ದಕ್ಷಿಣಕೊಡಗಿನಲ್ಲಿ ಗಮನಸೆಳೆಯುವ ವಿಶಿಷ್ಟ ಬೋಡು ಹಬ್ಬ!

ದಕ್ಷಿಣಕೊಡಗಿನಲ್ಲಿ ಗಮನಸೆಳೆಯುವ ವಿಶಿಷ್ಟ ಬೋಡು ಹಬ್ಬ!

B.M.Lavakumar   ¦    May 20, 2018 01:55:11 PM (IST)
ದಕ್ಷಿಣಕೊಡಗಿನಲ್ಲಿ ಗಮನಸೆಳೆಯುವ ವಿಶಿಷ್ಟ ಬೋಡು ಹಬ್ಬ!

ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಎರಡು ದಿನಗಳ ಕಾಲ ನಡೆಯುತ್ತಲಿದ್ದು, ಗ್ರಾಮದಲ್ಲಿ ಸಂಭ್ರಮಾಚರಣೆ ಸಂಪ್ರದಾಯ ಬದ್ಧವಾಗಿ ನಡೆಯುತ್ತಿದೆ.

ಹಾಗೆ ನೋಡಿದರೆ ಎರಡು ದಿನಗಳ ಕಾಲ ಹಬ್ಬ ನಡೆಯುತ್ತಿದ್ದು, ಒಂದೊಂದು ದಿನವೂ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಲ್ಲಿನ ಆಚರಣೆಯನ್ನು ಗ್ರಾಮದ ಜನ ಚಾಚೂತಪ್ಪದೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಮೊದಲ ದಿನ ಊರು ತಕ್ಕರಾದ ಚಮ್ಮಟೀರ ಕುಟುಂಬದ ಮನೆಯಿಂದ ಮೂಲ ನಿವಾಸಿಗಳಲ್ಲಿ ಒಬ್ಬರಾದ ಪಣಿಕ ಜನಾಂಗದಿಂದ `ಪೊಲವಂದೆರೆ' ಹೊರಡುವ ಮೂಲಕ ಹಬ್ಬ ಆರಂಭವಾಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಚಮ್ಮಟೀರ ಹಾಗೂ ಮೂಕಳೇರ ಕುಟುಂಬದ ತಲಾ ಒಬ್ಬರಂತೆ ಇಬ್ಬರು ಪೂಜಾರಿಗಳು ಗ್ರಾಮದ ಮೂರು ನಿಗದಿತ ದೇವರ ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೂಕಳೇರ ಹಿರಿಮನೆಯ ಹತ್ತಿರದ ದೇವರ ಕೆರೆಯಲ್ಲಿ ಸ್ನಾನ ಮಾಡಿ ವಿವಿಧ ವಿಧಿ ವಿಧಾನದೊಂದಿಗೆ ಭಂಡಾರ ಪೆಟ್ಟಿಗೆ ಶುದ್ಧಿಗೊಳಿಸುತ್ತಾರೆ. ಅದಾದ ಬಳಿಕ ಕೆರೆಯ ಹತ್ತಿರದಲ್ಲಿ ಹೊಸ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದಗೊಳಿಸಿ ಕುಟ್ಟಿ ಅವಲಕ್ಕಿಯನ್ನು ತಯಾರು ಮಾಡಿ ಅದನ ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಉಪವಾಸವಿದ್ದು ವೃತಮಾಡುವ ಈ ಪೂಜಾರಿಗಳು ಬಳಿಕ ಪೊಲವಪ್ಪಂಡ ಕೋಟ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿ ನೆರೆದ ಭಕ್ತರಿಗೆ ಅವಲಕ್ಕಿಗೆ ಬಾಳೆ ಹಣ್ಣು ಸೇರಿಸಿ ಮಾಡಿದ ಅವುಲ್ ಪ್ರಸಾದವನ್ನು ಹಂಚುತ್ತಾರೆ.

ಸಂಜೆ ಜೋಡುಬೀಟಿಯಲ್ಲಿರುವ ಪ್ರಮುಖ ದೇವಾಲಯದಲ್ಲಿ ಒಂದಾದ ಗುಂಡಿಯತ್ ಅಯ್ಯಪ್ಪ ದೇವಸ್ಥಾನಕ್ಕೆ ತೆರ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಗುತ್ತದೆ.

