ನಾಗಪೂಜೆಯ ನಾಡು ಕುಕ್ಕೆ ಸುಬ್ರಹ್ಮಣ್ಯ

ನಾಗಪೂಜೆಯ ನಾಡು ಕುಕ್ಕೆ ಸುಬ್ರಹ್ಮಣ್ಯ

B.M.Lavakumar   ¦    Dec 12, 2018 05:24:55 PM (IST)
ನಾಗಪೂಜೆಯ ನಾಡು ಕುಕ್ಕೆ ಸುಬ್ರಹ್ಮಣ್ಯ

ಡಿಸೆಂಬರ್ 13 ಚಂಪಾಷಷ್ಠಿ ಹೀಗಾಗಿ ಎಲ್ಲೆಲ್ಲ ಸುಬ್ರಹ್ಮಣ್ಯ ಸ್ವಾಮಿಯ ದೇಗುಲವಿದೆಯೋ ಅಲ್ಲೆಲ್ಲ ವಿಶೇಷ ಪೂಜೆ, ರಥೋತ್ಸವವಗಳು ನಡೆಯುತ್ತದೆ. ಸಾಮಾನ್ಯವಾಗಿ ಸುಬ್ರಹ್ಮಣ್ಯ ದೇಗುಲ ಎಂದಾಗ ನಮ್ಮ ಕಣ್ಣ ಮುಂದೆ ಹಾದು ಬರುವುದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ಸೇರಿದೆ ಸುಬ್ರಹ್ಮಣ್ಯ ಕ್ಷೇತ್ರ.

ಇಲ್ಲಿಗೆ ಭೇಟಿ ನೀಡುವವರಿಗೆ ಸುತ್ತಲೂ ಹಸಿರು ಹಚ್ಚಡವನ್ನೊದ್ದು ಮುಗಿಲೆತ್ತರಕ್ಕೇರಿ ನಿಂತ ಪರ್ವತಶ್ರೇಣಿಗಳು... ಅವುಗಳ ನಡುವಿನಲ್ಲಿ ತೂಗಿ ತೊನೆಯುವ ತೆಂಗು ಅಡಿಕೆ ತೋಟಗಳು... ಝುಳು ಝುಳು ನಿನಾದಗೈಯ್ಯುತ್ತಾ ಹರಿವ ಕುಮಾರಧಾರಾ ನದಿ... ದೇಗುಲದಿಂದ ಅಲೆಅಲೆಯಾಗಿ ಹೊರಹೊಮ್ಮುವ ಗಂಟೆಯ ನಿನಾದ... ಕಿವಿಗೆ ಅಪ್ಪಳಿಸುವ ಚಂಡೆಯ ಸದ್ದು... ಭಕ್ತಿ ಭಾವದಿಂದ ಸುಬ್ರಹ್ಮಣ್ಯನಿಗೆ ನಮಿಸುವ ಭಕ್ತರು... ಹೀಗೆ ಸುಂದರ, ರಮಣೀಯ ದೃಶ್ಯಗಳು ಕಾಣಸಿಗುತ್ತವೆ.

ಪರಮಪವಿತ್ರ ಕ್ಷೇತ್ರ, ಪ್ರವಾಸಿ ತಾಣವೂ ಆಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಕೊಡಗು, ಹಾಸನ ಜಿಲ್ಲೆಗಳಿಗೆ ಹೊಂದಿಕೊಂಡಂತಿರುವ ಈ ಕ್ಷೇತ್ರದ ಪೂರ್ವಕ್ಕೆ ಸಹ್ಯಾದ್ರಿ ಶ್ರೇಣಿಯ ಕುಮಾರ ಪರ್ವತ, ಶೇಷ ಪರ್ವತ ಹಾಗೂ ಸಿದ್ದ ಪರ್ವತಗಳಿದ್ದು, ದಟ್ಟ ಕಾಡನ್ನು ಹೊಂದಿ ತನ್ನದೇ ಆದ ನಿಸರ್ಗ ರಮಣೀಯತೆಯಿಂದ ಎಲ್ಲರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಇಲ್ಲಿಗೆ ಕೇವಲ ಸ್ವಾಮಿ ಸುಬ್ರಹ್ಮಣ್ಯನ ದರ್ಶನ ಮಾಡಲು ಮಾತ್ರ ಭಕ್ತರು ಬರುವುದಲ್ಲದೆ, ಚಾರಣ ಮಾಡಲು ಕೂಡ ಪ್ರವಾಸಿಗರು ಆಗಮಿಸುತ್ತಾರೆ.

