ವೈಭವದ ಮಂಗಳೂರು ದಸರಾ 2017 (ವೀಡಿಯೋ)...

ವೈಭವದ ಮಂಗಳೂರು ದಸರಾ 2017 (ವೀಡಿಯೋ)...

Nithin   ¦    Oct 09, 2017 05:41:30 PM (IST)
ವೈಭವದ ಮಂಗಳೂರು ದಸರಾ 2017 (ವೀಡಿಯೋ)...

ಮಂಗಳೂರಿನಲ್ಲಿರುವ ಸುಂದರವಾದ ಐತಿಹಾಸಿಕ ದೇವಾಲಯ ಕುದ್ರೋಳಿ. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಅಂದಾಗ ನೆನಪಿಗೆ ಬರುವಂತದ್ದು, ಆಧುನಿಕ ಶೈಲಿಯ ಶಿಲ್ಪಕಲೆಯಲ್ಲಿ ನಿರ್ಮಾಣಗೊಂಡಿರುವ ಸುಂದರವಾದ ದೇವಾಲಯ. ಅದರಲ್ಲೂ ಮತ್ತೆ ನಮ್ಮ ನೆನಪಿಗೆ ಬರುವಂತದ್ದು ಜೊತೆಗೆ ನಮ್ಮ ನೆನಪಿನಲ್ಲಿ ಉಳಿಯುವಂತದ್ದು, ವೈಭವದಿಂದ ಆಚರಿಸಲಾಗುವ ಈ ಕ್ಷೇತ್ರದ ದಸರಾ ಅಂದರೆ ಮಂಗಳೂರು ದಸರಾ...

ಮಂಗಳೂರು ದಸರಾದ ವಿಶಿಷ್ಟ ಆಕರ್ಷಣೆಯೆಂದರೆ ನವದುರ್ಗೆಯರ ಪ್ರತಿಷ್ಟಾಪನೆ. 9 ದಿನಗಳ ಕಾಲ ಸಡಗರ ಸಂಭ್ರಮದಿಂದ ನಡೆಯುವ ಈ ನವರಾತ್ರಿ ಹಬ್ಬದಲ್ಲಿ ಗಣಪತಿಯ ಜೊತೆಗೆ ನವದುರ್ಗೆಯರನ್ನು ಆರಾಧಿಸಲಾಗುತ್ತಿದ್ದು, ಈ ವೈಭವದ ನವರಾತ್ರಿ ಉತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದು, ಮಂಗಳೂರಿಗೆ ಮಂಗಳೂರೇ ವರ್ಣಮಯವಾಗಿ ಕಂಗೊಳಿಸುವ, ಸ್ವರ್ಗವೇ ಧರೆಗಿಳಿದು ಬಂದತೆ ಭಾಸವಾಗುವ ಇತಿಹಾಸ ಪ್ರಸಿದ್ಧ ಮಂಗಳೂರು ದಸರಾ ವೈಭವ ಈ ಬಾರಿಯ ವೀಕೆಂಡ್ ಸ್ಪಷಲ್ ಸಂಚಿಕೆಯಲ್ಲಿ...

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಈ ಬಾರಿಯ ಮಂಗಳೂರು ದಸರಾದ ಭವ್ಯ ಶೋಭಾಯಾತ್ರೆಯು ಗಣಪತಿ, ನವದುರ್ಗೆಯರ ವಿಗ್ರಹಗಳೊಂದಿಗೆ ಶಾರದಾ ವಿಸರ್ಜನಾ ಮೆರವಣಿಗೆಯು ಸಡಗರ ಸಂಭ್ರಮದಿಂದ ನಡೆಯಿತು. ಶೋಭಾಯಾತ್ರೆಯಲ್ಲಿ ದೇವಸ್ಥಾನದ ಸ್ವರ್ಣ ಮಂಟಪದಲ್ಲಿ ಪ್ರತಿಷ್ಟಾಪಿಸಿದ್ದ, ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ದಿಧಾತ್ರಿಯ ಜೊತೆಗೆ ಶಾರದಾ ಮಾತೆಯ ವಿಸರ್ಜನಾ ಮರವಣಿಗೆಯು ಭಕ್ತಜನ ಸಾಗರದ ಜಯಘೋಷಗಳೊಂದಿಗೆ ವಿಜ್ರಂಭಣೆಯಿಂದ ನಡೆಯಿತು.

