ರೋಮಾಂಚನಗೊಳಿಸಿದ ಜೋಡಿ ಎತ್ತಿನಗಾಡಿ ಓಟ

ರೋಮಾಂಚನಗೊಳಿಸಿದ ಜೋಡಿ ಎತ್ತಿನಗಾಡಿ ಓಟ

Jul 31, 2017 02:27:29 PM (IST)
ರೋಮಾಂಚನಗೊಳಿಸಿದ ಜೋಡಿ ಎತ್ತಿನಗಾಡಿ ಓಟ

ಮಂಡ್ಯ: ಕಿಕ್ಕಿರಿದು ತುಂಬಿದ ಪ್ರೇಕ್ಷಕರು.. ಹರ ಹೊ.. ಹರಹೊಯ್ಯಿ ಎಂದು ಛಾಟಿ ಬೀಸಿ ಓಡಿಸುತ್ತಿದ್ದ ಗಾಡಿ ಮಾಲೀಕರು..ಶಿಳ್ಳೆ ಚಪ್ಪಾಳೆಗೆ ಧೂಳೆಬ್ಬಿಸಿಕೊಂಡು ಓಡುತ್ತಿದ್ದ ಜೋಡು ಎತ್ತುಗಳು..ಇಂತಹ ರೋಮಾಂಚನಕಾರಿ ದೃಶ್ಯ ಕಂಡು ಬಂದಿದ್ದು ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದ ಸಮೀಪದ ಜಮೀನಿನಲ್ಲಿ.

ಬೀರಶೆಟ್ಟಹಳ್ಳಿಯ ಶ್ರೀ ವೀರಾಂಜನೇಯ ಗೆಳೆಯರ ಬಳಗ ಹಾಗೂ ಬಿಎಸ್ ಬಾಯ್ಸ್ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ನಿರೀಕ್ಷೆಗೂ ಮೀರಿ ಜೋಡೆತ್ತುಗಳ ಗಾಡಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಮತ್ತು ಸುತ್ತಮುತ್ತಲಿನ ಊರುಗಳ ಜನ ನೆರೆಯುವುದರೊಂದಿಗೆ ಯಶಸ್ವಿಯಾಗಿ ಜರುಗಿತು.

ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಹಾಸನ ಜಿಲ್ಲೆ ಸೇರಿದಂತೆ ವಿವಿಧಡೆಯಿಂದ ಸುಮಾರು 50ಕ್ಕೂ ಹೆಚ್ಚು ಜೋಡಿ ಎತ್ತಿನಗಾಡಿಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಭಾಗವಹಿಸಿದ ಜೋಡೆತ್ತುಗಳು ಗೆಲುವಿಗಾಗಿ ಓಡಿದ ಕ್ಷಣಗಳು ನೆರೆದವರ ಮೈಮನವನ್ನು ರೋಮಾಂಚನಗೊಳಿಸಿದವು.

ಈ ವೇಳೆ ಮಾತನಾಡಿದ ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಅವರು, ಗ್ರಾಮೀಣ ಕ್ರೀಡೆಗಳ ಉಳಿವಿಗಾಗಿ ಹೆಚ್ಚು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಪ್ರೋತ್ಸಾಹಿಸಬೇಕಾಗಿದೆ. ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ದಿನಗಳಲ್ಲಿ ಗ್ರಾಮೀಣ ಕ್ರೀಡೆಯಾದ ಜೋಡಿ ಎತ್ತಿನಗಾಡಿ ಓಟದ ಸ್ಪಧರ್ೆಯನ್ನು ನಡೆಸುವ ಮೂಲಕ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡಿರುವುದು ಶ್ಲಾಘನೀಯ ಎಂದರು.

ಕ್ರೀಡೆಯಲ್ಲಿ ಸೋಲು-ಗೆಲುವು ಎಂಬುದು ಸಾಮಾನ್ಯ. ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ ಕ್ರೀಡಾ ಮನೋಭಾವಗಳಿಂದ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಯಾವುದೇ ಗೊಂದಲ, ಸಮಸ್ಯೆಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದರು.

ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಯುವ ಜನತೆ ಗ್ರಾಮೀಣ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ಕ್ರೀಡೆಗಳನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದರು.