ಮೈಸೂರಲ್ಲಿ ಗಾಣಗಳಿದ್ದವು ಎನ್ನುವುದು ಈಗ ನೆನಪಷ್ಟೆ!

ಮೈಸೂರಲ್ಲಿ ಗಾಣಗಳಿದ್ದವು ಎನ್ನುವುದು ಈಗ ನೆನಪಷ್ಟೆ!

LavaKumar   ¦    Oct 09, 2018 09:22:19 AM (IST)
ಮೈಸೂರಲ್ಲಿ ಗಾಣಗಳಿದ್ದವು ಎನ್ನುವುದು ಈಗ ನೆನಪಷ್ಟೆ!

ಹಲವು ವಿಶೇಷತೆಗಳಿಂದ ದೇಶ ವಿದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮೈಸೂರು ಹಲವಾರು ಐತಿಹಾಸಿಕ ಘಟನೆಗಳಿಗೆ ಮಾತ್ರವಲ್ಲದೆ, ತನ್ನ ಮಣ್ಣಿನ ಸೊಗಡಿನಿಂದಲೂ ಹೆಸರುವಾಸಿಯಾಗಿದೆ.

ಇಲ್ಲಿನ ಹತ್ತು ಹಲವು ವಿಶೇಷತೆಗಳು ಇಂದಿಗೂ ಜೀವಂತವಾಗಿದ್ದು ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಆದರೆ ಆಧುನಿಕತೆಯ ಭರಾಟೆ ಮತ್ತು ಜನರ ಉದಾಸೀನಭಾವಗಳು ಸಾಂಸ್ಕೃತಿಕ ನಗರಿಯಿಂದ ಕೆಲವೊಂದು ವೈವಿಧ್ಯತೆ ಮರೆಯಾಗಲು ಕಾರಣವಾಗಿದೆ.

ಹಾಗೆ ನೋಡಿದರೆ ಮೈಸೂರಿನಲ್ಲಿ ಹತ್ತು ಹಲವು ಕಸುಬು ಮಾಡುವ ಜನರಿದ್ದು, ಅವತ್ತಿನ ಮಟ್ಟಿಗೆ ಎಲ್ಲ ಕಸುಬುಗಳು ತಮ್ಮದೇ ವೈಭವವನ್ನು ಮೆರೆದಿದ್ದವು. ಆದರೆ ಆಧುನಿಕತೆಯ ಭರಾಟೆಗೆ ಜನತೆ ತೆರೆದುಕೊಳ್ಳುತ್ತಾ ಸಾಗುತ್ತಿರುವುದರಿಂದಾಗಿ ಪಾರಂಪರಿಕವಾಗಿ, ಕುಲಕಸುಬಾಗಿ ಉಳಿದು ಬೆಳೆಯ ಬೇಕಾಗಿದ್ದ ಕೆಲವು ಕಸುಬುಗಳು ಸದ್ದಿಲ್ಲದೆ ಮರೆಯಾಗಿ ಹೋಗಿವೆ. ಅದರಲ್ಲಿ ಎತ್ತಿನ ಗಾಣವೂ ಒಂದಾಗಿದೆ.

ಮೊದಲು ಮೈಸೂರು ನಗರದ ಹೃದಯಭಾಗದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಗಾಣಗಳು ಇತಿಹಾಸ ಸೇರಿವೆ. ಈಗ ಅವು ಬರೀ ನೆನಪು ಮಾತ್ರ. ತಲೆಮಾರುಗಳಿಂದ ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಬಂದಿದ್ದ ಗಾಣಗಳು ನಾಶವಾಗಿ ಹೋಗಿದ್ದು ನಿಜಕ್ಕೂ ಬೇಸರದ ಸಂಗತಿಯೇ.

ಹಲವು ದಶಕಗಳ ಹಿಂದೆ ಮೈಸೂರಿನ ಬೀದಿಗಳಲ್ಲಿ ಎಲ್ಲೆಂದರಲ್ಲಿ ಗಾಣ ಹೊತ್ತು ತಿರುಗುವ ಎತ್ತುಗಳು. ಎಣ್ಣೆ ತೆಗೆಯುವಲ್ಲಿ ನಿರತರಾದ ಹೆಂಗಸರು, ಗಂಡಸರು.. ಹೀಗೆ ಎಣ್ಣೆ ತೆಗೆಯುವ ಗಾಣಗಳ ದೃಶ್ಯಗಳು ಕಂಡು ಬರುತ್ತಿದ್ದವು. ಬದಲಾದ ಕಾಲದಲ್ಲಿ ಗಾಣಗಳು ಇನ್ನಿಲ್ಲವಾಗಿವೆ.

