ಕೊಡಗಿನ ಹೆಬ್ಬಾಗಿಲಲ್ಲಿವೆ ಸುಂದರ ಪ್ರವಾಸಿ ತಾಣಗಳು

ಕೊಡಗಿನ ಹೆಬ್ಬಾಗಿಲಲ್ಲಿವೆ ಸುಂದರ ಪ್ರವಾಸಿ ತಾಣಗಳು

B.M. LavaKumar   ¦    Dec 01, 2018 05:52:54 PM (IST)
ಕೊಡಗಿನ ಹೆಬ್ಬಾಗಿಲಲ್ಲಿವೆ ಸುಂದರ ಪ್ರವಾಸಿ ತಾಣಗಳು

ಕೊಡಗಿನ ಹೆಬ್ಬಾಗಿಲು ಎಂದೇ ಕರೆಯುವ ಕುಶಾಲನಗರ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಪಟ್ಟಣವಾಗಿದೆ ಅಲ್ಲದೆ, ಮೈಸೂರು, ಹಾಸನ ಹಾಗೂ ಕೊಡಗಿಗೆ ಹೊಂದಿಕೊಂಡಿರುವ ಕಾರಣ ಆಹ್ಲಾದಕರ ವಾತಾವರಣದೊಂದಿಗೆ ಪ್ರವಾಸಿಗರನ್ನು ಸೆಳೆಯುತ್ತಿದೆ.

ಕುಶಾಲನಗರಕ್ಕೊಂದು ಸುತ್ತು ಹೊಡೆದರೆ ಸಮೀಪದಲ್ಲೇ ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ದುಬಾರೆ ಮತ್ತು ಚಿಕ್ಲಿಹೊಳೆ ಜಲಾಶಯವಿದ್ದು ಪ್ರವಾಸಿಗರ ಗಮನಸೆಳೆಯುತ್ತವೆ.

ಕಾವೇರಿ ನಿಸರ್ಗಧಾಮ: ಕುಶಾಲನಗರದಿಂದ ಮಡಿಕೇರಿ ಕಡೆಗಿನ ಮುಖ್ಯ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ಸಾಗಿದರೆ ರಸ್ತೆಯ ಎಡಭಾಗದಲ್ಲಿಯೇ ನಿಸರ್ಗಧಾಮದ ಪ್ರವೇಶ ದ್ವಾರ ಕಾಣಸಿಗುತ್ತದೆ. 1989ರಲ್ಲಿ ನಿರ್ಮಿಸಲ್ಪಟ್ಟ ಕಾವೇರಿ ನಿಸರ್ಗಧಾಮ ಅಲ್ಲಿಂದ ಇಲ್ಲಿಯವರೆಗೆ ದೇಶ, ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ನಿಸರ್ಗಧಾಮದ ಪ್ರವೇಶ ದ್ವಾರದ ಮೂಲಕ ತೂಗು ಸೇತುವೆಯ ಮೇಲೆ ಹೆಜ್ಜೆ ಹಾಕುತ್ತಾ ಮುನ್ನಡೆದರೆ ನಿಸರ್ಗದ ಕೌತುಕಮಯ ದೃಶ್ಯಗಳು ಕಣ್ಮುಂದೆ ಬಂದು ನಿಲ್ಲುತ್ತದೆ. ತಳುಕಿ ಬಳುಕಿ ಜುಳು ಜುಳು ಎನ್ನುತ್ತಾ ಹರಿಯುವ ಕಾವೇರಿ ನದಿ... ಬೀಸುವ ತಂಗಾಳಿ... ಪ್ರಕೃತಿಯ ಸೋಜಿಗ ಮೈಪುಳಕಗೊಳಿಸುತ್ತದೆ. ಇಲ್ಲಿ ಮಾರ್ಗಸೂಚಿ ಫಲಕಗಳಿದ್ದು, ನಿಸರ್ಗಧಾಮದ ಬಗ್ಗೆ ಮಾಹಿತಿ ನೀಡುತ್ತದೆ. ಅರಣ್ಯ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ ಉಪಹಾರ ಗೃಹವನ್ನು ತೆರೆದಿದ್ದು ಇದರ ಸಮೀಪವೇ ಮಕ್ಕಳ ವಿಹಾರಧಾಮವಿದೆ.

