ಶಿವನಸಮುದ್ರದಲ್ಲೀಗ ಕಾವೇರಿಯ ಜಲ ವೈಭವ...

ಶಿವನಸಮುದ್ರದಲ್ಲೀಗ ಕಾವೇರಿಯ ಜಲ ವೈಭವ...

Lavakumar   ¦    Sep 18, 2017 02:31:35 PM (IST)
ಶಿವನಸಮುದ್ರದಲ್ಲೀಗ ಕಾವೇರಿಯ ಜಲ ವೈಭವ...

ಈಗ ಶಿವನಸಮುದ್ರನತ್ತ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಕಾರಣ ತಮಿಳುನಾಡಿಗೆ ಹರಿಯುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದಲ್ಲದೆ, ಮಳೆಯೂ ಸುರಿಯುತ್ತಿರುವುದರಿಂದ ಇಲ್ಲಿರುವ ಜಲಧಾರೆಗಳಾದ  ಗಗನಚುಕ್ಕಿ, ಭರಚುಕ್ಕಿಗಳ ಭೋರ್ಗರೆದು ಧುಮುಕುತ್ತಾ ಕಣ್ಮನ ಸೆಳೆಯ ತೊಡಗಿವೆ. ಶಿವನಸಮುದ್ರದಲ್ಲಿ ಕಾವೇರಿ ನದಿ  ಸುಮಾರು ನಾನೂರ ಹತ್ತೊಂಬತ್ತು ಅಡಿ ಎತ್ತರದಿಂದ ಕಂದಕಕ್ಕೆ ಧುಮುಕುವುದು ನೋಡುಗರಿಗೆ ವಿಸ್ಮಯ ಮೂಡಿಸುತ್ತದೆ. ಇದೇ ನೀರನ್ನು ಬಳಸಿ ಮೊಟ್ಟ ಮೊದಲಿಗೆ ವಿದ್ಯುತ್ ತಯಾರಿಸಿದ್ದು ಇತಿಹಾಸ.

1896-99ರ ದಿನಗಳು. ಅಂದಿನ ಮೈಸೂರು ರಾಜ್ಯದ ಉಪ ಮುಖ್ಯ ಇಂಜಿನಿಯರ್ ಎ.ಜೆ.ಡಿ.ಲಾಬಿನೀರ್ ಶಿವನಸಮುದ್ರಕ್ಕೆ ಭೇಟಿ ನೀಡಿದ್ದರು.  ಇಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತಗಳು ಮುದ ನೀಡಿದರೂ ಕಾವೇರಿ ನದಿ ರೌದ್ರಾವತಾರ  ತಾಳಿ ಕಂದಕಕ್ಕೆ ಧುಮುಕುತ್ತಿರುವ ದೃಶ್ಯ ನೋಡಿದ ಅವರಿಗೆ ಮನದಲ್ಲಿಯೇ ಬೆಳಕೊಂದು ಮಿಂಚಿತ್ತು.  ಆಗಲೇ ಅವರಿಗೆ ಕಂದಕಕ್ಕೆ ಧುಮುಕುತ್ತಿರುವ ನೀರಿನಿಂದ  ವಿದ್ಯುತ್ ತಯಾರಿಸುವ ಆಲೋಚನೆ ತಲೆಯಲ್ಲಿ ಗಿರಕಿಹೊಡೆದಿತ್ತು.  ಅಲ್ಲಿಂದ ಮೈಸೂರಿಗೆ ಹೋದವರೇ ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಭೇಟಿಯಾಗಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ಇದನ್ನು ಕೇಳಿದ ಒಡೆಯರ್ಗೆ ಉತ್ಸಾಹ ಮೂಡಿತ್ತು. ನಮ್ಮ ರಾಜ್ಯದಲ್ಲಿ ನೀರಿನಿಂದ ವಿದ್ಯುತ್ ತಯಾರಿಸಿ ಬೆಳಕು ಪಡೆಯುವುದೆಂದರೆ ಅದಕ್ಕಿಂತ ಸಂತೋಷ ಮತ್ತೇನಿದೆ? ಕೂಡಲೇ ಅವರು ಹಸಿರು ನಿಶಾನೆ ತೋರಿದರು.

ಇದೇ ಸಂದರ್ಭ ಇಂಜಿನಿಯರ್ ಲಾಬಿನೀರ್ಗೆ  ಅಂದಿನ ದಿವಾನರಾಗಿದ್ದ ಸರ್.ಕೆ.ಶೇಷಾದ್ರಿ ಅಯ್ಯರ್ ಮಾರ್ಗದರ್ಶನ ನೀಡಿ ಏನು ಬೇಕೋ ಅದನ್ನೆಲ್ಲಾ ಒದಗಿಸುವ ಮೂಲಕ ಪ್ರೋತ್ಸಾಹಿಸಿದರು. ವಿದ್ಯುತ್ ಯೋಜನೆ ಸ್ಥಾಪನೆಯ ಕಾಮಗಾರಿ ಆರಂಭಗೊಂಡು ಭರದಿಂದ ಸಾಗತೊಡಗಿತು. ವಿದ್ಯುತ್ ಘಟಕ ಸ್ಥಾಪನೆಗೆ ಅಗತ್ಯವಿರುವಂತಹ ಯಂತ್ರೋಪಕರಣಗಳು ದೂರದ ಬ್ರಿಟನ್ ಹಾಗೂ ಅಮೆರಿಕಾದಿಂದ ತರಿಸಿಕೊಳ್ಳಲಾಯಿತು. ಬಳಿಕ ಅವುಗಳನ್ನು ಆನೆ, ಕುದುರೆ, ಎತ್ತಿನಬಂಡಿ ಮೂಲಕ ಆಳವಾದ ಕಂದಕಕ್ಕೆ ಇಳಿಜಾರು ಮಾರ್ಗದಲ್ಲಿ ಕೊಂಡೊಯ್ದು ಜೋಡಿಸುವ ಮೂಲಕ ಸುಮಾರು ಏಳುನೂರು ಕಿಲೋವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ನಿರ್ಮಿಸಲಾಯಿತು. ಇದು ಏಷ್ಯಾದಲ್ಲಿಯೇ ಪ್ರಪ್ರಥಮ ಜಲವಿದ್ಯುತ್ ಘಟಕ ಎಂಬ ಹೆಗ್ಗಳಿಕೆಗೂ  ಪಾತ್ರವಾಯಿತು.

ಈ ಜಲವಿದ್ಯುತ್ ಘಟಕಕ್ಕೆ  1902ರ ಜೂನ್ 30ರಂದು ಅಂದಿನ ಮೈಸೂರು ರೆಸಿಡೆಂಟ್ ಜನರಲ್ ಡೋನಾಲ್ಡ್ ರಾಬರ್ಟ್ ನ್ ಅವರು  ಚಾಲನೆ ನೀಡಿದರು. ಅಲ್ಲಿಂದ ಕೋಲಾರದ ಚಿನ್ನದ ಗಣಿಗೆ ಸುಮಾರು 35 ಕಿಲೋ ವೋಲ್ಟ್ ಸಾಮರ್ಥ್ಯದ  148 ಕಿ.ಮೀ. ಉದ್ದದ ಮಾರ್ಗಕ್ಕೆ ರಾಬರ್ಟ್ಸ್ ನ್ ಅವರು ಪತ್ನಿ ಶ್ರೀಮತಿ ರಾಬರ್ಟ್ ಅವರು ಚಾಲನೆ ನೀಡಿದರು. ಈ ಸಂಪರ್ಕ ಜಗತ್ತಿನಲ್ಲಿಯೇ ಅತಿ ಉದ್ದದ ಪ್ರಸರಣ ಮಾರ್ಗ ಎಂಬ ಖ್ಯಾತಿ ಪಡೆಯಿತು. ಆ ನಂತರದ ವರ್ಷಗಳಲ್ಲಿ ಈ ವಿದ್ಯುತ್ ಘಟಕ ಆಧುನೀಕರಣಗೊಂಡು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಾ ಸಾಗಿತು.

