ಶ್ರೀರಂಗಪಟ್ಟಣ ಪ್ರವಾಸಿಗರ ಸೆಳೆಯುವ ಭವ್ಯ ತಾಣ

ಶ್ರೀರಂಗಪಟ್ಟಣ ಪ್ರವಾಸಿಗರ ಸೆಳೆಯುವ ಭವ್ಯ ತಾಣ

B.M.Lavakumar   ¦    Oct 02, 2018 03:39:46 PM (IST)
ಶ್ರೀರಂಗಪಟ್ಟಣ ಪ್ರವಾಸಿಗರ ಸೆಳೆಯುವ ಭವ್ಯ ತಾಣ

ಐತಿಹಾಸಿಕ ಮತ್ತು ಪೌರಾಣಿಕವಾಗಿ ತನ್ನದೇ ಆದ ವೈಭವದಿಂದ ಮೆರೆದ ಶ್ರೀರಂಗಪಟ್ಟಣ ಇವತ್ತು ಪ್ರವಾಸಿ ತಾಣವಾಗಿ ಗಮನಸೆಳೆಯುತ್ತಿದೆ. ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಹೋಗುತ್ತಾರೆ.

ಮೈಸೂರಿಗೆ ಹತ್ತಿರವಿದ್ದರೂ ಮಂಡ್ಯ ಜಿಲ್ಲೆಗೆ ಸೇರಿದ ಶ್ರೀರಂಗಪಟ್ಟಣ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿದ್ದು, ಇತಿಹಾಸದ ಕಥೆಗಳನ್ನು ಹೇಳುತ್ತಾ ನಿಂತಿದೆ. ಇವತ್ತು ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಮೊದಲಿಗೆ ಆರಂಭವಾಗಿದ್ದೇ ಶ್ರೀರಂಗಪಟ್ಟಣದಲ್ಲಿ ಎಂಬುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಅಂದಿನ ರಾಜವಂಶಸ್ಥರು ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದರು. ತದ ನಂತರ ತಮ್ಮ ಆಡಳಿತವನ್ನು ಮೈಸೂರಿಗೆ ಸ್ಥಳಾಂತರಿಸುವ ಮೂಲಕ ದಸರಾವನ್ನು ಮೈಸೂರಿನಲ್ಲಿ ಮುಂದುವರೆಸಿದರು. ಇವತ್ತು ಮೈಸೂರಿಗೆ ಪ್ರವಾಸ ಬಂದವರು ಕೆಲವೇ ಕಿ.ಲೋ. ಅಂತರದಲ್ಲಿರುವ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡದೆ ಹೋದರೆ ಪ್ರವಾಸ ಅಪೂರ್ಣವಾದಂತೆ.

ಇವತ್ತಿಗೂ ಶ್ರೀರಂಗಪಟ್ಟಣ ಎಂದಾಕ್ಷಣ ಎಲ್ಲರ ಕಿವಿನಿಮಿರುತ್ತದೆ. ಜತೆಗೆ ಟಿಪ್ಪು ಸುಲ್ತಾನ್ ನೆನಪಾಗುತ್ತಾನೆ. ಏಕೆಂದರೆ ಟಿಪ್ಪು ಸುಲ್ತಾನ್ ತನ್ನ ರಾಜ್ಯಭಾರ ಮಾಡುತ್ತಿದ್ದದ್ದೇ ಶ್ರೀರಂಗಪಟ್ಟಣದಿಂದ ಮತ್ತು ಅದು ಆತನ ರಾಜಧಾನಿಯೂ ಆಗಿತ್ತು. ಇನ್ನು ನಾವು ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದರೆ ಇಲ್ಲಿನ ಇತಿಹಾಸ ರೋಚಕ ವಿಚಾರಗಳು ಹೊರಬರುತ್ತಲೇ ಹೋಗುತ್ತದೆ.

ಶ್ರೀರಂಗಪಟ್ಟಣದ ಬಗ್ಗೆ ಪೌರಾಣಿಕವಾಗಿ ಹೇಳುವುದಾದರೆ ಕಾವೇರಿ ನದಿ ತಟದಲ್ಲಿದ್ದು, ಪವಿತ್ರಕ್ಷೇತ್ರವಾಗಿಯೂ, ಸಂಗಮಕ್ಷೇತ್ರವಾಗಿಯೂ ಪಾಪಕಳೆದು ಪುಣ್ಯನೀಡುವ ಕ್ಷೇತ್ರವಾಗಿಯೂ ಕಂಗೊಳಿಸುತ್ತದೆ. ಇನ್ನು ಕಾವೇರಿ ನದಿ ಎರಡು ಕವಲಾಗಿ ಒಡೆದು ಶ್ರೀರಂಗಪಟ್ಟಣವನ್ನು ಆವರಿಸಿದ್ದು, ದ್ವೀಪವನ್ನಾಗಿಸಿದ್ದಾಳೆ.

