ಅಬ್ಬರಿಸಿ, ಎದೆಯುಬ್ಬಿಸಿ ಹೇಳಿ `ನಾನೊಬ್ಬ ಕನ್ನಡಿಗ'

ಅಬ್ಬರಿಸಿ, ಎದೆಯುಬ್ಬಿಸಿ ಹೇಳಿ `ನಾನೊಬ್ಬ ಕನ್ನಡಿಗ'

LK   ¦    Oct 31, 2018 02:12:00 PM (IST)
ಅಬ್ಬರಿಸಿ, ಎದೆಯುಬ್ಬಿಸಿ ಹೇಳಿ `ನಾನೊಬ್ಬ ಕನ್ನಡಿಗ'

ನವೆಂಬರ್ 1 ಬಂದಿದೆ. ಕನ್ನಡಿಗರೆಲ್ಲರೂ ರಾಜ್ಯೋತ್ಸವ ಆಚರಣೆಯಲ್ಲಿದ್ದಾರೆ. ಒಂದಷ್ಟು ಕನ್ನಡದ ಬಗ್ಗೆ ಮಾತುಗಳು ಪುಂಖಾನುಪುಂಖವಾಗಿ ಹೊರಬರುತ್ತವೆ. ಅಲ್ಲಿಗೆ ಮುಗಿಯಿತು. ಮತ್ತೆ ನೆನಪಾಗುವುದು ನಮಗೆ ಮುಂದಿನ ರಾಜ್ಯೋತ್ಸವ ಬಂದಾಗಲೇ...

ಬೇರೆಲ್ಲ ರಾಜ್ಯಗಳಿಗೆ ಹೋಲಿಸಿದರೆ ಮಾತೃಭಾಷೆ ಇಷ್ಟೊಂದು ವೇಗವಾಗಿ ನೇಪಥ್ಯಕ್ಕೆ ಸರಿಯುತ್ತಿರುವುದು ನಮ್ಮ ರಾಜ್ಯದಲ್ಲಿಯೇ ಎಂದರೆ ತಪ್ಪಾಗಲಾರದು. ಇವತ್ತು ಎಲ್ಲಿಗೆ ಹೋಗಲಿ ಅವರವರು ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಹಾಗಿಲ್ಲ. ಕನ್ನಡದಲ್ಲಿ ಮಾತನಾಡುವವರನ್ನು ಅಪರಿಚಿತರಂತೆ ಅಥವಾ ತಾತ್ಸಾರದಿಂದ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಇದು ಒಂದು ರೀತಿಯಲ್ಲಿ ದುರಂತ ಎಂದರೂ ತಪ್ಪಾಗಲಾರದು.

ಇವತ್ತು ಕನ್ನಡವನ್ನು ಉಳಿಸಿಕೊಳ್ಳಲು ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಮಗುವಿಗೆ ಶಾಲಾ ದಿನಗಳಿಂದಲೇ ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ಬರುತ್ತಿದೆ. ಇದಕ್ಕೆ ಕಾರಣ ಆಂಗ್ಲ ವ್ಯಾಮೋಹಕ್ಕೆ ಸಿಲುಕಿದ ಹೆತ್ತವರು ಆಂಗ್ಲ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಅಲ್ಲಿ ಕನ್ನಡದ ವಾತಾವರಣವೇ ಇರುವುದಿಲ್ಲ. ಜತೆಗೆ ಕನ್ನಡ ಮಾತನಾಡುವುದೇ ಅಪರಾಧ ಎಂಬಂತೆ ಬಿಂಬಿಸಿ ಅಪ್ಪಿತಪ್ಪಿ ಮಾತನಾಡಿ ಬಿಟ್ಟರೆ ದಂಡ ವಿಧಿಸುವಂತಹ ಪರಿಸ್ಥಿತಿಯಿದೆ. ಹೀಗಾದರೆ ಯಾವ ಮಗು ತಾನೆ ಕನ್ನಡ ಮಾತನಾಡುತ್ತದೆ. ಅದಕ್ಕೆ ಕನ್ನಡದ ಹಿರಿಮೆ, ಗರಿಮೆಗಳ ಹೇಳುವ ಬದಲು `ಕನ್ನಡ ಮಾತನಾಡಿದರೆ ದಂಡ ನೀಡು' ಎಂಬ ಭಯದ ವಾತಾವರಣ ತಂದಿಟ್ಟು ಬಿಟ್ಟರೆ ಅದು ಮುಂದೆ ಕನ್ನಡ ಮಾತನಾಡುತ್ತಾ?