1905ರಲ್ಲಿ ಬೆಂಗಳೂರಿಗೂ  ಹಾಗೂ 1908ರಲ್ಲಿ ಮೈಸೂರಿಗೂ ಈ ಕೇಂದ್ರದಿಂದ ವಿದ್ಯುತ್ ಸಂಪರ್ಕವನ್ನು ಒದಗಿಸುವ ಮೂಲಕ ಕತ್ತಲೆಯಲ್ಲಿ ಮುಳುಗಿದ್ದ  ನಗರಗಳು ಬೆಳಕು ಕಂಡವು. ಮುಂದೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಶಿವನಸಮುದ್ರದಲ್ಲಿ ಹೆಚ್ಚಿನ ವಿದ್ಯುತ್ ಘಟಕಗಳನ್ನು ಸ್ಥಾಪಿಸುತ್ತಾ ಹೋಗಲಾಯಿತು. ಇದು ವಿದ್ಯುತ್ ಉತ್ಪಾದನೆಯ ಕಥೆಯಾದರೆ ಇಲ್ಲಿರುವ ಜಲಧಾರೆಗಳಂತು ಮನಮೋಹಕವಾಗಿದೆ.

ಎರಡು ಜಲಧಾರೆಗಳು ಕೆಲವೇ ಕೆಲವು ಕಿಲೋಮೀಟರ್ ದೂರದ ಅಂತರದಲ್ಲಿದ್ದರೂ ಇವು ಬೇರೆ, ಬೇರೆ ಜಿಲ್ಲೆಗಳಿಗೆ ಸೇರಿವೆ. ಭರಚುಕ್ಕಿ ಚಾಮರಾಜನಗರಕ್ಕೆ ಸೇರಿದರೆ, ಗಗನಚುಕ್ಕಿ ಮಂಡ್ಯ ಜಿಲ್ಲೆಗೆ ಸೇರಿದೆ. ಈ ಜಲಧಾರೆಗಳು ನಯನ ಮನೋಹರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ವಿದ್ಯುತ್ ಉತ್ಪಾದನಾ ಘಟಕವನ್ನು ನೋಡಲು ಮುಗಿ ಬೀಳುತ್ತಾರೆ. ಹೀಗಾಗಿ ಈ ವಿದ್ಯುತ್ ಉತ್ಪಾದನಾ ಘಟಕಗಳನ್ನು ವೀಕ್ಷಿಸಲೆಂದೇ ಟ್ರಾಲಿಗಳನ್ನು ನಿರ್ಮಿಸಲಾಗಿದೆ. ಬ್ರಿಟಿಷರು ಶಿವನಸಮುದ್ರ ವಿದ್ಯುತ್ ಉತ್ಪಾದನಾ ಘಟಕವನ್ನು ಬ್ಲಫ್ ಎಂಬ ಹೆಸರಿನಿಂದ ಕರೆಯುತ್ತಿದ್ದರು.

ಶಿವನಸಮುದ್ರಕ್ಕೆ ಬೆಂಗಳೂರಿನಿಂದ ಬರುವುದಾದರೆ ರಾಮನಗರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಮೂಲಕ ಹಾಗೂ ಮೈಸೂರಿನಿಂದ ಬನ್ನೂರು, ಮಳವಳ್ಳಿ ಅಥವಾ ಚಾಮರಾಜನಗರ, ಕೊಳ್ಳೆಗಾಲ ಮೂಲಕವೂ ಬರಬಹುದು. ಶಿವನಸಮುದ್ರಕ್ಕೆ ತೆರಳುವ ಪ್ರವಾಸಿಗರು ಇಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಧಾರೆಗಳನ್ನು ದೂರದಿಂದ ನೋಡಿ ಹಿಂತಿರುಗಿದರೆ ಕ್ಷೇಮ. ಅದು ಬಿಟ್ಟು ಜಲಧಾರೆಯ ಸೌಂದರ್ಯಕ್ಕೆ ಮನಸೋತು ಜಲಧಾರೆಯಲ್ಲಿ ಈಜುವ, ಸ್ನಾನ ಮಾಡುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲ

More Images