ಚುನಾವಣೆಗೆ ಬೇಕೇ ಬೇಕು ಮೈಸೂರು ಶಾಯಿ!

ಚುನಾವಣೆಗೆ ಬೇಕೇ ಬೇಕು ಮೈಸೂರು ಶಾಯಿ!

LK   ¦    May 09, 2018 09:52:20 AM (IST)
ಚುನಾವಣೆಗೆ ಬೇಕೇ ಬೇಕು ಮೈಸೂರು ಶಾಯಿ!

ಮೈಸೂರು: ಚುನಾವಣೆ ವೇಳೆ ಮತದಾನ ಮಾಡುವ ಮತದಾರರಿಗೆ ಹಾಕುವ ಗುರುತಿನ ಶಾಹಿ ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆಯಿಂದ ಸರಬರಾಜಾಗುತ್ತಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಈ ಬಾರಿ 1.32 ಲಕ್ಷ ಬಾಟಲಿಯನ್ನು ಸರಬರಾಜು ಮಾಡಲಾಗಿದ್ದು 1.66 ಕೋಟಿ ರೂ.ನ ವ್ಯವಹಾರ ನಡೆದಿದೆ.

ಎಲ್ಲೇ ಚುನಾವಣೆ ನಡೆದರೂ ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆಯ ಶಾಹಿ ಬೇಕೇ ಬೇಕು. ಈಗಾಗಲೇ ಈ ಶಾಯಿ ದೇಶ ಮಾತ್ರವಲ್ಲದೆ ವಿದೇಶದಲ್ಲಿಯೂ ತನ್ನ ಛಾಪು ಮೂಡಿಸಿದ್ದು, ಹಲವು ದೇಶಗಳು ಚುನಾವಣೆಗೆ ಬೇಕಾದ ಶಾಹಿಯನ್ನು ಮೈಸೂರಿನಿಂದ ಆಮದು ಮಾಡಿಕೊಳ್ಳುತ್ತಿವೆ ಎನ್ನುವುದು ಮೈಸೂರಿಗರಿಗೆ ಹೆಮ್ಮೆ ತರುವ ಸಂಗತಿಯಾಗಿದೆ.

ಈ ಬಾರಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಇಲ್ಲಿನ ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್)ಯಿಂದ ಒಟ್ಟು 1.32 ಲಕ್ಷ ಬಾಟಲ್ ಗಳನ್ನು ಸರಬರಾಜು ಮಾಡಿದೆ. ಕಳೆದ 2013ರಲ್ಲಿ ನಡೆದ ಚುನಾವಣೆಗೆ 1.11 ಲಕ್ಷ ಬಾಟಲ್ ಶಾಯಿಯನ್ನು ಉತ್ಪಾದನೆ ಮಾಡಿ ಸರಬರಾಜು ಮಾಡಿತ್ತು. ಪ್ರತಿ ಚುನಾವಣೆ ವೇಳೆಯೂ ಮತದಾರರು ಹೆಚ್ಚಾಗುವ ಕಾರಣದಿಂದಾಗಿ ಉತ್ಪಾದನೆಯೂ ಹೆಚ್ಚುತ್ತಲೇ ಹೋಗುತ್ತಿರುವುದು ಕಂಡು ಬರುತ್ತಿದೆ.

ಒಂದು ಬಾಟಲ್ ನಲ್ಲಿ 10 ಎಂಎಲ್ ಇದ್ದು, ಇದರ ಬೆಲೆ 125 ರೂ. ನಿಗದಿಗೊಳಿಸಲಾಗಿದೆ. ಈ ಬಾರಿ ಕಳೆದ ವರ್ಷಕ್ಕಿಂತ ಕಡಿಮೆ ಬೆಲೆ ನಿಗದಿಗೊಳಿಸಲಾಗಿದೆ. ಕಳೆದ ಬಾರಿ ಇದರ ಬೆಲೆ 142 ಇತ್ತು.

ಮತದಾನದಲ್ಲಿ ನಡೆಯುವ ಅಕ್ರಮ ತಡೆಯಲು ಚುನಾವಣಾ ಆಯೋಗ ಐದು ದಶಕಗಳ ಹಿಂದೆಯೇ ಮತದಾರನ ಬೆರಳಿಗೆ ಕಪ್ಪು ಶಾಯಿ (ಮಸಿ) ಹಾಕುವ ವಿಧಾನವನ್ನು ಜಾರಿಗೆ ತಂದಿತ್ತು. ಅಲ್ಲಿಂದ ಇಲ್ಲಿಯವರೆಗೂ ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಶಾಯಿಯನ್ನು ಸರಬರಾಜು ಮಾಡಲಾಗುತ್ತಿದೆ.