ಪೌರಾಣಿಕವಾಗಿ ‘ಆದಿರಂಗ’ವೆಂದೂ, ಚಾರಿತ್ರಿಕವಾಗಿ ‘ಅಷ್ಟಗ್ರಾಮ’ ಎಂದೂ ಕರೆಯಲ್ಪಡುವ ಶ್ರೀರಂಗಪಟ್ಟಣವು ಕಾವೇರಿ ನದಿಯಿಂದ ನಿರ್ಮಿತವಾದ ನಯನ ಮನೋಹರ ದ್ವೀಪ ಎಂದರೆ ತಪ್ಪಾಗಲಾರದು. ಪಟ್ಟಣವು ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 3 ಮೈಲಿಗಳಷ್ಟು ಉದ್ದ ಮತ್ತು ಉತ್ತರ-ದಕ್ಷಿಣವಾಗಿ ಒಂದು ಮೈಲಿಯಷ್ಟು ಅಗಲವನ್ನು ಹೊಂದಿದೆ.

ಇಲ್ಲಿರುವ ಭದ್ರ ಕೋಟೆಯನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಸಹೋದರ ಉದಯಾದಿತ್ಯನು ಕ್ರಿ.ಶ. 1120ರಲ್ಲಿ ಹಾಗೂ ಕ್ರಿ.ಶ. 1454ರಲ್ಲಿ ನಾಗಮಂಗಲದ ದೊರೆ ತಿಮ್ಮಣ್ಣನೆಂಬುವನು ನಿರ್ಮಿಸಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ನಾಲ್ಕು ದ್ವಾರಗಳಿಂದ ಪಟ್ಟಣವನ್ನು ಸುತ್ತುವರಿದಿರುವ ಈ ಬಲವಾದ ಕೋಟೆ ಭಾರತದ ಎರಡನೇ ಅತ್ಯಂತ ಬಲಿಷ್ಟ ಕೋಟೆಯೆಂದು ಹೇಳಲಾಗಿದೆ. ವಿಜಯನಗರದರಸರ ಆಳ್ವಿಕೆಗೂ ಒಳಪಟ್ಟಿದ್ದ ಇದು ಅವರ ಸಾಮಂತ ಶ್ರೀರಂಗರಾಯನ ನಂತರ 1610ರಲ್ಲಿ ಮೈಸೂರು ಅರಸರ ಕೈವಶವಾಗಿತ್ತು. ತದನಂತರ ರಾಜಧಾನಿಯಾಗಿ ಬಹು ವೈಭವದಿಂದ ಮೆರೆದಿತ್ತು.ಟಿಪ್ಪುವಿನ ಮರಣಾನಂತರ ಬ್ರಿಟಿಷರ ಅಧಿಪತ್ಯಕ್ಕೊಳಪಟ್ಟ ಶ್ರೀರಂಗಪಟ್ಟಣ ತನ್ನ ರಾಜಧಾನಿ ಪಟ್ಟವನ್ನು ಮೈಸೂರಿಗೆ ಬಿಟ್ಟುಕೊಟ್ಟಿತ್ತು. ಹಾಗೆಯೇ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ದಸರಾ ಹಬ್ಬ ಕೂಡ ಮೈಸೂರಿಗೆ ವರ್ಗಾವಣೆಗೊಂಡಿತು.

ಇತಿಹಾಸದ ಪುಟಗಳಲ್ಲಿ ಶ್ರೀರಂಗಪಟ್ಟಣದ ಬಗ್ಗೆ ಬಹಳಷ್ಟು ರೋಚಕ ವಿಚಾರಗಳಿವೆ. ಇಡೀ ಭಾರತವನ್ನು ತಮ್ಮ ಕೈವಶ ಮಾಡಿಕೊಂಡಿದ್ದ ಬ್ರಿಟೀಷರಿಗೆ ಭೇದಿಸಲಾಗದ ಭದ್ರಕೋಟೆಯಾಗಿತ್ತು. ಬ್ರಿಟೀಷರು ನಾಲ್ಕು ಬಾರಿ ಇಲ್ಲಿಗೆ ದಂಡೆತ್ತಿ ಬಂದಿದ್ದರು ಎಂದರೆ ಇಲ್ಲಿನ ಸಾಮರ್ಥ್ಯ ಅರಿವಾಗುತ್ತದೆ.

