ನಿಸರ್ಗ ಸುಂದರ ಬಿಳಿಗಿರಿರಂಗನ ಬೆಟ್ಟ

ನಿಸರ್ಗ ಸುಂದರ ಬಿಳಿಗಿರಿರಂಗನ ಬೆಟ್ಟ

LavaKumar   ¦    Oct 22, 2018 01:40:53 PM (IST)
ನಿಸರ್ಗ ಸುಂದರ ಬಿಳಿಗಿರಿರಂಗನ ಬೆಟ್ಟ

ಮುಂಗಾರು ಮಳೆಯ ಬಳಿಕ ಹಿಂಗಾರು ಮಳೆಯೂ ಒಂದಿಷ್ಟು ಸುರಿದ ಪರಿಣಾಮ ನಿಸರ್ಗ ಹಸಿರು ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದು, ಎಲ್ಲೆಡೆ ಹಸಿರು ಹಚ್ಚಡದ ಪ್ರಕೃತಿ ವಿಸ್ಮಯ ಕಣ್ಮನ ಸೆಳೆಯುತ್ತದೆ. ನಿಸರ್ಗ ಸೌಂದರ್ಯವನ್ನು ಮನಸಾರೆ ಸವಿಯಬೇಕೆಂದರೆ ಇದು ಸಕಾಲ. ಜತೆಗೆ ನಿಸರ್ಗ ಸೌಂದರ್ಯವನ್ನು ಸವಿಯಲು ಹೊರಡುವವರು ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಬಹುದಾಗಿದೆ.

ಇದು ಪವಿತ್ರ ಕ್ಷೇತ್ರ ಮಾತ್ರವಲ್ಲದೆ, ಪ್ರವಾಸಿಗರ ಸೆಳೆಯುವ ಸುಂದರ ಪ್ರವಾಸಿ ತಾಣವೂ ಆಗಿರುವುದರಿಂದ ಇಲ್ಲಿಗೆ ಹೆಚ್ಚಿನವರು ಬರುತ್ತಿರುತ್ತಾರೆ. ಸುಮಾರು 540 ಚದರ ಕಿ.ಮೀ. ವಿಸ್ತಾರವನ್ನು ಹೊಂದಿರುವ ಬಿಳಿಗಿರಿರಂಗನಬೆಟ್ಟವು ಸದಾ ಹಸಿರು ಹಚ್ಚಡದಿಂದ ಕೂಡಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇಲ್ಲಿಗೆ ತೆರಳಿದ್ದೇ ಆದರೆ ಪ್ರಕೃತಿಯ ಸುಂದರ ನೋಟ ಕಣ್ಮನ ಸೆಳೆಯುತ್ತದೆ.

ಇಲ್ಲಿ ಶ್ರೀಗಂಧ, ಹೊನ್ನೆ, ಮತ್ತಿ, ಬೀಟೆ, ಬನ್ನಿ ಮೊದಲಾದ ಅಮೂಲ್ಯ ಮರಗಳು.. ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ಕಾಡು ಪ್ರಾಣಿಗಳು... ಕಾಡಿನ ನಡುವೆ ಅಲ್ಲಲ್ಲಿ ಸೋಲಿಗರ ಜೋಪಡಿಗಳು.. ಕಾಫಿ, ಕಿತ್ತಳೆ, ಬಾಳೆ, ಹಿಪ್ಪನೇರಳೆ ಬೆಳೆಯ ತೋಟಗಳು... ಅದರಾಚೆಗಿನ ಕಾಡಿನ ನಡುವಿನ ಅಂಕುಡೊಂಕಿನ ರಸ್ತೆಗಳಲ್ಲಿ ತಲೆ ಮೇಲೆ ಅರಣ್ಯ ಉತ್ಪನ್ನಗಳನ್ನು ಹೊತ್ತು ಸಾಗುವ ಸೋಲಿಗರು... ಅರಣ್ಯದ ನಡುವಿನಿಂದ ಛಂಗನೆ ನೆಗೆದು ಓಡುವ ಜಿಂಕೆಗಳು... ಘೀಳಿಡುವ ಆನೆಗಳು... ಹೀಗೆ ಒಂದು, ಎರಡಲ್ಲ ಹತ್ತಾರು ವಿಸ್ಮಯ ನೋಟಗಳು ಕಣ್ಮುಂದೆ ಹಾದು ಹೋಗುತ್ತವೆ.

ಬಿಳಿಗಿರಿರಂಗನಬೆಟ್ಟ ವನ್ಯಧಾಮವಾಗಿದ್ದು, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿ ಎಂದರೆ ತಪ್ಪಾಗುವುದಿಲ್ಲ. ಏಷ್ಯಾದ ಆನೆಗಳು, ಬಿಳಿಪಟ್ಟೆಗಳ ಹುಲಿಗಳ ವಾಸಕ್ಕೆ ಯೋಗ್ಯವಾಗಿರುವ ಈ ತಾಣದಲ್ಲಿ ಸುಮಾರು 700ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯ ಪ್ರಭೇದಗಳಿವೆ. ಇಷ್ಟು ಮಾತ್ರವಲ್ಲದೆ ಚಿರತೆ, ಜಿಂಕೆ, ಸೀಳುನಾಯಿ ಮುಂತಾದ ಪ್ರಾಣಿಗಳು, 200ಕ್ಕೂ ಅಧಿಕ ಪಕ್ಷಿ ಸಂಕುಲಗಳು ಇಲ್ಲಿವೆ. ಈ ಅರಣ್ಯದಲ್ಲಿ ಬಹಳ ಹಿಂದಿನಿಂದಲೂ ಸೋಲಿಗರು ವಾಸ ಮಾಡುತ್ತಾ ಬಂದಿದ್ದು, ಇಲ್ಲಿ ಸಿಗುವ ಅರಣ್ಯ ಉತ್ಪನ್ನವೇ ಅವರ ಬದುಕಿಗೆ ಆಸರೆಯಾಗಿದೆ.

ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಈ ದೇವಾಲಯವು ಬಹಳ ಹಿಂದಿನ ಕಾಲದಲ್ಲಿ ನಿರ್ಮಾಣಗೊಂಡಿದ್ದಾಗಿದ್ದು, ದ್ರಾವಿಡ ಶೈಲಿಯಲ್ಲಿದೆ. ಇಲ್ಲಿನ ಅದಿದೇವತೆ ಶ್ರೀ ಬಿಳಿಗಿರಿರಂಗನಾಥ ಹಾಗೂ ಶ್ರೀರಂಗಪಟ್ಟಣದ ರಂಗನಾಥ, ಶಿವನಸಮುದ್ರದ ಹಾಗೂ ತಿರುಚನಾಪಳ್ಳಿಯ ಶ್ರೀರಂಗ, ವೆಂಕಟೇಶ ಅಣ್ಣತಮ್ಮಂದಿರು ಎಂಬ ನಂಬಿಕೆ ಇಲ್ಲಿನವರದ್ದಾಗಿದೆ.

ಚಾಮರಾಜನಗರ ದೇವಾಲಯ ಪ್ರಾಕಾರ, ನವರಂಗ ಹಾಗೂ ಮುಖಮಂಟಪ ಹೊಂದಿದೆ.

