ಡೋರ್ನಹಳ್ಳಿಯಲ್ಲಿ ವಿಜೃಂಭಣೆಯ ಅಂತೋಣಿ ಜಾತ್ರಾ ಮಹೋತ್ಸವ

ಡೋರ್ನಹಳ್ಳಿಯಲ್ಲಿ ವಿಜೃಂಭಣೆಯ ಅಂತೋಣಿ ಜಾತ್ರಾ ಮಹೋತ್ಸವ

LK   ¦    Jun 14, 2017 12:40:13 PM (IST)

ಕೆ.ಆರ್.ನಗರ: ವಿಶ್ವವಿಖ್ಯಾತ ಪವಾಡ ಪುರುಷ ಸಂತ ಅಂತೋಣಿಯವರ ಜಾತ್ರಾ ಮಹೋತ್ಸವವು ತಾಲೂಕಿನ ಡೋರ್ನಹಳ್ಳಿಯಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

ಪ್ರತಿ ವರ್ಷ ಜೂನ್ ಮಾಹೆಯಲ್ಲಿ ನಡೆಯುವ ಜಾತ್ರೆಗೆ ಕ್ರೈಸ್ತ ಧರ್ಮದವರು ಸೇರಿದಂತೆ ಹಿಂದೂ ಮತ್ತು ಮುಸಲ್ಮಾನರು ಸೇರಿದಂತೆ ಸರ್ವ ಧರ್ಮದವರೂ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಹರಕೆ ಒಪ್ಪಿಸುವುದು ಕಳೆದ ಎರಡು ಶತಮಾನಗಳಿಂದ ನಡೆದುಕೊಂಡು ಬಂದಿದ್ದು, ಅದೇ ರೀತಿ ದೇಶದ ವಿವಿಧ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಭಕ್ತಾಧಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಜಾತ್ರೋತ್ಸವ ಕಾರ್ಯಕ್ರಮಕ್ಕೆ ಕೇರಳ, ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಪ್ರಾರ್ಥನೆ ಹಾಗೂ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಚರ್ಚ್ ಒಳಭಾಗದಲ್ಲಿರುವ ಸಂತ ಅಂತೋಣಿಯವರ ಪ್ರತಿಮೆಯ ಮುಂಭಾಗ ಮೇಣದ ಬತ್ತಿಯನ್ನು ಹಚ್ಚಿ ತಮ್ಮಗಳ ಕಷ್ಟಗಳನ್ನು ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.

ಧರ್ಮಗುರುಗಳಾದ ಡಾ. ಆರ್.ಆರೋಗ್ಯಸ್ವಾಮಿ ಮಾತನಾಡಿ ಸಂತ ಅಂತೋಣಿಯವರ ಮಹೋತ್ಸವವು ಕ್ರೈಸ್ತ ಧರ್ಮಿಯರಿಗೆ ಸೇರಿದ್ದರೂ ಕೂಡ ಈ ಕಾರ್ಯಕ್ರಮಕ್ಕೆ ಇತರೆ ಧರ್ಮಿಯರು ಪಾಲ್ಗೊಳ್ಳುವುದು ಇಲ್ಲಿನ ವಿಶೇಷವಾಗಿದೆ ಎಂದರಲ್ಲದೆ, ರಾತ್ರಿ  ಸಂತ ಅಂತೋಣಿಯವರ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು. ಜಾತ್ರಾ ಮಹೋತ್ಸವಕ್ಕೆ ಪಶ್ಚಿಮ ಬಂಗಾಳದ ಅಸನ್ಸೋಲ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ.ಸಿ.ಪ್ರಿಯನ್ ಮೊನಿಸ್, ಜಂಗಲ್ಪೇಟ್ ಧರ್ಮಕ್ಷೇತ್ರ ಗುರುಮಠದ ನಿರ್ದೇಶಕ ಗುರು ಯೇಸು ಅಂತೋಣಿ, ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಟಿ.ಅಂತೋಣಿಸ್ವಾಮಿ ಹಾಗೂ ಸಮಾಜದ ಇನ್ನಿತರ ಮುಖಂಡರು ಮತ್ತು ಸುತ್ತಮುತ್ತಲ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಸೇರಿ ವಿಜೃಂಭಣೆಯಿಂದ ನಡೆಯಿತು.