ಕೊಡಗಿನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಲೋಕೇಶ್ ಅಚ್ಚಪ್ಪರ ಹುರಿ ಮೀಸೆ!

ಕೊಡಗಿನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಲೋಕೇಶ್ ಅಚ್ಚಪ್ಪರ ಹುರಿ ಮೀಸೆ!

LK   ¦    Jan 11, 2017 12:19:19 PM (IST)

ಮಡಿಕೇರಿ: ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ದಪ್ಪನೆಯ ಹುರಿಮೀಸೆ ಬಿಟ್ಟು ತಮ್ಮ ಗತ್ತು ಗೈರತ್ತನ್ನು ಪ್ರದರ್ಶಿಸುತ್ತಿದ್ದ ಬಗ್ಗೆ ಅಲ್ಲಲ್ಲಿ ಓದಿರುತ್ತೇವೆ. ಸಿನಿಮಾಗಳಲ್ಲಿ ನೋಡಿರುತ್ತೇವೆ. ಅದರಲ್ಲೂ ಅಜಾನುಭಾವು ದೇಹದ ವ್ಯಕ್ತಿಗೆ ಹುರಿಮೀಸೆ ಭೂಷಣವೂ ಹೌದು.

ರಾಜರ ಕಾಲದಲ್ಲಿ ಮೀಸೆಯೇ ವ್ಯಕ್ತಿಯ ಪರಾಕ್ರಮವನ್ನು ಹೇಳುತ್ತಿತ್ತು. ಮೀಸೆ ಬಿಟ್ಟು ಮೆರೆಯುತ್ತಿದ್ದವರ ಬಗ್ಗೆ ಪುರಾಣ ಕಥೆಗಳಲ್ಲಿಯೂ ಬೇಕಾದಷ್ಟು ನಿದರ್ಶನಗಳು ಸಿಗುತ್ತಿವೆ. ಈಗಲೂ ಭಾರೀ ಮೀಸೆಯ ವ್ಯಕ್ತಿಗಳು ನಮಗೆ ಕಾಣಸಿಗುತ್ತಾರೆ. ಇತ್ತೀಚೆಗೆ ಫ್ಯಾಷನ್ ಲೋಕವಾಗಿರುವುದರಿಂದಾಗಿ ಮೀಸೆಗಳು ಕೂಡ ವಿವಿಧ ವಿನ್ಯಾಸಗಳಿಂದ ಪುರುಷರ ಮುಖವನ್ನು ಅಲಂಕರಿಸುತ್ತಿವೆ.

ಇವರೆಲ್ಲರ ನಡುವೆ ಹಲವು ದಶಕಗಳಿಂದ ತಮ್ಮ ಹುರಿಮೀಸೆಯನ್ನು ಕಾಪಾಡಿಕೊಂಡು ಬಂದ ವ್ಯಕ್ತಿಯೊಬ್ಬರು ಕೊಡಗಿನಲ್ಲಿದ್ದಾರೆ. ಅವರ ಹೆಸರು ಕೊಂಗೇಟಿರ ಲೋಕೇಶ್ ಅಚ್ಚಪ್ಪ. ಇವರ ಮೀಸೆಗೊಂದು ಇತಿಹಾಸವೂ ಇದೆ. ಇತ್ತೀಚೆಗೆ ಕೊಡಗಿನಲ್ಲಿ ನಡೆದ ಮೀಸೆ ಪ್ರದರ್ಶನ ಸ್ಪರ್ಧೆಯಲ್ಲಿ ಇವರ ಮೀಸೆಗೆ ಪ್ರಥಮ ಬಹುಮಾನವೂ ದೊರೆತಿದೆ. ಕಳೆದ ಎರಡು ವರ್ಷಗಳಿಂದ ಇವರ ಮೀಸೆಯನ್ನು ಮೀರಿಸಿ ಮೀಸೆ ಪ್ರದರ್ಶಿಸಲು ಬೇರೆಯವರಿಗೆ ಸಾಧ್ಯವಾಗಿಲ್ಲ. ಹೀಗಾಗಿಯೇ ಎರಡು ವರ್ಷವೂ ಇವರೇ `ಕೊಂಬೊ ಮೀಸೆರ ಬಂಬೋ' ಆಗಿ ಗಮನಸೆಳೆದಿದ್ದಾರೆ. ಇವತ್ತು ಕೊಡಗಿನಾದ್ಯಂತ ತನ್ನ ಹುರಿಮೀಸೆಯಿಂದಲೇ ಎಲ್ಲರ ಗಮನಸೆಳೆಯುತ್ತಿರುವ  ಕೊಂಗೇಟಿರ ಲೋಕೇಶ್ ಅಚ್ಚಪ್ಪ ಅವರು  ಮೂಲತಃ ಸೋಮವಾರಪೇಟೆ ತಾಲೂಕಿನ ಚೇರಳ ಶ್ರೀಮಂಗಲ ಗ್ರಾಮದ ಚೆಟ್ಟಳ್ಳಿಯ ನಿವಾಸಿ.

