ಕೊಡಗಿನಲ್ಲೀಗ ತೆಂಗೆ ಬೋಡಿ ಸ್ಪರ್ಧೆಯತ್ತ ಚಿತ್ತ..!

ಕೊಡಗಿನಲ್ಲೀಗ ತೆಂಗೆ ಬೋಡಿ ಸ್ಪರ್ಧೆಯತ್ತ ಚಿತ್ತ..!

B.M. Lavakumar   ¦    Nov 18, 2019 03:22:46 PM (IST)
ಕೊಡಗಿನಲ್ಲೀಗ ತೆಂಗೆ ಬೋಡಿ ಸ್ಪರ್ಧೆಯತ್ತ ಚಿತ್ತ..!

ಆಧುನಿಕ ಕ್ರೀಡೆಗಳ ನಡುವೆಯೂ ಕೊಡಗಿನಲ್ಲಿ ಸಾಂಪ್ರದಾಯಿಕವಾದ ತೆಂಗಿನ ಕಾಯಿಗೆ ಗುಂಡು ಹೊಡೆಯುವ(ತೆಂಗೆಬೋಡಿ) ಸ್ಪರ್ಧೆ ಜನಪ್ರಿಯವಾಗುತ್ತಿದೆ. ಹಿಂದೆ ಹಬ್ಬ ಹರಿದಿನಗಳಲ್ಲಿ ಮಾತ್ರ ನಡೆಯುತ್ತಿತ್ತಾದರೂ ಇತ್ತೀಚೆಗಿನ ದಿನಗಳಲ್ಲಿ ಸಂಘಟನೆಗಳು ಕ್ರೀಡಾಕೂಟವನ್ನು ಆಯೋಜಿಸಿ ಸ್ಪರ್ಧಿಗಳಿಗೆ ಅವಕಾಶ ಮಾಡಿಕೊಡುತ್ತಿರುವುದು ಕಂಡು ಬರುತ್ತಿದೆ. ಇದು ಶೂಟಿಂಗ್‍ನಲ್ಲಿ ಆಸಕ್ತಿಯಿರುವವರಿಗೆ ಒಂದು ರೀತಿಯ ಪ್ರೋತ್ಸಾಹ ನೀಡಿದಂತಾಗಿದೆ.

ಕೊಡಗಿನವರು ವೀರರು, ಶೂರರು, ಕ್ರೀಡಾಪ್ರೇಮಿಗಳು ಎನ್ನುವುದು ಇಲ್ಲಿ ನಡೆಯುವ ಹಬ್ಬಗಳಲ್ಲಿ, ಕ್ರೀಡಾಕೂಟಗಳಲ್ಲಿ ಕಾಣಸಿಗುತ್ತದೆ. ಜತೆಗೆ ಕೋವಿ ಹಿಡಿಯದ ಕೈಗಳೇ ಇಲ್ಲ ಎಂಬುದು ಕೂಡ ಅಷ್ಟೇ ಸತ್ಯ.

ರಕ್ಷಣಾ ಪಡೆಗಳ ವಿವಿಧ ವಿಭಾಗಗಳಲ್ಲಿ ಇಲ್ಲಿನ ಯುವಕರು, ಯುವತಿಯರು ಕೆಲಸ ಮಾಡುತ್ತಿದ್ದರೆ, ಮಹಾನ್ ದಂಡನಾಯಕನಾಗಿ ಕೆಲಸ ಮಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಮೊದಲಾದವರು ಸೇರಿದಂತೆ ಅತ್ಯುನ್ನತ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾದವರು, ಹಾಲಿ ಹುದ್ದೆಯನ್ನು ನಿರ್ವಹಿಸುತ್ತಿರುವವರು ಇದ್ದಾರೆ.

