ವಚನದಿಂದಲೇ ಲೋಕದ ಅಂಕುಡೊಂಡು ತಿದ್ದಿದ ಬಸವಣ್ಣ

ವಚನದಿಂದಲೇ ಲೋಕದ ಅಂಕುಡೊಂಡು ತಿದ್ದಿದ ಬಸವಣ್ಣ

LK   ¦    Apr 18, 2018 02:19:42 PM (IST)
ವಚನದಿಂದಲೇ ಲೋಕದ ಅಂಕುಡೊಂಡು ತಿದ್ದಿದ ಬಸವಣ್ಣ

ಮೌಢ್ಯತೆ, ಜಾತಿ, ಕಂದಾಚಾರಗಳೇ ತುಂಬಿ ಹೋಗಿದ್ದ ಕಾಲದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಾರಿದವರು ಬಸವಣ್ಣ. ಇಂದು ಎ.18ರಂದು ಬಸವಣ್ಣನವರು ಹುಟ್ಟಿದ ದಿನ, ಈ ದಿನವನ್ನು ಅವರ ಜಯಂತಿಯನ್ನಾಗಿ ಎಲ್ಲೆಡೆ ಆಚರಿಸಲಾಗುತ್ತಿದೆ.

ಬಸವಣ್ಣನವರು ಕರ್ನಾಟಕದ ಬಿಜಾಪುರ ಜಿಲ್ಲೆಯ ಬಾಗೇವಾಡಿಯ ಅಗ್ರಹಾರದಲ್ಲಿ ಮಾದರಸ ಮತ್ತು ಮಾದಲಾಂಬೆ ದಂಪತಿಗಳ ಸುಪುತ್ರರಾಗಿ ಜನಿಸಿದರು.

ಹನ್ನೆರಡನೆಯ ಶತಮಾನದಂತಹ ಮಹಾಕ್ರಾಂತಿ ಯುಗದಲ್ಲಿ ಬಸವಣ್ಣನವರು ಜನಿಸಿದ್ದೇ ಲೋಕ ಉದ್ಧಾರಕ್ಕೆಂದರೆ ತಪ್ಪಾಗಲಾರದು. ಅವರು ಆ ಕಾಲದಲ್ಲೇ ಪ್ರಜಾಸತ್ತಾತ್ಮಕ ತತ್ವಗಳ ಪ್ರತೀಕವಾದ ‘ಅನುಭವ ಮಂಟಪ’ವನ್ನು ಸ್ಥಾಪಿಸುವುದರ ಮೂಲಕ ಪ್ರಜಾಪ್ರಭುತ್ವಕ್ಕೆ ನಾಂದಿಹಾಡಿದ್ದು ವಿಶೇಷವಾಗಿದೆ.

ಅವತ್ತಿನ ದಿನಗಳಲ್ಲಿ ಅನುಭವ ಮಂಟಪವೆಂಬುದು ಬಸವೇಶ್ವರರ ಮಹಾ ಪ್ರಯೋಗ ಶಾಲೆಯಾಗಿ ಸಮಾಜದ ಸುಭದ್ರತೆ, ಸಮಾಜದ ಹಿತಚಿಂತನೆ, ಸಮುದಾಯದ ಸಂರಕ್ಷಣೆ, ಧರ್ಮದ ನಂಬಿಕೆ, ಮೌಲ್ಯ ಸಿದ್ಧಾಂತಗಳ, ವಿಚಾರ ವಿನಿಮಯಗಳ, ಚಿಂತನ-ಮಂಥನ ಚರ್ಚೆಗಳ ಸಂಗಮವಾಗಿತ್ತು.

ತಾವು ಮೋಕ್ಷಾಪೇಕ್ಷಿ ಆದುದರಿಂದ ಪುನಃ ಜನಿಸಲು ತಮಗೆ ಇಷ್ಟವಿಲ್ಲ, ಆದರೂ ತಮಗೆ ಪುನರ್ಜನ್ಮವೆಂಬುದಿದ್ದರೆ ಮುಂದಿನ ಜನ್ಮದಲ್ಲಿ ಅಸ್ಪ್ರಶ್ಯನಾಗಿ ಹುಟ್ಟಲಿಚ್ಛಿಸುತ್ತೇನೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹಲವಾರು ಸಾರಿ ಘೋಷಿಸಿದ್ದಿದೆ.

