ಪುತ್ತೂರು ಒಡೆಯನಿಗೆ ಭವ್ಯ ರಾಜಗೋಪುರ

ಪುತ್ತೂರು ಒಡೆಯನಿಗೆ ಭವ್ಯ ರಾಜಗೋಪುರ

Lokesh Gowda   ¦    Feb 27, 2018 02:45:56 PM (IST)
ಪುತ್ತೂರು ಒಡೆಯನಿಗೆ ಭವ್ಯ ರಾಜಗೋಪುರ

800 ವರ್ಷಗಳ ಹಿಂದೆ ನಿರ್ಮಾಣವಾದ ಪುತ್ತೂರಿನ ಸೀಮೆ ದೇಗುಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಭವ್ಯ ರಾಜಗೋಪುರ ನಿರ್ಮಾಣಗೊಂಡಿದೆ. ಹತ್ತೊರೊಡೆಯ ಎಂದೇ ಖ್ಯಾತಿ ಪಡೆದಿರುವ ಪುತ್ತೂರಿನ ಮಹಾದೇವನಿಗೆ ಈ ವರ್ಷದ ಜಾತ್ರೋತ್ಸವ ರಾಜಗೋಪುರದ ರಾಜವೈಭವದ ಜತೆ ನಡೆಯಲಿರುವುದರೊಂದಿಗೆ ರಾಜಗೋಪುರದ ಐದು ದ್ವಾರಗಳಲ್ಲೂ ಸೂರ್ಯನ ರಶ್ಮಿ.ಮೂಡುತ್ತಿರುವುದು ವಿಶೇಷತೆಯಲ್ಲೂ ವಿಶೇಷ ಕಾಣುತ್ತಿದೆ.

ರೂ. 1 ಕೋಟಿ ವೆಚ್ಚದಲ್ಲಿ ಕೇವಲ ಭಕ್ತರ ದೇಣಿಗೆಯಿಂದಲೇ ನಿರ್ಮಾಣಗೊಂಡಿರುವ ಗಗನಚುಂಬಿ ರಾಜಗೋಪುರದ ನಿರ್ಮಾಣ ಕಾರ್ಯ ಕೇವಲ ಹತ್ತು ತಿಂಗಳ ಅವಧಿಯಲ್ಲಿ ಪೂರ್ಣಗೊಂಡಿದ್ದು, ಮಾರ್ಚ್ ತಿಂಗಳ 25ಕ್ಕೆ ಉದ್ಘಾಟನೆಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇತಿಹಾಸಕಾರರ ಪ್ರಕಾರ 12ನೇ ಶತಮಾನದಲ್ಲಿ ನಿರ್ಮಾಣಗೊಂಡ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಿಶಾಲ ಗದ್ದೆಯ ಪಶ್ಚಿಮ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣವಾದ ದೇವಾಲಯ ತನ್ನ ಪಶ್ಚಿಮದಲ್ಲಿ ಪವಿತ್ರ ಪುಷ್ಕರಿಣಿ ಹೊಂದಿದ್ದು, ಮೂಡಣ ದಿಕ್ಕಿನಲ್ಲಿ ಅಪೂರ್ವ ರುದ್ರಭೂಮಿ ಹೊಂದಿದೆ. 800 ವರ್ಷಗಳ ಇತಿಹಾಸದಲ್ಲಿ ಇಲ್ಲಿ ರಾಜಗೋಪುರ ನಿರ್ಮಾಣವಾಗಿರಲಿಲ್ಲ. 2010ರ ಮಾರ್ಚ್ 22ರಂದು ಒಂದು ಕೋಟಿ ರೂ. ವೆಚ್ಚದ ಬ್ರಹ್ಮರಥವನ್ನು ದೇವಳಕ್ಕೆ ಉದ್ಯಮಿ ಎನ್. ಮುತ್ತಪ್ಪ ರೈ ಸಮರ್ಪಿಸಿದ್ದರು. ಇದಾದ 2013ರಲ್ಲಿ ದೇವಳ ಪುನರ್ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ನಡೆಯಿತು. ಇದಾದ 5 ವರ್ಷಗಳ ಬಳಿಕ ಸರ್ವ ಭಕ್ತ ಸಮುದಾಯದ ದೇಣಿಗೆಯಿಂದ ಒಂದು ಕೋಟಿ ರೂ.ವೆಚ್ಚದ ರಾಜಗೋಪುರ ತಲೆ ಎತ್ತಿ ನಿಂತಿದೆ.

