ಮೈಸೂರು ದಸರಾ ಅಂದ್ರೆ ಬರೀ ದಸರವಲ್ಲ...

ಮೈಸೂರು ದಸರಾ ಅಂದ್ರೆ ಬರೀ ದಸರವಲ್ಲ...

LK   ¦    Oct 12, 2018 08:02:07 PM (IST)
ಮೈಸೂರು ದಸರಾ ಅಂದ್ರೆ ಬರೀ ದಸರವಲ್ಲ...

ಮೈಸೂರು ದಸರಾ ಎಂದರೆ ಸಂಪ್ರದಾಯದ ಲೇಪನದ ಜತೆಗೆ ಬರೀ ಹಬ್ಬವಾಗಿರದೆ ಒಂಭತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಸುಗ್ಗಿ ಎಂದರೆ ತಪ್ಪಾಗಲಾರದು. ಹಳ್ಳಿಗಳಿಂದ ಆರಂಭವಾಗಿ ವಿಶ್ವಮಟ್ಟದವರೆಗೆ ಮೈಸೂರು ದಸರಾ ಬೆಳೆದು ಬಂದ ರೀತಿ ನಿಜಕ್ಕೂ ಎಲ್ಲರೂ ಹೆಮ್ಮೆಪಡುವಂತಹದ್ದೇ ಆಗಿದೆ.

ಮೊದಲಿಗೆ ರಾಜವೈಭವದ ಕಳೆ ದಸರಾದಲ್ಲಿತ್ತಾದರೂ ಈಗ ಹತ್ತು ಹಲವು ಬದಲಾವಣೆಯೊಂದಿಗೆ ಜನರ ದಸರಾವಾಗಿ ಮಾರ್ಪಟ್ಟಿದೆ. ಸ್ಥಳೀಯ, ದೇಶ, ವಿದೇಶಗಳ ಜನ ಈ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಾರೆ.

ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಆರಂಭವಾಗುವ ದಸರಾ ಆ ಒಂಭತ್ತು ರಾತ್ರಿಹಗಲು ಮಿಂಚಿ ಮೆರೆಯಾಗದೆ ಎಲ್ಲರ ಮೈಮನದಲ್ಲಿ ಉಳಿದು ಬಿಡುತ್ತದೆ. ಇಲ್ಲಿ ಮಕ್ಕಳು, ವೃದ್ಧರು, ಶ್ರೀಮಂತರು, ಬಡವರು ಎಂಬ ಬೇಧವಿಲ್ಲದೆ ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುವ ಕ್ಷಣವೂ ಆಗಿದೆ.

ಹಾಗೆ ನೋಡಿದರೆ ಈಗಿನ ಮೈಸೂರು ದಸರಾಕ್ಕೂ ಇತಿಹಾಸದ ದಸರಾಕ್ಕೂ ಬಹಳಷ್ಟು ವ್ಯತ್ಯಾಸಗಳಿರುವುದನ್ನು ನಾವು ಕಾಣಬುದಾಗಿದೆ. ಐತಿಹಾಸಿಕ ಪುರಾಣ ಕಥೆ ಜೊತೆಗೆ 1399ರಲ್ಲಿ ಮೈಸೂರು ಅರಸರ ಮೂಲ ಪುರುಷರು ಈ ಇತಿಹಾಸವನ್ನು ಮುಂದುವರೆಸಿರುವುದಾಗಿ ಹೇಳಲಾಗುತ್ತಿದೆ.

ಇತಿಹಾಸದ ಪುಟಗಳನ್ನು ತಿರುವಿದರೆ ರಾಜವಂಶದ ಯದುರಾಯ, ಕೃಷ್ಣರಾಯರು ಸ್ಥಳೀಯನಾಗಿದ್ದ, ಹದಿನಾಡಿನ ಪಾಳೆಯಗಾರನಾಗಿದ್ದ ಮಹಾಶೂರ ಕಾರುಗಳ್ಳಿ ಮಾರನಾಯಕನನ್ನು ಕೊಂದು ಹದಿನಾಡಿನ ಅರಸರಾಗುತ್ತಾರೆ. ದಳಪತಿ ಮಾರನಾಯಕ ಕೆಳ ಜಾತಿಯಾಗಿದ್ದು, ಹದಿನಾಡಿನ ಅರಸರ ಮಗಳನ್ನು ಕೇಳಿದನೆಂಬ ವಿಚಾರ ಹೊಸತೊಂದು ಸಾಮ್ರಾಜ್ಯಕ್ಕೆ ಕಾರಣವಾಗುತ್ತದೆ. ಇಂತಹ ಗೆಲುವು ವಿಜಯದಶಮಿಯ ಕಾರಣಕ್ಕೂ ಸೇರುತ್ತದೆ.

