ವೆಲೆಂಟೈನ್ ಡೇ ಅಂದ್ರೆ ಇದೇನಾ... !

ವೆಲೆಂಟೈನ್ ಡೇ ಅಂದ್ರೆ ಇದೇನಾ... !

B.M. Lavakumar   ¦    Feb 13, 2016 12:07:19 PM (IST)

ವೆಯಾಲೆಂಟೈನ್ ಡೇ ಹತ್ತಿರ ಬಂದಿದೆ.. ಆಚರಣೆ ಬಗ್ಗೆ ಪರ ವಿರೋಧ ಇದ್ದೇ ಇದೆ. ಕೆಲವರು ಅದನ್ನು ಹಬ್ಬದಂತೆ ಆಚರಿಸಿದರೆ, ಮತ್ತೆ ಕೆಲವರು ಹೃದಯದ ಭಾಷೆಯಲ್ಲಿ ಪಿಸುಮಾತಲ್ಲೇ ಮುಗಿಸಿಬಿಡುತ್ತಾರೆ.

ಇದು ನಮ್ಮ ಸಂಸ್ಕೃತಿಗೆ ಒಗ್ಗುವಂತಹದಲ್ಲ ಎಂಬ ಕೂಗು ಕೆಲವರದ್ದಾದರೆ ಇನ್ನು ಕೆಲವರದು ಆ ನೆಪದಲ್ಲಿ  ಖುಷಿಯಾಗಿ ಎಂಜಾಯ್ ಮಾಡುವ ಬಯಕೆ. ಆದರೆ ಕೆಲವರು ವೆಲೆಂಟೈನ್ ಡೇ ಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿರುವುದು ಕಂಡು ಬರುತ್ತದೆ.  ಹೋಟೆಲ್, ರೆಸ್ಟೋರೆಂಟ್, ಪಬ್ ಗಳಲ್ಲಿ ಹುಡುಗ-ಹುಡುಗಿಯರು ಒಟ್ಟಿಗೆ ಕಲೆತು ಕಂಠಪೂರ್ತಿ ಕುಡಿದು ಕುಪ್ಪಳಿಸೋದು... ಗ್ರ್ಯಾಂಡ್ ಪಾರ್ಟಿ ಏರ್ಪಡಿಸಿ ಮಜಾ ಉಡಾಯಿಸೋದು... ಗುಲಾಬಿ ಹೂವನ್ನು ನೀಡಿ ನನ್ನ ಪ್ರೀತಿಸು ಅಂತ ಹಿಂಸೆ ನೀಡೋದು... ಹುಡುಗಿ ಒಪ್ಪದಿದ್ದರೆ ಆಸಿಡ್ ಸುರಿಯೋದು... ಇದೆಲ್ಲವೂ ನಡೆಯುತ್ತಿರುವುದು ಮಾತ್ರ ದುರಂತ.

ಪಾಶ್ಚಿಮಾತ್ಯರ ಸಂಸ್ಕೃತಿ ನಮ್ಮ ದೇಶದ ಯುವಜನತೆಯ ಮೇಲೆ ಎಂತಹ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುವುದಕ್ಕೆ ಇತ್ತೀಚೆಗೆ ನಮ್ಮ ಯುವಕ-ಯುವತಿಯರು ಒಂದೆಡೆ ಸೇರಿ ವ್ಯಾಲೆಂಟೈನ್ ಡೇಯನ್ನು ಆಚರಿಸುತ್ತಿರುವ ರೀತಿಯೇ ಸಾಕ್ಷಿಯಾಗಿದೆ. ಇಂತಹದೊಂದು ಆಚರಣೆ ನಮಗೆ ಬೇಕಾ? ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವಿಸದೆ ಇರದು. ಈ ಆಚರಣೆಗೆ ನಮ್ಮ ದೇಶದಲ್ಲಿ ವ್ಯಾಪಕ ವಿರೋಧವಿದ್ದರೂ ಆಚರಣೆ ಮಾತ್ರ ಸದ್ದಿಲ್ಲದೆ ನಡೆಯುತ್ತಾ ಬರುತ್ತಿದೆ.

ಫೆಬ್ರವರಿ 14 ಬಂತೆಂದರೆ ಪ್ರೇಮಿಗಳಿಗೆ ಸಂಭ್ರಮವಾದರೆ ಕೆಲವು ವಿಕೃತ ಮನಸ್ಸಿನವರಿಗೆ ಆ ನೆಪದಲ್ಲಿ ಹೆಣ್ಣು ಮಕ್ಕಳನ್ನು ಕಾಡಿಸುವ ಹಂಬಲ. ಇದೆಲ್ಲದರ ನಡುವೆ ಕೆಲವರಲ್ಲಿ ಎಲ್ಲಿ ಹೇಗೆ ಆಚರಿಸಬೇಕು ಎಂಬುವುದರ ಬಗ್ಗೆ ಪೂರ್ವ ತಯಾರಿ ಆರಂಭವಾಗಿ ಬಿಡುತ್ತದೆ. ಐಟಿ, ಬಿಟಿ, ಉದ್ಯೋಗಿಗಳು ಸೇರಿದಂತೆ ಶ್ರೀಮಂತ ಯುವಕ, ಯುವತಿಯರು ಕುಡಿದು, ಕುಣಿದು ಕುಪ್ಪಳಿಸಿ ಮಜಾ ಉಡಾಯಿಸುವ ಆತುರದಲ್ಲಿದ್ದರೆ, ಅದಕ್ಕೆಂದೇ ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಸಕಲ ಸಿದ್ಧತೆಗಳು ನಡೆಯುತ್ತವೆ. ಅಷ್ಟೇ ಅಲ್ಲ ಪಾರ್ಟಿಗೆ ಬರುವವರು ಜೋಡಿಯಾಗಿಯೇ ಬರಬೇಕೆಂಬ ಕಟ್ಟಪ್ಪಣೆಯೂ ಇರುತ್ತದೆ.

ಇಂದಿನ ನಗರ ನಾಗರೀಕರಣ, ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ನಮ್ಮ ಮೇಲೆ ಬೀರುತ್ತಿದ್ದು, ಪರಿಣಾಮ ನಮಗೆ ಒಗ್ಗದ ಕೆಲವು ಆಚರಣೆಗಳನ್ನು ನಾವು ಬಲತ್ಕಾರವಾಗಿ ಎಳೆದು ತಂದು ಆಚರಿಸುವಲ್ಲಿ ಮುಂದಾಗುತ್ತಿದ್ದು, ಇದು ನಮ್ಮ ದೇಶದ ಸಂಸ್ಕೃತಿಗೆ ಕೊಡಲಿಯೇಟು ನೀಡುತ್ತಿದೆ ಅಷ್ಟೇ ಅಲ್ಲ ವಿದೇಶಿ ಮೂಲದ ಆಚರಣೆಗಳನ್ನು ತರುವ ಮೂಲಕ ಭವ್ಯ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ನಮ್ಮ ದೇಶಕ್ಕೆ ಆಘಾತವುಂಟು ಮಾಡುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಾಶ್ಚಿಮಾತ್ಯ ಸಂಘಟನೆಗಳು ಯತ್ನಿಸುತ್ತಿವೆ ಎಂಬ ಆರೋಪವೂ ಇದೆ. ಇದು ನಮ್ಮ ಸಂಸ್ಕೃತಿಯಲ್ಲ. ಇದು ನಮಗೆ ಒಗ್ಗುವಂತಹದ್ದೂ ಅಲ್ಲ ಎಂಬ ಅರಿವಿದ್ದರೂ  ನಮ್ಮ ಯುವಕ-ಯುವತಿಯರು ಅದಕ್ಕೆ ಮಾರು ಹೋಗುತ್ತಿದ್ದು, ಕೇವಲ ಮಜಾ ಉಡಾಯಿಸಲೆಂದು ಕೆಲವು ಶ್ರೀಮಂತ ಯುವಕ, ಯುವತಿಯರು ಈ  ಆಚರಣೆಗಳನ್ನು ಬಳಸಿಕೊಳ್ಳುತ್ತಿದ್ದರೆ, ಇಂತಹ ಆಚರಣೆಗಳನ್ನು ಹುಟ್ಟು ಹಾಕಿ ಲಾಭ ಪಡೆಯುವ ಮಂದಿಗೇನು ಕೊರತೆಯಿಲ್ಲ. ದೊಡ್ಡ, ದೊಡ್ಡ ಐಶರಾಮಿ ಹೋಟೆಲ್ ಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕಾಸು ಮಾಡಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ.