ದೇವಾಲಯದ ಅದಿದೇವತೆಯಾದ ಬಿಳಿಗಿರಿ ರಂಗಸ್ವಾಮಿ (ಶ್ರೀನಿವಾಸ)ಯ ಲೋಹ ನಿರ್ಮಿತ ಮೂರ್ತಿಗಳು ನವರಂಗದ ಬಲಭಾಗದ ಮೂರು ಗೂಡುಗಳಲ್ಲಿದ್ದು, ಇಲ್ಲಿಯೇ ಹನುಮಂತ ಮಣವಾಳ ಮಹಾಮುನಿಗಳ ಮೂರ್ತಿಗಳಿವೆ. ಬಲ ಭಾಗದಲ್ಲಿ ಅಲಮೇಲು ಮಂಗೈ ಅಮ್ಮನವರ ಸನ್ನಿಧಿಯಿದೆ. ನವರಂಗದ ಎಡಭಾಗದ ಗೂಡುಗಳಲ್ಲಿ ನಮ್ಮಾಳ್ವಾರ್ ಮತ್ತು ರಾಮಾನುಜರ ವಿಗ್ರಹಗಳಿವೆ. ದ್ವಾರದ ಬಲಗಡೆಯಲ್ಲಿರುವ ಇನ್ನೊಂದು ಗೂಡಿನಲ್ಲಿ ವೇದಾಂತಚಾರ್ಯರ ವಿಗ್ರಹವನ್ನು ನಾವು ಕಾಣಬಹುದು. ಮೂಲದೇವರಾದ ಬಿಳಿಗಿರಿ ರಂಗಸ್ವಾಮಿ ಮೂರ್ತಿಯನ್ನು ವಸಿಷ್ಠರು ಪ್ರತಿಷ್ಠಾಪಿಸಿದರೆಂದು ಹೇಳಲಾಗುತ್ತದೆ.

ಇಲ್ಲಿರುವ ತಾಮ್ರಶಾಸನದ ಪ್ರಕಾರ ಬಿಳಿಕಲ್ಲು ತಿರುವೆಂಕಟನಾಥನಿಗೆ ಹದಿನಾಡಿನ ಮುದ್ದರಾಜ 1667ರಲ್ಲಿ ದತ್ತಿ ಬಿಟ್ಟಿದ್ದನಂತೆ. ಇನ್ನು ದಿವಾನ್ ಪೂರ್ಣಯ್ಯ ಈ ದೇವಾಲಯದ ಸೇವೆಗಾಗಿ 2 ಗ್ರಾಮಗಳನ್ನು ದತ್ತಿ ಬಿಟ್ಟರು ಎಂದು ಕೂಡ ಹೇಳಲಾಗುತ್ತಿದೆ.

ಬ್ರಹ್ಮಾಂಡಪುರಾಣದಲ್ಲಿ ಬಿಳಿಗಿರಿರಂಗಬೆಟ್ಟವನ್ನು ದಕ್ಷಿಣ ತಿರುಪತಿ ಎಂದು ಕರೆಯಲಾಗಿದೆ. ಬೆಟ್ಟದ ಮೇಲೆ ಗಂಗಾಧರೇಶ್ವರನ ಗುಡಿ ಇದೆ. ದೇವಸ್ಥಾನದಿಂದ 16 ಕಿಮೀ ದೂರದಲ್ಲಿ ಭಾರ್ಗವೀ ನದಿ ಹರಿಯುತ್ತದೆ. ಬಿಳಿಗಿರಿರಂಗಸ್ವಾಮಿಯ ದೇವಸ್ಥಾನದಿಂದ ಸುಮಾರು 19 ಕಿಮೀ ದೂರದಲ್ಲಿ ಶಿವಸಮುದ್ರದ ಗಂಗರಾಜ ತನ್ನ ಅಳಿಯನಾಗಿ ಕುಂಚುಕೋಟೆಯನ್ನು ನಿರ್ಮಿಸಿದುದಾಗಿ ತಿಳಿಯುತ್ತದೆ. ಈಗಲೂ ಆ ಕೋಟೆಯ ಅವಶೇಷಗಳನ್ನು ನೋಡಬಹುದಾಗಿದೆ. ಬೆಟ್ಟದ ಬುಡದಲ್ಲಿ ಬೃಂದಾವನವೆಂಬ ತುಳಸಮ್ಮನ ಗುಡಿ ಇದೆ. ಮಧ್ಯಭಾಗದಲ್ಲಿ ಕನಕದಾಸರದೆಂದು ಹೇಳಲಾಗುವ ಗುಹೆ ಇದೆ.

ಮೈಸೂರಿನಿಂದ ಸುಮಾರು ತೊಂಬತ್ತು ಕಿ.ಮೀ. ಹಾಗೂ ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿದೆ.

More Images