ಸುಬ್ರಹ್ಮಣ್ಯ ಕ್ಷೇತ್ರವು ವರ್ಷದ ಎಲ್ಲಾ ದಿನಗಳಲ್ಲಿಯೂ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ.

ಸಾಮಾನ್ಯವಾಗಿ ಚಂಪಾಷಷ್ಠಿಯಂದು ಎಲ್ಲಿ ಸುಬ್ರಹ್ಮಣ್ಯ ದೇಗುಲವಿದೆಯೋ ಅಲ್ಲೆಲ್ಲಾ ವಿಶೇಷ ಪೂಜೆಗಳು ನಡೆಯುತ್ತವೆ. ಅಷ್ಟೇ ಅಲ್ಲ ಅಶ್ವತ್ಥ ಕಟ್ಟೆಯಲ್ಲಿ ಸರ್ಪಾಕಾರದ ವಿಗ್ರಹವನ್ನಿಟ್ಟು ಸುಬ್ರಹ್ಮಣ್ಯ ಸ್ವಾಮಿಯನ್ನು ಆವಾಹನೆ ಮಾಡಿ ಹಾಲೆರೆದು ಅಭಿಷೇಕ ಮಾಡಿ ಪಾಯಸದ ನೈವೇದ್ಯ ಅರ್ಪಿಸಿ ಅಂದು ಉಪವಾಸ ವೃತವನ್ನು ಆಚರಿಸಲಾಗುತ್ತದೆ.

ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರವು ನಾಗಪೂಜೆಗೆ ಹೆಸರುವಾಸಿಯಾಗಿದೆ. ವಲ್ಮೀಖ ಅರ್ಥಾತ್ ಹುತ್ತ ಇಲ್ಲಿನ ಆರಾಧ್ಯ ದೈವ. ಅಲ್ಲಿಂದ ತೆಗೆದ ಮಣ್ಣು ಪ್ರಸಾದವಾಗಿದೆ. ಸರ್ಪದೋಷಕ್ಕೊಳಗಾದವರು ಇಲ್ಲಿ ಸರ್ಪ ಸಂಸ್ಕಾರ ಮಾಡಿ ತಮ್ಮ ಪಾಪ ಕಳೆದು ಕೊಳ್ಳುತ್ತಾರೆ.

ಸುಬ್ರಹ್ಮಣ್ಯ ದೇವಾಲಯವು ಸುಮಾರು ಎಂಟನೆಯ ಶತಮಾನದ್ದು ಎನ್ನಲಾಗಿದೆ. ಇಲ್ಲಿ ನರಸಿಂಹ, ಉಮಾಮಹೇಶ್ವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆಯಾದರೂ ಸುಬ್ರಹ್ಮಣ್ಯನೇ ಆದಿದೈವನಾಗಿದ್ದಾನೆ.

ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯನನ್ನು ನಾಗ(ಸರ್ಪ) ರೂಪದಲ್ಲಿ ಪೂಜಿಸಲಾಗುತ್ತಿದೆ. ಸರ್ಪದೋಷದಿಂದ ಬಳಲುವವರು ಇಲ್ಲಿ ಎರಡು ದಿನಗಳ ಕಾಲ ತಂಗಿ ಸೇವೆ ಕೈಗೊಂಡರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿಯೇ ನಾಗಪೂಜೆಯ ನಾಡಾಗಿ ಪ್ರಸಿದ್ಧಿ ಹೊಂದಿದೆ.

ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಮುಖ್ಯ ದ್ವಾರದ ಎದುರಿಗೆ ಸುಬ್ರಹ್ಮಣ್ಯ ಸ್ವಾಮಿಯ ಗರ್ಭಗುಡಿಯಿದೆ. ಈ ಗರ್ಭಗೃಹ ಮತ್ತು ನೂತನವಾಗಿ ಕಟ್ಟಲ್ಪಟ್ಟ ಮುಖಮಂಟಪದ ಮಧ್ಯದಲ್ಲಿ ಗರುಡ ಕಂಬವಿದೆ. ಈ ಗರುಡ ಕಂಬವನ್ನು ಗರುಡ ಮಂತ್ರವನ್ನು ಮಂತ್ರಿಸಿ ವಾಸುಕಿಯ ಉಸಿರಾಟದ ವಿಷಬಾಧೆ ತಟ್ಟಬಾರದೆಂಬ ಉದ್ದೇಶದಿಂದ ನಿರ್ಮಿಸಿರುವುದಾಗಿ ಹೇಳಲಾಗಿದೆ.

ಇನ್ನು ದೇವಾಲಯದಿಂದ ಉತ್ತರ ಭಾಗಕ್ಕೆ ತೆರಳಿದರೆ ಇಲ್ಲಿ ನಾವು ಹಲವು ಲಿಂಗಗಳನ್ನು ಕಾಣಬಹುದು. ದೇವಸ್ಥಾನದಿಂದ ಅನತಿ ದೂರದಲ್ಲಿ ಆದಿಸುಬ್ರಹ್ಮಣ್ಯನ ದೇವಾಲಯವಿದೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದವರು ಇಲ್ಲಿಗೆ ತೆರಳಿ ದರ್ಶನ ಮಾಡದೆ ಮರಳುವಂತಿಲ್ಲ. ಇಲ್ಲೊಂದು ಬೃಹತ್ ವಲ್ಮಿಕ(ಹುತ್ತ) ಇದ್ದು, ಅಲ್ಲಿಂದ ತೆಗೆದ ಮಣ್ಣನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಸುಬ್ರಹ್ಮಣ್ಯ ದೇವಾಲಯದ ಸುತ್ತ ಹಲವು ದೇವಾಲಯಗಳನ್ನು ನಾವು ಕಾಣಬಹುದಾಗಿದೆ.

ದೇವಾಲಯದ ಮಹಾದ್ವಾರದ ಎದುರಿಗೆ ಕಂಡುಬರುವ ಚಿಕ್ಕ ಹೊಳೆಯನ್ನು ದರ್ಪಣತೀರ್ಥ ಎಂದು ಕರೆಯಲಾಗುತ್ತದೆ. ಇದು ಉತ್ತರದಿಂದ ದಕ್ಷಿಣಕ್ಕೆ ಸುಮಾರು ಒಂದು ಮೈಲಿಗೂ ಹೆಚ್ಚು ದೂರ ಹರಿದು ಮತ್ಸ್ಯ ತೀರ್ಥವನ್ನು ಸೇರುತ್ತದೆ.

ಸುಬ್ರಹ್ಮಣ್ಯ ದೇವಾಲಯದಿಂದ ಕೆಲವೇ ದೂರದಲ್ಲಿ ಕಾಶಿಕಟ್ಟೆಯಿದ್ದು, ಇಲ್ಲಿ ಆಂಜನೇಯ ಹಾಗೂ ಗಣಪತಿ ದೇವರುಗಳ ದೇವಾಲಯ ಹಾಗೂ ಬೃಹತ್ ಅಶ್ವತ್ಥ ಕಟ್ಟೆಯನ್ನೂ ಕಾಣಬಹುದು. ತೇರು ಬೀದಿಯ ಉತ್ತರಕ್ಕೆ ದ್ವೈತ ಸಂಪ್ರದಾಯದ ಉತ್ತರಾದಿಮಠವಿದ್ದು, ಇಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ದೇವಾಲಯದಿಂದ ಕುಮಾರಧಾರಾ ನದಿಯತ್ತ ಸಾಗುವಾಗ ದಾರಿ ಮಧ್ಯೆ ಕಂಡು ಬರುವ ಬಿಲದ್ವಾರ ಪವಿತ್ರಕ್ಷೇತ್ರವಾಗಿದೆ. ಸುಬ್ರಹ್ಮಣ್ಯ ಕೇತ್ರದಲ್ಲಿ ಹರಿಯುವ ಕುಮಾರಧಾರಾ ನದಿ ಪವಿತ್ರವಾಗಿದ್ದು, ಇದು ಭೂಮಿಯ ಒಡಲಾಳದಿಂದ ಉಕ್ಕಿಹರಿದ ಎಲ್ಲಾ ತೀರ್ಥಗಳ ಸಾರವನ್ನು ಹೊಂದಿದೆ ಎಂದು ನಂಬಲಾಗಿದೆ.

More Images