ಕಾಡಲ್ಲೇ ಹುಟ್ಟಿ ಬೆಳೆದು ನಾಡ ಜನರ ಸೆಳೆಯುತ್ತಿದೆ ಈ ಹೂವು!

ಕಾಡಲ್ಲೇ ಹುಟ್ಟಿ ಬೆಳೆದು ನಾಡ ಜನರ ಸೆಳೆಯುತ್ತಿದೆ ಈ ಹೂವು!

Jan 06, 2020 02:27:26 PM (IST)
ಕಾಡಲ್ಲೇ ಹುಟ್ಟಿ ಬೆಳೆದು ನಾಡ ಜನರ ಸೆಳೆಯುತ್ತಿದೆ ಈ ಹೂವು!

ಕಾಫಿನಾಡಿನ ಭೂಮಿ, ಭೂಲೋಕದ ತೋಟವೆಂದ್ರೆ ತಪ್ಪಲ್ಲ. ನಯನ ಮನೋಹರವಾದ ಈ ತೋಟದಲ್ಲಿ ಕಣ್ಣಿಗೆ ಕಂಡಿದ್ದೆಲ್ಲವೂ ಸುಂದರ. ಇವುಗಳಲ್ಲಿ ಕಾಡುಮಲ್ಲಿಗೆಯೂ ಒಂದು. ಕಾಫಿನಾಡಿನಲ್ಲಿ ಚಳಿಗಾಲದ ವಿಶೇಷ ಅತಿಥಿ ಅಂದ್ರೆ ಅದುವೇ ಕಾಡುಮಲ್ಲಿಗೆ. ಇತರೆ ಪುಪ್ಪಗಳಿಗಿಂತ ತಾನೇನೂ ಕಮ್ಮಿಯಿಲ್ಲವೆಂಬಂತೆ ಇದು ಕೂಡ ತನ್ನ ಸೊಬಗಿನ ಸುವಾಸನೆಯನ್ನ ಸೂಸುತ್ತದೆ.

ಅದರಲ್ಲೂ ಕೆರೆ-ಹಳ್ಳದ ಅಕ್ಕ ಪಕ್ಕ ಮುಗಿಲೆತ್ತರಕ್ಕೆ ಬೆಳೆದು ನಿಂತ ಈ ಕಾಡುಮಲ್ಲಿಗೆಯ ಹೂವಿನ ರಾಶಿ ನೋಡಲು ಮನಸಿಗೆ ಮುದ ನೀಡುತ್ತೆ. ಕಾಡು ಮಲ್ಲಿಗೆಯ ರಾಶಿ ರಾಶಿ ಹೂಗಳು ತೋಟಗಳಲ್ಲಿ ಅರಳಿದ ಪುಷ್ಪಲತೆಗಳಿಗಿಂತ ಭಿನ್ನ ವಿಭಿನ್ನ. ಹಾಲಿನ ನೊರೆಯಂತೆ ಹೊಳೆಯುವ ಈ ಹೂವು ವರ್ಷದ ಒಂದು ತಿಂಗಳು ಮಾತ್ರ ಕಾಣಲು ಸಾಧ್ಯ.ಈ ಕುರಿತು ಒಂದು ವರದಿ ಇಲ್ಲಿದೆ...

ಹೂವೆಂದರೆ ಸೌಂದರ್ಯದ ಕಲಶವಿದ್ದಂತೆ. ಭೇದ-ಭಾವವಿಲ್ಲದ ಸುಂದರ ಲತೆಯಲ್ಲಿ ಸೌಂದರ್ಯ ಮನೆಮಾಡಿರುತ್ತೆ. ಯಾವುದೇ ಹೂವಾದರೂ ತನ್ನ ವಿಭಿನ್ನವಾದ ಸುಂದರ ತಂಪು-ಕಂಪಿನಿಂದ ವಿಶೇಷತೆ ಗಳಿಸಿರುತ್ತೆ. ದಿನಂಪ್ರತಿ ನೀರಾಯಿಸಿ ಪೋಷಿಸೋ ಹೂವಿಗಿಂತ ಈ ಕಾಡುಮಲ್ಲಿಗೆ ಸುಂದರ ಅಂದ್ರೆ ತಪ್ಪಿಲ್ಲ. ಮಲೆನಾಡಿನ ದಟ್ಟಾರಣ್ಯದಲ್ಲಿ ಸಿಗೋ ಈ ಬಿಳಿಯ ಕಾಡುಮಲ್ಲಿಗೆ ಚಳಿಗಾಲದಲ್ಲಿ ಮಾತ್ರ ಅರಳಿ ಜನರನ್ನು ಆಕರ್ಷಿಸುತ್ತೆ. ಕಾಫಿ ತೋಟಗಳ ನಡುವೆ ಅರಳೋ ಈ ಕಾಡುಮಲ್ಲಿಗೆ ಎಲ್ಲಾ ಋತುವಿನಲ್ಲೂ ಅರಳೋಲ್ಲ. ಡಿಸೆಂಬರ್ ತಿಂಗಳಲ್ಲಿ ಮಾತ್ರ ಇದರ ಜನನ. ಪ್ರವಾಸಿಗರಿಗೆ, ದಾರಿಹೋಕರಿಗೆ, ಸೌಂದರ್ಯ ಪ್ರಿಯರ ಮನಸ್ಸಿಗೆ ಈ ಕಾಡುಮಲ್ಲಿಗೆ ಮುದ ನೀಡುತ್ತೆ.

ಈ ಹೂವನ್ನ ಮದ್ರಾಸಿ ಹೂವು ಅಂತಲೂ ಕೆಲವರು ಕರೆಯುತ್ತಾರೆ. ಚಿಕ್ಕಮಗಳೂರಿನ ಹಿರೇಕೊಳಲೆ, ಕೈಮರ, ಮಲ್ಲೇನಹಳ್ಳಿ ಭಾಗದಲ್ಲಿ ಯತ್ತೆಚ್ಚವಾಗಿ ಕಾಣಲಿರೋ ಈ ಕಾಡುಮಲ್ಲಿಗೆ ಹಾಲ್ನೋರೆಯ ಬೆಳ್ಳನೆ ರಾಶಿಯಂತಿದೆ. ಈ ಹೂ ಮಲ್ಲಿಗೆಯಂತೆ ಕಂಡು ಬಂದ್ರೂ ಕೂಡ ಇದು ಮಲ್ಲಿಗೆಯಲ್ಲ. ಸಾವಿರಾರು ಸಂಖ್ಯೆಯಲ್ಲಿ ದಟ್ಟವಾಗಿ ಬೆಳೆದು ನಿಂತಿದ್ರೂ ಪೂಜೆಗೂ ಬಳಸೋಲ್ಲ. ರಸ್ತೆಬದಿಯಲ್ಲಿ ಅಲ್ಲಲ್ಲೇ ಸಾಲಾಗಿ ಅರಳಿ ನಿಂತು ಕಣ್ಣು ಹಾಯಿಸಿದಲ್ಲೆಲ್ಲಾ ಬಿಳಿಯ ಬಣ್ಣ ಚೆಲ್ಲಿದಂತ್ತಿದೆ.

ಈ ಕಾಡು ಮಲ್ಲಿಗೆ ನಿತ್ಯ ಬಳಕೆಯ ಪುಪ್ಪಗಳಂತಲ್ಲ. ಈ ಹೂವನ್ನು ಯಾವುದೇ ಅಲಂಕಾರಕ್ಕೆ ಬಳಸೋಲ್ಲ. ಹೆಣ್ಣುಮಕ್ಕಳು ಮುಡಿಯೋದು ಇಲ್ಲ. ಬೆಳಗ್ಗೆ ಅರಳಿ ಸಂಜೆ ಬಾಡೋ ಈ ಕಾಡುಮಲ್ಲಿಗೆಯ ಜೀವಿತಾವಧಿ ಒಂದೇ ಒಂದು ದಿನಮಾತ್ರವಾಗಿದ್ದು, ಇರುವಷ್ಟು ದಿನ ಜನಮಾನಸದಲ್ಲಿ ಉಳಿಯುವಂತ್ತಾಗಿದೆ. ಒಟ್ಟಾರೆಯಾಗಿ ಅಲ್ಪಾವಧಿಯಲ್ಲೇ ಮಸಣ ಸೇರೋ ಈ ಮಲ್ಲಿಗೆ ಸ್ವರೂಪದ ಲತೆಯು ತನ್ನ ಕಂಪನ್ನು ಸೂಸಿ ಮಿಂಚಿ ಮರೆಯಾದ್ರೂ ಸದಾ ಕಾಲ ಅದರ ಸೌಂದರ್ಯವನ್ನಂತೂ ಇಲ್ಲಿನೋರು ಮರೆಯೋಲ್ಲ. ಪ್ರಕೃತಿ ತಾನು ನೀಡಿದ ಅನೇಕ ವೈಶಿಷ್ಟ್ಯಗಳಲ್ಲಿ ಇದಕ್ಕೂ ತನ್ನದೇ ಆದ ಸ್ಥಾನವನ್ನು ನೀಡಿದೆ ಅನ್ನೋದಂತೂ ಸತ್ಯ.