ಆದರೆ ಬಸವೇಶ್ವರರು ಇಂಥ ಯಾವುದೇ ಘೋಷಣೆಯನ್ನು ಮಾಡದೆಯೇ ಈ ಜನ್ಮದಲ್ಲಿಯೇ ಅಸ್ಪ್ರಶ್ಯರಾಗುತ್ತಾರೆ. ದಲಿತರಲ್ಲಿ ಆತ್ಮಪ್ರತ್ಯಯವನ್ನೂ, ನಂಬಿಕೆಯನ್ನೂ ಮೂಡಿಸಬೇಕಾದರೆ ತಾವೂ ದಲಿತರಾಗಬೇಕೆಂಬ ದೃಷ್ಟಿಯಿಂದ ಅವರು ದಲಿತರಾಗುತ್ತಾರೆ. ಇದಕ್ಕಾಗಿ ಅವರು ಗಾಂಧೀಜಿ ಬಯಸಿದಂತೆ ಮುಂದಿನ ಜನ್ಮದವರೆಗೂ ಕಾಯುವುದಿಲ್ಲ. ಹಾಗಾಗಿ ಈ ವಿಚಾರದಲ್ಲಿ ಬಸವಣ್ಣನವರು ಗಾಂಧಿಗಿಂತಲೂ ಎತ್ತರಕ್ಕೇರುತ್ತಾರೆ.

ಕೆಳ ಜಾತಿಯಲ್ಲಿ ಜನಿಸಿದ್ದಕ್ಕೆ ಅಪಮಾನದಿಂದ ನೊಂದುಕೊಳ್ಳುವುದು ಸಹಜ. ಆದರೆ ಬಸವೇಶ್ವರರು ಮೇಲ್ಜಾತಿ ಬ್ರಾಹ್ಮಣ ಕುಟುಂಬದಲ್ಲಿ ತಾವು ಹುಟ್ಟಿದ್ದಕ್ಕೆ ನೊಂದುಕೊಂಡು “ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯ, ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯ” ಎನ್ನುತ್ತಾರೆ.

ಮಹಾ ಮಾನವತಾವಾದಿ ಬಸವೇಶ್ವರರಿಗೆ ಮನುಷ್ಯರೆಲ್ಲರೂ ಒಂದೇ ಎಂಬ ಭಾವ ಅವರ ಜೀವ-ಜೀವನದಲ್ಲೆಲ್ಲಾ ತುಂಬಿಹೋಗಿತ್ತು. ಮೂಲತಃ ಬ್ರಾಹ್ಮಣ ಕುಟುಂಬದಿಂದ ಬಂದಿದ್ದರೂ ಬಾಲ್ಯಾವಸ್ಥೆಯಿಂದಲೂ ಅವರು ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದರು. ಆದ್ದರಿಂದಲೇ ಅವರು ಯಾರಿಗೂ ಹೆದರದೆ ಧೈರ್ಯವಾಗಿ ತಮ್ಮ ಉಪನಯನವನ್ನು ಧಿಕ್ಕರಿಸಿದ್ದರು.

ಇಡೀ ಸಮಾಜವನ್ನು ಮಾನವೀಯಗೊಳಿಸಲು ಬಸವೇಶ್ವರರು ಬದುಕಿನ ಅಗ್ನಿಗೆ ತಮ್ಮನ್ನು ತಾವು ಒಡ್ಡಿಕೊಂಡು ಒಂದು ರೀತಿ ಕರ್ಪೂರದಂತೆ ಉರಿದು ಜಗಕೆ ಬೆಳಕಾಗಿದ್ದರು. ದೀನ-ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರ ದಲಿತ ಪರ ಹೋರಾಟ ಸಹ ಮಾನವೀಯಗೊಳಿಸುವ ಪ್ರಯತ್ನಕ್ಕೆ ಸಾಕ್ಷಿ.

ಇಂತಹ ಮಾನವೀಯ ನೆಲೆಯಲ್ಲೇ ವೈಚಾರಿಕ ಪ್ರಭೆಯೊಡನೆ ಸಮಾಜ ಸುಧಾರಣಾ ಹಾದಿಯಲ್ಲಿ ವಚನ ಸಾಹಿತ್ಯ ಕೃಷಿಯನ್ನು ಸಮೃದ್ಧವಾಗಿ ಮಾಡಿರುವ ಬಸವೇಶ್ವರರ ವಚನಗಳು ಸರ್ವಕಾಲಕ್ಕೂ ಸರ್ವಶ್ರೇಷ್ಠ ವಚನಗಳಾಗಿಯೇ ಉಳಿದಿವೆ.