ಇಬ್ಬನಿ ಹಬ್ಬಿದ ಹಾದಿಯಲ್ಲಿ..

ಇಬ್ಬನಿ ಹಬ್ಬಿದ ಹಾದಿಯಲ್ಲಿ..

Jan 08, 2017 11:18:01 AM (IST)

ಮೈಸೂರು: ವಾತಾವರಣವೇ ಬದಲಾಯಿತಪ್ಪ ಮಳೆನೂ ಇಲ್ಲ. ಚಳಿನೂ ಇಲ್ಲ ಎಂದು ಗೊಣಗುತ್ತಿದ್ದವರಿಗೆ ಈಗ ಸ್ವಲ್ಪ ಮಟ್ಟಿಗೆ ಚಳಿ ತಟ್ಟಿದೆ. ಮುಂಜಾನೆ ಎದ್ದು ವಾಯುವಿಹಾರಕ್ಕೆ ಹೋಗುವವರಿಗೀಗ ಮೈ ನಡುಗಿಸುವ ಚಳಿ..  ತೊಟ್ಟಿಕ್ಕುವ ಇಬ್ಬನಿ.. ಆಗೊಮ್ಮ ಈಗೊಮ್ಮೆ ಬೀಸುವ ಶೀತಗಾಳಿಯ ಮುಂಜಾನೆಯ ಆಟ ನಿಜಕ್ಕೂ ರೋಮಾಂಚನ ನೀಡುತ್ತಿದೆ.

ಚುಮು ಚುಮು ಬೆಳಕಿನಲ್ಲಿ.. ಮೈ ನಡುಕಿಸುವ ಚಳಿಯಲ್ಲಿ.. ಮಂಜಿನ ತೆರೆಯನ್ನು ಸೀಳುತ್ತಾ ಹೆಜ್ಜೆ ಹಾಕುವುದು ಹೊಸ ಅನುಭವ ಕೊಡುತ್ತದೆ. ವಾಹನಗಳ ಪ್ರಖರ ಬೆಳಕು ಕೂಡ ಮಂಜಿನ ಮುಂದೆ ಮಂಕಾಗಿ ಬಿಡುತ್ತದೆ.

ಬೆಳಿಗ್ಗೆ ಗಂಟೆ ಎಂಟು ಆದರೂ ಎಲ್ಲೆಡೆ ಆವರಿಸಿರುವ ದಟ್ಟ ಮಂಜು ರವಿಕಿರಣಕ್ಕೂ ಜಗ್ಗದೆ ಚಿತ್ತಾರ ಬಿಡಿಸುತ್ತದೆ. ಹಗಲಲ್ಲೂ ದೀಪ ಉರಿಸಿಕೊಂಡು ಸಾಗಬೇಕಲ್ಲಪ್ಪ ಎನ್ನುವ ಕಿರಿಕಿರಿ ವಾಹನ ಚಾಲಕರದ್ದಾದರೆ, ದಿನನಿತ್ಯದ ಕಾಯಕಕ್ಕೆ ತೆರಳುವ ಕಾಯಕವಾಸಿಗಳಿಗೆ ಅಯ್ಯೋ ಇದೇನಪ್ಪಾ ಚಳಿ ಎನ್ನುವ ಗೊಣಗಾಟ!

ಹತ್ತಿರ ಬಂದರೂ ಮುಖದ ಗುರುತೇ ಸಿಗದಂತೆ ದಟ್ಟವಾದ ಮಂಜಿನ ಪರದೆಯಲ್ಲಿ ಅಪರಿಚಿತ ಹೆಜ್ಜೆ ಹಾಕುತ್ತಾ.. ನಡುಗುವ ಚಳಿ ಓಡಿಸಲೋ ಎಂಬಂತೆ ಬಾಯಿಗೆ ಬೀಡಿ ಸಿಕ್ಕಿಸಿ ಕಡ್ಡಿ ಗೀರಿ ಬೆಂಕಿ ಹಚ್ಚುತ್ತಾ ಒಳಗೊಮ್ಮೆ ಎಳೆದು ಹೊರಗೆ ಹೊಗೆ ಬಿಟ್ಟು ಅದೇನೋ ಸುಖ ಸಿಕ್ಕಂತೆ ಹೆಜ್ಜೆ ಹಾಕಿ ಮುನ್ನಡೆಯುವ ದಾರಿ ಹೋಕರು..

ಸಣ್ಣಗೆ ನಡುಕ ಹುಟ್ಟಿಸುವ ಚಳಿಗೆ ಹಾಸಿಗೆಯಿಂದ ಏಳಲು ಮನಸ್ಸಾಗದೆ ಹೊದಿಕೆ ಒಳಗೆ ನುಸುಳುತ್ತಾ ಮಗ್ಗಲು ಬದಲಿಸುತ್ತಾ ಇನ್ನೊಂದಷ್ಟು ಹೊತ್ತು ಹೀಗೆ ಮಲಗಿ ಬಿಡೋಣ ಎನ್ನುವ ಸೋಮಾರಿ ಮನಸ್ಸು.. ನಿತ್ಯದ ಕಾಯಕವನ್ನು ನೆನೆದು ಬೆಚ್ಚಿ ಹಾಸಿಗೆಯಿಂದ ಎದ್ದು ದಡಬಡಿಸುತ್ತಾ ಆಫೀಸಿಗೆ ಅಣಿಯಾಗುವ ಅನಿವಾರ್ಯತೆ..

ಗದ್ದೆ, ಹೊಲ, ತೋಟಗಳಲ್ಲಿ ಚಳಿಗೆ ಹೆದರದೆ, ಮಂಜಿಗೆ ತಲೆಕೆಡಿಸಿಕೊಳ್ಳದೆ ಕೆಲಸ ಮಾಡುವ ರೈತರು.. ಇವರ ನಡುವೆ ಆಗೊಮ್ಮೆ ಈಗೊಮ್ಮೆ ಹಣೆಗೆ ಕೈ ಅಡ್ಡ ಹಿಡಿದು ಸೂರ್ಯನತ್ತ ದೃಷ್ಟಿ ನೆಟ್ಟು ನೋಡುವ ರೈತ ಕ್ಯಾಮರಾಗಳಲ್ಲಿ ಬಂಧಿಯಾಗುತ್ತಾನೆ.. ಸದಾ  ಮುಂಜಾನೆ ಕಾರ್ಯ ಆರಂಭಿಸುವ ಶ್ರಮ ಜೀವಿಗಳಿಗೆ ಇದೆಲ್ಲ ಹೊಸತಲ್ಲ.. ನಿನ್ನೆಯಂತೆಯೇ ಇವತ್ತು... ಇವತ್ತಿನಂತೆಯೇ ನಾಳೆ...

ಹಾಸಿಗೆಯಲ್ಲೇ ಹೊರಳಾಡುತ್ತಾ ಸೂರ್ಯ ನೆತ್ತಿಗೆ ಬಂದ ಮೇಲೆ ಎದ್ದು ತನ್ನ ಕಾಯಕಗಳಿಗೆ ತೆರೆದುಕೊಳ್ಳುವ ಜೀವಗಳಿಗೆ ಅಪರೂಪಕ್ಕೊಮ್ಮೆ ಹೆಜ್ಜೆ ಹಾಕಿದಾಗ ಎಲ್ಲವೂ ಹೊಸತು.. ಹೊಸತು..

More Images