ಧ್ಯಾನಶಿವ ಮಂಟಪ ತೆರವಿನ ಬಳಿಕ...
ದೇವಾಲಯದ ಮೂಡಣ ಭಾಗದಲ್ಲಿ ವಿಶಾಲ ಗದ್ದೆಯಿದ್ದು, ದೇವರಮಾರು ಎಂದೇ ಪ್ರಸಿದ್ಧ. ಗದ್ದೆ ಮತ್ತು ದೇವಳದ ಮಧ್ಯೆ ಹೊರಪ್ರಾಕಾರದ ಗಡಿಯಲ್ಲಿ ಸೋಬಾನೆ ಮಂಟಪ ಹಿಂದಿನಿಂದಲೇ ಇತ್ತು. ಜಾತ್ರೆ ಸಂದರ್ಭ ಜನ ಇಲ್ಲಿ ಕುಳಿತು ದೇವರ ವೈಭವ ನೋಡುತ್ತಿದ್ದರು. ಉಳಿದ ಸಮಯದಲ್ಲಿ ಬರಿಯ ಮಂಟಪ ಕಟ್ಟೆ ಇದಾಗಿದ್ದರೆ, ಜಾತ್ರೆ ಸಂದರ್ಭ ಇದಕ್ಕೆ ಆಕರ್ಷಕ ಚಪ್ಪರ ನಿರ್ಮಿಸಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿತ್ತು.
ಇದೇ ಮಂಪಟದ ಮಧ್ಯೆ ಪ್ರವೇಶ ದ್ವಾರದಲ್ಲಿ 16 ವರ್ಷಗಳ ಹಿಂದೆ ಧ್ಯಾನ ಭಂಗಿಯ ಮಹಾದೇವನ ಸುಂದರ ವಿಗ್ರಹವನ್ನು ಶಿಖರಾಗ್ರದಲ್ಲಿ ನಿರ್ಮಿಸಲಾಗಿತ್ತು. ದೇವಳ ಮರು ನಿರ್ಮಾಣ ಸಂದರ್ಭ ಅಷ್ಟಮಂಗಲದಲ್ಲಿ ಕಂಡು ಬಂದ ಪ್ರಕಾರ ಈ ಮೂರ್ತಿಯನ್ನು ತೆರವು ಮಾಡಿ ದೇವಳದ ಎದುರಿನ ವಿಶಾಲ ಜಾತ್ರೆ ಗದ್ದೆಯ ಪೂರ್ವ ದಿಕ್ಕಿನಲ್ಲಿ ಇರಿಸಲಾಯಿತು. 15 ಅಡಿ ಎತ್ತರವಿರುವ ಈ ಪ್ರತಿಮೆ ಈಗ ಗದ್ದೆಯಂಚಿನಲ್ಲಿ ಪ್ರವಾಸಿ ಆಕರ್ಷಣೆಯಾಗಿ ಉಳಿದುಕೊಂಡಿದೆ.

