ಮೈಸೂರಲ್ಲಿ ಪ್ರವಾಸಿಗರ ಸೆಳೆಯುವ ವ್ಯಾಕ್ಸ್ ಮ್ಯೂಸಿಯಂ

ಮೈಸೂರಲ್ಲಿ ಪ್ರವಾಸಿಗರ ಸೆಳೆಯುವ ವ್ಯಾಕ್ಸ್ ಮ್ಯೂಸಿಯಂ

LavaKumar   ¦    Oct 10, 2018 10:00:37 AM (IST)
ಮೈಸೂರಲ್ಲಿ ಪ್ರವಾಸಿಗರ ಸೆಳೆಯುವ ವ್ಯಾಕ್ಸ್ ಮ್ಯೂಸಿಯಂ

ನಿಸರ್ಗ ಸುಂದರ ತಾಣಗಳು, ಪಾರಂಪರಿಕ ಕಟ್ಟಡಗಳು, ಅರಮನೆಗಳು, ಮೃಗಾಲಯ, ದೇವಸ್ಥಾನ ಸೇರಿದಂತೆ ತನ್ನದೇ ಆದ ಹತ್ತು ಹಲವು ವಿಶೇಷತೆಗಳಿಂದ ಗಮನಸೆಳೆಯುವ ಮೈಸೂರು ನಗರಕ್ಕೆ ಪ್ರವಾಸಿಗರು ನೋಡತಕ್ಕ ಮ್ಯೂಸಿಯಂವೊಂದು ಸೇರ್ಪಡೆಯಾಗಿದೆ. ಅದುವೇ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ.

ಹಾಗೆ ನೋಡಿದರೆ ಮೈಸೂರು ನಗರದಲ್ಲಿ ಹಿಂದೆಯೇ ಒಂದು ವ್ಯಾಕ್ಸ್ ಮ್ಯೂಸಿಯಂ ಇತ್ತಾದರೂ ಇದು ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಇನ್ನು ಮುಂದೆ ನಗರಕ್ಕೆ ಬರುವ ಪ್ರವಾಸಿಗರು ತಾವು ನೋಡುವ ಪಟ್ಟಿಯಲ್ಲಿ ವ್ಯಾಕ್ಸ್ ಮ್ಯೂಸಿಯಂನ್ನು ಸೇರಿಸಿಕೊಳ್ಳಬಹುದಾಗಿದೆ.

ನಗರದ ರೇಸ್‍ಕೋರ್ಸ್ ಹಿಂಭಾಗದಲ್ಲಿ ತಲೆ ಎತ್ತಿರುವ ಈ ಮ್ಯೂಸಿಯಂ ಹಲವು ವಿಶೇಷತೆಗಳನ್ನು ತನ್ನೊಳಗೆ ಹುದುಗಿಸಿಕೊಂಡು ಎಲ್ಲರ ಗಮನಸೆಳೆಯುತ್ತದೆ. ಈ ಮ್ಯೂಸಿಯಂನ ರೂವಾರಿ ಹೊನ್ನಾವರದವರಾದ ಕಲಾವಿದ, ಕಲಾ ಶಿಕ್ಷಕ ಉಮೇಶ್ ಶೆಟ್ಟಿಯವರರಾಗಿದ್ದು, ಇವರೊಂದಿಗೆ ಇನ್ನೂ ಏಳುಮಂದಿ ಸಾಥ್ ನೀಡಿದ್ದು, ಉಮೇಶ್ ಶೆಟ್ಟಿಯವರ ಕಲ್ಪನೆ, ಕನಸು, ಪ್ರತಿಭೆ, ಶ್ರಮ ಎಲ್ಲವೂ ಸೇರಿ ಇಲ್ಲಿ ವ್ಯಾಕ್ಸ್ ಮ್ಯೂಸಿಯಂ ಆಗಿ ರೂಪತಾಳಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಇಷ್ಟಕ್ಕೂ ಇಲ್ಲಿ ಇಂತಹದೊಂದು ಮ್ಯೂಸಿಯಂ ನಿರ್ಮಾಣಕ್ಕೆ ಲಂಡನ್‍ನ ವ್ಯಾಕ್ಸ್ ಮ್ಯೂಸಿಯಂ ಸ್ಫೂರ್ತಿಯಂತೆ. ಬಹಳಷ್ಟು ವರ್ಷಗಳಿಂದ ಕರ್ನಾಟಕದಲ್ಲಿಯೂ ವ್ಯಾಕ್ಸ್ ಮ್ಯೂಸಿಯಂ ಮಾಡಬೇಕೆನ್ನುವ ಅವರ ಕನಸಿಗೆ ಮತ್ತು ಎಲ್ಲಿ ಮಾಡಿದರೆ ಸೂಕ್ತ ಎನ್ನುವ ಆಲೋಚನೆ ಬಂದಾಗ ನೆನಪಾಗಿದ್ದೇ ಮೈಸೂರು. ಇಲ್ಲಿಯ ವಾತಾವರಣ ಮತ್ತು ಪ್ರವಾಸಿಗರು ಬರುವ ಸ್ಥಳವಾಗಿರುವುದರಿಂದ ತಮ್ಮ ಶ್ರಮಕ್ಕೂ ಸಾರ್ಥಕತೆ ಸಿಗುತ್ತದೆ ಎಂದು ಆಲೋಚಿಸಿ ಮ್ಯೂಸಿಯಂ ನಿರ್ಮಾಣ ಮಾಡಿದ್ದಾರೆ.