ಇವತ್ತು ನಾವು ಶ್ರೀರಂಗಪಟ್ಟಣಕ್ಕೊಂದು ಸುತ್ತು ಹೊಡೆದರೆ ಮಲಗಿರುವ ಶ್ರೀರಂಗನಾಥಸ್ವಾಮಿ ದೇವಸ್ಥಾನ ಎದ್ದು ಕಾಣುತ್ತದೆ ಶ್ರೀರಂಗಸ್ವಾಮಿಯ ಕ್ಷೇತ್ರವಾದ್ದರಿಂದ ಶ್ರೀರಂಗಪಟ್ಟಣ ಎಂಬ ಹೆಸರು ಬಂದಿದೆ. ಈ ದೇವಾಲಯವು ಗಗನ ಚುಂಬಿಸುವ ಬೃಹತ್ ರಾಜಗೋಪುರವನ್ನು ಹೊಂದಿದ್ದು ಶ್ರೀರಂಗನಾಥಸ್ವಾಮಿಯ ಮಲಗಿರುವ ಮೂರ್ತಿಯಿದೆ. ಕ್ರಿ.ಶ. 894 ರಲ್ಲಿ ಗಂಗರ ತಿರುಮಲೈ ಎಂಬಾತ ಕಟ್ಟಿಸಿದನೆಂದು ಹೇಳಲಾಗುತ್ತದೆ.

ಇದಲ್ಲದೆ ಶ್ರೀ ಗಂಗಾಧರೇಶ್ವರ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಶ್ರೀ ಜ್ಯೋತಿರ್ಮಹೇಶ್ವರಿ, ಶ್ರೀ ವಿಘ್ನೇಶ್ವರ, ನಗರೇಶ್ವರ, ಶ್ರೀ ಆಂಜನೇಯಸ್ವಾಮಿ, ಶ್ರೀ ಜನಾರ್ಧನಸ್ವಾಮಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ಗೋಪಾಲಕೃಷ್ಣಸ್ವಾಮಿ, ಶಕ್ತಿದೇವತೆಗಳಾದ ಶ್ರೀ ಅಂಕಾಳಮ್ಮ, ಶ್ರೀ ಮಾರಮ್ಮ, ಶ್ರೀ ಕಾಳಮ್ಮ ಮುಂತಾದ ದೇವಾನುದೇವತೆಗಳ ಹಲವು ದೇವಾಲಯಗಳನ್ನು ನಾವು ನೋಡಬಹುದಾಗಿದೆ. ಇನ್ನು ದೇವಾಲಯಗಳೊಂದಿಗೆ ಶತಕೋಟಿ ರಾಮಮಂದಿರ ಕಾವೇರಿ ತೀರದಲ್ಲಿರುವ ಪ್ರಸಿದ್ಧ ಸಾಯಿಮಂದಿರ, ಉತ್ತರಾಧಿಮಠ, ರಾಘವೇಂದ್ರಮಠ, ಯತಿರಾಜಮಠ ಇತ್ಯಾದಿ ಮಠ ಮಾನ್ಯಗಳು, ಮಂದಿರಗಳು ಇಲ್ಲಿವೆ.

ಶ್ರೀರಂಗಪಟ್ಟಣದ ಮತ್ತೊಂದು ಐತಿಹಾಸಿಕ ಸ್ಮಾರಕವೆಂದರೆ ಟಿಪ್ಪು ಪ್ರಾರ್ಥನೆ ಮಾಡುತ್ತಿದ್ದ 1781ರಲ್ಲಿ ಕಟ್ಟಿಸಲಾದ ಆಕಾಶಮುಟ್ಟುವ ನೂರಡಿ ಎತ್ತರದ ಆಕರ್ಷಕವಾದ ಎರಡು ಮಿನಾರುಗಳುಳ್ಳ ‘ಜುಮ್ಮಾ ಮಸೀದಿ’ ಎಲ್ಲರ ಗಮನಸೆಳೆಯುತ್ತದೆ.

ಇಲ್ಲಿ ದೂರದ ಸ್ಥಳಗಳನ್ನು ವೀಕ್ಷಿಸಲು ಟಿಪ್ಪು ಬಳಸುತ್ತಿದ್ದ ಬಹು ಎತ್ತರದ ‘ಬತೇರಿ’, ಬ್ರಿಟಿಷರನ್ನು ಮತ್ತು ಮತ್ತಿತರೆ ತನ್ನ ವೈರಿಗಳನ್ನು ಟಿಪ್ಪು ಬಂಧಿಸುತ್ತಿದ್ದ ನೆಲಮಾಳಿಗೆಯ ಬಂದೀಖಾನೆಯಾದ ‘ಬೇಲಿಡಂಜನ್’, ಇದರ ಮಧ್ಯದಲ್ಲಿರುವ ಹತ್ತು ಅಡಿ ಉದ್ದದ ಟಿಪ್ಪು ಕಾಲದ ‘ಪಿರಂಗಿ’, ಇದರ ಹತ್ತಿರದಲ್ಲೇ ಇರುವ ಮೈಸೂರಿನ ನಾಲ್ಕನೇ ಮಹಾಯುದ್ಧದಲ್ಲಿ ಹೋರಾಡಿ ಮಡಿದ ಸೈನಿಕರನ್ನು ಸ್ಮರಿಸುವ ‘ಸೈನಿಕ ಸ್ಮಾರಕ ಸ್ತಂಭ’, ಕಾವೇರಿ ನದಿಯ ಎಡಕವಲಿಗೆ ಅಡ್ಡವಾಗಿ ನಿರ್ಮಿಸಿರುವ ಕರ್ನಾಟಕದ ಅತ್ಯಂತ ಪ್ರಾಚೀನ ಸೇತುವೆಯಾದ ‘ವೆಲ್ಲೆಸ್ಲಿ ಸೇತುವೆ’, 1784ರಲ್ಲಿ ಕಟ್ಟಲ್ಪಟ್ಟಿರುವ 1959ರಿಂದ ವಸ್ತು ಸಂಗ್ರಹಾಲಯವಾಗಿರುವ ಟಿಪ್ಪುವಿನ ಅಂದದ ಬೇಸಿಗೆ ಅರಮನೆ ‘ದರಿಯಾ ದೌಲತ್’, ಟಿಪ್ಪು ಸುಲ್ತಾನ್ ಮತ್ತು ಆತನ ತಂದೆ-ತಾಯಿ ಮತ್ತವರ ಕುಟುಂಬದವರ ಸಮಾಧಿಗಳಿರುವ 1784ರಲ್ಲಿ ನಿರ್ಮಾಣಗೊಂಡಿರುವ ಗೋಳಗುಮ್ಮಟದಾಕಾರದ ‘ಗುಂಬಜ್’ ಕಣ್ಮನಸೆಳೆಯುತ್ತದೆ.

ಇಲ್ಲಿಗೆ ಸಮೀಪದಲ್ಲಿಯೇ ಕಾವೇರಿ ನದಿ ಇಬ್ಭಾಗವಾಗಿ ಹರಿದು ಮುಂದೆ ಸಾಗಿ ಮತ್ತೆ ಸೇರುವ ಸಂಗಮ ಕ್ಷೇತ್ರವಿದೆ. ಅಸ್ಥಿ ವಿಸರ್ಜಿಸುವ, ಪಿತೃಕ್ರಿಯೆ ನಡೆಸುವ ಪಶ್ಚಿಮವಾಹಿನಿ, ರಮಣೀಯ ‘ಗೋಸಾಯಿ ಘಾಟ್’ ಕಾವೇರಿಯ ಉತ್ತರ ದಡದಲ್ಲಿರುವ ಗಂಜಾಂನ ಪ್ರಸಿದ್ಧ ‘ನಿಮಿಷಾಂಬ ದೇವಸ್ಥಾನ’ ತುಸು ದೂರದಲ್ಲೇ ಇರುವ ಶ್ರೀರಾಮ, ಕಾಶಿವಿಶ್ವನಾಥ, ಕನ್ಯಕಾ ಪರಮೇಶ್ವರಿ, ಗೌರಿ ದೇಗುಲಗಳು ಹಾಗೂ ಫ್ರೆಂಚ್‍ನ ಕ್ರೈಸ್ತ ಪಾದ್ರಿ ಅಬ್ಬಿದುಬುವಾ ಸ್ಥಾಪಿಸಿರುವ ‘ಅಬ್ಬಿದುಬುವಾ ಚರ್ಚ್’ ಕಾವೇರಿ ನದಿಯ ಮಧ್ಯ ಭಾಗದಲ್ಲಿರುವ ವಿಶ್ವವಿಖ್ಯಾತ ‘ರಂಗನತಿಟ್ಟು ಪಕ್ಷಿಧಾಮ’, ನಂದಿ ಬಸಪ್ಪ ಛತ್ರ, ಅಂಡಾಪುರದ ರಂಗಾಚಾರ್ಯ ಛತ್ರ, ಗಾಡಿಚೆಲುವರಾಯಶೆಟ್ಟಿ ಛತ್ರ, ಮಹಾರಾಜರ ಛತ್ರಗಳು ಹೀಗೆ ಹತ್ತು ಹಲವು ತಾಣಗಳು ಇಲ್ಲಿವೆ.

ಶ್ರೀರಂಗಪಟ್ಟಣವು ಮೈಸೂರಿಗೆ ಕೇವಲ 16 ಕಿ.ಮೀ. ದೂರದಲ್ಲಿದ್ದು, ಇಲ್ಲಿಂದ ಬೇಕಾದಷ್ಟು ಬಸ್ ಸೌಲಭ್ಯಗಳು ಇವೆ. ಬೆಂಗಳೂರಿನಿಂದ 122 ಕಿ.ಮೀ. ದೂರವಾಗುತ್ತದೆ.

More Images