ರಾಜಗೋಪುರದ ಯೋಚನೆ...
ಪುನರ್ನಿರ್ಮಾಣಗೊಂಡ ದೇವಾಲಯ 5 ವರ್ಷಗಳ ಹಿಂದೆ ಬ್ರಹ್ಮಕಲಶೋತ್ಸವ ನಡೆದ ಬಳಿಕ ಇನ್ನಷ್ಟು ಅಭಿವೃದ್ಧಿ ನಡೆಸಲಾಗಿದೆ. ಎನ್. ಸುಧಾಕರ ಶೆಟ್ಟಿ ಅವರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಳಿಕ ಹೊರಾಂಗಣ ಸೌಂದರ್ಯೀಕರಣ, ನೂತನ ಭೋಜನ ಶಾಲೆ, ಅಡಳಿತ ಕಚೇರಿ ಕಾರ್ಯಕ್ಕೆ ಅಂತಿಮ ಸ್ಪರ್ಷ ಸಿಕ್ಕಿದೆ. ಮುಂದಿನ ಹಂತದಲ್ಲಿ ಬೃಹತ್ ಗಾತ್ರದ ನೀರಿನ ಟ್ಯಾಂಕ್ ನಿರ್ಮಾಣ ಹಂತದಲ್ಲಿದೆ ಜೊತೆಗೆ ವೈಭವದ ರಾಜಗೋಪುರ ಯೋಜನೆ. ಭಕ್ತರ ದುಡ್ಡಲ್ಲೇ ಇದನ್ನು ನಿರ್ಮಿಸಲು ಮುಂದಾದ ಸಮಿತಿ ಇದರಲ್ಲಿ ಯಶಸ್ವಿಯೂ ಆಗಿದೆ.

47 ಅಡಿ ಎತ್ತರದ ಗೋಪುರ
ದೇವಾಲಯದ ಎದುರು ಮಹಾದ್ವಾರದ ಮಾದರಿಯಲ್ಲಿ ನಿರ್ಮಾಣಗೊಂಡ ಈ ರಾಜಗೋಪುರ 47 ಅಡಿ ಎತ್ತರ ಹೊಂದಿದೆ. ಬುಡದಲ್ಲಿ ವಿಶಾಲವಾಗಿದ್ದು, ತುದಿಗೇರುತ್ತಿದ್ದಂತೆ ವಿಶಾಲ ಕಿರಿದಾಗುತ್ತಾ ಹೋಗುತ್ತದೆ. 19 ಅಡಿ ಸುತ್ತಳತೆ ಹೊಂದಿದ್ದು, ಕಲ್ಲು, ಇಟ್ಟಿಗೆ, ಸಿಮೆಂಟ್ ಬಳಸಿ ನಿರ್ಮಿಸಲಾಗಿದೆ. ರಾಜಗೋಪುರದಲ್ಲಿ ಧಾರ್ಮಿಕ ಮಹತ್ವವಿರುವ ನಾನಾ ಬಗೆಯ 120 ಮೂರ್ತಿಗಳನ್ನು ವಿನ್ಯಾಸಗೊಳಿಸಲಾಗಿದೆ. ಎಲ್ಲೂ ಕೂಡ ಆನೆಯ ಚಿತ್ರ, ಮೂರ್ತಿ ವಿನ್ಯಾಸಗೊಳಿಸಿಲ್ಲ. ಪುತ್ತೂರು ದೇವಸ್ಥಾನಕ್ಕೆ ಆನೆ ನಿಷಿದ್ಧ ಇರುವ ಕಾರಣ ದೇವಳದ ಯಾವುದೇ ಶಿಲ್ಪದಲ್ಲೂ ಆನೆಯ ವಿನ್ಯಾಸವಿಲ್ಲ. ರಾಜಗೋಪುರದ 5 ಅಂತಸ್ತುಗಳಲ್ಲಿ (ಪಂಚತಲಾ) 5 ದ್ವಾರಗಳನ್ನು ಇಡಲಾಗಿದೆ. ಇದಕ್ಕೆ ಸರಿಯಾಗಿ ತುದಿಯಲ್ಲಿ 5 ಕಳಶ ವಿನ್ಯಾಸಗೊಳಿಸಲಾಗಿದೆ. ಇದು ಶಿವನಿಗೆ ವಿಶೇಷ. ಗೋಪುರದ ಕಾಮಗಾರಿ ಪೂರ್ಣಗೊಂಡಿದೆ. ಜೊತೆಗೆ ಗೋಪುರದ ಇಕ್ಕೆಲಗಳಲ್ಲಿ ಪಾಶ್ರ್ವಗೋಪುರ ನಿರ್ಮಾಣ ಕಾರ್ಯವು ಕೊನೆಯ ಹಂತದಲ್ಲಿದೆ.

