ಕೊಡಗಿನ ಮಡಿಲಲ್ಲಿ ನಿಸರ್ಗ ಸಿರಿಯ ಹೊನ್ನಮ್ಮನ ಕೆರೆ

ಕೊಡಗಿನ ಮಡಿಲಲ್ಲಿ ನಿಸರ್ಗ ಸಿರಿಯ ಹೊನ್ನಮ್ಮನ ಕೆರೆ

B.M. Lavakumar   ¦    Jan 31, 2018 10:03:24 AM (IST)
ಕೊಡಗಿನ ಮಡಿಲಲ್ಲಿ ನಿಸರ್ಗ ಸಿರಿಯ ಹೊನ್ನಮ್ಮನ ಕೆರೆ

ವಿಶಾಲವಾಗಿ ಹರಡಿರುವ ಕೆರೆ... ದಡದಲ್ಲೊಂದು ಭವ್ಯ ದೇಗುಲ... ಇಕ್ಕೆಲಗಳಲ್ಲಿ ಮುಗಿಲೆತ್ತರಕ್ಕೇರಿ ನಿಂತ ಬೆಟ್ಟಗಳು... ಎತ್ತ ನೋಡಿದರೂ ಕಣ್ಣಿಗೆ ತಂಪೆನಿಯುವ ಹಸಿರು ಹಚ್ಚಡವನ್ನೊದ್ದ ನಿಸರ್ಗ. ಇದು ಕೊಡಗಿನ ಸೋಮವಾರಪೇಟೆ ಬಳಿಯಿರುವ ನಿಸರ್ಗ ಸೌಂದರ್ಯದ ನೆಲೆವೀಡು ಹೊನ್ನಮ್ಮನ ಕೆರೆಯ ಸುಂದರ ದೃಶ್ಯಗಳು.

ಪ್ರಾಕೃತಿಕ ಸಿರಿಯಿಂದ ಮೈದುಂಬಿಕೊಂಡು ಇತಿಹಾಸದ ಕಥೆ ಹೇಳುತ್ತಾ ಆಸ್ತಿಕರು, ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನಡೆಗೆ ಸೆಳೆಯುವ ಹೊನ್ನಮ್ಮನ ಕೆರೆ ಕೊಡಗಿನಲ್ಲಿರುವ ಇತರೆ ಪ್ರವಾಸಿತಾಣಗಳ ಪೈಕಿ ವಿಭಿನ್ನ ಮತ್ತು ವಿಶಿಷ್ಟವಾಗಿದೆ.

ಈ ತಾಣ ನಿಸರ್ಗ ಸೌಂದರ್ಯದೊಂದಿಗೆ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯಾಗುತ್ತಾ ಬರುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಹೊನ್ನಮ್ಮನ ಕೆರೆ ಹಾಗೂ ಸುತ್ತಲಿನ ತಾಣಗಳ ಕುರಿತಂತೆ ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಅಲ್ಲದೆ, ಕೆರೆ ನಿರ್ಮಾಣದ ಹಿಂದೆ ಹೆಣ್ಣು ಮಗಳೊಬ್ಬಳ ಬಲಿದಾನದ ಕಥೆಯಿರುವುದನ್ನು ನಾವು ಕಾಣಬಹುದು.

ಇತಿಹಾಸದ ಪುಟಗಳಲ್ಲಿ ದೊರೆಯುವ ಮಾಹಿತಿ ಪ್ರಕಾರ ಹೊನ್ನಮ್ಮನಕೆರೆಯನ್ನು 1106ರಲ್ಲಿ ನಿರ್ಮಿಸಲಾಗಿದೆಯಂತೆ. ಆಗಿನ ಕಾಲದಲ್ಲಿ ಹೊನ್ನಮ್ಮನ ಕೆರೆಯಿರುವ ಪ್ರದೇಶವಾದ ದೊಡ್ಡಮಳ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಏಳುಸಾವಿರ ಸೀಮೆ ಎಂದು ಕರೆಯಲಾಗುತ್ತಿತ್ತು. ಕ್ರಿ.ಶ.1034 ರಿಂದ 1297ರವರೆಗೆ ಈ ಸೀಮೆಯನ್ನು ಚಂಗಲವಾಸ್ ಎಂಬ ರಾಜಮನೆತನ ಆಳುತ್ತಿತ್ತು. 1106ರಲ್ಲಿ ಆಗಿನ ಏಳುಸಾವಿರ ಸೀಮೆಗೆ ಒಳಪಟ್ಟಿದ್ದ ದೊಡ್ಡಮಳ್ತೆಯಲ್ಲಿ ವ್ಯಾಪಾರಿ ಕಲ್ಲನಕೇರಿ ಮಲ್ಲೇಗೌಡ ಎಂಬಾತ ವಾಸಿಸುತ್ತಿದ್ದನಂತೆ.