ಲಕ್ಷಾಂತರ ರೂ. ಖರ್ಚು ಮಾಡಿ ಆಂಗ್ಲ ಮಾಧ್ಯಮ ಶಾಲೆಗೆ ಮಗುವನ್ನು ದಾಖಲಿಸುವ ಪೋಷಕರು ತನ್ನ ಮಗು ಇಂಗ್ಲೀಷ್‍ನಲ್ಲಿಯೇ ಮಾತನಾಡಬೇಕೆಂದು ಬಯಸುತ್ತಾರೆ. ಅಷ್ಟೇ ಅಲ್ಲ ಕನ್ನಡ ಮಾತನಾಡಿದರೆ ಮುಖ ಸಿಂಡರಿಸಿ ಅಷ್ಟೊಂದು ಖರ್ಚು ಮಾಡಿ ಶಾಲೆಗೆ ಸೇರಿಸಿದ್ದು ಕನ್ನಡ ಮಾತನಾಡುವುದಕ್ಕಾ ಎಂದು ಗದರುತ್ತಾರೆ.

ಒಂದು ಮಗುವಿಗೆ ಶಾಲೆಯಿಂದ ಆರಂಭವಾಗಿ ಮನೆಯಲ್ಲಿಯೂ ಇಂಗ್ಲೀಷನ್ನೇ ಮಾತಾಡು ಎಂಬಂತಹ ಸ್ಥಿತಿ ನಿರ್ಮಾಣವಾದಾಗ ಮತ್ತು ಶಾಲೆಯಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುತ್ತಾರೆ. ಮನೆಯಲ್ಲಿ ಕನ್ನಡ ಮಾತನಾಡಿದರೆ ಬಯ್ಯುತ್ತಾರೆ ಎಂಬ ಭಯ ಶುರುವಾದರೆ ಆ ಮಗು ಕನ್ನಡವನ್ನು ಹೇಗೆ ತಾನೆ ಮಾತಾಡಬೇಕು? ಜತೆಗೆ ಕನ್ನಡ ಮಾತನಾಡುವ ಧೈರ್ಯವನ್ನೇಕೆ ಮಾಡುತ್ತದೆ?

ಇಷ್ಟಕ್ಕೂ ನಮ್ಮ ರಾಜ್ಯದಲ್ಲಿ ಕನ್ನಡ ಉಳಿದು ಕೊಂಡಿರುವುದಾದರೂ ಎಲ್ಲಿ? ಪಟ್ಟಣಗಳಲ್ಲಿನಾ? ಗ್ರಾಮೀಣ ಪ್ರದೇಶಗಳಲ್ಲಿನಾ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೋದರೆ ಇವತ್ತು ಕನ್ನಡ ಉಳಿದಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಪಟ್ಟಣ ಪ್ರದೇಶಗಳಲ್ಲಿ ಕನ್ನಡವನ್ನು ಉಳಿಸಿರುವುದು ನಮ್ಮ ಆಟೋ, ಕ್ಯಾಬ್ ಇನ್ನಿತರ ಕೆಲವೇ ಕೆಲವು ಕನ್ನಡ ಅಭಿಮಾನಿಗಳು ಎಂದರೆ ಅತಿಶಯೋಕ್ತಿಯಾಗಲಾರದು.