ಇಲ್ಲಿ ನಿಗದಿತ ಹಣವನ್ನು ನೀಡಿ ಆನೆಯ ಮೇಲೆ ಕುಳಿತು ಸವಾರಿ ಮಾಡಬಹುದು. ಆನೆ ಸವಾರಿ ಪಕ್ಕದಲ್ಲಿಯೇ ಜಿಂಕೆ ವನವಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಸುತ್ತಲೂ ಸುಸಜ್ಜಿತವಾಗಿ ತಂತಿ ಬೇಲಿ ಹಾಕಿ ನಿರ್ಮಿಸಲಾಗಿರುವ ಈ ವನದಲ್ಲಿ ಹಲವಾರು ಜಿಂಕೆ, ಕಡವೆಗಳಿವೆ. ಕಾಲು ದಾರಿಯಲ್ಲಿ ಹೆಜ್ಜೆಯಿಡುತ್ತಾ ಮುನ್ನಡೆದರೆ ಮರದಿಂದ ನಿರ್ಮಿಸಲಾಗಿರುವ ಕುಟೀರಗಳು ಮನಸ್ಸೆಳೆಯುತ್ತವೆ. ಈ ಕುಟೀರಗಳಿಗೆ ಹತ್ತಲು ಏಣಿಗಳನ್ನು ನಿರ್ಮಿಸಿದ್ದು, ಇದರಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. ನಿಸರ್ಗದ ಚೆಲುವನ್ನು ಸವಿಯುತ್ತಾ ಅಲ್ಲಿಯೇ ತಂಗುವುದಾದರೆ ಅದಕ್ಕೂ ವ್ಯವಸ್ಥೆಯಿದೆ. ಇಟ್ಟಿಗೆ ಗೋಡೆ, ತೇಗದ ಮರ, ಹುಲ್ಲಿನ ಛಾವಣಿಯಿಂದ ನಿರ್ಮಿಸಲಾದಂತಹ ಐದು ಕಾಟೇಜ್‍ಗಳಿದ್ದು, ಇವುಗಳಿಗೆ ನಿಗದಿತ ಶುಲ್ಕ ಪಾವತಿಸ ಬೇಕಾಗುತ್ತದೆ. ಪ್ರವಾಸಿಗರಿಗಾಗಿಯೇ ಇಲ್ಲೊಂದು ಮಾಹಿತಿ ಕೇಂದ್ರವನ್ನು ಕೂಡ ನಿರ್ಮಿಸಲಾಗಿದೆ. ಕಾವೇರಿ ನಿಸರ್ಗಧಾಮವು ಎಲ್ಲಾ ರೀತಿಯಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಬೇಕಾದ ಅಗತ್ಯವಿದೆ. ನಿಸರ್ಗಧಾಮವು ನಿರ್ಮಾಣಗೊಂಡಿರುವ ದ್ವೀಪವು ಸುಮಾರು 65 ಎಕರೆ ಪ್ರದೇಶವನ್ನು ಹೊಂದಿದ್ದು ಕೇವಲ 15 ಎಕರೆ ಪ್ರದೇಶದಲ್ಲಿ ಮಾತ್ರ ವಿವಿಧ ಸವಲತ್ತುಗಳನ್ನು ಕಲ್ಪಿಸಿ ನಿಸರ್ಗಧಾಮವನ್ನು ನಿರ್ಮಿಸಲಾಗಿದೆ.

ದುಬಾರೆ: ಪ್ರವಾಸಿ ತಾಣ ದುಬಾರೆ ಪ್ರವಾಸಿಗರಿಗೆ ಸ್ವರ್ಗವಾಗಿದೆ. ಕುಶಾಲನಗರದಿಂದ ಸುಮಾರು 18 ಕಿ.ಮೀ. ದೂರದಲ್ಲಿದೆ. ಸಿದ್ದಾಪುರ ರಸ್ತೆಯಲ್ಲಿ ಸಾಗಿದಾಗ ಸಿಗುವ ನಂಜರಾಯಪಟ್ಟಣದಿಂದ ಎಡಕ್ಕೆ ತಿರುಗಿದರೆ ಅಲ್ಲಿಂದ ಸುಮಾರು 1ಕಿ.ಮೀ. ದೂರದಲ್ಲಿ ದುಬಾರೆ ಸಿಗುತ್ತದೆ.

