ಬಾರದ ಮಳೆ ಬರಲು ಕಪ್ಪೆಗೆ ಮದುವೆ ಮಾಡಿದರು!

ಬಾರದ ಮಳೆ ಬರಲು ಕಪ್ಪೆಗೆ ಮದುವೆ ಮಾಡಿದರು!

LK   ¦    Apr 30, 2018 01:01:57 PM (IST)

ಬೇಸಿಗೆ ಬಂತೆಂದರೆ ಮಳೆಯ ಚಿಂತೆ ಕಾಡುತ್ತದೆ. ಅದರಲ್ಲೂ ಗ್ರಾಮೀಣ ಜನರಿಗೆ ಮಳೆ ಬಂದಿಲ್ಲವೆಂದರೆ ಅವರ ಯಾವ ಕೆಲಸವೂ ನಡೆಯುವುದಿಲ್ಲ. ಹೀಗಾಗಿ ಮಳೆಗಾಗಿ ದೇವಾಲಯಗಳಲ್ಲಿ ಪೂಜೆ ಮಾಡುವುದು, ಹೋಮಹವನ ಮಾಡುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ವರುಣನ ಮೊರೆ ಹೋಗುತ್ತಾರೆ.

ಆದರೆ ರಾಜ್ಯದ ಹಲವೆಡೆ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮಳೆಗಾಗಿ ಕಪ್ಪೆಗೆ ಮದುವೆ ಮಾಡುವ ಸಂಪ್ರದಾಯವಿದೆ. ಕಪ್ಪೆ ಮದುವೆಗೂ ಮಳೆಗೂ ಎತ್ತಣದೆತ್ತ ಸಂಬಂಧವೋ ಗೊತ್ತಿಲ್ಲ ಆದರೆ ಗ್ರಾಮೀಣ ಮಂದಿ ಮಾತ್ರ ಇದನ್ನು ಸಂಪ್ರದಾಯಬದ್ಧವಾಗಿಯೇ ನಡೆಸುತ್ತಾರೆ. ಆ ಮೂಲಕ ಮಳೆ ಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.

ಇತ್ತೀಚೆಗೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಬೋರೇಗೌಡನಕೊಪ್ಪಲು ಗ್ರಾಮದ ಜನರು ಮಳೆಗಾಗಿ ಗಂಡು ಮತ್ತು ಹೆಣ್ಣು ಕಪ್ಪೆಯನ್ನು ಹಿಡಿದು ತಂದು ಅವುಗಳನ್ನು ಸಿಂಗರಿಸಿ ಸುಮೂಹೂರ್ತದಲ್ಲಿ ಮದುವೆ ಮಾಡಿಸಿದ್ದಾರೆ.

ಗ್ರಾಮದ ಯುವಕರು ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ತಂದು, ಯುವಕರು ಗಂಡು ಕಪ್ಪೆಗೆ ಆಲಂಕಾರ ಮಾಡಿದರೆ, ಯುವತಿಯರು ಹಾಗೂ ಮಹಿಳೆಯರು ಹೆಣ್ಣು ಕಪ್ಪೆಗೆ ಶೃಂಗಾರ ಮಾಡಿ, ನಂತರ ಮುತ್ತೈದೆಯರು ಕಳಸ ಹೊತ್ತುಕೊಂಡು ನೀರು ತರುವ ಶಾಸ್ತ್ರಕ್ಕೆ ಮುಂದಾದರೇ, ಗಂಡು ಕಪ್ಪಗೆ ಯುವಕರು ಹಸೇಮಣೆ ಏರಿಸುವ ಶಾಸ್ತ್ರ ಮಾಡಿದರು.

ನಂತರ ಗಂಡು ಕಪ್ಪೆಯನ್ನು ಪುಟಾಣಿ ಮಕ್ಕಳು ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಹೆಣ್ಣಿನ ಮನೆಗೆ ಕರೆದೊಯ್ದು, ಮನೆ ತುಂಬಿಸಿಕೊಳ್ಳುವ ಶಾಸ್ತ್ರವನ್ನು ಹೆಣ್ಣು ಕಪ್ಪೆಯ ಕಡೆಯವರು ಮಾಡಿದರು.

