ಹಾಲ್ನೊರೆಯುಕ್ಕಿಸುವ ಹಾಲೇರಿ ಜಲಧಾರೆ!

ಹಾಲ್ನೊರೆಯುಕ್ಕಿಸುವ ಹಾಲೇರಿ ಜಲಧಾರೆ!

LK   ¦    Jul 11, 2018 10:10:04 AM (IST)
ಹಾಲ್ನೊರೆಯುಕ್ಕಿಸುವ ಹಾಲೇರಿ ಜಲಧಾರೆ!

ಈ ಬಾರಿಯ ಮುಂಗಾರು ಮಳೆ ಕೊಡಗಿನಲ್ಲಿ ಹೊಸ ಭಾಷ್ಯವನ್ನೇ ಬರೆದಿದೆ. ಕಳೆದ ವರ್ಷಕ್ಕಿಂತ ಎರಡರಷ್ಟು ಸುರಿದ ಮಳೆಗೆ ಬೆಟ್ಟಗುಡ್ಡ, ತೋಟಗಳ, ರಸ್ತೆ ಬದಿಯಲ್ಲಿದ್ದ ಜಲಧಾರೆಗಳೆಲ್ಲವೂ ಭೋರ್ಗರೆದು ಧುಮುಕುತ್ತಿದ್ದು ಚೇತೋಹಾರಿ ದೃಶ್ಯಗಳನ್ನು ಕಣ್ಣಿಗೆ ಕಟ್ಟುತ್ತಿವೆ.

ಮಳೆ ಎಡೆಬಿಡದೆ ಸುರಿದ ಪರಿಣಾಮ ಸೊರಗಿ ಹೋಗಿದ್ದ ಸಣ್ಣಪುಟ್ಟ ಜಲಧಾರೆಗಳೆಲ್ಲವೂ ಮೈಕೈ ತುಂಬಿಕೊಂಡ ಚೆಲುವೆಯಂತೆ ಕಂಗೊಳಿಸುತ್ತಿದೆ. ಮಳೆ ಸುರಿದಾಗ ಪ್ರಕೃತಿಯಲ್ಲಿ ಪುಳಕ ಸಾಮಾನ್ಯ. ಇಂತಹ ಸಮಯದಲ್ಲಿ ಕಾಡಿನ ನಡುವಿನ ಹಸಿರನ್ನೊದ್ದ ಗಿಡ ಮರಗಳ ನಡುವಿನ ಜಲಧಾರೆಯನ್ನರಸುತ್ತಾ ತೆರಳುವ ಮಜಾವೇ ಮಜಾ. ಮಳೆ ನೀರಹನಿಯಲ್ಲಿ ತೋಯ್ದು ನಿಸರ್ಗ ಗೀತೆ ಹಾಡುತ್ತಿದ್ದರೆ ಅದನ್ನು ಅನುಭವಿಸುತ್ತಾ ಹೆಜ್ಜೆ ಹಾಕುವುದು ಮರೆಯಲಾರದ ಅನುಭವ.

ಕೊಡಗಿನಲ್ಲಿ ಸೃಷ್ಠಿಯಾಗಿರುವ ಜಲಧಾರೆಗಳ ಪೈಕಿ ಹೆಚ್ಚಿನವು ಅಲ್ಪಾಯುಷಿಗಳು. ಮಳೆಗಾಲದಲ್ಲಿ ಅದು ಧಾರಾಕಾರ ಮಳೆ ಸುರಿದಾಗ ಮಾತ್ರ ಸೃಷ್ಠಿಯಾಗುವ ಜಲಧಾರೆಗಳು. ಇವು ಕಾಡಿನ ನಡುವೆ, ಬೆಟ್ಟದ ಮೇಲೆ ಹೀಗೆ ಎಲ್ಲೆಲ್ಲೋ ಇರುವುದರಿಂದಾಗಿ ಅವುಗಳತ್ತ ಹೆಜ್ಜೆ ಹಾಕಿದರಷ್ಟೆ ಅವುಗಳ ಸೊಬಗು ನೋಡಲು ಸಾಧ್ಯ.

ಇಂತಹ ಜಲಧಾರೆಗಳ ನಡುವೆ ಮಡಿಕೇರಿಗೆ ಸುಮಾರು 10ಕಿ.ಮೀ ದೂರದಲ್ಲಿರುವ ಹಾಲೇರಿ ಜಲಧಾರೆಯೂ ಒಂದಾಗಿದೆ. ಮಡಿಕೇರಿ-ಮೈಸೂರು ಹೆದ್ದಾರಿಯಲ್ಲಿರುವ ಸುಮಾರು ಒಂಬತ್ತು ಕಿ.ಮೀ. ದೂರದಲ್ಲಿರುವ ಕೆದಕಲ್‍ನಿಂದ ಎಡಕ್ಕೆ ಹಾಲೇರಿಗೆ ತೆರಳುವ ರಸ್ತೆಯಲ್ಲಿ ಒಂದು ಕಿ.ಮೀ.ನಷ್ಟು ತೆರಳಿ ಅಲ್ಲಿಂದ ಮೋದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯತ್ತ ತಿರುಗಿದರೆ ಜಲಧಾರೆ ಎದುರಾಗುತ್ತದೆ. ಸುಮಾರು ಐವತ್ತು ಅಡಿ ಎತ್ತರದಿಂದ ಕಲ್ಲುಬಂಡೆಗಳ ಮೇಲಿನಿಂದ ಧುಮುಕುವ ಈ ಜಲಪಾತ ಪುಟ್ಟದಾದರೂ ಅದ್ಭುತವಾಗಿದೆ.

ಕಾಫಿ ತೋಟದ ನಡುವೆ ಹೆಬ್ಬಂಡೆ ಮೇಲಿನಿಂದ ಎರಡು ಹಂತದಲ್ಲಿ ಧುಮುಕುವ ಜಲಧಾರೆ. ಮೊದಲಿಗೆ ಐವತ್ತು ಅಡಿ ಎತ್ತರದಿಂದ ರಭಸದಿಂದ ಧುಮುಕುತ್ತದೆಯಾದರೂ ಬಳಿಕ ಹತ್ತು ಅಡಿ ಎತ್ತರದಿಂದ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುತ್ತದೆ.

ಸಾಮಾನ್ಯವಾಗಿ ಸಮೀಪದ ತೋಟಕ್ಕೆ ಕೆಲಸಕ್ಕೆ ಬರುವ ಕಾರ್ಮಿಕರು ಹೊರತುಪಡಿಸಿದರೆ ಹೆಚ್ಚಿನವರು ಯಾರೂ ಇದರತ್ತ ಸುಳಿಯುವುದಿಲ್ಲ. ಹೀಗಾಗಿ ಮಳೆಗಾಲದಲ್ಲಿ ಮಳೆ ಸುರಿದಾಗ ತನ್ನ ಚೆಲುವನ್ನು ಪ್ರದರ್ಶಿಸಿ ಬೇಸಿಗೆ ಬರುತ್ತಿದ್ದಂತೆ ಹೆಬ್ಬಂಡೆಯಲ್ಲೇ ಲೀನವಾಗಿ ಬಿಡುತ್ತದೆ. ಇದನ್ನು ನೋಡಬೇಕಾದರೆ ಮಳೆಗಾಲದಲ್ಲೇ ತೆರಳುವುದು ಅನಿವಾರ್ಯವಾಗಿದೆ.

More Images