ಪ್ರತಿದಿನವೂ ಪ್ರವಾಸಿಗರಿಂದ ತುಂಬಿ ತುಳುಕುವ ದುಬಾರೆ ಇವತ್ತು ದುಬಾರೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ದೋಣಿಯಲ್ಲಿ ವಿಹರಿಸಿ, ಆನೆ ಸಫಾರಿ ಮಾಡಿ ಒಂದಷ್ಟು ಹೊತ್ತು ನಿಸರ್ಗದ ಮಡಿಲಲ್ಲಿ ಮೈಮರೆತು ನೀರಾಟವಾಡಿ ತಮ್ಮ ಊರುಗಳಿಗೆ ಹಿಂದಿರುಗುವ ಪ್ರವಾಸಿಗರಿಗೆ ದುಬಾರೆ ಒಂದು ಅದ್ಭುತ ತಾಣ.

ಆನೆ ಶಿಬಿರದಲ್ಲಿರುವ ಸಾಕಾನೆಗಳೇ ಪ್ರಮುಖ ಆಕರ್ಷಣೆ ಎಂದರೆ ತಪ್ಪಾಗುವುದಿಲ್ಲ. ದೂರದಿಂದ ಹೆಚ್ಚಿನ ಪ್ರವಾಸಿಗರು ಈ ಆನೆಗಳನ್ನು ನೋಡಲೆಂದೇ ಬರುತ್ತಾರಲ್ಲದೆ, ಕೆಲವರು ಆನೆ ಸವಾರಿ ಮಾಡಿದರೆ ಮತ್ತೆ ಕೆಲವರು ಅವುಗಳಿಗೆ ನೀಡುವ ಆಹಾರ ಹಾಗೂ ಗಜಮಜ್ಜನವನ್ನು ನೋಡಿ ಆನಂದಪಡುತ್ತಾರೆ.

ದುಬಾರೆ ಆನೆಶಿಬಿರದಲ್ಲಿರುವ ಸಾಕಾನೆಗಳೆಲ್ಲವೂ ಅರಣ್ಯ ಇಲಾಖೆ ಅಧೀನದಲ್ಲಿವೆಯಾದರೂ ಇಲ್ಲಿ ಆನೆಸಫಾರಿಯ ಉಸ್ತುವಾರಿಯನ್ನು ಜಂಗಲ್ ಲಾಡ್ಜ್ ನವರು ವಹಿಸಿಕೊಂಡಿದ್ದಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಆನೆ ಸಫಾರಿ ನಡೆಯುತ್ತದೆ. ಸುಮಾರು 12,757 ಎಕರೆ ವಿಸ್ತೀರ್ಣ ಹೊಂದಿರುವ ದುಬಾರೆ ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ಗಿರಿಜನರು ವಾಸಿಸುತ್ತಾ ಬಂದಿದ್ದಾರೆ. ಇಲ್ಲಿ ಪುಂಡಾನೆಗಳನ್ನು ಹಿಡಿದು ಪಳಗಿಸಲಾಗುತ್ತಿತ್ತು.

ಚಿಕ್ಲಿಹೊಳೆ ಜಲಾಶಯ: ದುಬಾರೆಯಿಂದ ಸುಂಟಿಕೊಪ್ಪದ ಕಡೆಗಿನ ರಸ್ತೆಯಲ್ಲಿ ಸಾಗಿದರೆ ಚಿಕ್ಲಿಹೊಳೆ ಜಲಾಶಯವನ್ನು ತಲುಪಬಹುದು. ಈ ಜಲಾಶಯವನ್ನು ಕುಶಾಲನಗರ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯ ಸುಮಾರು 18 ಗ್ರಾಮಗಳ 862 ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುವ ಉದ್ದೇಶದಿಂದ ಕಾವೇರಿ ನದಿಯ ಉಪನದಿಯಾದ ಚಿಕ್ಲಿಹೊಳೆಗೆ 1982ರಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಸ್ವಾತಂತ್ರ್ಯ ನಂತರ 1978ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 1982ರಲ್ಲಿ ಜಲಾಶಯ ನಿರ್ಮಾಣವಾಯಿತು. ಒಂದೆಡೆ ಕಾಫಿ ತೋಟ ಮತ್ತೊಂದೆಡೆ ಅರಣ್ಯ ಇದರ ನಡುವಿನ ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡ ಜಲಾಶಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಹಾರಂಗಿ ಜಲಾಶಯ: ಹಾರಂಗಿ ಜಲಾಶಯವು ಕುಶಾಲನಗರದಿಂದ ಸುಮಾರು 8ಕಿ.ಮೀ. ದೂರದಲ್ಲಿದೆ. ಸುಮಾರು 47 ಮೀಟರ್ ಎತ್ತರವಿರುವ ಅಣೆಕಟ್ಟು ಸುಮಾರು 846 ಮೀ. ಉದ್ದವನ್ನು ಹೊಂದಿದೆ. ಮಳೆಗಾಲದಲ್ಲಿ ಜಲಾಶಯ ತುಂಬಿದಾಗ ಕ್ರಸ್ಟ್‍ಗೇಟ್‍ಗಳ ಮೂಲಕ ಭೋರ್ಗರೆಯುವ ಸುಂದರ ದೃಶ್ಯ ಮನಮೋಹಕವಾಗಿರುತ್ತದೆ.

