ಪ್ರವಾಸಿಗರ ಸೆಳೆಯುವ ನಿಸರ್ಗ ಸುಂದರ ಕೆರೆತೊಣ್ಣೂರು!

ಪ್ರವಾಸಿಗರ ಸೆಳೆಯುವ ನಿಸರ್ಗ ಸುಂದರ ಕೆರೆತೊಣ್ಣೂರು!

B.M.Lavakumar   ¦    Dec 14, 2017 02:01:29 PM (IST)
ಪ್ರವಾಸಿಗರ ಸೆಳೆಯುವ ನಿಸರ್ಗ ಸುಂದರ ಕೆರೆತೊಣ್ಣೂರು!

ಸುತ್ತಲೂ ಹರಡಿ ನಿಂತ ಬೃಹತ್ ಗಾತ್ರಗಳ ಹೆಬ್ಬಂಡೆಗಳನ್ನೊಳಗೊಂಡ ಬೆಟ್ಟಗುಡ್ಡಗಳು ಅವುಗಳ ನಡುವಿನ ಹಸಿರು ಹಚ್ಚಡ... ಕಣ್ಣು ಹಾಯಿಸಿದುದ್ದಕ್ಕೂ ಅಲೆಅಲೆಯಾಗಿ ತೇಲುತ್ತಾ ಸ್ಫಟಿಕದಂತೆ ಹೊಳೆಯುವ ವಿಶಾಲ ಕೆರೆ... ಕೆರೆಯಿಂದಾಚೆ ಧಾರೆಯಾಗಿ ಧುಮುಕುವ ಮದಗ... ಸುತ್ತಮುತ್ತ ನೆಲೆ ನಿಂತ ದೇವಾಲಯಗಳಿಂದ ತೂರಿ ಬಂದು ಕಿವಿಗೆ ಅಪ್ಪಳಿಸುವ ಗಂಟೆಗಳ ನಿನಾದ... ದೂರದ ಕಣಿವೆಯಲ್ಲಿ ಹಸಿರಿನಿಂದ ಕಂಗೊಳಿಸುವ ತೆಂಗು, ಭತ್ತದ ಗದ್ದೆಗಳು...

ಇದು ಮಂಡ್ಯ ಜಿಲ್ಲೆಯ ಪಾಂಡವಪುರದಿಂದ ಸುಮಾರು ಒಂಬತ್ತು ಕಿ.ಮೀ. ದೂರದಲ್ಲಿರುವ ಕೆರೆತೊಣ್ಣೂರಿಗೆ ತೆರಳುವ ಪ್ರವಾಸಿಗರಿಗೆ ಕಾಣಸಿಗುವಂತಹ ಸುಂದರ ನಿಸರ್ಗ ಸೌಂದರ್ಯಗಳು.

ತಂಪಾದ ಹವೆ, ಕಣ್ಮನ ತಣಿಸುವ ನಿಸರ್ಗ, ಕಣ್ಣು ಹಾಯಿಸಿದುದ್ದಕ್ಕೂ ಸ್ಫಟಿಕದಂತೆ ಹೊಳೆಯುವ ಸಿಹಿ ನೀರು... ಇಂತಹ ನಿಸರ್ಗದತ್ತ ಸೌಂದರ್ಯವನ್ನು ಸವಿಯಲೆಂದೇ ಇಲ್ಲಿಗೆ ಆಗಾಗ್ಗೆ ಪ್ರವಾಸಿಗರು ಲಗ್ಗೆ ಹಾಕುತ್ತಾರೆ.
ಎರಡು ಗುಡ್ಡಗಳಿಗೆ ಕಟ್ಟೆ ಕಟ್ಟಿ ನಿರ್ಮಿಸಲಾಗಿರುವ ಕೆರೆ ಆಳ, ಅಗಲವಿದ್ದು, ಇಲ್ಲಿರುವ ನೀರು ಯಾವುದೇ ಕಲ್ಮಶದಿಂದ ಕೂಡಿರದೆ ಸ್ಫಟಿಕದಂತೆ ಹೊಳೆಯುತ್ತದೆ. ಆದುದರಿಂದ ಈ ಕೆರೆಯನ್ನು ಮುತ್ತಿನಕೆರೆ ಎಂದು ಕೂಡ ಕರೆಯಲಾಗುತ್ತಿದೆ.