ಈತ ಊರಿನ ಮುಖಂಡನಾಗಿದ್ದು, ಪರೋಪಕಾರಿಯೂ, ಮಹಾನ್ ದೈವಭಕ್ತನಾಗಿದ್ದ. ಒಮ್ಮೆ ಗ್ರಾಮದಲ್ಲಿ ಬರಗಾಲ ಕಾಣಿಸಿಕೊಂಡಾಗ ಕುಡಿಯುವ ನೀರಿಗೆ ಗ್ರಾಮದಲ್ಲಿ ಹಾಹಾಕಾರ ಉಂಟಾಯಿತು. ಈ ವೇಳೆ ಪ್ರಾಣಿಪಕ್ಷಿಗಳು, ಜಾನುವಾರುಗಳು ನೀರಿಲ್ಲದೆ ಸಾಯತೊಡಗಿತು. ಈ ಸಂದರ್ಭ ಮಲ್ಲೇಗೌಡನಿಗೆ ಕೆರೆಯೊಂದನ್ನು ತೋಡಿದರೆ ಗ್ರಾಮದ ಜನರಿಗೆ ಉಂಟಾಗಿರುವ ನೀರಿನ ಬವಣೆಯನ್ನು ತಪ್ಪಿಸಬಹುದು ಎಂಬ ಆಲೋಚನೆ ಬಂತು. ಕೂಡಲೇ ಆತ ಕೂಲಿಕಾರರನ್ನು ಕರೆಯಿಸಿ ಕೆರೆಯನ್ನು ತೋಡುವುದಕ್ಕೆ ಮುಂದಾದನು. ಜನರ ಶ್ರಮದಿಂದ ವಿಶಾಲ ಕೆರೆಯೇನೋ ನಿರ್ಮಾಣವಾಯಿತಾದರೂ ನೀರು ಸಿಗಲಿಲ್ಲ. ಶಕ್ತಿಮೀರಿ ಭೂಮಿಯ ಆಳಕ್ಕೆ ತೋಡಿದರೂ ನೀರು ಮಾತ್ರ ಬರಲೇ ಇಲ್ಲ. ಇದರಿಂದ ಮಲ್ಲೇಗೌಡ ಮುಂದೇನು ಮಾಡುವುದು ಎಂದು ಚಿಂತಿಸ ತೊಡಗಿದೆ. ಈ ಸಂದರ್ಭ ಮುತ್ತೈದೆ ಹೆಣ್ಣುಮಗಳನ್ನು ಕೆರೆಗೆ ಬಲಿ ನೀಡಿದರೆ ನೀರು ಬರುತ್ತೆ ಎಂಬ ಅಶರೀರವಾಣಿಯೊಂದು ಆತನಿಗೆ ಕೇಳಿಬರುತ್ತದೆ.

ಆದರೆ ಕೆರೆಗೆ ಬಲಿ ನೀಡುವುದಾದರು ಯಾರನ್ನು ಎಂದು ಮಲ್ಲೇಗೌಡ ಯೋಚಿಸುತ್ತಾ ದಿನಕಳೆಯುತ್ತಿರುತ್ತಾನೆ. ಮಾವನನ್ನು ಆವರಿಸಿದ ಚಿಂತೆಯನ್ನು ಅರಿತ ಕಿರಿಸೊಸೆ ಹೊನ್ನಮ್ಮ ಊರಿನ ಜನರ ಒಳಿತಿಗಾಗಿ ಕೆರೆಗೆ ತಾನೆ ಹಾರವಾಗುತ್ತಾಳೆ. ಆಕೆ ಮಾಡಿದ ತ್ಯಾಗಬಲಿದಾನದ ಫಲದಿಂದ ಕೂಡಲೇ ಕೆರೆಯಲ್ಲಿ ನೀರು ತುಂಬಿ ಬರುತ್ತದೆ. ಪ್ರಾಣಿ ಪಕ್ಷಿಗಳು, ಜನ ಜಾನುವಾರುಗಳು ಕೆರೆಯ ನೀರು ಕುಡಿದು ಸಂತೋಷಪಡುತ್ತಿರುವಾಗಲೇ ದಂಡಿಗೆ ಹೋಗಿದ್ದ ಹೊನ್ನಮ್ಮನ ಪತಿ ಶಾಂತರಾಜು ಊರಿಗೆ ಮರಳುತ್ತಾನೆ ಆಗ ಆತನಿಗೆ ಮಡದಿ ಹೊನ್ನಮ್ಮ ಕೆರೆಗೆ ಹಾರವಾಗಿರುವ ವಿಷಯ ತಿಳಿಯುತ್ತದೆ. ಮಡದಿಯ ಅಗಲಿಕೆಯ ನೋವನ್ನು ತಾಳಲಾರದೆ ಆತನೂ ಕೂಡ ಅದೇ ಕೆರೆಗೆ ಹಾರಿ ಪ್ರಾಣಬಿಡುತ್ತಾನೆ.

