ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯ ಪೊಲಿಂಕಾನ ಉತ್ಸವ

ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯ ಪೊಲಿಂಕಾನ ಉತ್ಸವ

LK   ¦    Jul 24, 2017 12:35:10 PM (IST)
ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯ ಪೊಲಿಂಕಾನ ಉತ್ಸವ

ಮಡಿಕೇರಿ: ಪ್ರತಿವರ್ಷದಂತೆ ಈ ಬಾರಿಯೂ ಆಟಿ ತಿಂಗಳ ಅಮಾವಾಸ್ಯೆಯಂದು ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವ ನಡೆಯುವ ಮೂಲಕ ಉತ್ತಮ ಮಳೆಯಾಗಿ ನಾಡು ಸುಭೀಕ್ಷೆಗೊಳ್ಳಲಿ ಎಂದು ಪ್ರಾರ್ಥಿಸಲಾಯಿತು.

ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ನಡೆದ ಉತ್ಸವದಲ್ಲಿ ದೇವಾಲಯದಲ್ಲಿರುವ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ, ಭಗಂಡೇಶ್ವರ ದೇವಾಲಯಗಳಿಗೆ ಪೂಜೆ, ಬಳಿಕ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಮತ್ತಿತರ ಆಭರಣಗಳನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಿ ಭಗಂಡೇಶ್ವರ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಯಿತು. ಬಳಿಕ ತ್ರಿವೇಣಿ ಸಂಗಮದಲ್ಲಿ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡು ನೀರಿನಲ್ಲಿ ವಿಸಜರ್ಿಸಲಾಯಿತು. ಕಾವೇರಿ ನದಿ ನೀರಿನಲ್ಲಿ ತೇಲುತ್ತಾ ಸಾಗಿದ ಮಂಟಪಕ್ಕೆ ಭಕ್ತರು ಕೈ ಮುಗಿದು ಪ್ರಾರ್ಥಿಸಿದರು.

ಉತ್ಸವದ ಕುರಿತು ಮಾತನಾಡಿದ ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಪ್ರತಿ ವರ್ಷದಂತೆ ಈ ವರ್ಷವೂ ಆಟಿ ತಿಂಗಳಲ್ಲಿ ಪೊಲಿಂಕಾನ ಉತ್ಸವವನ್ನು ವಿಶೇಷ ಪೂಜೆಯೊಂದಿಗೆ ಮಾಡಲಾಗಿದ್ದು, ಭಗಂಡೇಶ್ವರ ದೇವಾಲಯದ ಎಲ್ಲ್ಲ ದೇವರಿಗೆ ಪೂಜೆ ಪುರಸ್ಕಾರ ಕೈಗೊಂಡು ಕರಿಮಣಿ, ಚಿನ್ನದ ಸರ, ತೊಟ್ಟಿಲು, ಬೆಳ್ಳಿತಟ್ಟೆ ಮತ್ತಿತರವನ್ನು ಸುಮಂಗಲಿಯ ಬಾಳೆ ದಿಂಡಿನ ಮಂಟಪಕ್ಕೆ ಹಾಕಿ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲಾಗಿದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ ಎಂದರು.

ಇದರ ಆಚರಣೆ ಹಿಂದೆ ಸದುದ್ದೇಶವೂ ಇದ್ದು, ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಭಾರಿ ಮಳೆಯಾದಾಗ ಕಾವೇರಿ ನದಿ ಉಕ್ಕಿ ಹರಿಯುತ್ತಿತ್ತು. ಈ ಸಂದರ್ಭ ಆಸ್ತಿಪಾಸ್ತಿ, ಜೀವ ಹಾನಿಗಳು ಸಂಭವಿಸುವ ಸಾಧ್ಯತೆಯಿತ್ತು. ಹೀಗಾಗಿ ಭಗಂಡೇಶ್ವರನಲ್ಲಿ ಪೂಜೆ ಸಲ್ಲಿಸಿ ಕಾವೇರಿ ಮಾತೆಯಲ್ಲಿ ಯಾವುದೇ ಜೀವಕ್ಕೆ ಹಾನಿಯಾಗದಂತೆ ಕರುಣೆ ತೋರು ಎಂದು ಪ್ರಾರ್ಥಿಸಲು ಪೊಲಿಂಕಾನ ಉತ್ಸವ ಆಚರಣೆಗೆ ಬಂದಿದ್ದು ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಅವರು ಹೇಳಿದರು. ಇತ್ತೀಚಿನ ವರ್ಷದಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಕಾವೇರಿ ಕಣಿವೆಯಲ್ಲಿ ಹೆಚ್ಚಿನ ಮಳೆಯಾಗಿ ನಾಡಿಗೆ ಸಮೃದ್ದಿ ತರುವಂತಾಗಲಿ ಎಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಿರುವುದಾಗಿ ಅವರು ಹೇಳಿದರು.

ಭಾಗಮಂಡಲ ಭಗಂಡೇಶ್ವರ ದೇವಾಯಲಯದ ಪ್ರಧಾನ ಅರ್ಚಕರಾದ ಹರೀಶ್ ಭಟ್ ಅವರು ಆಟಿ ತಿಂಗಳ ಅಮಾವಾಸ್ಯೆ ದಿನದಂದು ಭಗಂಡೇಶ್ವರ ದೇವಾಲಯದಲ್ಲಿ ಮಧ್ಯಾಹ್ನ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬಾಳೆದಿಂಡಿನಿಂದ ಅಲಂಕರಿಸಿದ ಮಂಟಪಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪೊಲಿಂಕಾನ ಉತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದಾಗಿ ಹೇಳಿದರು.

ಗ್ರಾಮದ ಮುಖ್ಯಸ್ಥರಾದ ಕುದುಕುಳಿ ಭರತ್ ಮಾತನಾಡಿ ಜೀವನದಿ ಕಾವೇರಿಯ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಇದಾಗಿದೆ. ಕಾವೇರಿ ಮಾತೆಗೆ ಬೇಕಾದ ವಸ್ತುಗಳನ್ನು ಬಾಗಿನದೊಂದಿಗೆ ಅರ್ಪಿಸುವ ಕಾರ್ಯಕ್ರಮ ಇದಾಗಿದೆ ಎಂದರು. ಪೊಲಿಂಕಾನ ಉತ್ಸವದಲ್ಲಿ ಭಗಂಡೇಶ್ವರ ದೇವಾಲಯದ ತಕ್ಕ ಮುಖ್ಯಸ್ಥರಾದ ಬಲ್ಲಡ್ಕ ಅಪ್ಪಾಜಿ, ಪಾರುಪತ್ತೆದಾರರಾದ ಕೆ.ಪಿ.ಪೊನ್ನಣ್ಣ, ತಲಕಾವೇರಿ-ಭಾಗಮಂಡಲ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ಇತರರು ಇದ್ದರು.

More Images