ಎರಡು ಶೈಲಿಯ ಸಮ್ಮಿಶ್ರಣ
ಪುತ್ತೂರು ದೇವಾಲಯವು ಗಜಪೃಷ್ಟಾಕಾರ ಶೈಲಿ ಹೊಂದಿದೆ. 12ನೇ ಶತಮಾನ ಮತ್ತು ಅದರ ಆಸುಪಾಸಿನಲ್ಲಿ ತುಳುನಾಡಿನಲ್ಲಿ ನಿರ್ಮಾಣವಾದ ಬಹುತೇಕ ಎಲ್ಲ ಶಿವ, ದುರ್ಗೆ, ಗಣಪತಿ ದೇಗುಲಗಳು ಇದೇ ಶೈಲಿಯಲ್ಲಿ ನಿರ್ಮಾಣವಾಗಿವೆ. ತೌಳವ ವಾಸ್ತುಶೈಲಿ ಎಂಬಷ್ಟರ ಮಟ್ಟಿಗೆ ಇದಕ್ಕೆ ಪ್ರಸಿದ್ಧಿಯೂ ಇದೆ. ಹೊಸ ರಾಜಗೋಪುರ ದ್ರಾವಿಡ ಶೈಲಿ ಹೊಂದಿದೆ. ತಮಿಳುನಾಡಿನಲ್ಲಿ ಪ್ರಸಿದ್ಧಿಗೆ ಬಂದ ಈ ಶೈಲಿ ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಕರ್ನಾಟಕದಲ್ಲೂ ಪ್ರಸಿದ್ಧಿ ಹೊಂದಿದೆ. ಇಲ್ಲಿನ ಕೆಲವು ದೇಗುಲಗಳನ್ನು ಇದೇ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಗೋಪುರದ ಕಾಮಗಾರಿ ಪೂರ್ಣ
ಗೋಪುರದ ಕಾಮಗಾರಿ ಪೂರ್ಣಗೊಂಡಿದೆ. ಗೋಪುರದ ಎರಡೂ ಕಡೆಗಳಲ್ಲೂ ಸುಂದರ ಪಾಶ್ರ್ವಗೋಪುರಗಳು ಕೊನೆ ಹಂತದಲ್ಲಿದೆ. ಮುಂದೆ ತಂತ್ರಿಯವರಿಂದ ಸೂಕ್ತ ದಿನ ನಿಗದಿಪಡಿಸಿ ಮಾರ್ಚ್ ತಿಂಗಳಲ್ಲಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇವೆಲ್ಲದರ ನಡುವೆ ದೈವೆಚ್ಚೆಯೂ ಎಂಬಂತೆ ಗೋಪುರದ 5 ಬಾಗಿಲುಗಳಲ್ಲೂ ಸಂಜೆ ಹೊತ್ತು ಸೂರ್ಯ ಅಸ್ತಮ ಆಗುವ ಸಮಯದಲ್ಲಿ ಸೂರ್ಯ ರಶ್ಮಿ ಗೋಪುರದ ಐದು ದ್ವಾರದ ಮೂಲಕ ಹಂತ ಹಂತವಾಗಿ ಹಾದು ಹೋಗುವ ಬಹು ಅಪರೂಪದ ದೃಶ್ಯ ಕಾಣಸಿಗುತ್ತದೆ.
ಎನ್. ಸುಧಾಕರ ಶೆಟ್ಟಿ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ

More Images