ಗುಮ್ಮಟಾಪುರದಲ್ಲಿ ಹೀಗೊಂದು ಸೆಗಣಿ ಹಬ್ಬ...

ಗುಮ್ಮಟಾಪುರದಲ್ಲಿ ಹೀಗೊಂದು ಸೆಗಣಿ ಹಬ್ಬ...

LavaKumar   ¦    Oct 26, 2018 03:01:39 PM (IST)
ಗುಮ್ಮಟಾಪುರದಲ್ಲಿ ಹೀಗೊಂದು ಸೆಗಣಿ ಹಬ್ಬ...

ಚಾಮರಾಜನಗರ ಜಿಲ್ಲೆಯ ಗಡಿಭಾಗವಾದ ತಮಿಳುನಾಡಿನ ತಾಳವಾಡಿ ಫಿರ್ಕಾ ವ್ಯಾಪ್ತಿಯ ಗುಮಟಾಪುರ ಗ್ರಾಮದಲ್ಲಿ ಜನ ಹಬ್ಬದಲ್ಲಿ ಸೆಗಣಿಯಲ್ಲಿ ಬಡಿದಾಡುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿ ಬೀಳ್ಕೊಡುತ್ತಾರೆ ಇದಕ್ಕಾಗಿ ಈಗಿನಿಂದಲೇ ಜನ ತಯಾರಿ ಮಾಡಿಕೊಳ್ಳುವುದು ಮಾಮೂಲಾಗಿದೆ.

ಅಲ್ಲಿನ ಜನ ಈ ಹಬ್ಬವನ್ನು ಗೋರೆಹಬ್ಬ ಎಂದು ಕರೆಯುತ್ತಾರೆ. ಪ್ರತಿವರ್ಷ ದೀಪಾವಳಿಯ ಬಲಿಪಾಡ್ಯಮಿ ಹಬ್ಬವಾದ ಮಾರನೇ ದಿನ ಗ್ರಾಮದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

ಗ್ರಾಮದ ಯುವಕರು ಒಬ್ಬರಿಗೊಬ್ಬರು ಪರಸ್ಪರ ಸಗಣಿ ಎರಚಾಡಿಕೊಂಡು ಸಂಭ್ರಮಿಸಿಸುತ್ತಾರೆ. ಅಷ್ಟೇ ಅಲ್ಲ ಸಗಣಿ ಗುಡ್ಡೆಯಲ್ಲಿ ಉರುಳಾಡಿ ಖುಷಿಪಡುತ್ತಾರೆ. ಗ್ರಾಮದ ಎಲ್ಲ್ಲವರ್ಗದ ಯುವಕರೂ ಈ ವಿಶಿಷ್ಟ ಆಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆಯುತ್ತಾರೆ. ಈ ವಿಶಿಷ್ಟ ರೀತಿಯಲ್ಲಿ ಆಚರಿಸಲ್ಪಡುವ ಹಬ್ಬವನ್ನು ವೀಕ್ಷಿಸಲು ಸುತ್ತಮುತ್ತಲಿನ ಸಾವಿರಾರು ಜನರು ಆಗಮಿಸುತ್ತಾರೆ.

ಹಬ್ಬದ ಆಚರಣೆ ಹೇಗೆ?

ಹಬ್ಬದ ದಿನ ಗೋವುಗಳು ಹಾಕಿದ ಸಗಣಿಯನ್ನು ಗ್ರಾಮದ ದೇವಸ್ಥಾನದ ಬಳಿ ಸುರಿದು ಗುಡ್ಡೆ ಮಾಡಲಾಗುತ್ತದೆ. ಇದೇ ವೇಳೆ ಮಕ್ಕಳು ಮನೆಗಳಿಂದ ಬೇಡಿ ತಂದ ಎಣ್ಣೆಯಿಂದ ಪೂಜೆ ಸಲ್ಲಿಸುತ್ತಾರೆ. ನಂತರ ಸಮೀಪದಲ್ಲಿಯೇ ಇರುವ ಕಾರಪ್ಪ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.

ಗ್ರಾಮದ ಯುವಕನೊಬ್ಬನನ್ನು ಕತ್ತೆ ಮೇಲೆ ಕೂರಿಸಿಕೊಂಡು ಗ್ರಾಮದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಕತ್ತೆ ಮೇಲೆ ಕುಳಿತ ಯುವಕನಿಗೆ ಚಾಡಿಕೋರ ಎಂದು ಹೆಸರಿಸಿ, ಆತನಿಗೆ ಹುಲ್ಲಿನಿಂದ ತಯಾರಿಸಿದ್ದ ಮೀಸೆ, ಗಡ್ಡವನ್ನು ಕಟ್ಟಲಾಗುತ್ತದೆ. ಆತನನ್ನು ಗ್ರಾಮದ ಕೆರೆಯಿಂದ ಬೀರೇಶ್ವರನ ದೇವಸ್ಥಾನದವರೆಗೂ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಈ ವೇಳೆ ಆತನಿಗೆ ಅಶ್ಲೀಲ ಪದಗಳಿಂದ ನಿಂದಿಸಲಾಗುತ್ತದೆ. ಮೆರವಣಿಗೆ ಬಳಿಕ ಆತ ಹುಲ್ಲಿನ ಮೀಸೆ ಹಾಗೂ ಗಡ್ಡ ತೆಗೆದು ಸಗಣಿ ರಾಶಿಯಲ್ಲಿ ಇರಿಸಿ ಬೀರೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ಸಗಣಿಯಾಟ ಆರಂಭವಾಗುತ್ತದೆ.

