ಕಥೆ ಹೇಳುತ್ತಿರುವ ಸಾವಿರ ಕಂಬಗಳು...! (ವೀಡಿಯೋ)

ಕಥೆ ಹೇಳುತ್ತಿರುವ ಸಾವಿರ ಕಂಬಗಳು...! (ವೀಡಿಯೋ)

NB   ¦    Dec 26, 2017 03:18:32 PM (IST)
ಕಥೆ ಹೇಳುತ್ತಿರುವ ಸಾವಿರ ಕಂಬಗಳು...! (ವೀಡಿಯೋ)

ಎಲ್ಲಿ ನೋಡಿದರೂ ಕಂಬಗಳ ಸಾಲು, ಪ್ರತಿಯೊಂದು ಕಂಬಗಳಿಗೂ ಅದರದ್ದೇ ಆದ ವಿಶೇಷತೆಯಿದೆ. ಇಲ್ಲಿರುವ ಪ್ರತಿಯೊಂದು ಕಂಬಗಳು ಮತ್ತು ಅದರ ವಾಸ್ತುಶಿಲ್ಪ ಅದ್ಭುತ. ನೀವು ಅನೇಕ ದೇವಾಲಯಗಳಿಗೆ ಹೋಗಿದ್ದೀರಿ ಅಥವಾ ಬಸದಿಗಳಾಗಿರ್ಬೋದು ನೋಡಿರ್ತೀರಿ...ಅಲ್ಲಿ ಪ್ರಾಚೀನ ಕಾಲದ ವಾಸ್ತುಶಿಲ್ಪ ಶೈಲಿ, ಕಂಬಗಳು ಸರ್ವೇ ಸಾಮಾನ್ಯ... ಆದ್ರೆ ಇವತ್ತಿನ ಸಂಚಿಕೆಯಲ್ಲಿ ನಾವು ಹೇಳಹೊರಟಿರುವ ಬಸದಿಯಲ್ಲಿ 100ಅಲ್ಲ, 200 ಅಲ್ಲ ಬರೋಬ್ಬರಿ ಸಾವಿರ ಕಂಬಗಳ ಸಾಲು...ನಿಜಕ್ಕೂ ಅದ್ಬುತ.

ಹೌದು...ದಕ್ಷಿಣ ಕನ್ನಡ ಜಿಲ್ಲೆಯ ಕೆಲವೇ ಕೆಲವು ಕಿ.ಮೀ ದೂರದಲ್ಲಿ ವಿಸ್ಮಯ ಕುತೂಹಲಕ್ಕೆ ಕಾರಣವಾಗಿರುವ ಮೂಡಬಿದಿರೆಯ ಸಾವಿರ ಕಂಬದ ಬಸದಿಯ ಇಲ್ಲಿನ ವಿವರ ವೈಶಿಷ್ಟ್ಯ ಇವತ್ತಿನ ಸಂಚಿಕೆಯಲ್ಲಿ... ಈ ಬಸದಿಗೆ ಮೂರು ಹೆಸರುಗಳಿದ್ದು, ಹೊಸ ಬಸದಿ, ಸಾವಿರ ಕಂಬದ ಬಸದಿ, ತ್ರಿಭುವನ ತಿಲಕ ಚೂಡಾಮಣಿ ಬಸದಿ ಎನ್ನುವ ಮೂರು ಹೆಸರುಗಳಿವೆ.

ಒಮ್ಮೆ ನಾವು ಇಲ್ಲಿ ಬಂದರೆ ಈ ಬಸದಿಯ ಸೌಂದರ್ಯ ಅಂದ ಚಂದ ನಿಜಕ್ಕೂ ನಮ್ಮಲ್ಲಿ ಅಚ್ಚರಿಯನ್ನುಂಟುಮಾಡುತ್ತದೆ. ಒಂದೊಂದು ಕಥೆ ಹೇಳುತ್ತಿರುವ ಒಂದೊಂದು ಕಂಬಗಳು...ಒಂದು ಕಂಬಕ್ಕಿಂತ ಭಿನ್ನವಾಗಿರುವ ಮತ್ತೊಂದು ಕಂಬ...ಒಟ್ಟಿನಲ್ಲಿ ಸಾವಿರ ಕಂಬಗಳು...ಈ ಕಂಬಗಳ ಸೌಂದರ್ಯವನ್ನು ನೋಡಿದಾಗ ಒಂದು ಕ್ಷಣ ನೀವು ನಿಬ್ಬೆರಗಾಗುವುದಂತೂ ಖಂಡಿತ...