ಸದ್ಯ ಮ್ಯೂಸಿಯಂನಲ್ಲಿ ಬರೋಬ್ಬರಿ 52 ಸೆಲಿಬ್ರಿಟಿಗಳ ಮೇಣದ ಪ್ರತಿಕೃತಿಯಿದ್ದು, ಪ್ರಶಾಂತ ಸ್ಥಳದಲ್ಲಿ ಸುಮಾರು 6 ಸಾವಿರ ಚದರ ಅಡಿ ಪ್ರದೇಶದಲ್ಲಿ ಮ್ಯೂಸಿಯಂನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿರುವ ಮಹಾನ್ ನಾಯಕರ ಪ್ರತಿಮೆಗಳು ಅದ್ಭುತವಾಗಿ ಮೂಡಿ ಬಂದಿವೆ. ನಾವು ಮ್ಯೂಸಿಯಂಗೆ ಕಾಲಿಡುತ್ತಿದ್ದಂತೆಯೇ ಮೊದಲಿಗೆ ನಮ್ಮನ್ನು ಸೆಳೆಯುವುದು ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಮೆ. ಮೈಸೂರು ಸಂಸ್ಥಾನದ ದಿವಾನರಾಗಿ, ಕೆಆರ್‍ಎಸ್ ಜಲಾಶಯದ ನಿರ್ಮಾಣಕ್ಕೆ ಕಾರಣರಾದ ಅವರಿಗೆ ನಮಿಸಿ ಮುನ್ನಡೆದರೆ ಪ್ರಧಾನ ಮಂತ್ರಿಗಳಿಂದ ಆರಂಭವಾಗಿ ಮಿಸ್ಟರ್ ಬೀನ್ ತನಕ ಸುಮಾರು 52 ಮಂದಿ ನಮ್ಮನ್ನೊಮ್ಮೆ ಸೆಳೆಯುತ್ತಾರೆ. ಇಲ್ಲಿ ಐದು ಅಡಿ ಎತ್ತರದ ಮದರ್ ತೆರೇಸಾ ರಿಂದ ಆರಂಭವಾಗಿ 7.2 ಅಡಿ ಎತ್ತರದ ಅಜಾನುಬಾಹು ಗ್ರೇಟ್ ಕಲಿವರೆಗೆ ದೇಶ ವಿದೇಶಗಳ ಮಹಾನ್ ವ್ಯಕ್ತಿಗಳು ನಮ್ಮನ್ನು ಸೆಳೆಯುತ್ತಾರೆ. ರಾಘವೇಂದ್ರ ಸ್ವಾಮಿ, ಸಾಯಿಬಾಬಾ, ಸ್ವಾಮಿ ವಿವೇಕಾನಂದ, ಗುರುನಾನಕ್, ಅಡಾಲ್ಫ್ ಹಿಟ್ಲರ್, ಮೈಕೆಲ್ ಜಾನ್ಸನ್, ಮಹಾತ್ಮ ಗಾಂಧಿ, ರವೀಂದ್ರನಾಥ್ ಟ್ಯಾಗೂರ್, ಭಗತ್ ಸಿಂಗ್, ಮೊನಲಿಸಾ, ಕಲ್ಪನಾಚಾವ್ಲಾ ಪ್ರಧಾನಿ ನರೇಂದ್ರ ಮೋದಿ, ರಾಜಕೀಯ ಚಾಣಕ್ಯ ಅಮಿತ್ ಶಾ ಹೀಗೆ ಹಲವರು ನಮ್ಮ ಮುಂದೆ ಹಾದು ಹೋದಂತೆ, ನಮ್ಮ ಮುಂದೆಯೇ ಬಂದು ನಿಂತಂತೆ ಭಾಸವಾಗುತ್ತದೆ.

ಇನ್ನು ಈ ಮ್ಯೂಸಿಯಂನ ಉಸ್ತುವಾರಿಯನ್ನು ಎಡ್ವಿನ್ ಡಿಸೋಜಾ ವಹಿಸಿಕೊಂಡಿದ್ದು, ಇನ್ನಷ್ಟು ಅಭಿವೃದ್ಧಿಗೊಳಿಸಿ ಜತೆಗೆ ಕುವೆಂಪು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸೇರಿದಂತೆ ಇನ್ನು ಹಲವು ವ್ಯಕ್ತಿಗಳ ಪ್ರತಿರೂಪಗಳನ್ನು ನಿರ್ಮಿಸುವ ಆಲೋಚನೆ ಅವರಿಗಿದೆ. ಜತೆಗೆ ಹವಾನಿಯಂತ್ರಣ ಅಳವಡಿಸಿ ಮೂರ್ತಿಗಳನ್ನು ರಕ್ಷಿಸುವ ಚಿಂತನೆಯಲ್ಲಿದ್ದಾರೆ.

ಈಗಾಗಲೇ ಇಲ್ಲಿಗೆ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಭೇಟಿ ನೀಡತೊಡಗಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಮ್ಯೂಸಿಯಂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವುದಂತು ಖಚಿತ.

More Images