1746ರಲ್ಲಿ ಸೈನ್ಯದಲ್ಲಿದ್ದ ಸುಬೇದಾರನ ಪುತ್ರ ನಾಸಿರ್ ಸಿಂಗ್ ಎಂಬಾತ ಕೆರೆತೊಣ್ಣೂರಿನಲ್ಲಿ ನೆಲೆಸಿದ್ದಾಗ ಒಮ್ಮೆ ಅಂದಿನ ರಾಜ ಪರಿವಾರಕ್ಕೆ ಸೇರಿದ ಮಹಿಳೆಯೊಬ್ಬರ ಮುತ್ತಿನ ಆಭರಣ ಕೈಜಾರಿ ಈ ಕೆರೆಯೊಳಗೆ ಬಿತ್ತಂತೆ. ಆದರೆ ಅದು ಕೆರೆಯ ತಳ ಸೇರಿದರೂ ತಿಳಿ ನೀರಿನಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದುದರಿಂದ ಈಜುಗಾರರು ನೀರಿನಲ್ಲಿ ಮುಳುಗಿ ಹೊರತೆಗೆದರೆಂದು ಹೇಳಲಾಗುತ್ತಿದೆಯಲ್ಲದೆ, ಆ ಕಾರಣದಿಂದಲೇ ನಾಸಿರ್ ಸಿಂಗ್ ಇದನ್ನು ಮೋತಿ ತಲಾಬ್(ಮುತ್ತಿನ ಕೆರೆ) ಎಂದು ಕರೆದನಂತೆ.

ಇನ್ನು ಈ ವಿಶಾಲ ಕೆರೆಯನ್ನು ಯಾವಾಗ ನಿರ್ಮಿಸಲಾಯಿತು ಎಂಬುವುದಕ್ಕೆ ಸೂಕ್ತ ದಾಖಲೆಗಳು ಸಿಗುತ್ತಿಲ್ಲವಾದರೂ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಯಾದವ ಸಮುದ್ರ ಇದಾಗಿರಬಹುದೆಂಬ ಅಭಿಪ್ರಾಯವೂ ಕೇಳಿಬರುತ್ತದೆ. ಇದಕ್ಕೆ ಕ್ರಿ.ಶ. 1326ರಲ್ಲಿ ಹೊಯ್ಸಳರ ರಾಜಧಾನಿ ದ್ವಾರಸಮುದ್ರದ ಮೇಲೆ ಮುಸಲ್ಮಾನ ದೊರೆಗಳು ದಾಳಿ ಮಾಡಿದ ಸಂದರ್ಭ ತಮ್ಮ ರಕ್ಷಣೆಗೆ ಕೆರೆತೊಣ್ಣೂರನ್ನು ಆಶ್ರಯಿಸಿದರೆಂಬ ಇತಿಹಾಸದ ಕಥೆಯೂ ಪುಷ್ಠಿ ನೀಡುತ್ತದೆ. ಇವರ ಕಾಲದಲ್ಲಿ ಈ ಸ್ಥಳ ಪ್ರಸಿದ್ಧ ಅಗ್ರಹಾರವಾಗಿ ಬೆಳೆದಿತ್ತು. ಕೆರೆತೊಣ್ಣೂರನ್ನು ತೊಂಡನೂರು ಅಗ್ರಹಾರ, ಯಾದವಪುರ, ಯಾದವನಾರಾಯಣ ಚತುರ್ವೇದಿಮಂಗಲ, ತೊಂಡೂರು ಎಂಬ ಮತ್ತೊಂದು ಹೆಸರಿನಿಂದಲೂ ಕರೆಯಲಾಗುತ್ತದೆ. ಈ ಊರಿನಲ್ಲಿ ಭಕ್ತರಿದ್ದರೆಂದೂ ಅವರನ್ನು ತೊಂಡ(ಭಕ್ತ)ರೆಂದು ಕರೆಯಲಾಗುತ್ತಿತೆಂದೂ ಮುಂದೆ ತೊಂಡರಿದ್ದ ಊರು ತೊಂಡನೂರು ಆಯಿತೆಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಇದಕ್ಕೆ ಕೆರೆಯ ಸುತ್ತಮುತ್ತಲಿರುವ ಹಲವು ದೇವಾಲಯಗಳೇ ಸಾಕ್ಷಿಯಾಗಿವೆ.