ಯುವಕರು ಸೆಗಣಿಯಲ್ಲೇ ಹೊಡೆದಾಡುತ್ತಾರೆ!
ಗ್ರಾಮದ ಯುವಕರು ಸಗಣಿಯನ್ನು ಉಂಡೆ ಮಾಡಿಕೊಂಡು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಸಗಣಿ ರಾಶಿಯಲ್ಲಿ ಉರುಳಾಡುತ್ತಾರೆ. ಈ ವಿಶಿಷ್ಟ ಆಚರಣೆ ಮುಗಿದ ನಂತರ ಚಾಡಿಕೋರ ಗುಡ್ಡದಲ್ಲಿ ಹಿಡಿಕಟ್ಟೆಗಳಿಂದ ಗೊಂಬೆಯೊಂದನ್ನು ನಿರ್ಮಿಸಿ ಸುಡಲಾಗುತ್ತದೆ. ಆ ನಂತರ ಸಗಣಿಯಾಟದಲ್ಲಿ ಭಾಗವಹಿಸಿದ್ದ ಯುವಕರು ಕೆರೆಗೆ ತೆರಳಿ ಸ್ನಾನ ಮಾಡಿ ಮನೆಗಳಿಗೆ ತೆರಳುತ್ತಾರೆ. ಇಷ್ಟಕ್ಕೂ ಸಗಣಿಯಲ್ಲಿ ಬಡಿದಾಡುವುದು, ಚಾಡಿಕೋರನನ್ನು ಕತ್ತೆ ಮೇಲೆ ಕುಳ್ಳಿರಿಸಿ ಮೆರವಣಿಗೆ ಏಕೆ ಮಾಡುತ್ತಾರೆ ಎಂಬುದನ್ನು ನೋಡುವುದಾದರೆ ಈ ಆಚರಣೆ ಹಿಂದೆ ಇರುವ ಕಥೆಯನ್ನು ಗ್ರಾಮದ ಹಿರಿಯರು ಬಿಚ್ಚಿಡುತ್ತಾ ಹೋಗುತ್ತಾರೆ.

ಕನಸಿನಲ್ಲಿ ಕಾಣಿಸಿದ ದೇವರು ಹೇಳಿದ್ದೇನು?

ಅವರ ಪ್ರಕಾರ ಹಿಂದಿನ ಕಾಲದಲ್ಲಿ ಗುಮಟಾಪುರ ಗ್ರಾಮದ ಗೌಡನ ಮನೆಗೆ ವ್ಯಕ್ತಿಯೊಬ್ಬ ಪರ ಊರಿನಿಂದ ಕೆಲಸಕ್ಕೆ ಸೇರಿಕೊಂಡಿದ್ದನು. ಏಕಾಂಗಿಯಾಗಿದ್ದ ಆತ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಆತನದು ಎಂದು ಹೇಳುವ ಯಾವುದೇ ವಸ್ತು ಇರಲಿಲ್ಲವಾದರೂ ಆತ ಎಲ್ಲಾದರೂ ಹೋಗುವಾಗ ಜೋಳಿಗೆ ಹಾಕಿಕೊಂಡು ಹೋಗುತ್ತಿದ್ದನು.

ಆತ ಹೀಗಿರುವಾಗ ಒಂದು ದಿನ ಮರಣ ಹೊಂದಿದನು. ಈ ಸಂದರ್ಭ ಆತ ಬಳಸುತ್ತಿದ್ದ ಜೋಳಿಗೆಯನ್ನು ನೋಡಿದ ಗೌಡ ಅದು ತಮಗೇಕೆಂದು ಗ್ರಾಮದ ತಿಪ್ಪೆಗೆ ಎಸೆದು ತನ್ನ ಪಾಡಿಗೆ ತಾನಿದ್ದನು. ಹೀಗಿರುವಾಗ ಒಂದು ದಿನ ಗೌಡ ಅದೇ ಮಾರ್ಗವಾಗಿ ಎತ್ತಿಗಾಡಿಯಲ್ಲಿ ಹೋಗುವಾಗ ಗಾಡಿ ತಿಪ್ಪೆ ಮೇಲೆ ಹಾದು ಹೋಗುತ್ತಿದ್ದಂತೆಯೇ ತಿಪ್ಪೆಯಲ್ಲಿ ಎಸೆಯಲಾಗಿದ್ದ ಆ ಕೆಲಸಗಾರನ ಜೋಳಿಗೆಯು ಗಾಡಿಗೆ ಸಿಕ್ಕಿಹಾಕಿಕೊಂಡು ಗಾಡಿ ಮುಂದೆ ಹೋಗದೆ ಅಲ್ಲಿಯೇ ನಿಲ್ಲುತ್ತದೆ.

