ಕೊಡಗಿನ ಮಳೆಗೆ ಭೋರ್ಗರೆಯುವ ಇರ್ಪು ಜಲಧಾರೆ

ಕೊಡಗಿನ ಮಳೆಗೆ ಭೋರ್ಗರೆಯುವ ಇರ್ಪು ಜಲಧಾರೆ

LK   ¦    Jun 14, 2018 02:08:02 PM (IST)
ಕೊಡಗಿನ ಮಳೆಗೆ ಭೋರ್ಗರೆಯುವ ಇರ್ಪು ಜಲಧಾರೆ

ಕೊಡಗಿನಲ್ಲಿ ಎಡೆಬಿಡದೆ ಭಾರೀ ಮಳೆ ಸುರಿದ ಪರಿಣಾಮ ಬೆಟ್ಟಗುಡ್ಡ, ಕಾಫಿ ತೋಟಗಳ ನಡುವೆ, ರಸ್ತೆ ಬದಿಯಲ್ಲಿದ್ದ ಜಲಧಾರೆಗಳಿಗೀಗ ಜೀವಕಳೆ ಬಂದಿದೆ ಎಲ್ಲೆಂದರಲ್ಲಿ ಭೋರ್ಗರೆದು ಧುಮುಕುತ್ತಿವೆ.

ಇಲ್ಲಿ ಹಲವಾರು ಜಲಧಾರೆಗಳಿದ್ದು ಒಂದೊಂದು ಜಲಧಾರೆಯೂ ಒಂದೊಂದು ರೀತಿಯಲ್ಲಿ ಗಮನಸೆಳೆಯುತ್ತಿವೆ. ಕೆಲವು ಕಾನನಗಳ ನಡುವೆ ಇರುವ ಕಾರಣದಿಂದ ಹೆಚ್ಚಿನವರ ಗಮನಕ್ಕೆ ಬರುತ್ತಿಲ್ಲ. ಕೆಲವೇ ಕೆಲವು ಮಾತ್ರ ಎಲ್ಲರನ್ನು ತನ್ನತ್ತ ಸೆಳೆಯುತ್ತಿವೆ.

ಇನ್ನು ಜಿಲ್ಲೆಯಲ್ಲಿರುವ ಜಲಧಾರೆಗಳ ಪೈಕಿ ಈಗ ಮಡಿಕೇರಿಯಿಂದ 85 ಕಿ.ಮೀ. ದೂರದಲ್ಲಿರುವ ವೀರಾಜಪೇಟೆ ತಾಲೂಕಿಗೆ ಸೇರಿರುವ ಇರ್ಪು ಜಲಪಾತ ತನ್ನದೇ ಜಲವೈಭವದಿಂದ ಎಲ್ಲರನ್ನು ಆಕರ್ಷಿಸುತ್ತಿದೆ. ಇದರ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ಇರ್ಪು ಜಲಧಾರೆಯ ಬಗ್ಗೆ ಹೇಳಬೇಕೆಂದರೆ ಇದು ಲಕ್ಷ್ಮಣತೀರ್ಥ ನದಿಯಿಂದ ನಿರ್ಮಿತವಾಗಿರುವ ಜಲಧಾರೆ. ಹೀಗಾಗಿ ಇದಕ್ಕೊಂದು ಪವಿತ್ರ ಸ್ಥಾನವನ್ನು ನೀಡಿದ್ದಾರೆ.