ಬಳಿಕ ಈಡುಕಾಯಿ ಒಡೆಯುವ ಮೂಲಕ ಭಕ್ತರು ತಮ್ಮ ಹರಕೆಯನ್ನು ಅರ್ಪಿಸುತ್ತಾರೆ. ಆ ನಂತರ ದೇವಸ್ಥಾನದಿಂದ ಹೊರಟು ಬಂದು ಸಮೀಪದ ನಿಗಧಿತ ಜಾಗದಲ್ಲಿ ತೆಂಗಿನ ಕಾಯಿ, ಬಾಳೆಹಣ್ಣು ತಿನ್ನುವ ಮೂಲಕ ಪೂಜಾರಿಗಳು ತಮ್ಮ ಉಪವಾಸದಿಂದ ಮುಕ್ತರಾಗುತ್ತಾರೆ.

ಬಳಿಕ ಮೂಕಳೇರ ಹಿರಿಮನೆಯಲ್ಲಿ ಸಾಮೂಹಿಕ ಭೋಜನ ಮಾಡಿ ನಂತರ ಚಮ್ಮಟೀರ ಬಲ್ಯಮನೆಗೆ ತೆರಳಿ ಅಲ್ಲಿ ವಿವಿಧ ವೇಷದಲ್ಲಿ ದೇವರ ಕಳಿ ಹಾಕಿ ಮನೆ ಮನೆ ಹೊರಡುತ್ತಾರೆ. (ಈ ಆಚರಣೆಯಲ್ಲಿ ಒಂದಿಷ್ಟು ಬದಲಾವಣೆಯಾಗಿದೆ. ಮೊದಲೆಲ್ಲ ವೇಷ ಹಾಕಿಕೊಂಡು ಗ್ರಾಮದ ಮನೆಗಳಿಗೆ ತೆರಳುತ್ತಿದ್ದರಾದರೂ ಇದೀಗ ಚಮ್ಮಟೀರ ಮಚ್ಚಿಯಂಡ ಹಾಗೂ ಮೂಕಳೇರ ಹಿರಿಮನೆಯಲ್ಲಿ ಮಾತ್ರ ನಡೆಯುತ್ತದೆ) ಇದಿಷ್ಟು ಮೊದಲ ದಿನದ ಆಚರಣೆಯಾಗಿದೆ.

ಇನ್ನು ಎರಡನೆಯ ದಿನ ನಡೆಯುವ ಹಬ್ಬದ ಕಾರ್ಯಗಳು ವಿಭಿನ್ನ ಮತ್ತು ವಿಶಿಷ್ಟವಾಗಿದೆ.

ಅಂದು ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ಒಂದೊಂದು ಕುದುರೆ ಹಾಗೂ ಮೊಗವನ್ನು ಸಿಂಗರಿಸಿ ಅದನ್ನು ಹೊತ್ತು ಊರಿನ ಪ್ರಮುಖ ದೇವಾಲಯವಾದ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಸೇರುತ್ತಾರೆ. ಇಲ್ಲಿಗೆ ಎರಡು ಕಡೆಯಿಂದ ಕೃತಕವಾಗಿ ಮಾಡಿದ ತಲಾ ಒಂದೊಂದು ಕುದುರೆ ಹಾಗೂ ಮೊಗ ಮುಖಾಮುಖಿ ಆಗುತ್ತದೆ ಈ ವೇಳೆ ಪರಸ್ಪರ ಊರಿನವರು ಅಲಂಗಿಸಿಕೊಂಡು ಅಂಬಲದ ಸಮೀಪದ ದೇವರ ಕೆರೆಯಿಂದ ಕೆಸರನ್ನು ತಂದು ಪರಸ್ಪರ ಕೆಸರು ಎರಚಾಡಿ ಕೊಳ್ಳುತ್ತಾರೆ. ಬಳಿಕ ಬಳಿಕ ಭದ್ರಕಾಳಿ ದೇವಸ್ಥಾನದಲ್ಲಿ ಸೇರಿ ಮೂರು ಸುತ್ತು ಬಂದು ಹರಕೆ, ಕಾಣಿಕೆ ಹಾಕುತ್ತಾರೆ. ಅಲ್ಲಿಗೆ ಎರಡು ದಿನಗಳ ಕಾಲದ ಹಬ್ಬಕ್ಕೆ ತೆರೆ ಬೀಳುತ್ತದೆ.

More Images