ಶಿವರಾತ್ರಿಯಂದು ಇಪರ್ ನಲ್ಲಿ ಮಿಂದರೆ ಇಷ್ಟಾರ್ಥ ಪ್ರಾಪ್ತಿ!

ಶಿವರಾತ್ರಿಯಂದು ಇಪರ್ ನಲ್ಲಿ ಮಿಂದರೆ ಇಷ್ಟಾರ್ಥ ಪ್ರಾಪ್ತಿ!

B.M.Lavakumar   ¦    Feb 10, 2018 02:33:54 PM (IST)
ಶಿವರಾತ್ರಿಯಂದು ಇಪರ್ ನಲ್ಲಿ ಮಿಂದರೆ ಇಷ್ಟಾರ್ಥ ಪ್ರಾಪ್ತಿ!

ಸಾಮಾನ್ಯವಾಗಿ ಜಲಪಾತಗಳೆಂದರೆ ಭೋರ್ಗರೆದು ಧುಮುಕುತ್ತಾ ಸುಂದರ ನೋಟಗಳ ಉಣಬಡಿಸುವ ಪ್ರವಾಸಿ ತಾಣಗಳಾಗಿ ಮನಸ್ಸೆಳೆಯುತ್ತವೆ. ಆದರೆ ದಕ್ಷಿಣ ಕೊಡಗಿನಲ್ಲಿರುವ ಇಪರ್ ಜಲಪಾತ ಬರೀ ಕಣ್ಮನ ತಣಿಸುವುದು ಮಾತ್ರವಲ್ಲದೆ ಇಷ್ಟಾರ್ಥಗಳನ್ನು ನೆರವೇರಿಸುವ ಜಲಧಾರೆಯೂ ಹೌದು.

ಇಪರ್ ಜಲಧಾರೆಗೆ ಶಿರವೊಡ್ಡಿ ಸ್ನಾನ ಮಾಡಿದರೆ ಇಷ್ಟಾರ್ಥಗಳು ನೆರವೇರುವುದರೊಂದಿಗೆ ಜೀವನ ಪಾವನವಾಗುತ್ತದೆ ಎಂಬುದು ಹಿಂದಿನಿಂದಲೂ ಬಂದ ನಂಬಿಕೆಯಾಗಿದೆ. ಹೀಗಾಗಿ ಪ್ರತಿ ವರ್ಷ ಶಿವರಾತ್ರಿಯಂದು ಇಲ್ಲಿ ನಡೆಯುವ ತೀರ್ಥಸ್ನಾನ ಹೆಸರುವಾಸಿಯಾಗಿದೆ.

ಇಷ್ಟಕ್ಕೂ ಇಪರ್ ಜಲಪಾತ ಲಕ್ಷ್ಮಣತೀರ್ಥ ನದಿಯಿಂದ ಸೃಷ್ಠಿಯಾಗಿದ್ದು, ಕೊಡಗಿನಲ್ಲಿರುವ ಇತರೆ ಜಲಪಾತಗಳಿಗಿಂತ ವಿಶಿಷ್ಟವಾಗಿದೆ. ಇಪರ್ ಕ್ಷೇತ್ರದ ರಾಮೇಶ್ವರ ದೇವಾಲಯಕ್ಕೆ ಒಂದು ಕಿ.ಮೀ. ದೂರದಲ್ಲಿರುವ ಈ ಜಲಪಾತ ತನ್ನ ಮೋಹಕತೆ, ಕುಲುಕುಲು ಸೌಂದರ್ಯ, ವಯ್ಯಾರದ ನಾಟ್ಯ, ಜುಳುಜುಳು ನಿನಾದದೊಂದಿಗೆ ಸುಮಾರು ಎಪ್ಪತ್ತು ಅಡಿಯಷ್ಟು ಎತ್ತರದಿಂದ ಧುಮುಕಿ, ಅಲ್ಲಿಂದ ಮತ್ತೆ ನೂರು ಅಡಿಯಷ್ಟು ಕೆಳಕ್ಕೆ ಜಿಗಿಯುತ್ತಾ, ಮತ್ತೆ ಅಂಕುಡೊಂಕಾಗಿ ಹರಿದು ಚಿಕ್ಕಾತಿ ಚಿಕ್ಕ ಜಲಧಾರೆಗಳನ್ನು ಸೃಷ್ಟಿಸಿದೆ. ಸುಮಾರು ಇನ್ನೂರು ಅಡಿಯಷ್ಟು ಎತ್ತರದಿಂದ ಪ್ರಮುಖವಾಗಿ ಎರಡು ಹಂತಗಳಲ್ಲಿ ಧುಮುಕಿ ಹರಿಯುತ್ತದೆ.