ಕೆರೆಯ ಬಗ್ಗೆ ಹೇಳುವುದಾದರೆ ಶ್ರೀರಾಮಾನುಜಚಾರ್ಯರು ಮೇಲುಕೋಟೆಗೆ ತೆರಳುವ ಸಂದರ್ಭ ಕೆಲ ಕಾಲ ಇಲ್ಲಿಯೇ ನೆಲೆಸಿದ್ದರೆಂದೂ ಅಲ್ಲದೆ ಇಲ್ಲಿನ ಕೆರೆಯನ್ನು ತಿರುಮಲಸಾಗರ ಎಂಬ ಹೆಸರಿನಿಂದ ಕರೆದಿದ್ದರೆನ್ನಲಾಗಿದೆ. ಟಿಪ್ಪು ಸುಲ್ತಾನನ ಕಾಲದಲ್ಲಿ ಕೆರೆಯ ಜೀರ್ಣೋದ್ಧಾರ ಮಾಡಲಾಯಿತೆಂದೂ ಆಗ ಇದರ ಕಟ್ಟೆಗೆ ದೇವಾಲಯಗಳ ಹಲವು ಶಿಲ್ಪಗಳನ್ನು ಸೇರಿಸಲಾಯಿತು ಎನ್ನಲಾಗುತ್ತಿದೆ.

ಕೆರೆಯ ದಂಡೆಯನ್ನು ಮೆಟ್ಟಿಲಿನಿಂದ ನಿರ್ಮಿಸಲಾಗಿದ್ದು ಒಂದೊಂದೇ ಮೆಟ್ಟಿಲನ್ನು ಇಳಿಯುತ್ತಾ ನೀರಿನಲ್ಲಿ ಆಟವಾಡಬಹುದು. ಕೆರೆಯ ಒಂದು ದಡದಲ್ಲಿ ಸ್ನಾನಘಟ್ಟ ಹಾಗೂ ಮಂಟಪವಿದ್ದು ಇದು ಕೆರೆಗೆ ಕಳೆಗಟ್ಟಿದೆ. ಈ ಕೆರೆಯಲ್ಲಿ ದಿನನಿತ್ಯವೂ ನೂರಾರು ಮಂದಿ ಸ್ನಾನ ಮಾಡಿ ಖುಷಿ ಪಡುತ್ತಾರೆ. ಉರಿ ಬಿಸಿಲಿಗೆ ಈ ನೀರಿಗೆ ಮೈಯೊಡ್ಡುವುದೇ ಒಂದು ರೀತಿಯ ಮಜಾ. ಆದರೆ ಸೌಂದರ್ಯಕ್ಕೆ ಮಣಿದು ಈಜಲು ಹೋಗೋದು ಮಾತ್ರ ಅಪಾಯ.

ಏಕೆಂದರೆ ಈಗಾಗಲೇ ಈಜಲು ಹೋಗಿ ಪ್ರಾಣ ಕಳೆದುಕೊಂಡವರ ದೊಡ್ಡ ಪಟ್ಟಿಯೇ ಇದೆ. ಹಾಗಾಗಿ ಪ್ರವಾಸಿಗರು ಸೂಚನಾ ಫಲಕದತ್ತ ಗಮನಹರಿಸುವುದು ಒಳಿತು.

ಕೆರೆಯನ್ನು ವೀಕ್ಷಿಸುತ್ತಾ ಒಂದಷ್ಟು ಹೆಜ್ಜೆ ಹಾಕಿದ್ದೇ ಆದರೆ ಮೇಲಿನಿಂದ ಕೆಳಕ್ಕೆ ಧುಮುಕುವ ಮದಗ ಕಂಡುಬರುತ್ತದೆ.

