ಗೋಡೆಗಳಲ್ಲಿ ಹಸೆಯ ಚಿತ್ತಾರ ಅನಾವರಣಗೊಳಿಸಿದ ವಿದ್ಯಾರ್ಥಿಗಳು

ಗೋಡೆಗಳಲ್ಲಿ ಹಸೆಯ ಚಿತ್ತಾರ ಅನಾವರಣಗೊಳಿಸಿದ ವಿದ್ಯಾರ್ಥಿಗಳು

Jan 04, 2017 04:40:32 PM (IST)

ಕಲೆ ಸೃಜನಶೀಲತೆಯ ಪ್ರತಿಬಿಂಬ.ಆದರೆ ದುರಂತವೋ ಏನೋ,ನಮ್ಮ ನಿರ್ಲಕ್ಷ್ಯದಿಂದಲೇ ಇಂದು ಬಹಳಷ್ಟು ಕಲೆಗಳು ಅಳಿವಿನಂಚಿಗೆ ತಲುಪಿವೆ.ಇಂಥ ಕಲೆಗಳಲ್ಲಿ ಅಪ್ಪಟ ಜನಪದೀಯ ಕಲೆ ಹಸೆಯೂ ಒಂದು.

ಆಧುನಿಕತೆಯ ಭರಾಟೆ ಹಾಗೂ ಪೈಪೋಟಿಯಿಂದಾಗಿ ಕಲಾ ಜಗತ್ತಿನಿಂದ ನೇಪಥ್ಯಕ್ಕೆ ಸರಿಯುತ್ತಿರುವ ಹಸೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಕಲಾರಾಧಕರಿಂದ ನಡೆಯುತ್ತಿದೆ. ಇಂಥದ್ದೇ ಒಂದು ಪ್ರಯತ್ನ ಚಿಕ್ಕಮಗಳೂರಿನಲ್ಲಿ ನಡೆಯಿತು.ಇಲ್ಲಿನ ಶಾಂತಿನಿಕೇತನ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಹಸೆಯ ಚಿತ್ತಾರವನ್ನು ಗೋಡೆಗಳಲ್ಲಿ ಅನಾವರಣಗೊಳಿಸುವ ಮೂಲಕ ಕಲಾಜಾಗೃತಿ ಮೂಡಿಸಿದರು. ಚಿಕ್ಕಮಗಳೂರಿನ ಶಾಂತಿನಿಕೇತನ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ವಿನೂತನ ಪ್ರಯೋಗಕ್ಕೆ ಹಾಕಿದ್ದಾರೆ.

ಕುವೆಂಪು ಕಲಾಮಂದಿರದ ಗೋಡೆ, ,ಬೋರ್ಡ್ ಗಳ ಮೇಲೆ ವಿದ್ಯಾರ್ಥಿಗಳು ಹಸೆಯನ್ನು ನಾನಾ ಆಯಾಮಗಳಲ್ಲಿ ಅನಾವರಣಗೊಳಿಸುತ್ತಿದ್ದಾರೆ. ವರ್ಲಿ, ಸೇರಿದಂತೆ ಹಸೆಯ ನಾನಾ ಆಯಾಮಗಳು ವಿದ್ಯಾರ್ಥಿಗಳು ಕೈಚಳಕದಲ್ಲಿ ಮೂಡಿ ಬಂದಿವೆ. ವಿಚಿತ್ರವಾಗಿ ಬರೆದುದೆಲ್ಲಾ ಕಲೆಯಂತಾಗಿರುವ ಇಂದಿನ ಸಂದರ್ಭದಲ್ಲಿ ಶತಮಾನಗಳಷ್ಟು ಇತಿಹಾಸ-ವೈಭವ ಹೊಂದಿರುವ ಹಸೆಯ ಮಹತ್ವ ತಿಳಿಸಿ ಕೊಡುವಂತಹದ್ದೇ ಇದರ ಉದ್ದೇಶ. ವಿದ್ಯಾರ್ಥಿಗಳು ತಮ್ಮ ಮನಸಲ್ಲಿ ಮೂಡಿದ ಭಿನ್ನ ಭಾವಲಹರಿಯನ್ನು ತರೇವಾರಿಯಾಗಿ ಚಿತ್ತಾರಗೊಳಿಸಿದರು. ಜನಪದೀಯ ಕಲೆಯಾದ ಹಸೆ ಉಳಿಯಬೇಕು.ಈ ಹಿನ್ನೆಲೆಯಲ್ಲಿ ಕಲಾ ಜಾಗೃತಿಯಾಗಬೇಕೆನ್ನುವುದು ಅವರ ಆಶಯ. ತಮ್ಮ ಭಾವನೆಗಳ ವಿನಿಮಯಕ್ಕೆ ಜನಪದರು ಅಭಿವ್ಯಕ್ತಿ ಮಾಧ್ಯಮವಾಗಿ ಕಂಡುಕೊಂಡದ್ದೇ ಹಸೆ ಕಲೆ. ಆದರೆ ಕಲೆಯ ಮಹತ್ವ ತಿಳಿಸಿಕೊಡುವುದರಲ್ಲಿ ಆಗಬೇಕಿದ್ದ ಪ್ರಾಮಾಣಿಕ ಪ್ರಯತ್ನಗಳು ವಿಫಲವಾದದ್ದೇ ಈ ಕಲೆ ಸಂಕ್ರಮಣ ಘಟ್ಟ ತಲುಪಲು ಕಾರಣ ಎಂದರೂ ತಪ್ಪಾಗದು.

ಕಲೆ ಎಂದರೆ ಅದು ಕೇವಲ ನಗರ ಪ್ರದೇಶದಲ್ಲಿ ವ್ಯಕ್ತಗೊಳ್ಳುವಂಥ ಮಾಧ್ಯಮ ಎಂಬ ಸರ್ಕಾರದ ಸೀಮಿತ ಪರಿಕಲ್ಪನೆಯಿಂದ ಗ್ರಾಮೀಣ ಭಾಗಗಳಲ್ಲಿನ ಕಲಾವಂತಿಕೆ ಬೆಳಕಿಗೆ ಬರಲೇ ಇಲ್ಲ. ಹಸೆಗೆ ಒದಗಿರುವಂಥ ವಿಷಮ ಪರಿಸ್ಥಿತಿಯೂ ಇದೆ. ಆದರೆ ಇನ್ನೂ ಕಾಲ ಮಿಂಚಿಲ್ಲ. ಸರ್ಕಾರ ಎಚ್ಚೆತ್ತುಕೊಂಡು ಹಸೆಯ ಮಹತ್ವವನ್ನು ಜಗಜ್ಜಾಹೀರುಗೊಳಿಸಿ ಇದನ್ನು ವೈಭವದಿಂದ ಮೆರೆಯುವಂತೆ ಮಾಡಬಹುದೆನ್ನುವುದು ಆಯೋಜಕರ ಅಭಿಪ್ರಾಯ. ಒಟ್ಟಾರೆಯಾಗಿ ನಮ್ಮಲ್ಲಿನ ಕಲಾವಿಹೀನತೆ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ನೇಪಥ್ಯಕ್ಕೆ ಸರಿಯುತ್ತಿರುವ ಕಲೆಗಳ ಪಟ್ಟಿಯಲ್ಲಿ ಕೇವಲ ಹಸೆ ಮಾತ್ರ ಸೇರಿಲ್ಲ. ಇನ್ನು ಅದೆಷ್ಟೋ ಗ್ರಾಮೀಣ ಕಲೆಗಳು ಸರೊಗುತ್ತಿವೆ.ಇಡೀ ಸಂಸ್ಕೃತಿಯ ಜೀವಂತಿಕೆ ಇರುವುದೇ ನಮ್ಮ ಜನಪದದಲ್ಲಿ ಎಂದ್ಹೇಳಿ ಕಂಠಶೋಷಣೆ ಮಾಡಿಕೊಳ್ಳುವುದನ್ನು ಸರ್ಕಾರ ಬಿಡಬೇಕಿದೆ. ಅದೇ ರೀತಿ ಜನಪದದ ಹೃದಯವಂತಿಕೆಯನ್ನೂ ಅರ್ಥೈಸಿಕೊಳ್ಳುವಂಥ ವೈಶಾಲ್ಯತೆಯೂ ನಮ್ಮಲ್ಲಿ ಬೆಳೆಯಬೇಕಿದೆ. ಅದರಲ್ಲೇ ಜನಪದ ಕಾಳಜಿ-ಜನಪದದ ಪುನರುತ್ಥಾನ ಅಡಗಿದೆ. ಇಂಥಹ ತತ್ವ ಸಂದೇಶವನ್ನು ಪ್ರತಿ ಧ್ವನಿಸುವಲ್ಲಿ ಶಾಂತಿನಿಕೇತನ ಕಾಲೇಜಿನ ವಿದ್ಯಾರ್ಥಿಗಳ ಕಲಾಜಾಗೃತಿ ಯಶಸ್ವಿಯಾಯಿತು.

More Images