ಇತ್ತೀಚೆಗಿನ ವರ್ಷದ ತನಕವೂ ಮೈಸೂರು ನಗರದ ಹೃದಯಭಾಗದ ಶಾಂತಲಾ ಚಿತ್ರಮಂದಿರ ಬಳಿ ಗಾಣವೊಂದು ಪಳೆಯುಳಿಕೆ ಎಂಬಂತೆ ತಿರುಗುತ್ತಿತ್ತಾದರೂ ನಾಲ್ಕೈದು ವರ್ಷದಿಂದ ಅದು ಸ್ತಬ್ದವಾಗುವುದರೊಂದಿಗೆ ಗಾಣದ ಬದುಕು ಅಂತ್ಯಗೊಂಡಂತಾಗಿದೆ.

ಹಾಗೆ ನೋಡಿದರೆ ಈ ಗಾಣಗಳು ಒಂದು ಕಾಲದಲ್ಲಿ ತಮ್ಮದೇ ಆದ ವೈಭವವನ್ನು ಮೆರೆದಿದ್ದವಲ್ಲದೆ, ಹಲವು ಮಂದಿಗೆ ಅನ್ನ ನೀಡುತ್ತಿದ್ದವು. ಆಗಿನ ಕಾಲದಲ್ಲಿ ವಿವಿಧ ಬಗೆಯ ಎಣ್ಣೆಗಳನ್ನು ಗಾಣಗಳ ಮೂಲಕವೇ ತೆಗೆಯಲಾಗುತ್ತಿತ್ತು. ಆದರೆ ಕಾಲ ಕಳೆದಂತೆ ಎಲ್ಲವೂ ಬದಲಾಯಿತು. ಯಂತ್ರದ ಯುಗ ಆರಂಭವಾಗುತ್ತಿದ್ದಂತೆಯೇ ಆಯಿಲ್ ಮಿಲ್‍ಗಳ ಆವಿಷ್ಕಾರವಾಯಿತು. ಅವು ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವಂತೆಯೇ ಗಾಣ ನಡೆಸುವವರ ಬದುಕು ಕಷ್ಟವಾಗಿ ಪರಿಣಮಿಸತೊಡಗಿತು. ಪರಿಣಾಮ ಗಾಣಗಳು ಮುಚ್ಚತೊಡಗಿದವು. ಆ ಕಸುಬು ಮಾಡುತ್ತಿದ್ದವರು ಹೊಟ್ಟೆಪಾಡಿಗಾಗಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಮುಂದಾದರು. ಪರಿಣಾಮ ಗಾಣಗಳು ತಮ್ಮ ವೈಭವ ಕಳೆದುಕೊಂಡವು.

ಇನ್ನು ನಾಲ್ಕೈದು ವರ್ಷಗಳ ಹಿಂದಿನ ತನಕವೂ ಮೈಸೂರಿನ ಹೃದಯಭಾಗದಲ್ಲಿ ಗಾಣವೊಂದು ಇತ್ತು ಎನ್ನುವುದೇ ಸಂತೋಷದ ವಿಚಾರವಾಗಿತ್ತು. ಆದರೆ ಆ ಗಾಣ ನಡೆಸುತ್ತಿದ್ದವರ ಬದುಕು ಮಾತ್ರ ಹಸನಾಗಿರಲಿಲ್ಲ ಎಂಬುವುದು ಅಷ್ಟೇ ಸತ್ಯ.

ಗಾಣ ನಡೆಸುತ್ತಿದ್ದ ಕೃಷ್ಣ ಶೆಟ್ಟಿಯಾರ್ ಎಂಬುವರು 80 ವರ್ಷಗಳ ಹಿಂದೆ ನಿರ್ಮಿಸಿದ್ದ ಗಾಣವನ್ನು ಅವರ ಮೊಮ್ಮಗ ಪರಮೇಶ್ವರ ಎಂಬುವರು ನಡೆಸಿಕೊಂಡು ಹೋಗುತ್ತಿದ್ದರು. ಹುಚ್ಚೆಳ್ಳು ಎಣ್ಣೆ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ಕಡಲೇಕಾಯಿ ಎಣ್ಣೆ ತೆಗೆಯುವ ಮೂಲಕ ಬದುಕನ್ನು ಸಾಗಿಸುತ್ತಿದ್ದರು. ಆದರೆ ಅದರಿಂದ ಜೀವನ ನಡೆಸೋದು ಸಾಧ್ಯವಿಲ್ಲ ಎಂಬುದು ಅವರ ಅರಿವಿಗೆ ಬಂತಲ್ಲದೆ, ದನಗಳ ವೆಚ್ಚ, ಕೆಲಸ ಕಾರ್ಯ ಎಲ್ಲದನ್ನು ಗಮನಿಸಿದಾಗ ನಿರ್ವಹಣೆ ಕಷ್ಟಸಾಧ್ಯವಾಗಿತ್ತು. ಇದರ ಜತೆಗೆ ವೈಯಕ್ತಿಕ ಕೆಲವುವೊಂದು ಸಮಸ್ಯೆಯಿಂದಾಗಿ ಅದು ಮುಚ್ಚಿ ಹೋಯಿತು.