ಗೋಲ್ಡನ್ ಟೆಂಪಲ್: ಕುಶಾಲನಗರಕ್ಕೆ ಸಮೀಪದಲ್ಲಿದ್ದು, ಮೈಸೂರು ಜಿಲ್ಲೆಗೆ ಸೇರಿರುವ ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಪ್ರಸಿದ್ಧ ತಾಣವಾಗಿದೆ. ಇಲ್ಲಿ ಸ್ವರ್ಣ ದೇಗುಲದೊಂದಿಗೆ ಸುಮಾರು ಹದಿನಾರಕ್ಕೂ ಹೆಚ್ಚು ವಿವಿಧ ದೇಗುಲಗಳು, ಧ್ಯಾನಕೇಂದ್ರ, ಸನ್ಯಾಸಿನಿಯರ ಬೌದ್ಧವಿಹಾರ, ಬೌದ್ಧ ಭಿಕ್ಷುಗಳ ಮಹಾವಿದ್ಯಾಲಯ, ಆಸ್ಪತ್ರೆ, ಬೌದ್ಧವಿಹಾರದ ಸುತ್ತ 1300 ಪ್ರಾರ್ಥನಾ ಚಕ್ರಗಳು, ಎಂಟು ಸ್ಥೂಪಗಳು ತನ್ನದೇ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ.

ಟಿಬೆಟ್ ದೇಶದ ಸಂಪ್ರದಾಯಗಳಿಗೆ ತಕ್ಕಂತೆ ನಿರ್ಮಾಣಗೊಂಡಿರುವುದು ಸ್ವರ್ಣ ದೇಗುಲದ ವಿಶೇಷತೆಯಾಗಿದೆ. ಪರಮ ಪೂಜ್ಯ ಪನೋರ್ ರಿನ್ ಪೋಚೆಯವರು ಇದರ ನಿರ್ಮಾಣವನ್ನು 1995ರಲ್ಲಿ ಆರಂಭಿಸಿ 1999ರಲ್ಲಿ ಪೂರ್ಣಗೊಳಿಸಿದರು. ದೇವಾಲಯ ಉತ್ಕೃಷ್ಟ ಶಿಲ್ಪಕಲೆಯಿಂದ ಕೂಡಿದ ಮಂದಿರವಾಗಿದ್ದು, ಕಲೆಗೆ ಚಿನ್ನದ ಲೇಪನ ಮೆರುಗು ನೀಡಿದೆ.

ವಿಶಾಲ ಹಜಾರವನ್ನು ಹೊಂದಿರುವ ದೇವಾಲಯದ ಪೀಠದಿಂದಲೇ ಅರವತ್ತು ಅಡಿ ಎತ್ತರದ ಭಗವಾನ್ ಬುದ್ದನ ಮೂರ್ತಿ, ಐವತ್ತೆಂಟು ಅಡಿ ಎತ್ತರದ ಗುರು ಪದ್ಮಸಂಭವ ಹಾಗೂ ಬುದ್ದ ಅಮಿತಾಯುಸ್‍ನ ಮೂರು ಬೃಹತ್ ಪ್ರಧಾನ ಮೂರ್ತಿಗಳಿದ್ದು, ಇವುಗಳನ್ನು ಚಿನ್ನಲೇಪಿತ ತಾಮ್ರದ ಲೋಹದಿಂದ ನಿರ್ಮಿಸಲಾಗಿದೆ.

More Images