ಚಿಮ್ಮಲಿ ಮಹಿಳೆಯರಲ್ಲಿ ಬದುಕಿನ ಆಶಾ ಕಿರಣ...

ಚಿಮ್ಮಲಿ ಮಹಿಳೆಯರಲ್ಲಿ ಬದುಕಿನ ಆಶಾ ಕಿರಣ...

LavaKumar   ¦    Mar 08, 2018 09:42:34 AM (IST)
ಚಿಮ್ಮಲಿ ಮಹಿಳೆಯರಲ್ಲಿ ಬದುಕಿನ ಆಶಾ ಕಿರಣ...

ಇವತ್ತು (ಮಾ.8) ಎಲ್ಲೆಡೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಲ್ಲಲ್ಲಿ ಕಾರ್ಯಕ್ರಮ, ಭಾಷಣ ಹೀಗೆ ಮುಗಿದೇ ಹೋಗಿ ಬಿಡುತ್ತದೆ.

ಹಾಗೆ ನೋಡಿದರೆ ಪ್ರತಿದಿನ ಪ್ರತಿಕ್ಷಣ ತನ್ನ, ಮಕ್ಕಳು, ಗಂಡ, ಸಂಸಾರ ಎಂದು ಸದಾ ಜವಾಬ್ದಾರಿ ಮತ್ತು ಒತ್ತಡದಲ್ಲೇ ಕಾಲ ಕಳೆಯುವ ಆಕೆಗೆ ವರ್ಷ ಪೂರ್ತಿ ಮೀಸಲಿಟ್ಟರೂ ಸಾಲದೇ... ಕುಟುಂಬ ನಿರ್ವಹಣೆಯಿಂದ ಆರಂಭವಾಗಿ ಹೊರಗೆ ಹೋಗಿ ನಿಭಾಯಿಸುವ ಕರ್ತವ್ಯದವರೆಗೆ ಆಕೆಯ ಕೊಡುಗೆ ಈ ಸಮಾಜಕ್ಕೆ ಒಂದೇ ಎರಡೇ ಲೆಕ್ಕವೇ ಹಾಕಲಾಗದು.

ಪುರುಷ ಸಮಾಜದಲ್ಲಿ ಆಕೆ ಕೇವಲ ಮನೆಗಷ್ಟೆ ಸೀಮಿತ ಎಂಬ ಕಾಲವಿತ್ತು. ಆದರೆ ಪೌರಾಣಿಕ ಯುಗದಿಂದ ಇಲ್ಲಿವರೆಗಿನ ಹಾದಿಯನ್ನು ಗಮನಿಸುವುದಾದರೇ ಅಂದೇ ಆಕೆ ಮಹತ್ವದ ಪಾತ್ರವಹಿಸಿದ್ದಳಲ್ಲದೆ, ಆದರ್ಶನೀಯವಾಗಿ ಉಳಿದು ಬಂದಿದ್ದಾಳೆ.

ಆಧುನಿಕ ಯುಗದಲ್ಲಿ ಪುರುಷನಿಗೆ ಸಮಾನಳಾಗಿ ನಿಂತು ಎಲ್ಲ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸುವ ಮೂಲಕ ಕೇವಲ ಕುಟುಂಬದ ಕಣ್ಣಾಗಿ ಉಳಿಯದೆ ಸಮಾಜದ ಕಣ್ಣಾಗಿ ಬಾಳುತ್ತಿದ್ದಾಳೆ. ಅಡುಗೆ ಮನೆಗಷ್ಟೆ ಸೀಮಿತಳಾಗಿದ್ದವಳು ಮನೆಯ ಹೊಸಿಲು ದಾಟಿ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾಳೆ. ಇದು ಪ್ರಗತಿಯ ಸಂಕೇತ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದಾಗಿದೆ.

ಆದರೂ ನಮ್ಮ ದೇಶದಲ್ಲಿ ಮಹಿಳೆ ಸುರಕ್ಷಿತವಾಗಿದ್ದಾಳೆಯೇ? ಎಂಬ ಪ್ರಶ್ನೆಯನ್ನು ಕೇಳಿದರೆ ಇಲ್ಲ ಎಂಬ ಉತ್ತರವೇ ಹೆಚ್ಚಾಗಿ ಕೇಳಿಬರುತ್ತಿದೆ. ಇದಕ್ಕೆ ಇವತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣಗಳೇ ಸಾಕ್ಷಿಯಾಗಿವೆ.

ಮಹಿಳೆಯೊಬ್ಬಳು ಮಧ್ಯರಾತ್ರಿಯೂ ನಿರ್ಭಯವಾಗಿ ನಡೆಯುವಂತಾಗಬೇಕೆಂಬ ಗಾಂಧೀಜಿಯವರ ಕನಸು ನನಸಾದಂತೆ ಕಾಣುತ್ತಿಲ್ಲ. ಕಾರಣ ಮಹಿಳೆಯನ್ನು ಕಾಮುಕ ದೃಷ್ಠಿಯಿಂದ ನೋಡುವ, ಆಕೆಯ ಅಸಹಾಯಕತೆಯನ್ನು ಬಳಸಿಕೊಂಡು ದೌರ್ಜನ್ಯ ಎಸಗುವ ದುರುಳರು ಇವತ್ತಿಗೂ ಇದ್ದಾರೆ.

ಗುರುವಾಗಿ ಭವಿಷ್ಯ ರೂಪಿಸುವ ಶಿಕ್ಷಕರೇ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗುವುದು, ಅಪ್ರಾಪ್ತ ಹೆಣ್ಣು ಮಕ್ಕಳನ್ನು ಲೈಂಗಿಕತೆಗೆ ಬಳಸಿಕೊಳ್ಳುವುದು, ನಡೆಯುತ್ತಲೇ ಇದೆ. ಬಹಳಷ್ಟು ಹೆಣ್ಣು ಮಕ್ಕಳು ಮೋಸ, ವಂಚನೆಗೆ ಬಲಿಯಾಗಿ ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾವಂತ, ಬುದ್ದಿವಂತ ಹೆಣ್ಣು ಮಕ್ಕಳು ವರದಕ್ಷಿಣೆಯಂತಹ ಕಿರುಕುಳಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಧೈರ್ಯದಿಂದ ಎಲ್ಲವನ್ನೂ ಎದುರಿಸುವ ಶಕ್ತಿಯನ್ನು ಬೆಳೆಸಬೇಕು. ಜತೆಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತಹ ಉದ್ಯೋಗ ಕಂಡುಕೊಳ್ಳಲು ಪ್ರೋತ್ಸಾಹಿಸಬೇಕು.

ಇವತ್ತಿಗೂ ಬಹಳಷ್ಟು ಜನ ಹೆಣ್ಣು ಹೆತ್ತವರು ಮಗಳಿಗೆ ವಿದ್ಯಾಭ್ಯಾಸ ಕೊಡಿಸಿ ಮದುವೆ ಮಾಡಿಬಿಟ್ಟರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಭಾವಿಸುತ್ತಾರೆ. ಆದರೆ ಬದಲಾದ ಕಾಲಘಟ್ಟದಲ್ಲಿ ಅವಳ ಬದುಕನ್ನು ಅವಳೇ ಕಟ್ಟಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕಾದ ಅಗತ್ಯತೆಯೂ ಇದೆ ಎಂದರೆ ತಪ್ಪಾಗಲಾರದು.

ಈಗಾಗಲೇ ಬಹಳಷ್ಟು ಹೆಣ್ಣು ಮಕ್ಕಳು ದೇಶ ಸ್ಮರಿಸಬಹುದಾದ ಕೊಡುಗೆಗಳನ್ನು ನೀಡಿದ್ದಾರೆ. ನೀಡುತ್ತಲೂ ಇದ್ದಾರೆ. ತೊಟ್ಟಿಲನ್ನು ತೂಗಿದ ಕೈ ದೇಶವನ್ನು ಆಳಿದನ್ನು ನಾವು ನೋಡಿದ್ದೇವೆ. ಈಗೀಗ ಹೆಣ್ಣುಮಕ್ಕಳ ಜನನದ ಅನುಪಾತಗಳಲ್ಲಿ ಇಳಿಕೆ ಕಂಡು ಬರುತ್ತಿರುವುದು ಆತಂಕಕಾರಿಯಾಗಿದೆ. ಇದೀಗ ಯುವಕರಿಗೆ ಮದುವೆಯಾಗಲು ಯುವತಿಯರು ಸಿಗದಂತಹ ಸನ್ನಿವೇಶಗಳು ಕೂಡ ಸೃಷ್ಠಿಯಾಗಿದೆ.

ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮಾನ್ಯತೆ ಹೆಚ್ಚಾದಂತೆ ಕಂಡು ಬಂದಿಲ್ಲ. ಶೇ.33ರಷ್ಟು ಮೀಸಲಾತಿಯನ್ನು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ನೀಡಬೇಕೆಂಬುದು ಇನ್ನೂ ಪ್ರಕ್ರಿಯೆಯಲ್ಲೇ ಉಳಿದಿರುವುದು ದುರಂತ.

ಮಹಿಳೆ ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಎಲ್ಲದರಲ್ಲಿಯೂ ತನ್ನ ಪ್ರಭುತ್ವ ತೋರುತ್ತಿದ್ದಾಳೆ. ಆದರೂ ಅಲ್ಲಲ್ಲಿ ಅಮಾಯಕ ಹೆಣ್ಣು ಮಕ್ಕಳು ಇನ್ನೂ ಕೂಡ ಒಂದಲ್ಲ ಒಂದು ಕಾರಣದಿಂದಾಗಿ ಕಣ್ಣೀರಿನಲ್ಲೇ ಬದುಕು ಕಳೆಯುತ್ತಿದ್ದಾರೆ. ಅಂತಹವರ ಬದುಕಿನಲ್ಲಿ ಆಶಾ ಕಿರಣ ಚಿಮ್ಮುವಂತಾಗಬೇಕು. ಆಗ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗುತ್ತದೆ....