ಚೇಲಾವರದ ಸೌಂದರ್ಯಕ್ಕೆ ಮರುಳಾಗದಿರಿ...!

ಚೇಲಾವರದ ಸೌಂದರ್ಯಕ್ಕೆ ಮರುಳಾಗದಿರಿ...!

B.M Lavakumar   ¦    Aug 17, 2016 01:21:09 PM (IST)

ಕೊಡಗಿನಲ್ಲಿರುವ ಸುಂದರ ಮತ್ತು ರುದ್ರರಮಣೀಯ ಜಲಪಾತಗಳ ಪೈಕಿ ಚೇಲಾವರದ ಜಲಪಾತವೂ ಒಂದಾಗಿದೆ. ಆದರೆ ಇದರ ಸೌಂದರ್ಯಕ್ಕೆ ಮರುಳಾಗಿ ಈಜಲು ಹೋದರೆ ಮಾತ್ರ ಮೃತ್ಯು ಖಚಿತ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಗೊತ್ತಾಗಬೇಕಾದರೆ ಇದನ್ನೊಮ್ಮೆ ಓದಿ ಬಿಡಿ.

ಮಡಿಕೇರಿ ತಾಲೂಕಿಗೆ ಸೇರಿದ ನಾಪೋಕ್ಲುಗೆ ಸಮೀಪದ  ಚೆಯ್ಯಂಡಾಣೆಯಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಚೇಲಾವರ ಜಲಪಾತ ಸುತ್ತಲಿನ ಕಾಫಿತೋಟ, ಬೆಟ್ಟಗುಡ್ಡ, ಕಾನನಗಳ ನಿಸರ್ಗ ಸೌಂದರ್ಯದಿಂದ ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತದೆ.

ಮೊದಲೆಲ್ಲ ಈ ಜಲಧಾರೆಯತ್ತ ಜನ ಬರುತ್ತಿರಲಿಲ್ಲ. ಈಗ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪಟ್ಟಣದ ಗೌಜು ಗದ್ದಲದಲ್ಲಿ ಬದುಕು ಕಟ್ಟಿಕೊಂಡವರು ರಜಾದ ಮಜಾ ಕಳೆಯಲು ಇಲ್ಲಿಗೆ ಆಗಮಿಸುತ್ತಾರೆ. ಹೀಗೆ ಆಗಮಿಸುವ ಪ್ರವಾಸಿಗರು ಜಲಪಾತದ ಸೌಂದರ್ಯವನ್ನು ಸವಿದು ಹಿಂತಿರುಗಿದರೆ ತೊಂದರೆಯಿಲ್ಲ. ಆದರೆ ಹಾಗೆ ಮಾಡುವುದಿಲ್ಲ. ಬದಲಿಗೆ ಪಾನಗೋಷ್ಠಿ ಏರ್ಪಡಿಸಿ ಪ್ಲಾಸ್ಟಿಕ್ ವಸ್ತು, ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಅದಾದ ಬಳಿಕ ಧುಮುಕುವ ಜಲಧಾರೆಯಲ್ಲಿ ಈಜುವ, ಸ್ನಾನ ಮಾಡುವ ದುಸ್ಸಾಹಸಕ್ಕೆ ಇಳಿಯುತ್ತಾರೆ. ಹೀಗೆ ಇಳಿದವರು ಪ್ರಾಣಕಳೆದುಕೊಳ್ಳುತ್ತಿದ್ದಾರೆ.

ಒಂದು ಮೂಲದ ಪ್ರಕಾರ ಈ ಜಲಪಾತದಲ್ಲಿ ಬಲಿಯಾದವರ ಸಂಖ್ಯೆ ಸುಮಾರು ಹನ್ನೆರಡು ದಾಟಿದೆ. ಇವರ ಪೈಕಿ ಬಹಳಷ್ಟು ಜನ ಮೋಜು ಮಸ್ತಿ ಮಾಡಿಯೇ ಪ್ರಾಣ ಕಳೆದುಕೊಂಡವರು. ಜಲಧಾರೆಯ ಸುಂದರ ನೋಟವೇ ಹಾಗಿದೆ. ಕರ್ರಗಿನ ಹೆಬ್ಬಂಡೆಯ ಮೇಲೆ ಭೂತಾಯಿಯ ಒಡಲ ಬೆಳ್ಳಿ ಕರಗಿ ಹರಿಯುತ್ತದೆಯೇನೋ ಎಂಬಂತೆ ಭಾಸವಾಗುತ್ತದೆ. ಇದನ್ನು ನೋಡುತ್ತಿದ್ದರೆ ನೀರಿನಲ್ಲಿ ಆಟವಾಡಬೇಕೆಂಬ ಬಯಕೆ ಹುಟ್ಟುವುದು ಸಹಜ. ಹಾಗೆಂದು ನೀರಿಗೆ ಇಳಿಯುವ ಮುನ್ನ ಒಂದು ಕ್ಷಣ ಯೋಚಿಸಿದರೆ ಯಾವುದೇ ಪ್ರಾಣಾಪಾಯವಿಲ್ಲದೆ ಹಿಂತಿರುಗಬಹುದು.