ಹಾಗೆ ನೋಡಿದರೆ ಕೋವಿಗೂ ಕೊಡಗಿನವರಿಗೂ ಅವಿನಾಭಾವ ಸಂಬಂಧ. ಇವತ್ತಿಗೂ ಹೆಚ್ಚಿನವರ ಮನೆಯಲ್ಲಿ ಕೋವಿಗಳಿವೆ. ಹುಟ್ಟು ಸಾವಿನಿಂದ ಹಿಡಿದು ಹಬ್ಬ ಹರಿದಿನಗಳಲ್ಲಿಯೂ ಕೋವಿಗಳನ್ನು ಬಳಸಲಾಗುತ್ತದೆ. ಜತೆಗೆ ಇದಕ್ಕೆ ಪೂಜೆಯೂ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಮಗು ಹುಟ್ಟಿದರೆ ಒಂದು ಗುಂಡನ್ನು ಆಕಾಶಕ್ಕೆ ಹಾರಿಸಿ ಜನಕ್ಕೆ ಮಗುವಾಗಿರುವ ಸಂತಸವನ್ನು ಹಂಚಿಕೊಳ್ಳಲಾಗುತ್ತಿತ್ತು. ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದರೆ ಜೋಡಿ ಗುಂಡನ್ನು ಹಾರಿಸುವ ಮೂಲಕ ಸಾವಿನ ಸುದ್ದಿಯನ್ನು ಸುತ್ತಮುತ್ತಲಿನ ಜನಕ್ಕೆ ಮುಟ್ಟಿಸಲಾಗುತ್ತಿತ್ತು. (ಇದು ಈಗಲೂ ಇದೆ.)

 

ಹಿಂದಿನ ಕಾಲದಲ್ಲಿ ಹೆಚ್ಚಿನ ಭಾಗವು ದಟ್ಟ ಕಾಡಿನಿಂದ ಆವೃತವಾಗಿತ್ತು. ಹೀಗಾಗಿ ವನ್ಯ ಪ್ರಾಣಿಗಳೊಂದಿಗೆ ಹೋರಾಡಿ ಬೆಳೆಗಳನ್ನು ಮತ್ತು ಜಾನುವಾರುಗಳನ್ನು ರಕ್ಷಿಸಬೇಕಾಗಿತ್ತು. ಅವತ್ತಿನ ದಿನಗಳಲ್ಲಿ ಹುಲಿಯನ್ನು ಬೇಟೆಯಾಡಿ ಕೊಂದರೆ ಆತನನ್ನು ಹುಲಿಯೊಂದಿಗೆ ನಿಲ್ಲಿಸಿ ಮೆರವಣಿಗೆ ನಡೆಸಿ ಊರ ಮಂದಿಗೆ ಊಟ ಹಾಕಿಸಲಾಗುತ್ತಿತ್ತು. ಇದನ್ನು ನರಿಮಂಗಲ(ಹುಲಿಮದುವೆ) ಎಂದು ಕರೆಯಲಾಗುತ್ತಿತ್ತು. ಆದರೆ ಇದನ್ನು ನಿಷೇಧಿಸಲಾಗಿದೆ. ಇದಲ್ಲದೆ ಹಬ್ಬ ಹರಿದಿನಗಳಲ್ಲಿ ಕೂಡು ಬೇಟೆಗಳು ನಡೆಯುತ್ತಿದ್ದವು. ಈ ವೇಳೆ ಕುಟುಂಬದವರು ಊರಿನವರು ಒಟ್ಟಾಗಿ ಕಾಡಿಗೆ ತೆರಳಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಇದೆಲ್ಲವೂ ನಾಲ್ಕೈದು ದಶಕಗಳ ಹಿಂದಿನ ಮಾತು. ಈಗ ಬೇಟೆ ನಿಷಿದ್ಧವಾಗಿವೆ. ಹೀಗಾಗಿ ಕೋವಿಯ ಬಳಕೆ ಕಡಿಮೆಯಾಗುತ್ತಿದೆ.