1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪಿಸಲ್ಪಟ್ಟ ಈ ಕಾರ್ಖಾನೆ ಆರಂಭದ ದಿನಗಳಲ್ಲಿ ವೈವಿಧ್ಯಮಯ ಬಣ್ಣಗಳ ತಯಾರಿಕೆಗಷ್ಟೆ ಸೀಮಿತವಾಗಿತ್ತು. ಸ್ವಾತಂತ್ರ್ಯ ನಂತರ ಇದು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿತು.

ತದನಂತರ 1951, 57ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತಾದರೂ ಇದರಲ್ಲಿ ಒಬ್ಬರೆ ಹಲವು ಬಾರಿ ಮತ ಚಲಾಯಿಸಿದ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಮತದಾರರ ಬೆರಳಿಗೆ ಕಪ್ಪು ಮಸಿ ಅಥವಾ ಶಾಯಿ ಹಾಕುವ ನಿರ್ಧಾರ ಕೈಗೊಂಡಿತು. ಈ ನಿರ್ಧಾರ ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯ ಅದೃಷ್ಟದ ಬಾಗಿಲು ತಟ್ಟಿದಂತಾಯಿತು. ನಂತರ ಅಳಿಸಲಾಗದ ಶಾಯಿ ತಯಾರಿಸುವ ಜವಬ್ದಾರಿ ಹೊತ್ತ ಕಾರ್ಖಾನೆ 1962ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಶಾಯಿ ಪೂರೈಸಿ ಚುನಾವಣಾ ಇತಿಹಾಸದಲ್ಲಿ ಮೈಲುಗಲ್ಲು ಸ್ಥಾಪಿಸಿತು.

ಅಂದಿನಿಂದ ಚುನಾವಣಾ ಆಯೋಗ ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಕಪ್ಪು ಶಾಯಿಯನ್ನು ತರಿಸಿಕೊಳ್ಳುವ ಪರಿಪಾಠ ಆರಂಭಿಸಿತು. ಉತ್ಪಾದನೆ ಆರಂಭಿಸಿದಂದಿನಿಂದ ಇಂದಿನವರೆಗೂ ಕಾರ್ಖಾನೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ.

ಈಗಲೂ ಈ ಕಪ್ಪು ಶಾಯಿ ಉತ್ಕೃಷ್ಟ ಗುಣಮಟ್ಟದಲ್ಲಿ ತಯಾರಾಗುತ್ತಿದೆ. ಈ ಶಾಯಿ ಕನಿಷ್ಠ 48 ಗಂಟೆಗಳಿಂದ 30 ದಿನಗಳವರೆಗೆ ಅಚ್ಚಳಿಯದೇ ಉಳಿಯುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ದೃಢಪಡಿಸಿದೆ. ದೇಶ, ವಿದೇಶದಲ್ಲಿ ನಡೆಯುವ ಚುನಾವಣೆಗೆ ಬೇಡಿಕೆಗೆ ತಕ್ಕಷ್ಟು ಶಾಯಿ ಒದಗಿಸಲು ಮೈಲ್ಯಾಕ್ ಆಡಳಿತ ಸದಾ ಸಿದ್ಧವಾಗಿರುತ್ತದೆ. ಈ ಕಾರಣಕ್ಕಾಗಿಯೇ ಚುನಾವಣಾ ಆಯೋಗ ಪ್ರತಿಬಾರಿಯೂ ಈ ಕಾರ್ಖಾನೆಯಿಂದಲೇ ಶಾಯಿ ತರಿಸಿಕೊಳ್ಳುತ್ತಿದೆ.

10 ಎಂಎಲ್ ನ ಒಂದು ಬಾಟಲ್ ಗೆ ಮೈಲ್ಯಾಕ್ ಕಾರ್ಖಾನೆ ರೂ.125 ನಿಗದಿ ಮಾಡಿದೆ. ಒಂದು ಬಾಟಲ್ ಶಾಯಿಯನ್ನು ಸುಮಾರು 700 ಮತದಾರರ ಬೆರಳಿಗೆ ಗುರುತು ಹಾಕಲು ಬಳಸಬಹುದಾಗಿದೆ.

ಮೈಸೂರಿನಲ್ಲಿ ತಯಾರಾಗುವ ಶಾಯಿಯನ್ನು ದಕ್ಷಿಣ ಆಫ್ರಿಕಾ, ನೇಪಾಳ, ಟರ್ಕಿ, ಭೂತಾನ್ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳಿಗೆ ಚುನಾವಣೆ ಸಮಯಗಳಲ್ಲಿ ರಫ್ತು ಮಾಡಲಾಗುತ್ತದೆ ಎನ್ನುವುದು ಮತ್ತೊಂದು ಹೆಮ್ಮೆಯಾಗಿದೆ.

More Images