ಎರಡು ಕಣ್ಣು ಸಾಲದು ಅಬ್ಬಿ ನೋಡಲು...!

ಎರಡು ಕಣ್ಣು ಸಾಲದು ಅಬ್ಬಿ ನೋಡಲು...!

Jun 18, 2018 01:16:51 PM (IST)
ಎರಡು ಕಣ್ಣು ಸಾಲದು ಅಬ್ಬಿ ನೋಡಲು...!

ಕೊಡಗಿನಲ್ಲಿ ಮುಂಗಾರು ಈ ಬಾರಿ ಜೂನ್‍ನಲ್ಲೇ ಅಬ್ಬರಿಸಿದ್ದರಿಂದ ನಿಸರ್ಗ ಹಸಿರ ಹೊದಿಕೆಯನ್ನೊದ್ದು ಥಳಥಳಿಸುತ್ತಿದೆ. ಜತೆಗೆ ಬೆಟ್ಟದ ಮೇಲಿನ ಗುಡ್ಡದ ಕೆಳಗಿನ ಹೆಬ್ಬಂಡೆಗಳ ಮೇಲೆ ಜಲಪಾತಗಳು ಮೈಕೈ ತುಂಬಿಕೊಂಡು ಭೋರ್ಗರೆಯುತ್ತಿವೆ.

ಇಂತಹ ಹತ್ತಾರು ಜಲಪಾತಗಳ ನಡುವೆ ಮಡಿಕೇರಿ ಬಳಿಯಿರುವ ಕೆ.ನಿಡುಗಣೆ ಗ್ರಾಮಪಂಚಾಯಿತಿ ವ್ಯಾಪಿಗೊಳಪಡುವ ಅಬ್ಬಿ ಜಲಪಾತ ಇದೀಗ ತನ್ನ ರುದ್ರಮಣೀಯತೆಯನ್ನು ಪ್ರದರ್ಶಿಸುತ್ತಾ ಗಮನಸೆಳೆಯುತ್ತಿದೆ.

ಇತರೆ ಜಲಪಾತಗಳಿಗಿಂತ ಹೆಚ್ಚಾಗಿ ಅಬ್ಬಿ ಜಲಪಾತ ಪ್ರವಾಸಿಗರನ್ನು ಸೆಳೆಯಲು ಕಾರಣವಿದೆ. ಅದೇನೆಂದರೆ ಇದು ಮಡಿಕೇರಿಗೆ ಸಮೀಪವಿದೆ. ಮಡಿಕೇರಿಯಲ್ಲಿ ಮಳೆ ಸುರಿದರೆ ಅಬ್ಬಿ ಜಲಪಾತ ಭೋರ್ಗರೆಯುತ್ತದೆ. ಅದಕ್ಕೆ ಕಾರಣವೂ ಇದೆ ಮಡಿಕೇರಿಯಲ್ಲಿ ಬಿದ್ದ ಮಳೆನೀರೆಲ್ಲಾ ಒಟ್ಟಾಗಿ ಹರಿದು ಈ ಜಲಪಾತವನ್ನು ಸೇರುತ್ತದೆ.

ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲಿಯೂ ಮಳೆಗಾಲದಲ್ಲಿ ಇದರ ರೌದ್ರಾವತಾರವನ್ನು ಹತ್ತಿರದಿಂದ ನೋಡಿದರೆ ಆ ಸುಂದರ ಕ್ಷಣಗಳನ್ನು ಖಂಡಿತಾ ಮರೆಯಲಾರರು. ಜಲಪಾತದ ಸೊಬಗನ್ನು ಹತ್ತಿರದಿಂದ ಸವಿಯಲೆಂದೇ ಇತ್ತೀಚೆಗೆ ಅಡ್ಡಲಾಗಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಮನದಣಿಯೆ ಸವಿಯಬಹುದು.

ಈ ಜಲಪಾತ ನೆರವಂಡ ನಾಣಯ್ಯ ಎಂಬುವರ ಕಾಫಿ, ಏಲಕ್ಕಿ ತೋಟಗಳ ನಡುವೆ ನಿರ್ಮಿತಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ ಬ್ರಿಟಿಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನು ಈ ಫಾಲ್ಸ್ ಗೆ ಇಟ್ಟು ಜೆಸ್ಸಿ ಫಾಲ್ಸ್ ಎಂದು ಕರೆದಿದ್ದರು. ಆದರೆ ಸ್ಥಳೀಯರು ಹಿಂದೆ ಇದನ್ನು ಮಡಿಕೇರಿ ತೊರೆ, ಮುತ್ತಾರ್‍ಮುಟ್ಟು ತೊರೆ ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ಕೊಡವ ಭಾಷೆಯಲ್ಲಿ `ಅಬ್ಬಿ' ಎಂದರೆ ತೊರೆ ಎಂದರ್ಥ ಕೊಡವ ಭಾಷೆಯ ಅಬ್ಬಿ ಇಂದು ಅಬ್ಬಿ ಫಾಲ್ಸ್ ಆಗಿದೆ.

ಮಡಿಕೇರಿಯಿಂದ ಎಂಟು ಕಿ.ಮೀ.ದೂರದಲ್ಲಿರುವ ಅಬ್ಬಿ ಜಲಪಾತ ನಿಜಕ್ಕೂ ಒಂದು ಮೋಹಕ ಜಲಪಾತವೇ... ಈ ಜಲಪಾತವನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು.