ಸಾವಿರಾರು ಸುರಂಗಗಳೇ ನೀರಿನ ಜೀವಸೆಲೆ

ಸಾವಿರಾರು ಸುರಂಗಗಳೇ ನೀರಿನ ಜೀವಸೆಲೆ

Steephan Kayyar   ¦    Mar 22, 2018 07:22:11 AM (IST)
ಸಾವಿರಾರು ಸುರಂಗಗಳೇ ನೀರಿನ ಜೀವಸೆಲೆ

ಕಾಸರಗೋಡು: ಬದಲಾಗುತ್ತಿರುವ ಇಂದಿನ ಬದುಕು, ಜೀವ ಜಲದ ಬಗ್ಗೆ ಇನ್ನೂ ಗಂಭೀರ ಚಿಂತನೆ ಮಾಡಿಲ್ಲ. ಸಾಕಷ್ಟು ಮಳೆ ಲಭಿಸುತ್ತಿದ್ದರೂ ಬರಗಾಲ ಮಾತ್ರ ನಮ್ಮನ್ನು ಬಿಟ್ಟು ಹೋಗುತ್ತಿಲ್ಲ. ಒಂದು ಕಾಲದಲ್ಲಿ ಸುರಂಗ, ಬಾವಿ, ಕೆರೆಗಳು ನಮಗೆ ವರ್ಷದುದ್ದಕ್ಕೂ ಸಮೃದ್ಧ ನೀರನ್ನು ನೀಡುತ್ತಿತ್ತು, ಆದರೆ  ಇಂದು ಕೊಳವೆ  ಬಾವಿಗಳು ಅಂತರ್ಜಲ ನೀರನ್ನೇ ನುಂಗಿ ಹಾಕಿದೆ.

ಆದರೆ ಕಾಸರಗೋಡು ಜಿಲ್ಲೆಯಲ್ಲಿ ಇಂದಿಗೂ ಹಲವಾರು ಸ್ಥಳಗಳಲ್ಲಿ ಸುರಂಗಗಳು ಸಾವಿರಾರು ಮಂದಿಗೆ ನೀರು  ಒದಗಿಸುತ್ತಿದೆ. ಐದು ಸಾವಿರದಷ್ಟು ಸುರಂಗಗಳು ಜಿಲ್ಲೆಯಲ್ಲಿವೆ ಎಂದು ಅಂಕಿ ಅಂಶ ತಿಳಿಸುತ್ತಿದೆ. ಇವುಗಳಲ್ಲಿ ಬಹುತೇಕ ಇಂದಿಗೂ ಕೃಷಿ ಹಾಗೂ ಕುಡಿಯುವ ನೀರು ಪೂರೈಸುತ್ತಿದೆ. ಇವುಗಳಲ್ಲಿ ವರ್ಷಗಳ ಹಿಂದೆ ಸುರಂಗಗಳು ಸೇರಿವೆ.

ಮಂಜೇಶ್ವರ ತಾಲೂಕಿನ  ಪೈವಳಿಕೆ ಬಾಯಾರುಪದವು. ಪೆರ್ಲ  ಸಮೀಪದ ಪಡ್ರೆ, ಕಾರಡ್ಕ, ಪ್ರದೇಶಗಳಿರುವ ಮುಳ್ಳೇರಿಯ, ಬಂದಡ್ಕ ಪ್ರದೇಶದಲ್ಲಿ ಅತಿ ಹೆಚ್ಚಿನ ಸುರಂಗಗಳನ್ನು ಕಾಣಬಹುದಾಗಿದೆ. ಕರ್ನಾಟಕ-ಕೇರಳ ಗಡಿಪ್ರದೇಶವಾದ ಅಡ್ಯನಡ್ಕ, ಅನೆಕಲ್ಲು ಪ್ರದೇಶಗಳಲ್ಲೂ ಇಂತಹ ಸುರಂಗಗಳು ಕಂಡು ಬರುತ್ತಿದ್ದು, ದಶಕಗಳ ಹಿಂದೆ ನೀರಿಗಾಗಿ ಬಾವಿಗಳಿಗಿಂತ ಸುರಂಗಗಳನ್ನೇ ನಚ್ಚಿಕೊಂಡಿದ್ದರು .
ಹಲವೆಡೆ 300 ಮೀಟರ್ ಗಳಷ್ಟು  ಉದ್ದದ ಸುರಂಗಗಳಿವೆ. ಮಾನವ ನಿರ್ಮಿತವಾದ ಸುರಂಗಗಳು ಅಚ್ಚರಿ ಮೂಡಿಸುತ್ತಿವೆ

ಇಂದು ಕೃಷಿ ಜೀವನದ ವಿಮುಖತೆಯಿಂದ ಹೊಸ ಸುರಂಗಗಳ ನಿರ್ಮಾಣವಾಗಲಿ, ಸುರಂಗಗಳ ಮಹತ್ವವನ್ನು ತಿಳಿಸುವ ಕಾರ್ಯವಾಗಲಿ ಹೆಚ್ಚಾಗಿ ಆಗದಿರುವುದು ಬೋರ್ ವೆಲ್ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ.

ದಶಕಗಳ ಹಿಂದೆ ಆಧುನಿಕ ತಂತ್ರಜ್ಞಾನ ಸಹಿತ ಯಂತ್ರಗಳು ಇಲ್ಲದಿದ್ದ  ಕಾಲಘಟ್ಟದಲ್ಲಿ ಶ್ರಮಜೀವನದ ಮೂಲಕವೇ ನೀರಿನ ಮೂಲವನ್ನು ಗುರುತಿಸಿ ಸುರಂಗಗಳ ಮುಖಾಂತರ ಜಲಧಾರೆಯನ್ನು ಪ್ರಾಪ್ತಿಯಾಗಿಸಿ ಹೊಲ ಗದ್ದೆಗಳಲ್ಲಿ ಬೇಸಾಯ ಮಾಡುತ್ತಿದ್ದಜನ ಸಂಸ್ಕೃತಿ ದಕ್ಷಿಣ ಕರಾವಳಿಯದ್ದು. ಹೆಚ್ಚಾಗಿ ಮುಂಗಾರು ಮಳೆಯನ್ನು ಆಶ್ರಯಿಸಿ ಬೇಸಾಯ ಮಾಡುತ್ತಿದ್ದಕೃಷಿಕರಿಗೆ ಬೇಸಿಗೆ ಕಾಲದಲ್ಲಿ ತೋಟಗಳಿಗೆ ಹಾಗೂ ಗದ್ದೆಗಳಿಗೆ ನೀರನ್ನು ಉಣಿಸುತ್ತಿದ್ದುದು ಇಲ್ಲಿನ ಬಾವಿಗಳು ಹಾಗೂ ಹಲವು ಮೀಟರ್ ಗಳಷ್ಟು ದೂರ ಕೊರೆದ ನೀರಿನ ಜಲಧಾರೆಯಾದ ಸುರಂಗಗಳು. ಸುರಂಗ ಗಳಿಂದ ನೀರು ಕೆರೆ, ಮದಗಕ್ಕೆ ಹರಿದು ಬರುತ್ತಿದ್ದು, ಕೃಷಿ ಚಟುವಟಿಕೆಗೆ ಈ ನೀರನ್ನು ಬಳಸಲಾಗುತ್ತಿತ್ತು.

ಜನಸಂಖ್ಯಾ ಹೆಚ್ಚಳದಿಂದ ನಗರ ಪ್ರದೇಶದ ನೀರಿನ ಹಾಗೂ ಸ್ಥಳದ ಕೊರತೆ ಹೆಚ್ಚಾದ  ಕಾರಣ ಹೆಚ್ಚಿನ ಮಂದಿ ಕೊಳವೆ ಬಾವಿಗಳಿಗೆ ಮಾರುಹೋಗುತ್ತಿರುವುದು ಸಾಮಾನ್ಯವೆನ್ನುವಂತಾಗಿದೆ. ನುರಿತ ಸುರಂಗಕಾರ್ಮಿಕರ ಅಭಾವ, ಯುವಜನತೆ ಕೃಷಿ ಜೀವನದಿಂದ ವಿಮುಖರಾಗುತ್ತಿರುವುದು, ಹೊಸ ಸುರಂಗಗಳ ನಿರ್ಮಾಣ ಹಾಗೂ ಹಳೆ ಸುರಂಗಗಳದುರಸ್ತಿಗೊಳ್ಳದೆ ಇರುವುದರಿಂದ ಸುರಂಗಗಳು ಇತಿಹಾಸದ ಪುಟ ಸೇರುತ್ತಿದೆ.

ಕಾಸರಗೋಡು  ಪ್ರತಿ ವರ್ಷ  3,300 ಮಿ.  ಮೀ ಮಳೆ ಲಭಿಸುತ್ತಿದೆ. ಆದರೆ ಬೇಸಿಗೆ ಯಲ್ಲಿ ನೀರಿನ ಕೊರತೆ  ಹೆಚ್ಚುತ್ತಲೇ ಇದೆ. ಕೊಳವೆ ಬಾವಿಗಳ ನಿರ್ಮಾಣದಿಂದ ಭೂಮಿಯ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿದು ಭೂಮಿಯ ಮೇಲಿನ ಉಷ್ಣಾಂಶ ಹೆಚ್ಚಾಗಿ ಪ್ರತಿಕೂಲ ಪರಿಣಾಮವನ್ನು ಸೃಷ್ಟಿಸುತ್ತಿದೆ. ಇದರ ಜೊತೆಗೆ ಹೊಳೆ, ನದಿಗಳು ಬರಡಾಗಿದೆ. ಬಾವಿಗಳಲ್ಲಿ ನೀರಿನ ಲಭ್ಯತೆ ಇಲ್ಲದಂತಾಗಿದೆ.

ಸುರಂಗ ನಿರ್ಮಾಣಕ್ಕೆ ಶತಮಾನದ ಇತಿಹಾಸ
ಕಾಸರಗೋಡಿನ ಸುರಂಗಗಳಿಗೆ ಶತಮಾನದ ಇತಿಹಾಸ ಹೊಂದಿದೆ. ಜಿಲ್ಲೆಗೆ ವಲಸಿಗರಾಗಿ ತಲಪಿದ್ದ ಕೊಂಕಣಸ್ಥರು, ಮರಾಠಿಗರು ಮತ್ತು ಮರಾಠಿ ಸಮುದಾಯಸ್ಥರು  ಕೃಷಿಗೆ   ನೀರಿನ ಮೂಲ ಗುರುತಿಸಲು ಸುರಂಗ ನಿರ್ಮಿಸುವ ಮೂಲಕ   ಕಾಯಕ ಆರಂಭಿಸಿದ್ದರು. ಕೃಷಿಗೆ ಸುರಂಗ ನೀರನ್ನು ಇವರು ಬಳಸುತ್ತಿದ್ದು, ಸಾವಿರಾರು ಸುರಂಗವನ್ನು ನಿರ್ಮಿಸಿದ್ದಾರೆ. ಸುಮಾರು 15 ಮತ್ತು 16ನೇ ಶತಮಾನದಲ್ಲಿ  ನೀರಿಗಾಗಿ ಸುರಂಗವನ್ನು  ಕೃಷಿಕರು ಹೆಚ್ಚಾಗಿ ನಂಬಿಕೊಂಡಿದ್ದರು ಎಂದು ಇತಿಹಾಸದ ಪುಟಗಳು ತಿಳಿಸುತ್ತಿದೆ. 

More Images