ಅಡಕೆ ಬೆಳೆಗಾರರಿಗೆ ವರವಾದ ಎಸ್ ಡಿಎಂನ ಸಂಶೋಧನೆ

ಅಡಕೆ ಬೆಳೆಗಾರರಿಗೆ ವರವಾದ ಎಸ್ ಡಿಎಂನ ಸಂಶೋಧನೆ

SV   ¦    Aug 15, 2018 12:56:01 PM (IST)
ಅಡಕೆ ಬೆಳೆಗಾರರಿಗೆ ವರವಾದ ಎಸ್ ಡಿಎಂನ ಸಂಶೋಧನೆ

ಇದು ಅಡಕೆ ಬೆಳೆಗಾರರಿಗೆ ಸಂತಸದ ಸುದ್ದಿ. ಕಳೆದ ಕೆಲ ಸಮಯಗಳಿಂದ ಬೆಲೆ ಇಳಿಕೆಯಿಂದಾಗಿ ಕಂಗಾಲಾಗಿದ್ದ ಅಡಕೆ ಬೆಳೆಗಾರನಿಗೆ ಉಡುಪಿಯ ಎಸ್ ಡಿ ಎಂ ಸಂಶೋಧನಾ ಕೇಂದ್ರ ನಡೆಸಿದ ಹೊಸ ಸಂಶೋಧನೆಯೊಂದು ಚೈತನ್ಯ ನೀಡಿದೆ. ಹಾಗಾದ್ರೆ ಆ ಸಂಶೋಧನೆ ಏನು. ಇಲ್ಲಿದೆ ಫುಲ್ ಡೀಟೇಲ್ಸ್

ದಕ್ಷಿಣ ಕನ್ನಡ ,ಉಡುಪಿ ಶಿವಮೊಗ್ಗ ಮತ್ತು ಕಾಸರಗೋಡು ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಅಡಕೆ ಬೆಲೆ ಕಳೆದ ಕೆಲ ವರ್ಷಗಳಲ್ಲಿ ಗಣನೀಯವಾಗಿ ಇಳಿದಿತ್ತು. ಹಲವಾರು ವರ್ಷ ಕಷ್ಟ ಪಟ್ಟು ಸಾಕಿದ್ದ ಅಡಿಕೆ ಮರಗಳನ್ನೇ ಕಡಿಯುವ ಹಂತಕ್ಕೆ ಬೆಳೆಗಾರ ತಲುಪಿದ್ದ. ಕೆಲ ವರ್ಷಗಳ ಹಿಂದೆ ಅಡಿಕೆಯಿಂದ ಕಾರ್ಸಿನೋಜೆನಿಕ್ ಎಂಬ ಕ್ಯಾನ್ಸರ್ ಕಾರಕ ಅಂಶ ಇರಬಹುದು ಅಂತ ಸಂಶಯದ ವರದಿ ಬಂದಿತ್ತು. ಇದರಿಂದ ಅಡಕೆಯಿಂದ ಕ್ಯಾನ್ಸರ್ ಬರುತ್ತೆ ಅಂತ ಎಲ್ಲೆಡೆ ಅಪಪ್ರಚಾರ ಹಬ್ಬಿತ್ತು. ಅಡಕೆ ಬೆಳೆ ಪ್ರಪಾತಕ್ಕೆ ಇಳಿಯಿತು. ಇದನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಮ್ಮ ಅಧೀನದ ಉಡುಪಿಯ ಎಸ್ ಡಿ ಎಂ ಸಂಶೋಧನಾ ಕೇಂದ್ರದ ಮೂಲಕ ಅಡಿಕೆಯ ಸಂಶೋಧನೆ ನಡೆಸಲು ಸೂಚಿಸಿದರು. ಅದರಂತೆ ಸುಮಾರು 6 ಜನ ಸಂಶೋಧನಾಧಿಕಾರಿಗಳ ತಂಡ ಸತತ ಒಂದು ವರ್ಷ ಸಂಶೋದನೆ ನಡೆಸಿತು. ಈ ಸಂದರ್ಭದಲ್ಲಿ ಅಡಿಕೆಯನ್ನು ಸುಣ್ಣದ ಜೊತೆ ಸೇರಿಸಿ ಅಥವಾ ಅಡಕೆಯನ್ನು ಬೇಯಿಸಿ ಉಪಯೋಗಿಸುವುದರಿಂದ ಯಾವುದೇ ಹಾನಿಕಾರಕ ಅಂಶ ಇರುವುದಿಲ್ಲ ಎಂಬ ವಿಚಾರ ಗಮನಕ್ಕೆ ಬಂತು.

