ಮಿನುಗುವ ಸರಗಳೊಂದಿಗೆ ಬದುಕಿನ ಬಣ್ಣದ ಯಾನ

ಮಿನುಗುವ ಸರಗಳೊಂದಿಗೆ ಬದುಕಿನ ಬಣ್ಣದ ಯಾನ

Chondamma   ¦    Nov 15, 2017 03:47:10 PM (IST)
ಮಿನುಗುವ ಸರಗಳೊಂದಿಗೆ ಬದುಕಿನ ಬಣ್ಣದ ಯಾನ

ಉಜಿರೆ, ನ.15: ಲಕ್ಷದೀಪಗಳ ಅಲಂಕಾರದ ನಡುವೆ ಸಾವಿರ ಬಣ್ಣದ ಸರಗಳ ಸಿಂಗಾರ. ಮಿಣ ಮಿಣ ಮಿನುಗುವ ಸರಮಾಲೆ, ಕಾಲ್ಗೆಜ್ಜೆಗಳ ಸಾಲು ಸಾಲು ರಾಶಿಯಲ್ಲಿ ಕನಸು ಹೊತ್ತ ಕಣ್ಣುಗಳು. ಹರಡಿದ ಹರಳುಗಳ ಆಧಾರದಲ್ಲಿ ಬದುಕು ಕಟ್ಟಿಕೊಳ್ಳುವ ಹಂಬಲ, ನಿಶ್ಚಿತ ಆದಾಯವಿಲ್ಲದ ಎದುರಾಗೋ ಕಷ್ಟಗಳ ನಡುವೆಯೇ ಉತ್ಸಾಹ ಬತ್ತಿಸಿಕೊಳ್ಳದೇ ಮುನ್ನಡೆಯುವ ಅಪೇಕ್ಷೆ....

ಲಕ್ಷದೀಪೋತ್ಸವದ ಹಿನ್ನೆಲೆಯಲ್ಲಿ ದೂರದ ತಮಿಳುನಾಡಿನಿಂದ ಧರ್ಮಸ್ಥಳಕ್ಕೆ ಬಂದು ಬಣ್ಣದ ಸರಗಳ ಮಾರಾಟಕ್ಕಿಳಿದ ಅರುಣ್ ಕುಮಾರ್ ಬದುಕಿನ ಯಾನದ ವಿವರಗಳಿವು. ತನ್ನ ಬದುಕಿನ ಕತೆಯ ಎಳೆ ಬಿಚ್ಚಿಟ್ಟಾಗ ತಿಳಿದದ್ದು, 40 ತರಹದ ಸರಗಳ ಹಿಂದೆ ಕಳೆದು ಹೋದ 30 ವರ್ಷಗಳ ಜೀವನ. ತಮಿಳುನಾಡಿನ ಅರುಣ್ ಮತ್ತು ಪತ್ನಿ ನಂದಿನಿ ತಮ್ಮ 5 ವರ್ಷದ ಮಗುವಿನೊಂದಿಗೆ ಲಕ್ಷದೀಪೋತ್ಸವಕ್ಕೆ ಬಂದದ್ದು, ಈ ಬಣ್ಣ ಬಣ್ಣದ ಸರಗಳ ಸಾಲಿನಲ್ಲಿ ಬದುಕು ಕಟ್ಟಿಕೊಳ್ಳುವ ಆಸೆಯಲ್ಲಿ. ದ್ವಾರದ ಬದಿಯಲ್ಲೇ ಜಾಗ ಹಿಡಿದು, ಸರ, ಕಾಲ್ಗೆಜ್ಜೆಗಳ ಎಳೆಗಳನ್ನು ಜೋಡಿಸುತ್ತಾ, ದಣಿವಾರಿಸಿಕೊಂಡು ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡ ದಂಪತಿ ಲಕ್ಷದೀಪೋತ್ಸವಕ್ಕೆಂದು 6 ತಿಂಗಳಿನಿಂದ ತಯಾರಿ ನಡೆಸಿದ್ದಾರೆ.

ತಮಿಳುನಾಡಿನಿಂದ ದೆಹಲಿಗೆ ತೆರಳಿ, ತಾವು ಕೂಡಿಟ್ಟ ಕಾಸು, ಸಾಲ ಮಾಡಿದ ಹಣವೆಲ್ಲಾ ಸೇರಿಸಿ ಒಂದು ಲಕ್ಷ ರುಪಾಯಿಗೆ ಹೊಳೆಯುವ ಮಣಿಗಳನ್ನು ಖರೀದಿ ಮಾಡಿ ತರುವ ಇವರು ಅದನ್ನು ಪೋಣಿಸಿ, ಮಾಲೆ, ಗೆಜ್ಜೆಗಳಾಗಿ ರೂಪಿಸಿ 6 ತಿಂಗಳ ಕಾಲ ಕಷ್ಟ ಪಡುವ ಇವರ ಜೀವನ ತಾವು ಹೂಡಿದ ಬಂಡವಾಳ ವಾಪಾಸು ಸಿಗಲಿ ಎಂಬ ಹಂಬಲದಲ್ಲಿ ಕಳೆಯುತ್ತದೆ.

ಉತ್ತಮ ಗುಣಮಟ್ಟದ ಹರಳುಗಳನ್ನ ಹುಡುಕಿ ತಂದು, ಅದಕ್ಕೊಂದು ರೂಪ ಕೊಟ್ಟು ಮಾರಾಟಕ್ಕಿಡುವ ಸರಕು ಹಾಳಾಗುವುದಿಲ್ಲ ಎಂದು ಮಾತುಕೊಡುತ್ತಾರೆ. ಸರದ ಎಳೆಗಳ ಹೊಳಪು ಕುಂದುವುದಿಲ್ಲ. 'ಕೊಂಡುಕೊಂಡ ವಸ್ತುವಿಗೆ ನಷ್ಟವಿಲ್ಲ ಮೇಡಂ, ಮಾರುವವರು ನಮಗೆ ಮಾತ್ರ ನಷ್ಟ ಎನ್ನುತ್ತಾರೆ' ನಂದಿನಿ.

ಇವರೊಂದಿಗೆ ದೀಪೋತ್ಸವಕ್ಕೆ ಬಂದ ನಿತ್ಯ ಅವರ ಪ್ರಕಾರ ಕೆಲವೊಮ್ಮೆ ಒಂದೇ ದಿನ ಎರಡರಿಂದ ಮೂರು ಸಾವಿರ ದುಡಿದರೆ, ಮತ್ತೊಮ್ಮೆ ಏನೂ ಮಾರಾಟವಾಗದೆ ಅಂಗಡಿ ಮುಚ್ಚುವ ದಿನಗಳೂ ಇರುತ್ತವಂತೆ. ದೀಪೋತ್ಸವದಲ್ಲಿ ದಿನಕ್ಕೆ ಸಾವಿರ ರುಪಾಯಿ ಸಂಪಾದನೆಯಾದರೆ ದಿನವೊಂದಕ್ಕೆ ರೂಮ್ ಬಾಡಿಗೆ 500 ರುಪಾಯಿ. ಹಾಗಾಗಿ ಅಂಗಡಿ ಮುಚ್ಚಿ, ಅಲ್ಲೇ ಮಲಗುತ್ತೇವೆ. ಸರಕನ್ನು ಜೋಪಾನ ಮಾಡಿಕೊಂಡು, ತಣ್ಣನೆ ಗಾಳಿ ಸೇವಿಸುತ್ತಾ ರಾತ್ರಿ ಕಳೆಯುತ್ತೇವೆ ಎನ್ನುವ ಅವರ ನಗುಮುಖ ಸಂಕಷ್ಟದ ಎಳೆಗಳನ್ನು ಅನಾವರಣಗೊಳಿಸುತ್ತದೆ.

ಇವರಂತೆ ಇನ್ನು 40 ಕುಟುಂಬದವರು ದಾರಿಯ ಉದ್ದಕ್ಕೂ ಫಳಫಳ ಹೊಳೆಯುವ ಸರಗಳ ರಾಶಿ ಹರಡಿಕೊಂಡು ಕುಳಿತಿದ್ದಾರೆ. ಮಕ್ಕಳು, ಹಿರಿಯರು ಸೇರಿ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಬಂದಿಳಿದ ಇವರು, ದೀಪೋತ್ಸವ ಕಳೆದರೆ ಮತ್ತೆ ಕಾಣಸಿಗುವುದು ಶಿವರಾತ್ರಿಗೆ. ವರ್ಷಕ್ಕೆ ಎರಡು ಬಾರಿ ಶ್ರೀ ಕ್ಷೇತ್ರಕ್ಕೆ ಬರುವ ವ್ಯಾಪಾರಿಗಳು ವ್ಯವಹಾರಕ್ಕಿಂತಲೂ ದೈವಿಕ ನಂಬಿಕೆಯನ್ನೇ ಮುಖ್ಯವಾಗಿಸಿಕೊಂಡಿರುವುದು ವಿಶೇಷ.

More Images