಾಸನದ ಸುತ್ತ ಇರುವ ಪ್ರಾಚೀನ ಮತ್ತು ಇತಿಹಾಸದ ಕಥೆಗಳು.

ಇನ್ನು ಸಿಂಹಾಸನ ಹೇಗಿದೆ? ಮತ್ತು ಮಹತ್ವವನ್ನು ನೋಡುವುದರಾದರೆ ಇಂತಹದೊಂದು ಸಿಂಹಾಸನವನ್ನು ನಾವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದಾಗಿದೆ.

ಸಿಂಹಾಸನವನ್ನು ಚಿನ್ನದ ಬಾಳೆಯ ಕಂಬ ಮತ್ತು ಚಿನ್ನದ ಮಾವಿನ ಎಲೆಗಳಿಂದ ಅಲಂಕಾರ ಮಾಡಲಾಗಿದೆ. ಇನ್ನು ಸಿಂಹಾಸನದ ಮೇಲೆ ಛತ್ರಿಯಿದ್ದು ಇದರ ತುದಿಯಲ್ಲಿ ಒಡವೆಗಳಿಂದ ಅಲಂಕರಿಸಿದ ಪಕ್ಷಿಯನ್ನು ಕೂರಿಸಿ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ. ಸಿಂಹಾಸನವನ್ನು ಹತ್ತುವ ಎರಡು ಕಡೆಗಳಲ್ಲೂ ಸ್ತ್ರೀಪುತ್ಥಳಿಯನ್ನು ನಿರ್ಮಿಸಲಾಗಿದೆ. ಅಲ್ಲದೆ ಸಿಂಹಾಸನಕ್ಕೆ ಕೂರ್ಮರೂಪದ ಆಸನವನ್ನು ಒದಗಿಸಲಾಗಿದೆ. ಉಭಯ ಪಾಶ್ರ್ವಗಳಲ್ಲಿ ಯಾಳಿಗಳನ್ನು ಮತ್ತು ನಾಲ್ಕು ಕಡೆಗಳಲ್ಲಿ ಬಳ್ಳಿ ಲತೆಗಳನ್ನು ಕೆತ್ತಲಾಗಿದೆ.

ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ. ವಿಜಯ ಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂ ರಾಕ್ಷಸ ಶರೀರ, ಎರಡು ಕುದುರೆಗಳು ಮತ್ತು ನಾಲ್ಕು ಹಂಸಪಕ್ಷಿಗಳನ್ನಿಡಲಾಗಿದೆ. ನಾಗದೇವತೆಗಳ ಚಿತ್ರಗಳು, ಸ್ವಸ್ತಿಕ ಆಕೃತಿ ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ. ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿ ತೆರೆಯಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಶ್ಲೋಕಗಳಿವೆ.

ಇಂತಹದೊಂದು ಸಿಂಹಾಸನವನ್ನು ನೋಡುವುದೇ ಅಪರೂಪವಾಗಿರುವ ಈ ಕಾಲದಲ್ಲಿ ಅದು ಮೈಸೂರಿನಲ್ಲಿದೆ ಮತ್ತು ಅದರ ಮೇಲೆ ಕುಳಿತು ರಾಜರು ಆಳ್ವಿಕೆ ನಡೆಸಿದ್ದರೆಂಬುದೇ ಮೈಸೂರಿಗೆ ಹೆಮ್ಮೆಯ ವಿಚಾರವಾಗಿದೆ. ಇಂತಹ ಅಪರೂಪದ ಸಿಂಹಾಸನವನ್ನು ನೋಡಬೇಕೆಂದರೆ ಅದು ನವರಾತ್ರಿ ದಿನಗಳಲ್ಲಿ ಮಾತ್ರ ಸಾಧ್ಯ. ಉಳಿದ ದಿನಗಳಲ್ಲಿ ಇದನ್ನು ಭದ್ರತಾ ಕೊಠಡಿಯಲ್ಲಿರಿಸಲಾಗುತ್ತದೆ.