ಈ ಸಂಶೋಧನೆ ಇನ್ನೊಂದು ಹೊಸ ಆವಿಷ್ಕಾರಕ್ಕೆ ನಾಂದಿಯಾಯಿತು. ಅಡಕೆಯ ಔಷಧೀಯ ಅಂಶಗಳಿಂದ ಮಧುಮೇಹ ನಿಯಂತ್ರಿಸಬಹುದು ಎಂಬ ವಿಚಾರ ಬೆಳಕಿಗೆ ಬಂತು. ಇದನ್ನೇ ಸಂಶೋಧನಾಧಿಕಾರಿಗಳು ಮುಂದುವರಿಸಿ ಇಲಿಗಳ ಮೇಲೆ ಅಡಕೆಯಿಂದ ಸಿದ್ಧ ಪಡಿಸಿದ ಔಷಧಿಯನ್ನು ಪ್ರಯೋಗಿಸಿದರು. ಒಂದು ವರ್ಷದ ಸತತ ಪ್ರಯೋಗಗಳ ಮೂಲಕ ಅಲೋಪತಿಗೆ ಸರಿಸಮಾನವಾದ ಮಧುಮೇಹವನ್ನು ನಿಯಂತ್ರಿಸಬಲ್ಲ ಔಷಧಿ ಅಡಕೆಯಿಂದ ತಯಾರಿಸಲು ಸಾಧ್ಯ ಎಂಬುದು ಸಾಬೀತಾಯಿತು. ಜೊತೆಗೆ ಮಧುಮೇಹದಿಂದ ಕಿಡ್ನಿ ಮತ್ತು ಲಿವರ್ ಗೆ ಉಂಟಾಗಬಹುದಾದ ಬಾಧ್ಯತೆಗಳನ್ನೂ ದೂರಕರಿಸಲು ಅಡಕೆ ಔಷದಿ ಸಹಕಾರಿ ಎಂಬುದು ಸಾಬೀತಾಗಿದೆ. ಇನ್ನಷ್ಟೇ ಪೂರ್ಣ ಪ್ರಮಾಣದ ಸಂಶೋಧನೆ ಮುಗಿದ ಬಳಿಕ ಅಡಕೆಯ ಔಷಧಿ ಸಿದ್ಧಗೊಳ್ಳುತ್ತದೆ. ಈ ಮೂಲಕ ಆಯುರ್ವೇದ ಸಂಶೋಧನಾ ಸಂಸ್ಥೆ ಅಡಕೆ ಬಗ್ಗೆ ನಡೆಸಿದ ಸಂಶೋಧನೆಯಿಂದ ಅಡಕೆ ಬೆಳೆಗಾರರ ಮುಖದಲ್ಲಿ ಹೊಸ ಸಂತಸವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಯಾವುದೋ ಒಂದು ಸಂಶೋಧನೆಯ ಸಂದರ್ಭ ಬಂದಂತಹ ಅನುಮಾನಾಸ್ಪದ ವಿಚಾರಗಳು ಅಡಕೆ ಬೆಳೆಗಾರನಿಗೆ ಆಪತ್ತನ್ನೇ ತಂದಿತು. ಸದ್ಯ ಧರ್ಮಸ್ಥಳದ ಸಂಸ್ಥೆ ಸತತ ಸಂಶೋಧನೆಯ ಮೂಲಕ ಈ ಹಿಂದೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದೆ. ಇದರಿಂದ ಅಡಿಕೆಯನ್ನೇ ನಂಬಿ ಜೀವನ ನಡೆಸುವವರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

More Images