ಇವತ್ತು ಪ್ರೌಢ ಶಾಲಾ ಹಂತದಿಂದಲೇ ಪ್ರೇಮ ಪ್ರಕರಣಗಳು ನಡೆಯುತ್ತಿರುವುದು ಕಂಡು ಬರುತ್ತಿದೆ. ಓದಿ ಮುಂದಿನ ಭವಿಷ್ಯ ನಿರ್ಮಿಸಿಕೊಳ್ಳಬೇಕಾದ ವಯಸ್ಸಿನಲ್ಲಿಯೇ ರೋಮಿಯೋ-ಜೂಲಿಯೇಟ್  ಆಗಬೇಕೆಂಬ ಕನಸು ಕಾಣುತ್ತಾರೆ. ಇದರಿಂದಾಗಿ ಓದಿನ ಕಡೆಗೆ ಗಮನ ಕಡಿಮೆಯಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೇನು ಕೊರತೆಯಿಲ್ಲ.

ಇನ್ನು ವೆಲೆಂಟೈನ್ ಡೇಯನ್ನು ವಿರೋಧಿಸುವ ಕೆಲವರು ಹೇಳುವುದೇ ಬೇರೆ ಅವರು ಹೇಳುವ ಕಥೆಯೇ ಭಿನ್ನ. ಪ್ರೇಮಿಗಳು ಆರಾಧಿಸುವ ವ್ಯಾಲೆಂಟೈನ್ ಡೇಯನ್ನು ಅವರು ಬಿಂಬಿಸುವ ರೀತಿಯೇ ವಿಭಿನ್ನ. ಅವರ ಪ್ರಕಾರ ರೋಮನ್ ಚಕ್ರಾಧಿಪತಿಗಳ ಕಾಲದಲ್ಲಿ  ವೆಲೆಂಟೈನ್ ಎಂಬ ಪಾದ್ರಿಯಿದ್ದನಂತೆ. ಈತನ ಕಸುಬು ಏನೆಂದರೆ ಹುಡುಗ-ಹುಡುಗಿಯರು ತಮ್ಮ ಭವಿಷ್ಯ ರೂಪಿಸುವ ವಯಸ್ಸಿನಲ್ಲಿಯೇ ಅವರನ್ನು ಒಂದು ಗೂಡಿಸಿ ಪ್ರೇಮಾರಾಧನೆಗೆ ಒಳಪಡಿಸುತ್ತಿದ್ದನಂತೆ. ಹೀಗಾಗಿ  ಪ್ರೇಮಿಗಳ ಸಂಖ್ಯೆ ಹೆಚ್ಚಾಯಿತಲ್ಲದೆ, ಎಲ್ಲರೂ ಅವನ ಪೂಜಾರಿಗಳಾದರು. ಇದರಿಂದ ದೇಶದ ಮೇಲೆ ಭಾರೀ ಪರಿಣಾಮವಾಯಿತು. ಶಿಸ್ತಿನ ಸಿಪಾಯಿಗಳಾಗಿ ದೇಶ ಕಾಯಬೇಕಾದ ಯುವಕರು ಹೆಣ್ಣಿನ ಮೋಹದಲ್ಲಿ ಸಿಲುಕಿ ತಮ್ಮ ಕರ್ತವ್ಯವನ್ನೇ ಮರೆತರು. ಇದರಿಂದಾಗಿ ದೇಶದಲ್ಲಿ ಆರಾಜಕತೆ ತಾಂಡವವಾಡ ತೊಡಗಿತು.

ಆಗ ರೊಮನ್ನ ದೊರೆ ಎರಡನೇ ಕ್ಲಾಡಿಯಸ್  ದೇಶದೆಲ್ಲೆಡೆ  ಎದ್ದಿರುವ ಆರಾಜಕತೆಯನ್ನು ಹತ್ತಿಕ್ಕುವ ಸಲುವಾಗಿ ವಿವಾಹವನ್ನು ವಿರೋಧಿಸಿದನಲ್ಲದೆ, ವಿವಾಹ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳತೊಡಗಿದನು. ಗಂಡು-ಹೆಣ್ಣು ಒಂದೆಡೆ ಸೇರುವುದು ಹಾಗೂ  ಲೈಂಗಿಕ ಕ್ರಿಯೆಯಲ್ಲಿ  ತೊಡಗುವುದನ್ನು ನಿಷೇಧಿಸಿದನಲ್ಲದೆ, ಎಲ್ಲೂ ಮದುವೆಗಳು ನಡೆಯದಂತೆ ನೋಡಿಕೊಂಡನು.

ಇದೆಲ್ಲದರ ನಡುವೆ ವೆಲೆಂಟೈನ್ ಮಾತ್ರ  ಸದ್ದಿಲ್ಲದೆ ತನ್ನ ಕಾರ್ಯವನ್ನು ಮಾಡುತ್ತಲೇ ಹೋಗುತ್ತಿದ್ದನು. ಇದು ದೊರೆಗೆ ತಿಳಿದು ಆತನನ್ನು ಬಂಧಿಸಲಾಯಿತು. ಆದರೆ ಪಾದ್ರಿ ವೆಲೆಂಟೈನ್ ಜೈಲಿನಲ್ಲಿದ್ದುಕೊಂಡೇ ಪ್ರೇಮಿಗಳನ್ನು ಒಗ್ಗೂಡಿಸತೊಡಗಿದನು. ಬಂಧನದಲ್ಲಿಟ್ಟಿದ್ದರೂ ಜಗ್ಗದೆ ಪ್ರೇಮಿಗಳನ್ನು ಒಗ್ಗೂಡಿಸುತ್ತಿದ್ದ ವ್ಯಾಲೆಂಟೈನ್ ಮೇಲೆ ಕೋಪಗೊಂಡ ದೊರೆ ಆತನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದನು. ಅದರಂತೆ ಫೆಬ್ರವರಿ 14ರಂದು ಗಲ್ಲಿಗೇರಿಸಲಾಯಿತು. ಆದರೆ ದುರಂತವೆಂದರೆ ಆತನ ಅನುಯಾಯಿಗಳು  ಅವನನ್ನು ಗಲ್ಲಿಗೇರಿಸಿದ ದಿನವನ್ನೇ ವೆಲೆಂಟೈನ್ ಡೇಯಾಗಿ ಆಚರಿಸುವ ಮೂಲಕ ಆಚರಣೆ ಜಾರಿಗೆ ತಂದರು. ಎಂಬಂತಹ ಕಥೆಯನ್ನು ಹೇಳುತ್ತಾ ವ್ಯಾಲೆಂಟೈನ್ನ್ನು ವಿರೋಧಿಸುತ್ತಾರೆ.

ವೆಲಂಟೈನ್ ಡೇ ಬಗ್ಗೆ, ಪ್ರೇಮಿಗಳ ಗೌರವಿಸೋಣ ಆದರೆ ಇವತ್ತು ನಮ್ಮ ಐಟಿ, ಬಿಟಿ ಕಂಪನಿಯ ಉದ್ಯೋಗಿಗಳು ಆಚರಿಸುವ ರೀತಿ ಮಾತ್ರ ಅಸಹ್ಯವಾಗಿದೆ ಅವರು ಪ್ರೇಮಾರಾಧನೆಯನ್ನು ಹಣದಿಂದ ಮಾಡುತ್ತಿದ್ದಾರೆ. ಪಾರ್ಟಿಗಳಲ್ಲಿ ಹುಡುಗ, ಹುಡುಗಿಯರು ಸೇರಿ ಕುಣಿಯುತ್ತಾರೆ. ಅಲ್ಲಿ ಪ್ರೀತಿಗಿಂತ ಕಾಮವೇ ಜಾಸ್ತಿಯಾಗಿರುತ್ತೆ. ಇಂತಹವರಿಂದ ಬಳುವಳಿಯಾಗಿ ಬಂದಿರುವ ವೆಲೆಂಟೈನ್ ಡೇಯನ್ನು  ಆಚರಿಸಲು  ಕಾಲೇಜ್ ಕ್ಯಾಂಪಸ್ ಗಳು ಕೂಡ ಸಿದ್ದವಾಗುತ್ತಿರುವುದು ಮಾತ್ರ ದುರಂತ. ಶಾಲಾ ಕಾಲೇಜುಗಳು ಕಲಿಕೆಯ ಕೇಂದ್ರ ಬಿಂದು. ಇಲ್ಲಿ ಕಠಿಣ ಪರಿಶ್ರಮದಿಂದ  ಅಭ್ಯಾಸಿಸಿದ್ದೇ ಆದರೆ ಮುಂದಿನ ಭವಿಷ್ಯ ನಿರ್ಮಾಣವಾಗಲು ಸಾಧ್ಯ. ಆದರೆ ಇಲ್ಲಿಯೇ ಪ್ರೀತಿ, ಪ್ರೇಮ, ಪ್ರಣಯ ಅಂತಹ ತುಂಟಾಟ ಪ್ರಾರಂಭಿಸಿದ್ದೇ ಆದರೆ ಮುಂದಿನ ಬದುಕು ಬರ್ಬರವಾಗಿ ಬಿಡುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಪ್ರೇಮಕ್ಕೆ ಪವಿತ್ರವಾದ ಸ್ಥಾನವಿದೆ. ಅದರದ್ದೇ ಆದ ಮೌಲ್ಯವಿದೆ. ಪ್ರೇಮಕ್ಕೆ ಕೃತಕತೆಯನ್ನು ಕರಗಿಸುವ, ಕಷ್ಟಗಳನ್ನು ಕಳೆಯುವ ತೇಜಸ್ಸಿದೆ. ನೈಜ ಸೌಂದರ್ಯವಿದೆ. ಅನಂತತೆಯ ಅನನ್ಯ ಸೊಬಗಿದೆ. ಬಾಳನ್ನು ಬೆಳಗಿಸುವ ಬೆಳಕು. ಅಷ್ಟೆ ಅಲ್ಲ ಮಾನವೀಯ ಪರಮ ಮೌಲ್ಯ ಅದಕ್ಕಿದೆ. ಅದು ಅಮರ... ಮಧುರ...

ಪಾಶ್ಚಿಮಾತ್ಯರಿಗೆ ಎರಡು ಜೀವಗಳ ನಡುವಿನ ಪ್ರೇಮಕ್ಕಿಂತಲೂ  ಕಾಮದ ಸೆಳೆತ ಜಾಸ್ತಿ. ಹಾಗಾಗಿ ಈ ವರ್ಷ ವ್ಯಾಲೆಂಟೈನ್ ಡೇ ಆಚರಿಸಿಕೊಂಡ ಪ್ರೇಮಿಗಳು ಮುಂದಿನ ವರ್ಷಕ್ಕೆ ಬದಲಾಗುತ್ತಾರೆ. ದುರಂತವೆಂದರೆ ಅಂತಹ ಸಂಸ್ಕೃತಿ ನಮ್ಮ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಬೆಳೆಯುತ್ತಿದೆ. ವಿವಾಹಪೂರ್ವ ಲೈಂಗಿಕತೆ ಹೆಚ್ಚುತ್ತಿದೆ. ಮೊದಲೆಲ್ಲಾ ಸಮಾಜದ ಭಯವಿತ್ತು. ಶೀಲ ಚಾರಿತ್ರ್ಯಕ್ಕೆ ಪೂಜ್ಯ ಸ್ಥಾನ ನೀಡಲಾಗುತ್ತಿತ್ತು. ಈಗ ಅಂತಹ ಭಾವನೆಗಳು ದೂರವಾಗುತ್ತಿವೆ. ಎಂಜಾಯ್ ಎಂಬ ಹೆಸರಿನಲ್ಲಿ ನಡೆಯಬಾರದೆಲ್ಲವೂ ನಡೆಯುತ್ತಿದೆ. ಇತ್ತೀಚೆಗೆ ಪಾರ್ಕ್, ಬಸ್ ಸ್ಟ್ಯಾಂಡ್ ಹೀಗೆ ಎಲ್ಲರ ಮುಂದೆ ಪ್ರೇಮಿಗಳಂತೆ ಗುರುತಿಸಿಕೊಳ್ಳುವುದೇ ನಮ್ಮ ಹುಡುಗ ಹುಡುಗಿಯರಿಗೆ ಫ್ಯಾಷನ್ನಂತಾಗಿದೆ. ಈ ಮಧ್ಯೆ ಪ್ರೇಮದ ನಾಟಕವಾಡಿ ಕಾಮದ ತೃಷೆ ತೀರಿಸಿಕೊಂಡು ವಂಚಿಸುವ ಭೂಪರೂ ಇದ್ದಾರೆ. ಪ್ರೇಮದ ಮುಂದಿನ ಮೆಟ್ಟಿಲು ಮದುವೆ. ಪ್ರೀತಿಸಿ ಪ್ರೇಮಿಗಳಾದವರು ಮುಂದೆ ವಿವಾಹವಾಗುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಸಾಯುವ ತನಕ ಜೊತೆಯಾಗಿಯೇ ಜೀವನ ಸಾಗಿಸುತ್ತಿದ್ದರು. ವಿಚ್ಚೇದನ ಎಂಬುವುದು ಅಪರೂಪವಾಗಿತ್ತು. ಈಗ ಇವತ್ತು ಮದುವೆಯಾಗಿ ನಾಳೆ ಡೈವರ್ಸ್ ನೀಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕಿಂತ ಒಂದು ಪಟ್ಟು ಜಾಸ್ತಿ ಎನ್ನುವಂತೆ  ಮದುವೆಯಾಗದೆ ಒಟ್ಟಿಗೆ ಒಂದೇ ಮನೆಯಲ್ಲಿ ಒಂದೇ ಕೋಣೆಯಲ್ಲಿ ಜೀವನ ನಡೆಸುವ ಲಿವಿಂಗ್ ಟುಗೆದರ್ ಸಂಸ್ಕೃತಿ ಹೆಚ್ಚಾಗುತ್ತಿದೆ. ಇರುವಷ್ಟು ದಿನ ಜೊತೆಯಲ್ಲಿದ್ದು ಬೋರ್ ಆದಾಗ ದೂರ ಸರಿಯಲು, ಮತ್ತೊಬ್ಬ ಸಂಗಾತಿಯನ್ನು ಹುಡುಕಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಇಲ್ಲಿ ಡೈವರ್ಸ್ ನ ಕಿರಿಕಿರಿ ಇರುವುದಿಲ್ಲ. ನೋಡಿ ಇದೆಂತಹ ಪ್ರೇಮಾ..?

ಇನ್ನೊಂದು ಭಯಾನಕ ಸಂಸ್ಕೃತಿಯೂ ನಗರಗಳಲ್ಲಿ ಬೆಳೆಯುತ್ತಿದೆ. ಅದ್ಯಾವುದೆಂದರೆ ವೈಫ್ ಸ್ವ್ಯಾಪಿಂಗ್. ವ್ಯಾಲೆಂಟೈನ್ ಡೇ ಯನ್ನು ಎಂಜಾಯ್ ಮಾಡುವ ಸಲುವಾಗಿ ಪಾರ್ಟಿಯನ್ನು ಏರ್ಪಡಿಸಿ ತಮ್ಮ ಮಡದಿಯರನ್ನೇ ಬದಲಾಯಿಸಿಕೊಳ್ಳುತ್ತಾರೆ. ಒಂದು ದಿನಪೂರ್ತಿ ಅವರೊಂದಿಗಿದ್ದು ಕುಡಿದು, ಕುಣಿದು, ಮಜಾ ಉಡಾಯಿಸುತ್ತಾರೆ.