ಅಚ್ಚರಿಯಿಂದ ಗಾಡಿಯಿಂದ ಕೆಳಗಿಳಿದ ಗೌಡನಿಗೆ ಎತ್ತಿನಗಾಡಿಗೆ ಸಿಕ್ಕಿಹಾಕಿಕೊಂಡಿರುವ ಜೋಳಿಗೆ ಕಾಣಿಸುತ್ತದೆ. ಅಷ್ಟೇ ಅಲ್ಲದೆ ಆ ಜೋಳಿಗೆಯನ್ನು ತಾನೇ ತಿಪ್ಪೆಗೆ ಎಸೆದಿದ್ದು ನೆನಪಾಗುತ್ತದೆ. ಅದೇ ವೇಳೆಗೆ ವಿಸ್ಮಯವೊಂದು ನಡೆಯುತ್ತದೆ. ತಿಪ್ಪೆಗುಂಡಿ ಬಳಿಯೇ ಇದ್ದ ಶಿವಲಿಂಗದಿಂದ ರಕ್ತ ಬರುತ್ತದೆ. ಇದೆಲ್ಲ ಘಟನೆಗಳು ಗೌಡನಿಗೆ ಅಚ್ಚರಿ ಮೂಡಿಸುತ್ತದೆ. ಅದೇ ಗುಂಗಿನಲ್ಲಿದ್ದ ಗೌಡ ರಾತ್ರಿ ಮಲಗಿದ್ದಾಗ ಕನಸಿನಲ್ಲಿ ದೇವರು ಕಾಣಿಸಿಕೊಂಡು ಈ ದೋಷ ನಿವಾರಣೆಗಾಗಿ ಗ್ರಾಮದಲ್ಲಿ ಗುಡಿಯೊಂದನ್ನು ನಿರ್ಮಿಸಬೇಕು. ದೀಪಾವಳಿ ಹಬ್ಬದ ಮರುದಿನ ಸಗಣಿ ಹಬ್ಬ ಆಚರಿಸಬೇಕು ಎಂದು ಹೇಳಿತಂತೆ.

ತಿಪ್ಪೆಗುಂಡಿ ಸ್ಥಳದಲ್ಲೇ ಬೀರಪ್ಪನ ಗುಡಿ
ಮಾರನೆಯ ದಿನವೇ ಗೌಡ ಕನಸಿನಲ್ಲಿ ಕಾಣಿಸಿಕೊಂಡ ದೇವರು ಹೇಳಿದಂತೆಯೇ ದೇವಾಲಯ ನಿರ್ಮಾಣಕ್ಕೆ ಮುಂದಾಗಿ ತಿಪ್ಪೆಯಿದ್ದ ಸ್ಥಳದಲ್ಲಿ ಬೀರಪ್ಪನ ಗುಡಿ ಕಟ್ಟಿದ್ದಲ್ಲದೆ, ದೀಪಾವಳಿ ಹಬ್ಬದ ಮಾರನೆಯ ದಿನ ಸಗಣಿ ಹಬ್ಬ ಆಚರಿಸಿದರಂತೆ. ಅಲ್ಲಿಂದ ಇಲ್ಲಿಯ ತನಕವೂ ಇದು ನಡೆದುಕೊಂಡು ಬರುತ್ತಿದೆ.

ಪ್ರತಿವರ್ಷವೂ ಹಬ್ಬವನ್ನು ಗ್ರಾ,ಮಸ್ಥರೆಲ್ಲರೂ ಸೇರಿ ಸಂಪ್ರದಾಯಬದ್ಧವಾಗಿ ಆಚರಿಸುತ್ತಾರೆ. ಹಬ್ಬಕ್ಕೆ ತಿಂಗಳಿರುವಾಗಲೇ ಹಬ್ಬದ ತಯಾರಿಗಳು ನಡೆಯುತ್ತವೆ. ಹಬ್ಬದ ವೇಳೆ ನೆಂಟರಿಸ್ಟರು ನೆರೆಯುತ್ತಾರೆ. ಎಲ್ಲರೂ ಒಂದೆಡೆ ಕಲೆತು, ಬೆರೆತು ಸಂಭ್ರಮ ಪಡುತ್ತಾರೆ. ಸೆಗಣಿಯಲ್ಲಿ ಬಡಿದಾಡಿಕೊಂಡು ಖುಷಿಪಡುತ್ತಾರೆ. ಒಟ್ಟಾರೆ ಹೇಳಬೇಕೆಂದರೆ ಗುಮ್ಮಟಾಪುರದ ಸೆಗಣಿಹಬ್ಬ ಇತರೆ ಕಡೆಗಳಲ್ಲಿ ನಡೆಯುವ ಹಬ್ಬಕ್ಕಿಂತ ಭಿನ್ನ ಮತ್ತು ವಿಶಿಷ್ಟ ಎಂದರೆ ತಪ್ಪಾಗಲಾರದು.

More Images