ಇದಿಷ್ಟು ಜಲಧಾರೆಯ ಸೌಂದರ್ಯವಾದರೆ, ಈ ಜಲಧಾರೆಯ ಸೃಷ್ಠಿಯ ಹಿಂದೆ ಪೌರಾಣಿಕ ಕಥೆಯಿರುವುದನ್ನು ನಾವು ಕಾಣಬಹುದಾಗಿದೆ. ಅದು ಏನೆಂದರೆ, ಸೀತೆಯನ್ನು ಅರಸುತ್ತಾ ಹೊರಟ ರಾಮಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಶ್ರೀರಾಮ ಸೇರಿದಂತೆ ವಾನರರು ನಡೆಯುತ್ತಿದ್ದರೆ ಕೋಪಗೊಂಡ ಲಕ್ಷ್ಮಣ ಮುಂದಕ್ಕೆ ಹೆಜ್ಜೆಯಿರಿಸದೆ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ರಾಮನಿಗೆ ಎದುರಾಡದ ಲಕ್ಷ್ಮಣ ಅಂದು ಕೋಪಗೊಂಡು ಕುಳಿತದ್ದೇ ಮಲಯಾಳದಲ್ಲಿ ಇರಿಕ್ಕನ್ (ಕುಳಿತುಕೊಳ್ಳುವುದು) ಪದದಿಂದ ಇಪರ್ ಹುಟ್ಟಿತೆಂದು ಹೇಳಲಾಗುತ್ತಿದೆ.

ಕೆಲಕಾಲದ ನಂತರ ಶಾಂತಗೊಂಡ ಲಕ್ಷ್ಮಣ ತನ್ನ ವರ್ತನೆಗೆ ನಾಚಿ ಅಣ್ಣ ಶ್ರೀರಾಮನನ್ನು ನೋಯಿಸಿದ್ದಕ್ಕಾಗಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಭಯಗೊಂಡು ಲಕ್ಷ್ಮಣನನ್ನು ಸಮಾಧಾನಗೊಳಿಸಿ ಆತನ ತಪ್ಪನ್ನು ಕ್ಷಮಿಸಿದ. ಇದರಿಂದ ಸಂತೋಷಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು(ನಂದಿಸಲು) ಬಾಣಬಿಟ್ಟನಂತೆ. ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತಂತೆ. ಈ ರೀತಿ ಸೃಷ್ಟಿಯಾದ ಜಲಧಾರೆಯನ್ನು ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿ ಎಲ್ಲರೂ ಕುಡಿದು ಸಂತುಷ್ಟಗೊಂಡರಂತೆ. ಆ ಲಕ್ಷ್ಮಣತೀರ್ಥನದಿಯಿಂದ ಸೃಷ್ಠಿಯಾದ ಜಲಧಾರೆಯೇ ಇಪರ್ ಜಲಪಾತವಾಗಿದೆ. ಹೀಗಾಗಿ ಈ ಜಲಧಾರೆಗೆ ತಲೆಕೊಟ್ಟು ಮೀಯುವುದರಿಂದ ಪಾಪ ಕಳೆಯುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.

ಶಿವರಾತ್ರಿಯಂದು ಇಲ್ಲಿ ಜಾತ್ರೆಯನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಸ್ನಾನಗೈಯ್ಯಲು ಸಹಸ್ರಾರು ಮಂದಿ ಆಗಮಿಸುತ್ತಾರೆ. ಸ್ನಾನಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ಮರದ ಅಟ್ಟಳಿಗೆಯನ್ನು ಕಟ್ಟಲಾಗುತ್ತದೆ. ಇದರಲ್ಲಿ ನಿಂತು ಧುಮ್ಮಿಕ್ಕುವ ಜಲಧಾರೆಗೆ ತಲೆಯೊಡ್ಡಿ ನಿಂತು ಮೀಯುವುದು ನಡೆದುಕೊಂಡು ಬಂದಿದೆ. ಹೀಗೆ ಸ್ನಾನ ಮಾಡಿದರೆ ಬೇಡಿದ ಫಲ ಒದಗುತ್ತದೆ. ಅದರಲ್ಲೂ ನವದಂಪತಿಗಳು ಕೈಕೈ ಹಿಡಿದು ಸ್ನಾನ ಮಾಡಿದರೆ ಬಯಸಿದ್ದು ಈಡೇರುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.

ಇಪರ್ ಜಲಪಾತವನ್ನು ನೋಡಲು ಮಡಿಕೇರಿ ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಅಥವಾ ಹುಣಸೂರು ನಾಗರಹೊಳೆ ಕುಟ್ಟ ಮೂಲಕವೂ ತೆರಳಬಹುದು.

ಬೆಳಗ್ಗೆ ಹಾಗೂ ಮಧ್ಯಾಹ್ನ ಗೋಣಿಕೊಪ್ಪಲಿನಿಂದ ಬಸ್ ವ್ಯವಸ್ಥೆಯಿದೆ. ಉಳಿದಂತೆ ಕುಟ್ಟಕ್ಕೆ ತೆರಳುವ ಬಸ್ಸಿನಲ್ಲಿ ಶ್ರೀಮಂಗಲ ಹಾಗೂ ಕುಟ್ಟದ ನಡುವೆ ಸಿಗುವ ಕಾಕೂರು ಅಥವಾ ಕಾಯಿಮಾನಿಯಲ್ಲಿಳಿದು ಅಲ್ಲಿಂದ ನಡೆದುಕೊಂಡು ಹೋಗಬಹುದಾಗಿದೆ. ಅಥವಾ ಶ್ರೀಮಂಗಲಕ್ಕೆ ತೆರಳಿ ಅಲ್ಲಿಂದ ಬಾಡಿಗೆ ವಾಹನಗಳಲ್ಲಿಯೂ ತೆರಳಬಹುದು.

More Images