ಮಂಗಳೂರು ದಸರಾ ಅಂದಾಗ ನೆನಪಿಗೆ ಬರುವಂತದ್ದು ಹುಲಿವೇಷ. ಮಂಗಳೂರಿನ ದಸರಾ ವಿಶಷ್ಟ ಮೆರಗು ನೀಡುವಂತದ್ದು ಈ ಹುಲಿವೇಷ ಕುಣಿತ. ಹುಲಿವೇಷ ಕುಣಿತ ಕೇವಲ ಜಾನಪದ ಕಲೆಯಾಗಿರದೆ ಪ್ರತಿಷ್ಟೆಯ ವಿಷಯವಾಗಿದ್ದು, ಈ ಬಾರಿಯ ದಸರಾದ ಪ್ರಮುಖ ಆಕರ್ಷಣೆ ಅಬ್ಬರದ ಹುಲಿವೇಷ. ಚಿತ್ರ ವಿಚಿತ್ರ ವೇಷಗಳ ನಡುವೆ ನಮ್ಮನ್ನು ಮತ್ತೆ ಮತ್ತೆ ಆಕರ್ಷಿಸುವುದು ವಿವಿಧ ಶೈಲಿಯ ಸ್ತಬ್ದಚಿತ್ರಗಳು. ಅದರಲ್ಲೂ ಈ ಬಾರಿಯ ಪ್ರಮುಖ ಆಕರ್ಷಣೆಯೆಂದರೆ ಅಕ್ವೇರಿಯಂ ಟ್ಯಾಬ್ಲೋ, ಅಗೋರಿಗಳ ಸ್ಥಬ್ದ ಚಿತ್ರ, ಹಿಂದಿಯ ಶೋಲೆ ಚಿತ್ರದ ದೃಶ್ಯ ರೂಪಕ, ಮಾಯಾನ್ ನಾಗರಿಕತೆಯ ಸ್ಥಬ್ಧ ಚಿತ್ರ ಹೀಗೆ ಇನ್ನಿತರ ಸ್ಥಬ್ಧಚಿತ್ರಗಳು ಈ ಬಾರಿ ದಸರಾದ ಜನಾಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಮಂಗಳೂರು ದಸರಾ ಅಂದಾಗ ನೆನಪಿಗೆ ಬರುವಂತದ್ದು ವೈಭವದ ಶೋಭಾಯಾತ್ರೆ ಜೊತೆಗೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಮಧುವಣಗಿತ್ತಿಯಂತೆ ಕಂಗೊಳಿಸುವ ಮಂಗಳೂರು ನಗರ. ಇನ್ನೂ ಹೇಳ್ಬೇಕಾದರೆ ಜಿಲ್ಲೆಯ ಹಾಗೂ ರಾಜ್ಯದ ಮತ್ತು ಹೊರರಾಜ್ಯಗಳಿಂದ ಆಗಮಿಸುವ ವಿವಿಧ ಜಾನಪದ ಸಾಂಸ್ಕೃತಿಕ ಕಲಾತಂಡಗಳು ಮತ್ತು ಪ್ರಮುಖ ಆಕರ್ಷಣೆ ವಿವಿಧ ವಿಭಿನ್ನ ಟ್ಯಾಬ್ಲೋಗಳು. ಈ ಬಾರಿ 65 ಕ್ಕೂ ಅಧಿಕ ಸ್ಥಬ್ದ ಚಿತ್ರಗಳು ಈ ಬಾರಿಯ ಮಂಗಳೂರು ದಸರಾದಲ್ಲಿ ಪಾಲ್ಗೊಂಡಿದ್ದು, ಮಂಗಳೂರುಗೆ ಮಂಗಳೂರೇ ವರ್ಣಮಯವಾಗಿ ಕಂಡಿದ್ದು ಮಾತ್ರ ಸುಳ್ಳಲ್ಲ...