ಆದರೆ ಹಿಂದಿನ ಕಾಲದಿಂದಲೇ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಂತು ಹಬ್ಬದ ದಿನಗಳಲ್ಲಿ ಮತ್ತು ಊರ ದೇವಾಲಯಗಳಲ್ಲಿ ನಡೆಯುವ ವಾರ್ಷಿಕೋತ್ಸವದಂದು ನಡೆಯುತ್ತಲೇ ಬರುತ್ತಿದೆ. ಈ ಸ್ಪರ್ಧೆಗಳಲ್ಲಿ ಪುರುಷರು ಮಾತ್ರವಲ್ಲದೆ, ಮಹಿಳೆಯರು ಕೂಡ ಕೋವಿ ಹಿಡಿದು ಗುರಿಯಿಟ್ಟು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸುತ್ತಾರೆ. ಇಲ್ಲಿ ಗೆದ್ದವರಿಗೆ ಬಹುಮಾನಗಳನ್ನು ನೀಡುವುದಲ್ಲದೆ, ಒಳ್ಳೆಯ ಗುರಿಕಾರ ಎಂಬ ಖ್ಯಾತಿಯೂ ಸಲ್ಲುತ್ತದೆ.

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಕೂರ್ಗ್ ಬೈರೇಸ್ ಮತ್ತು ಜಮ್ಮಾ ವಿನಾಯಿತಿಯಂತೆ ಕೋವಿ ಬಳಸಲು ವಿಶೇಷ ಅವಕಾಶವನ್ನು ನೀಡಲಾಗಿದೆ. ಹಿಂದೆ ವನ್ಯಪ್ರಾಣಿಗಳಿಂದ ಪ್ರಾಣ-ಬೆಳೆಗಳ ರಕ್ಷಣೆಗೂ ಇದನ್ನು ಬಳಸಲಾಗುತ್ತಿತ್ತಾದರೂ ಈಗ ಕಾನೂನಿನ ನಿರ್ಬಂಧ ಹೇರಿದ್ದು ಬೇಟೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಕೋವಿ ಹೊಂದಿರುವವರು ಕ್ರೀಡಾಕೂಟಗಳ ಸಂದರ್ಭ ತೆಂಗಿನ ಕಾಯಿಗೆ ಗುಂಡು ಹೊಡೆದು ತಮ್ಮ ಗುರಿಯನ್ನು ಪರೀಕ್ಷಿಸುವುದರೊಂದಿಗೆ ಶೌರ್ಯ ಮೆರೆಯುತ್ತಾರೆ.

ಹಿಂದೆ ಕೈಲುಮುಹೂರ್ತ ಹಬ್ಬದ ಸಂದರ್ಭಗಳಲ್ಲಿ ಜಿಲ್ಲೆಯಲ್ಲಿ ತೆಂಗಿನ ಕಾಯಿಗೆ ಗುಂಡು ಹಾರಿಸುವ ಸ್ಪರ್ಧೆ ಮನೆ ಮನೆಗಳಲ್ಲಿ ನಡೆಯುತ್ತಿತ್ತು. ಅಷ್ಟೇ ಅಲ್ಲದೆ, ವಿವಿಧ ದೇವಾಲಯಗಳಲ್ಲಿ ನಡೆಯುತ್ತಿದ್ದ ಹಬ್ಬದಲ್ಲಿ ತೆಂಗಿನಕಾಯಿಗೆ ಗುಂಡು ಹಾರಿಸುವುದು ಸಂಪ್ರದಾಯವಾಗಿ ಬಂದಿದೆ. ಆದರೆ ತೆಂಗಿನ ಕಾಯಿಗೆ ಗುಂಡು ಹಾರಿಸುವ ಸ್ಪರ್ಧೆಗೆ ಒತ್ತು ನೀಡಿ ಅದನ್ನು ಜನಪ್ರಿಯಗೊಳಿಸುವ ಕಾರ್ಯವನ್ನು ಇದೀಗ ಮಾಡಲಾಗುತ್ತಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಇಲ್ಲಿನ ಯುವಕರನ್ನು ಶೂಟಿಂಗ್ ಸ್ಪರ್ಧೆಗೆ ತಯಾರಿ ಮಾಡುವ ಕೆಲಸವೂ ನಡೆಯುತ್ತಿದೆ ಎಂದರೆ ತಪ್ಪಾಗಲಾರದು.