ಮೈಸೂರಿನ ಗಾಣಗಳ ಕುರಿತಂತೆ ಇತಿಹಾಸವನ್ನು ಕೆದಕುತ್ತಾ ಹೋದರೆ ಗಾಣ ನಡೆಸಿ ಬದುಕು ಕಟ್ಟಿಕೊಳ್ಳಲೆಂದು ಸುಮಾರು ಏಳೆಂಟು ದಶಕಗಳ ಹಿಂದೆ ತಮಿಳುನಾಡಿನ ಈರೋಡ್ ಜಿಲ್ಲೆಯ ಚಿತ್ತೋಡ್‍ನಿಂದ ಸುಮಾರು 40 ಕುಟುಂಬಗಳು ಮೈಸೂರಿಗೆ ವಲಸೆ ಬಂದಿದ್ದವಂತೆ. ಹಾಗೆ ಬಂದ ಕುಟುಂಬಗಳು ನಗರದ ಅಗ್ರಹಾರ, ಸುಬ್ಬರಾಯನ ಕೆರೆ ಆಸುಪಾಸಿನಲ್ಲಿ ಗಾಣಗಳನ್ನು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದ್ದರಂತೆ. ಜನ ತಾವು ಬೆಳೆದ ಎಳ್ಳು, ಹರಳು, ತೆಂಗಿನಕಾಯಿ ಮೊದಲಾದವುಗಳನ್ನು ಅವರಿಗೆ ನೀಡಿ ಎಣ್ಣೆ ತೆಗೆಸಿಕೊಳ್ಳುತ್ತಿದ್ದರು. ಒಂದು ಹಂತದವರಗೆ ಎಲ್ಲವೂ ಚೆನ್ನಾಗಿ ನಡೆಯುತ್ತಾ ಬಂತಾದರೂ ಯಾವಾಗ ಯಂತ್ರಗಳ ಆವಿಷ್ಕಾರವಾಯಿತೋ ಎಣ್ಣೆ ತೆಗೆಯುವ ಮಿಲ್‍ಗಳು ತಲೆ ಎತ್ತಿದವು. ಜನ ಅದರತ್ತ ವಾಲಿದರು. ಪರಿಣಾಮ ಗಾಣದತ್ತ ಜನ ಬರುವುದು ಕಡಿಮೆಯಾಯಿತು. ಅದನ್ನೇ ನಂಬಿದ್ದವರಿಗೆ ಗಾಣ ನಡೆಸುವುದು ಕಷ್ಟವಾಯಿತು. ಕೆಲವರು ಇದನ್ನು ಬಿಟ್ಟು ಜೀವನೋಪಾಯಕ್ಕೆ ಬೇರೆ ಉದ್ಯೋಗ ಕಂಡುಕೊಂಡರು. ಈಗ ಗಾಣಗಳು ನೆನಪು ಮಾತ್ರ.

ಮುಂದಿನ ತಲೆಮಾರಿಗೆ ಗಾಣಗಳು ಇದ್ದವು ಎನ್ನುವುದೇ ಸೋಜಿಗದ ಸಂಗತಿಯಾಗಲಿದೆ.

ಇಷ್ಟಕ್ಕೂ ಗಾಣಗಳು ಹೇಗಿರುತ್ತಿದ್ದವು ಎಂಬುದನ್ನು ನೋಡುವುದಾದರೆ ಕೊಕ್ಕೆ, ಅರೆಗೋಲು, ಗೂಟ, ಹಲಗೆ. ಜತೆಗೆ ಎರಡು ಎತ್ತುಗಳು ಇವು ಗಾಣದಲ್ಲಿ ಉಪಯೋಗವಾಗಿಸುವ ಪ್ರಮುಖ ಸಾಧನಗಳಾಗಿವೆ. ಅದರಲ್ಲಿ ಅರೆಗೋಲು ವಿಶೇಷ ಸಾಧನ. ಇದನ್ನು ಭಾರೀ ತೂಕದ ಕಾಡು ಬಾಗೇ ಮರದಿಂದ ತಯಾರಿಸಲಾಗುತ್ತದೆ. ಎತ್ತುಗಳು ಸುತ್ತುತ್ತಿದ್ದಂತೆಯೇ ಅರೆಗೋಲು ಅರೆಯತೊಡಗುತ್ತದೆ ಎಣ್ಣೆ ಹೊರ ಬರುತ್ತದೆ. ಇದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಆದರೂ ಕಷ್ಟಪಟ್ಟು ಗಾಣಗಳ ಮೂಲಕ ಎಣ್ಣೆ ತೆಗೆಯುತ್ತಿದ್ದರು ಆದರೆ ಪಳೆಯುಳಿಕೆಯಂತಿದ್ದ ಒಂದು ಗಾಣವೂ ಮುಚ್ಚಿ ಹೋಯಿತು ಎನ್ನುವುದೇ ಬೇಸರದ ಸಂಗತಿಯಾಗಿದೆ.

More Images