ಬಿಎಸ್ಎಫ್ ನಲ್ಲಿ ಯೋಧನಾಗಿ 1981 ರಿಂದ 2001ರವರೆಗೆ ಕಾಶ್ಮೀರ, ಪಂಜಾಬ್, ರಾಜಸ್ಥಾನ್, ದೆಹಲಿ ಹಾಗೂ ಬೆಂಗಳೂರು ಸೇರಿದಂತೆ ಹಲವೆಡೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಸೇವೆಯಲ್ಲಿದ್ದಾಗ ಒಮ್ಮೆ  ಅವರ ಕಮಾಂಡೆಂಟ್ ಆಗಿದ್ದ ಎಸ್.ಎಸ್.ಬಿಂಡಕ್ಕ್ ಎಂಬುವರು ನೀನು  ಹುರಿ ಮೀಸೆ ಬಿಟ್ಟರೆ ಗಣರಾಜ್ಯೋತ್ಸವದ ದಿನದ ಪೇರೆಡ್ ನಲ್ಲಿ ಎಡ ಅಥವಾ ಬಲದ ಮುಂದಿನ ನಿಯಂತ್ರಕನಾಗಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರಂತೆ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದ ಲೋಕೇಶ್ ಅಚ್ಚಪ್ಪ ಅವರು ಮೀಸೆ ಬಿಡುವ ಮೂಲಕ ತನ್ನ ಆಸೆಯನ್ನು ಈಡೇರಿಸಿಕೊಂಡರಂತೆ. ಅಲ್ಲಿಂದ ಇಲ್ಲಿಯವರೆಗೂ ಹುರಿ ಮೀಸೆಯಲ್ಲಿಯೇ ಕಂಗೊಳಿಸುತ್ತಾರೆ.
ತಮ್ಮ ಸೇವಾವಧಿಯಲ್ಲಿ ಮೀಸೆ ಬಿಟ್ಟಿದ್ದರಿಂದ ಆದ ಕೆಲವೊಂದು ಅನುಭವಗಳನ್ನು ಹೊರ ಹಾಕುವ ಅವರು ಅವತ್ತಿನ ದಿನಗಳಲ್ಲಿ ಮುಂಜಾನೆ ಎದ್ದು ತನ್ನ ಮೀಸೆಯನ್ನು ಬಾಚಿ ಅದನ್ನು ಸಿದ್ದಗೊಳಿಸುವುದೇ ಒಂದು ಕೆಲಸವಾಗಿ ಬಿಡುತ್ತಿತ್ತಂತೆ. ಇದರಿಂದಾಗಿ ಬೆಳಗ್ಗಿನ ತಿಂಡಿ ಕಳೆದುಕೊಂಡಿದ್ದ ದಿನಗಳು ಇದೆ ಎಂದು ನೆನಪಿಸಿಕೊಳ್ಳುವ ಅವರು, ಆಗ ಅವರಿಗೆ ಸೇನೆಯಿಂದ ಮೀಸೆ ನಿರ್ವಹಣೆಗಾಗಿ ತಿಂಗಳಿಗೆ ಮೂವತ್ತು ರೂಪಾಯಿಯ ಹೆಚ್ಚಿನ  ಭತ್ಯೆಯನ್ನು ನೀಡಲಾಗುತ್ತಿತ್ತು ಎಂಬ ವಿಚಾರವನ್ನು ಹೆಮ್ಮೆಯಿಂದ ಹೇಳುತ್ತಾರೆ.

ಅವತ್ತಿನಿಂದ ಇವತ್ತಿನವರೆಗೂ ತನ್ನ ಮೀಸೆಯನ್ನು ಕಾಳಜಿಯಿಂದ ನಿರ್ವಹಿಸಿಕೊಂಡು ಬಂದಿರುವ ಲೋಕೇಶ್ ಅಚ್ಚಪ್ಪ ಅವರು ಕೊಡಗಿನಲ್ಲಿ ಎಲ್ಲರ ಗಮನಸೆಳೆಯುತ್ತಿದ್ದಾರೆ


More Images