ಹದಿನಾಡಿನಿಂದ ಯದುವಂಶ ಆರಂಭವಾಗುತ್ತದೆ. ಗಂಡಭೇರುಂಡ ಪಕ್ಷಿ ಲಾಂಛನವಾಗುತ್ತದೆ. 26ಕ್ಕೂ ಹೆಚ್ಚು ಒಡೆಯರ್ 1399ರಿಂದ 1970ರವರೆಗೆ ಮೈಸೂರು ಸಾಮ್ರಾಜ್ಯ ಕಟ್ಟಿ ಆಳುತ್ತಾರೆ. ಹಳೆ ಮೈಸೂರು ಪ್ರಾಂತ್ಯವು ಸ್ವಾತಂತ್ರ್ಯಾ ನಂತರ ದೇಶದ ಗಣರಾಜ್ಯದಲ್ಲಿ ವಿಲೀನವಾಗುತ್ತದೆ. ಆ ನಂತರ ಕರ್ನಾಟಕದ ಉದಯವೂ ಆಗುತ್ತದೆ. ಇವೆಲ್ಲಾ ಇತಿಹಾಸದ ಕಾಲಚಕ್ರದೊಳಗೆ ಸಾಗಿದಂತೆ ಮೈಸೂರು ದಸರಾ ಮಾತ್ರ ಜನರ ನಡೆ ನುಡಿಯ ಬದುಕಾಗಿ ಇತಿಹಾಸದ ನಾಲ್ಕು ಶತಮಾನದ ಕಾಲಘಟ್ಟದಲ್ಲಿ ಮಗ್ಗಲು ಬದಲಿಸುತ್ತಾ ಹಲವು ಹೊಸತನಗಳನ್ನು ಮಗ್ಗಲಿಗೆ ಸೇರಿಸಿಕೊಂಡು ಮುನ್ನಡೆಯುತ್ತಾ ಸಾಗುತ್ತಿದೆ.

ಹಾಗೆನೋಡಿದರೆ, ನಾಲ್ಕು ಶತಮಾನಗಳಿಂದ ದಸರಾಗಳು ಅದೆಷ್ಟು ಬಂದು ಹೋಗಿದೆಯೋ? ಆದರೆ ದಸರಾ ಮಾತ್ರ ಹತ್ತು ಹಲವು ಬದಲಾವಣೆಯೊಂದಿಗೆ ಮುನ್ನಡೆಯುತ್ತಲೇ ಸಾಗುತ್ತಿದೆ. ನವರಾತ್ರಿಯ ಒಂಭತ್ತು ದಿನವೂ ನಗರದ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆಯುತ್ತವೆ. ಜೊತೆಗೆ ಅರಮನೆ ಸೇರಿದಂತೆ ವಿವಿಧೆಡೆ ಹಲವು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಪಾದ್ರಿ ಸೇರಿದಂತೆ ಎಲ್ಲಾ ವರ್ಗಗಳ ಸಿರಿಜನ, ಬಡಜನ ದಸರೆಯಲ್ಲಿ ಸಂಭ್ರಮಿಸುತ್ತಾರೆ. ಚಿತ್ರಮಂದಿರಗಳು, ಹೋಟೆಲ್‍ಗಳು, ರೆಸಾರ್ಟ್‍ಗಳು, ಹೋಂಸ್ಟೇಗಳು ಭರ್ತಿಯಾಗುತ್ತವೆ. ಹಳ್ಳಿಗಳಿಂದ, ದೂರದ ಊರುಗಳಿಂದ ಬರುವ ಜನ ನಗರದಲ್ಲಿರುವ ಬಂಧುಗಳ ಮನೆಯಲ್ಲಿ ಠಿಕಾಣಿ ಹೂಡುತ್ತಾರೆ. ಸಂಜೆಯಾಗುತ್ತಿದ್ದಂತೆಯೇ ಮನೆ ಮಂದಿಯೆಲ್ಲಾ ಒಟ್ಟಾಗಿ ಆಹಾರ ಮೇಳ, ಫಲಪುಷ್ಪಪ್ರದರ್ಶನ, ವಸ್ತುಪ್ರದರ್ಶನ, ಅರಮನೆ, ಕಲಾಮಂದಿರ, ಹೀಗೆ ನಗರದಲ್ಲೆಲ್ಲಾ ಸುತ್ತಾಡುತ್ತಾ ಹಬ್ಬದ ಸವಿಯುಣ್ಣುತ್ತಾರೆ. ಮನೆಗಳು, ಕಟ್ಟಡಗಳು, ವೃತ್ತಗಳು ಸುಣ್ಣ ಬಣ್ಣಗಳಿಂದ ಮಿರಮಿರನೆ ಮಿಂಚುತ್ತವೆ. ರಸ್ತೆಗಳುದ್ದಕ್ಕೂ ವಿದ್ಯುದ್ದೀಪ ಜಗಮಗಿಸುತ್ತಿರುತ್ತದೆ.

ಇನ್ನು ವಿಜಯದಶಮಿಯಂದು ದಸರಾ ದಿನದಂದು ಜಂಬೂಸವಾರಿ ನೋಡಲು ಜನಸಾಗರವೇ ಹರಿದು ಬರುತ್ತದೆ. ಅಂಬಾರಿ ಹೊತ್ತ ಅರ್ಜುನ ಮತ್ತು ಅವನೊಂದಿಗೆ ಹೆಜ್ಜೆ ಹಾಕುವ ಗಜಪಡೆಗಳು, ಕಲಾತಂಡಗಳು, ಸ್ತಬ್ಧ ಚಿತ್ರಗಳು ಗಮನಸೆಳೆಯುತ್ತವೆ.

More Images