ಇಲ್ಲಿ ಹಲವಾರು ದೇವಾಲಯ ಮತ್ತು ಮಸೀದಿಯಿದ್ದು, ಇವುಗಳು ಇದೊಂದು ಪವಿತ್ರಕ್ಷೇತ್ರವಾಗಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ವಿಷ್ಣುವರ್ಧನನ ತಾಯಿ ಮೊದಲ ಮಹಾದೇವಿ ಇಲ್ಲಿ ತುಪ್ಪಲೇಶ್ವರ ಎಂಬ ಶಿವದೇವಾಲಯವೊಂದನ್ನು ಕಟ್ಟಿಸಿದಳೆಂದೂ ಅದಕ್ಕೆ ವಿಷ್ಣುವರ್ಧನ ದತ್ತಿ ಬಿಟ್ಟಿದ್ದನೆಂದೂ ಹೇಳಲಾಗಿದೆ. ಮತ್ತೊಂದೆಡೆ ವಿಷ್ಣುವರ್ಧನ ಯುವರಾಜನಾಗಿದ್ದ ಸಂದರ್ಭ ಕೆರೆತೊಣ್ಣೂರನ್ನು ಅಗ್ರಹಾರವನ್ನಾಗಿ ಪರಿವರ್ತಿಸಿದನೆಂದೂ ಈತ ನಿರ್ಮಿಸಿದ ಐದು ದೇವಾಲಯಗಳಲ್ಲಿ ಇಲ್ಲಿರುವ ಲಕ್ಷ್ಮಿನಾರಾಯಣ ದೇವಾಲಯ ಒಂದಾಗಿರಬಹುದೆಂಬ ಅಭಿಪ್ರಾಯವೂ ಇದೆ. ಜೊತೆಗೆ ಇಲ್ಲಿಯೇ ರಾಮಾನುಜಚಾರ್ಯರು ವಿಷ್ಣುವರ್ಧನನ್ನು ಭೇಟಿ ಮಾಡಿ ಜೈನಮತದಿಂದ ವೈಷ್ಣವ ಮತದತ್ತ ಮನವೊಲಿಸಿದ್ದರು ಎಂದು ಇತಿಹಾಸ ಹೇಳುತ್ತದೆ.

ಇನ್ನು ಕೆರೆತೊಣ್ಣೂರಿನಲ್ಲಿ ನಿರ್ಮಾಣವಾಗಿರುವ ದೇವಾಲಯಗಳ ಬಗ್ಗೆಯೂ ಐಹಿತ್ಯಗಳು ಇರುವುದನ್ನು ನಾವು ಕಾಣಬಹುದು. ಒಂದನೆಯ ನರಸಿಂಹನ ಕಾಲದಲ್ಲಿ ಕೃಷ್ಣನ ದೇವಾಲಯವನ್ನೂ ಹಾಗೂ ಕೈಲಾಸೇಶ್ವರ ದೇವಾಲಯ, ನರಸಿಂಹನ ದೇವಾಲಯವನ್ನು ಕೂಡ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ ದೇವಾಲಯಗಳ ಅಭಿವೃದ್ಧಿಯಾಗಿದ್ದು, ಹೊಯ್ಸಳರ ಆಳ್ವಿಕೆಯ ಕೊನೆಗಾಲದಲ್ಲಿ ರಾಜ ಮುಮ್ಮಡಿ ಬಲ್ಲಾಳ ಕೆಲವು ಸಮಯ ಇಲ್ಲಿದ್ದನು ಎನ್ನಲಾಗುತ್ತಿದೆ. ಇಲ್ಲಿರುವ ದೇವಾಲಯಗಳ ಅಭಿವೃದ್ಧಿಯನ್ನು ವಿಜಯನಗರ ಮತ್ತು ಮೈಸೂರು ಅರಸರ ಕಾಲದಲ್ಲಿ ಮಾಡಲಾಯಿತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ಕೆರೆಯದಂಡೆಯಲ್ಲಿ ನಿಕುಂಬಿನಿ ಎಂಬ ದೇವಿಯ ದೇವಾಲಯವಿದ್ದು, ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಶಾಹ ಸಲಾ ಮಸೂದ್ ಘಾಸಿಯ ದರ್ಗಾವೂ ಇಲ್ಲಿದೆ. ಇದನ್ನು 1358ರಲ್ಲಿ ನಿರ್ಮಿಸಿದ್ದು, ಈ ದರ್ಗಾದ ಕಟ್ಟಡಕ್ಕೆ ದೇವಾಲಯದ ಕಂಬಗಳನ್ನು ಬಳಸಿರುವುದು ಗಮನಾರ್ಹವಾಗಿದೆ. ಕೆರೆ ಬಳಿಯ ಬೆಟ್ಟಗಳು ಚಾರಣಪ್ರಿಯರಿಗೆ ಹೇಳಿಮಾಡಿಸಿದಂತಿದೆ. ಬೆಟ್ಟದ ಮೇಲ್ಭಾಗದಿಂದ ಕಾಣಸಿಗುವ ಕಾಣಸಿಗುವ ನಿಸರ್ಗದ ಸುಂದರ ಚಿತ್ತಾರ ಮೂಕಸ್ಮಿತರನ್ನಾಗಿ ಮಾಡಿಬಿಡುತ್ತದೆ.

More Images