ಬಳಿಕ ಪುರೋಹಿತರು ಮೂಹೂರ್ತಕ್ಕೆ ಕಾಲ ನಿಗದಿ ಮಾಡಿ ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ಮದುವೆ ಚಪ್ಪರದ ಮಂಟಪಕ್ಕೆ ಕರೆ ತಂದು ಗ್ರಾಮದ ಐದು ಜನ ಮುತ್ತೈದೆಯರು ನವ ವಧು ವರರಿಗೆ ಕಂಕಣವನ್ನು ಕಟ್ಟಿ, ಅರಿಶಿನ ಕುಂಕುಮ ಇಟ್ಟು ಮಡಿಲಕ್ಕಿ ತುಂಬಿದರು. ಪುರೋಹಿತರು ಸೂಕ್ತ ಸಮಯದಲ್ಲಿ ಎಲ್ಲರ ಸಮ್ಮುಖದಲ್ಲಿ ಮಂತ್ರಪಠಣ ಮಾಡಿ ಗಟ್ಟಿಮೇಳದೊಂದಿಗೆ ಮಾಂಗಲ್ಯ ಮಂತ್ರವನ್ನು ಪಠಿಸುತ್ತಾ ಕಪ್ಪೆಗಳಿಗೆ ತಾಳಿ ಕಟ್ಟಿಸಿದರು. ಈ ವೇಳೆ ಗ್ರಾಮದ ಹಿರಿಯರು, ಮುಖಂಡರು, ಮುತ್ತೈದೆಯರು ನೂತನ ವಧುವರರಿಗೆ ಶುಭ ಹಾರೈಸಿದರು. ಇದಾದ ನಂತರ ನವ ದಂಪತಿಗಳನ್ನು ಒಂದು ತಟ್ಟೆಯಲ್ಲಿ ಕುಳ್ಳರಿಸಿ ಕೊಂಡ ಗ್ರಾಮದ ಪುಟಾಣಿ ಮಕ್ಕಳು ಮೆರವಣಿಗೆ ಮೂಲಕ ಪ್ರತಿಯೊಂದು ಮನೆಗೆ ಕರೆದೊಯ್ದು ಮಡಲಕ್ಕಿ ತುಂಬಿಸಿ, ಅಕ್ಷತೆ ಹಾಕಿಸಿ ಗ್ರಾಮದ ಅರಳಿ ಮರದಡಿಯಲ್ಲಿ ಅರತಕ್ಷತೆ ನಡೆಸಿದರು.

ಈ ಕಪ್ಪೆಗಳ ಮದುವೆ ಕುರಿತಂತೆ ಮಾಹಿತಿ ನೀಡಿದ ಗ್ರಾಮದ ಮುಖಂಡರಾದ ಹರೀಶ್ ಅವರು ಕಳೆದ ಐದಾರೂ ವರ್ಷಗಳಿಂದ ನಮ್ಮ ಭಾಗದಲ್ಲಿ ಮಳೆಯಾಗದೇ ರೈತರು ಕಂಗಾಲಾಗಿದ್ದಾರೆ, ರೈತರ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ, ಈ ಬಾರಿಯಾದರೂ ನಮ್ಮ ಗ್ರಾಮದ ಸುತ್ತಮುತ್ತ್ತ ಉತ್ತಮ ಮಳೆಯಾಗಲಿ ಎಂಬ ಉದ್ದೇಶದಿಂದ ನಮ್ಮ ಹಿರಿಯರು ಮಾಡುತ್ತಿದ್ದ ಸಂಪ್ರದಾಯವನ್ನು ಮುಂದುವರಿಸಿದ್ದಾಗಿ ಹೇಳಿದ್ದಾರೆ. ಕಪ್ಪೆಗಳ ಮದುವೆಯ ಗಟ್ಟಿಮೇಳದ ಸದ್ದು ವರುಣನಿಗೆ ಕೇಳಿಸುತ್ತಾ ಆತ ಮಳೆ ಸುರಿಸುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.