ಜಲಧಾರೆಯು ಇರ್ಪು ಕ್ಷೇತ್ರದ ರಾಮೇಶ್ವರ ದೇವಾಲಯಕ್ಕೆ ಒಂದು ಕಿ.ಮೀ. ದೂರದಲ್ಲಿದೆ. ಈ ಜಲಪಾತ ತನ್ನ ಮೋಹಕತೆ, ಕುಲುಕುಲು ಸೌಂದರ್ಯ, ವಯ್ಯಾರದ ನಾಟ್ಯ, ಜುಳುಜುಳು ನಿನಾದದೊಂದಿಗೆ ಈಗ ಮಳೆಗಾಲವಾದ ಕಾರಣ ಭೋರ್ಗರೆದು ಸುಮಾರು ಎಪ್ಪತ್ತು ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಮತ್ತೆ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳನ್ನು ಸೃಷ್ಟಿಸಿದೆ. ಸುಮಾರು ಇನ್ನೂರು ಅಡಿಯಷ್ಟು ಎತ್ತರದಿಂದ ಪ್ರಮುಖವಾಗಿ ಎರಡು ಹಂತಗಳಲ್ಲಿ ಧುಮುಕಿ ಹರಿಯುತ್ತದೆ. ಈ ಜಲವೈಭವ ನೋಡುವುದೇ ಕಣ್ಣಿಗೆ ಹಬ್ಬ.

ಈ ಜಲಧಾರೆಯ ಬಗ್ಗೆ ಹೇಳದೆ ಹೋದರೆ ಅದು ಅಪೂರ್ಣವೇ ಸರಿ. ಪುರಾಣದ ಕಥೆಯ ಹಿನ್ನಲೆ ಈ ಜಲಧಾರೆಗೆ ಇದೆ. ಅದೇನೆಂದರೆ, ಸೀತೆಯನ್ನು ಅರಸುತ್ತಾ ಹೊರಟ ರಾಮಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಶ್ರೀರಾಮ ಸೇರಿದಂತೆ ವಾನರರು ನಡೆಯುತ್ತಿದ್ದರೆ ಕೋಪಗೊಂಡ ಲಕ್ಷ್ಮಣ ಮುಂದಕ್ಕೆ ಹೆಜ್ಜೆಯಿರಿಸದೆ ಅಲ್ಲಿಯೇ ಕುಳಿತುಕೊಂಡನಂತೆ. ಕೆಲಕಾಲದ ನಂತರ ಶಾಂತಗೊಂಡ ಲಕ್ಷ್ಮಣ ತನ್ನ ವರ್ತನೆಗೆ ನಾಚಿ ಅಣ್ಣ ಶ್ರೀರಾಮನನ್ನು ನೋಯಿಸಿದ್ದಕ್ಕಾಗಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಭಯಗೊಂಡು ಲಕ್ಷ್ಮಣನನ್ನು ಸಮಾಧಾನಗೊಳಿಸಿ ಆತನ ತಪ್ಪನ್ನು ಕ್ಷಮಿಸಿದ. ಇದರಿಂದ ಸಂತೋಷಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು(ನಂದಿಸಲು) ಬಾಣಬಿಟ್ಟನಂತೆ ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತಂತೆ. ಈ ರೀತಿ ಸೃಷ್ಟಿಯಾದ ಜಲಧಾರೆಯನ್ನು ರಾಮನೇ ಲಕ್ಷ್ಮಣತೀರ್ಥವೆಂದು ಕರೆದನಂತೆ ಹೀಗೆ ಕಥೆಗಳಿವೆ. ಅದೇನೆ ಇರಲಿ ಈಗಂತೂ ಇದರ ಸೌಂದರ್ಯಕ್ಕೆ ಸಾಟಿಯೇ ಇಲ್ಲವಾಗಿದೆ.

ಜಲಧಾರೆಯನ್ನು ನೋಡಬಯಸುವವರು ಕುಟ್ಟಕ್ಕೆ ತೆರಳುವ ಬಸ್ಸಿನಲ್ಲಿ ಶ್ರೀಮಂಗಲ ಹಾಗೂ ಕುಟ್ಟದ ನಡುವೆ ಸಿಗುವ ಕಾಕೂರು ಅಥವಾ ಕಾಯಿಮಾನಿಯಲ್ಲಿಳಿದು ಅಲ್ಲಿಂದ ನಡೆದುಕೊಂಡು ಹೋಗಬಹುದು ಅಥವಾ ಶ್ರೀಮಂಗಲಕ್ಕೆ ತೆರಳಿ ಅಲ್ಲಿಂದ ಬಾಡಿಗೆ ವಾಹನಗಳಲ್ಲಿಯೂ ತೆರಳಬಹುದು.

More Images