ಏಕೆಂದರೆ  ಸುಮಾರು 80 ಅಡಿ ಎತ್ತರದಿಂದ ಧುಮುಕುವ ಜಲಪಾತದ ಕೆಳ ಭಾಗದಲ್ಲಿ ಜಲಪಾತದ ಅರ್ಧ ಭಾಗದಲ್ಲಿ ಸುಮಾರು 40 ಅಡಿ ಆಳದ ಹೊಂಡವೊಂದಿದೆ. ಅಷ್ಟೇ ಅಲ್ಲ ಬಂಡೆಯ ಕೆಳಗೆ 15 ಅಡಿ ದೂರದವರೆಗೆ ಟೊಳ್ಳಾದ ಜಾಗವಿದೆ. ನೀರಿಗೆ ಬಿದ್ದ ವ್ಯಕ್ತಿಗಳು ಮೇಲಿನಿಂದ ಬೀಳುವ ನೀರಿನ ರಭಸಕ್ಕೆ ಕಲ್ಲು ಬಂಡೆಯ ಸಂದಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಹೀಗೆ ಸಿಲುಕಿಕೊಂಡವರು ಮತ್ತೆ ಈಚೆಗೆ ಬರುವುದು ಅಸಾಧ್ಯ. ಇಲ್ಲಿ ಸಿಲುಕಿಯೇ ಹೆಚ್ಚಿನವರು ಪ್ರಾಣ ಕಳೆದುಕೊಂಡಿದ್ದಾರೆ.  ಮಳೆಗಾಲದ ಸಂದರ್ಭದಲ್ಲಿ ಜಲಪಾತ ಧುಮ್ಮಿಕ್ಕಿ ಹರಿಯುವಾಗ ಒಳಗಿನ ರೌದ್ರತೆ ಕಣ್ಣಿಗೆ ಕಾಣಿಸುವುದಿಲ್ಲ. ಬದಲಿಗೆ ಎಲ್ಲವೂ ಸುಂದರವಾಗಿ ಕಾಣುತ್ತದೆ.  ಅದರ ಆಕರ್ಷಣೆಗೊಳಗಾಗಿ ನೀರಿಗೆ ಇಳಿಯುತ್ತಾರೆ.

ಜಲಪಾತದಲ್ಲಿ ಮುಳುಗಿ ಸಾಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬೇಸಿಗೆ ದಿನಗಳಲ್ಲಿ ಜಲಪಾತದ ಆಳವನ್ನು ಅರಿಯುವ ಸಲುವಾಗಿ ಹದಿನೈದು ಮಂದಿ ಮೋಟಾರ್ ಮೂಲಕ ನೀರನ್ನು ಹೊರತೆಗೆದು ಆಳ ನೋಡುವ ಪ್ರಯತ್ನ ಮಾಡಿದರಾದರೂ ಸುಮಾರು ಇಪ್ಪತ್ತು ಅಡಿ ನೀರನ್ನಷ್ಟೆ ಖಾಲಿ ಮಾಡಲು ಸಾಧ್ಯವಾಯಿತು. ಆದರೆ ಕೆಳಭಾಗದ ಆಳ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ.

ಕೆಲವು ಪುಂಡರು ಇಲ್ಲಿಗೆ ಆಗಮಿಸುವುದರಿಂದ ಸಂಸಾರಸ್ಥರು ಬರುವುದಕ್ಕೆ ಮುಜುಗರವಾಗುತ್ತಿದೆ ಎಂಬ ಆರೋಪವೂ ಇದೆ. ಜಲಪಾತ ತನ್ನ ಹೆಸರನ್ನು ಎಲ್ಲೆಡೆ ಪಸರಿಸುತ್ತಿದ್ದಂತೆಯೇ ಮೋಜು ಮಸ್ತಿಗೆಂದು ಆಗಮಿಸುವವರಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ.

ಮೊದಲು ಇಲ್ಲಿ ಯಾವುದೇ ಕಾವಲುಗಾರನಿರಲಿಲ್ಲ. ಈಗ ಅರಣ್ಯ ಇಲಾಖೆ ಒಬ್ಬ ಸಿಬ್ಬಂದಿಯನ್ನು ನೇಮಿಸಿದ್ದಾರೆ. ಒಬ್ಬನಿಂದ ಕಾರ್ಯನಿರ್ವಹಣೆ ತಾನೆ ಹೇಗೆ ಸಾಧ್ಯ? ಜಲಪಾತದಲ್ಲಿ ಪ್ರವಾಸಿಗರಿಗೆ ಯಾವುದೇ ಸೌಲಭ್ಯವಿಲ್ಲ. ಮತ್ತೊಂದೆಡೆ ಪ್ರವಾಸೋದ್ಯಮ ಇಲಾಖೆಯಿಂದ 3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ.

ಇಲ್ಲಿ ಒಂದಷ್ಟು ಸೌಲಭ್ಯ ಕಲ್ಪಿಸಿ ಪ್ರವೇಶ ಶುಲ್ಕವನ್ನು ವಿಧಿಸಿದರೆ ಆದಾಯವೂ ಬರಲಿದೆ. ಜೊತೆಗೆ ಮೋಜು ಮಸ್ತಿಗೆ ತಡೆಯೊಡ್ಡಬೇಕು. ರಕ್ಷಣೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸುವ ಕೆಲಸವಾಗಬೇಕು. ಆಗ ಮಾತ್ರ ಎಲ್ಲರೂ ಜಲಪಾತದೆಡೆಗೆ ತೆರಳಿ ನೆಮ್ಮದಿಯಾಗಿ ಬರಬಹುದು. ಆ ಕೆಲಸ ತಕ್ಷಣವೇ ಆಗಬೇಕಿದೆ. ಇಲ್ಲದಿದ್ದರೆ ಪ್ರವಾಸಿಗರ ಪಾಲಿಗೆ ದುರಂತ ಜಲಪಾತವಾಗುವುದರಲ್ಲಿ ಸಂಶಯವಿಲ್ಲ.

More Images