ಆ ನಂತರ ತನ್ನ ಸೊಸೆಯ ತ್ಯಾಗಬಲಿದಾನದ ನೆನಪಿಗಾಗಿ ಮಲ್ಲೇಗೌಡ ಕೆರೆಯ ಏರಿಯಲ್ಲೊಂದು ದೇವಾಲಯವನ್ನು ಕಟ್ಟಿಸಿ ಅಲ್ಲಿ ಬಸವೇಶ್ವರ, ಗಣಪತಿ, ಹಾಗೂ ಹೊನ್ನಮ್ಮನ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಎಂದು ಹೇಳಲಾಗಿದೆ.

ಸುಮಾರು 16.20 ಎಕರೆ ವಿಸ್ತೀರ್ಣ ಹೊಂದಿರುವ ಹೊನ್ನಮ್ಮನಕೆರೆಯಿಂದ ದೊಡ್ಡಮಳ್ತೆ, ಹಾರೋಹಳ್ಳಿ, ಮಸಗೊಡು, ಅಬ್ಬೂರು, ಮೋರಿಕಲ್ಲು ಹಾಗೂ ಅಡಿನಾಡೂರು ಗ್ರಾಮಗಳ ಕೃಷಿಕರ ಜಮೀನಿಗೆ ನೀರು ಹರಿಯುತ್ತಿದ್ದು ಅವರ ಪಾಲಿಗೆ ಹೊನ್ನಮ್ಮ ಅನ್ನದಾತೆಯೂ ಆಗಿದ್ದಾಳೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೊನ್ನಮ್ಮನ ಕೆರೆಯ ಇಕ್ಕೆಲಗಳಲ್ಲಿ ಬೆಟ್ಟಗಳಿದ್ದು ಇವು ಚಾರಣಿಗರಿಗೆ ಹುರುಪು ನೀಡುತ್ತವೆ. ಇಲ್ಲಿರುವ ಬೆಟ್ಟಗಳ ಪೈಕಿ ದೇವಾಲಯದ ಬಲಭಾಗದಲ್ಲಿರುವ ಒಂಬೈನೂರು ಅಡಿ ಎತ್ತರದಲ್ಲಿರುವ ಗವಿಬೆಟ್ಟ ಹಾಗೂ ಪಾಂಡವರಬೆಟ್ಟ ಹಲವು ವೈಶಿಷ್ಟ್ಯತೆಗಳಿಂದ ಗಮನಸೆಳೆಯುತ್ತದೆ. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿ ಬಂದು ನೆಲೆಸಿದ್ದರಿಂದ ಪಾಂಡವರ ಬೆಟ್ಟ ಎಂಬ ಹೆಸರು ಬಂದಿದ್ದು, ಇಲ್ಲಿ 17 ಕುಟೀರಗಳ ಕುರುಹುಗಳನ್ನು ಇರುವುದನ್ನು ಕಾಣಬಹುದು.

ಗವಿಬೆಟ್ಟದ ಮಧ್ಯದಲ್ಲಿ 20 ಮೀಟರ್ ಉದ್ದದ ಗುಹೆಯಿದ್ದು ಅಲ್ಲಿ ಚಿಕ್ಕಕೊಳವೊಂದಿದೆ. ಅದರಲ್ಲಿ ಉದ್ಭವಿಸುವ ಜಲವನ್ನು ತೀರ್ಥವೆಂದು ಉಪಯೋಗಿಸಲಾಗುತ್ತದೆ. ಬೆಟ್ಟದ ಮೇಲೆ ತೆರಳಲು ದಾರಿಗಳಿದ್ದು ಇದರಲ್ಲಿ ಮುನ್ನಡೆದರೆ ಬೆಟ್ಟದ ತುದಿಗೆ ಹೋಗಬಹುದು. ಅಲ್ಲಿ ಬೃಹತ್ ಹೆಬ್ಬಂಡೆಗಳಿದ್ದು, ಅದರ ಮೇಲೆ ನಿಂತು ನೋಡಿದ್ದೇ ಆದರೆ ಪ್ರಕೃತಿಯ ವಿಹಂಗಮನೋಟ ಮೂಕಸ್ಮಿತರನ್ನಾಗಿ ಮಾಡುತ್ತದೆ. ದೂರದ ಬೆಟ್ಟಗಳಾಚೆ ಕಾಣಸಿಗುವ ಸೂರ್ಯಾಸ್ತದ ದೃಶ್ಯ ಮರೆಯಲಾರದ ಅನುಭವ ನೀಡುತ್ತದೆ.

ಹೊನ್ನಮ್ಮನ ಕೆರೆಯಿರುವ ತಾಣಕ್ಕೆ ಹೋಗಬೇಕಾದರೆ ಸೋಮವಾರಪೇಟೆಯಿಂದ ಶನಿವಾರಸಂತೆ ಕಡೆಗಿನ ರಸ್ತೆಯಲ್ಲಿ ಸುಮಾರು 6ಕಿ.ಮೀ. ಸಾಗಿದರೆ ದೊಡ್ಡಮಳ್ತೆ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಇರುವ ರಸ್ತೆಯಲ್ಲಿ ಮುನ್ನಡೆದರೆ ಕೆರೆಯು ಕಾಣುತ್ತದೆ.

 

 

 

More Images