ಕನ್ನಡದ ಕಾರ್ಯಕ್ರಮಗಳನ್ನು ತಮ್ಮ ಏರಿಯಾಗಳಲ್ಲಿ ಹಮ್ಮಿಕೊಂಡು ಚಾಚೂ ತಪ್ಪದೆ ಮಾಡುವುದು ನಮ್ಮ ಚಾಲಕರು ಮಾತ್ರ. ಅಷ್ಟೇ ಅಲ್ಲ ಸಿನಿಮಾ ನಟರಿಗೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಅಂದ್ರೆ ಅದು ಕೂಡ ಚಾಲಕರ ವರ್ಗವೇ.

ಹರಿದು ಹಂಚಿಹೋಗಿದ್ದ ಕನ್ನಡ ನಾಡು ಇವತ್ತು ವಿಶಾಲ ಕರ್ನಾಟಕವಾಗಿ ನಮ್ಮ ಮುಂದಿದೆ. ಆದರೆ ಗಡಿ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಜತೆಗೆ ವಲಸಿಗರು ಹೆಚ್ಚಿನ ಪ್ರಮಾಣದಲ್ಲಿ ನೆಲೆಸುತ್ತಿರುವುದರಿಂದ ಇಲ್ಲಿ ಎಲ್ಲ ಭಾಷೆಗಳ ಸಂಗಮವಾಗುತ್ತಿವೆ. ಹೊರಗಿನವರು ಕಷ್ಟಪಟ್ಟು ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ ಇಲ್ಲಿಯೇ ಹುಟ್ಟಿ ಬೆಳೆದವರು ಕನ್ನಡವನ್ನು ಮಾತನಾಡಿದರೆ ತಮ್ಮ ಘನತೆ ಗೌರವ ಕಡಿಮೆಯಾಗಿ ಬಿಡುತ್ತದೆ ಏನೋ ಎಂಬಂತೆ ಕನ್ನಡ ಗೊತ್ತಿದ್ದರೂ ಅದನ್ನು ಮಾತನಾಡದೆ ಇಂಗ್ಲೀಷ್‍ನತ್ತಲೇ ಹೆಚ್ಚಿನ ಒಲವು ತೋರುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಹಾಗೆ ನೋಡಿದರೆ ನಾವು ಬೇರೆ ಭಾಷೆ ಮಾತನಾಡಿದ ತಕ್ಷಣಕ್ಕೆ ಧಕ್ಕೆ ಬರುವುದಿಲ್ಲ. ನಾವು ನಮ್ಮ ಭಾಷೆ ಬಗ್ಗೆ ಅಭಿಮಾನವನ್ನಿಟ್ಟುಕೊಂಡು ಬೇರೆ ಭಾಷೆಯನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ ಕನ್ನಡ ಮಾತನಾಡುವುದೇ ತಪ್ಪು ಎಂಬಂತಹ ಮನಸ್ಥಿತಿಯನ್ನು ಕೆಲವರು ಬೆಳೆಸಿಕೊಳ್ಳುತ್ತಿರುವುದು ಕನ್ನಡಕ್ಕೆ ಮಾಡುತ್ತಿರುವ ದೊಡ್ಡ ಅಪಮಾನವಾಗಿದೆ.

ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವನ್ನು ಅಷ್ಟು ಸುಲಭವಾಗಿ ಬದಿಗೆ ಸರಿಸುವುದಕ್ಕೆ ಯಾವ ಭಾಷೆಗಳಿಂದಲೂ ಸಾಧ್ಯವಿಲ್ಲ ಎಂಬುದನ್ನು ಇತಿಹಾಸ ಸಾರುತ್ತಲೇ ಬಂದಿದೆ. ಪ್ರತಿಯೊಬ್ಬ ಕನ್ನಡಿಗನೂ ನಾನೊಬ್ಬ ಕನ್ನಡಿಗ ಎಂಬ ಮನೋಭಾವವನ್ನು ಬೆಳೆಸಿಕೊಂಡಿದ್ದೇ ಆದರೆ ಕನ್ನಡ ನಾಡು ಚೆಲುವ ಕನ್ನಡ ನಾಡಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.