ಬಸದಿಯ ಮೊದಲನೇ ದ್ವಾರದಿಂದ ನಾವು ಒಳಗೆ ಬಂದಾಗ ನಮಗೆ ಕಾಣ ಸಿಗುವಂತದ್ದು ಬಸದಿಯ ಮಧ್ಯದಲ್ಲಿ ನಿಲ್ಲಿಸಲಾಗಿರುವ ಬೃಹತ್ ಗಾತ್ರದ ಮಾನಸ್ತಂಭ. ಹೀಗೆ ನಡೆಯುತ್ತಾ ಬಸದಿಯ ಒಳಬಂದಾಗ ನಿಜಕ್ಕೂ ಕೂಡ ನಾವೊಂದು ವಿಭಿನ್ನ ಲೋಕಕ್ಕೆ ಪ್ರಯಾಣ ಬೆಳೆಸಿದ್ದೇವೆ ಅನ್ನೋ ಭಾವನೆ ಬರುವುದಂತೂ ಖಂಡಿತ...ಇಲ್ಲಿರುವ ವಾಸ್ತುಶಿಲ್ಪ, ಕಂಬಗಳು, ಆ ಕಂಬಗಳ ಕೆತ್ತನೆಗಳು ನೋಡುಗರನ್ನು ಮಂತ್ರಮುಗ್ದರನ್ನಾಗಿಸುವುದಂತೂ ಮಾತ್ರ ಸುಳ್ಳಲ್ಲ...

ಇಂದಿಗೂ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜೈನ ಬಸದಿಯ ಬಗ್ಗೆ ಹೇಳಲು ಹೊರಟರೆ ಪದಗಳೇ ಸಾಲದು. 1430ರಲ್ಲಿ ಈ ಬಸದಿಯ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಈ ಬಸದಿ 1461ರಲ್ಲಿ ಈ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮೂಡಬಿದಿರೆಯ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯನ್ನು ಆರಾಧಿಸಲಾಗುತ್ತಿದ್ದು, ಈ ಬೃಹತ್ ಭವ್ಯ ಜಿನಾಲಯದ ಸಂದರ್ಶನ ಒಂದು ವಿಶೇಷ ಅನುಭವ. ಭಗವಂತನ ಸ್ವರ್ಣಾಲಂಕೃತ ಬಿಂಬದ ದರ್ಶನ ಬಹುಭವಗಳ ಪಾಪ ಕಳೆಯುವಂತದ್ದು, ಇಲ್ಲಿ ಬೇರೆಲ್ಲೂ ಇಲ್ಲದ 9 ಅಡಿ ಉದ್ದದ ಪಂಚ ಲೋಹದ ವಿಗ್ರಹ ನಿರ್ಮಾಣವಾಗಿದ್ದು, ಮಹಿಳೆಯರು ದಾನ ಮಾಡಿದ ಚಿನ್ನಾಭರಣಗಳ ಮೂಲಕ ಅನ್ನೋದು ವಿಶೇಷ.

ಇಲ್ಲಿರುವ ಶಾಸನಗಳು ಹೇಳುವ ಪ್ರಕಾರ ಈ ಬಸದಿ ನಿರ್ಮಾಣವಾಗಿದ್ದು ಅಂದಿನ ಅಂದಾಜು 9 ಕೋಟಿ ಖರ್ಚಾಗಿವೆ. ಆಗ್ನೇಯ ಏಷ್ಯಾದಲ್ಲೇ ವಿಶೇಷ ವಾಸ್ತುಶಿಲ್ಪ ಹೊಂದಿರುವ ಏಕೈಕ ಹಾಗೂ ಅತೀ ದೊಡ್ಡ ಜೈನ ಬಸದಿ ಎಂಬ ಕೀರ್ತಿಗೆ ಪಾತ್ರವಾಗಿರುವ ಈ ಜೈನ ಬಸದಿಗೆ ದೇಶ ವಿದೇಶಗಳಿಂದ ಬರುವ ಅಧ್ಯಯನಕಾರು ಸಾಹಿತಿಗಳಿಗೆ ಸ್ಪೂರ್ತಿಯಾಗಿದೆ.

600 ವರ್ಷಗಳ ಹಿಂದೆ ನಿರ್ಮಾಣಗೊಂಡಂತಹ ಈ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿ ತನ್ನೆಡೆಗೆ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಾ ಇದೆ. ಇಲ್ಲಿರುವ ಕಂಬಗಳಲ್ಲಿರುವ ಶಿಲ್ಪಗಳ ಕೆತ್ತನೆಗಳು ನಿಜಕ್ಕೂ ಮನಮೋಹಕ...ಕಲಾವಿದನ ಕಲಾನೈಪುಣ್ಯತೆಗೆ ಸಾಕ್ಷಿ...ಇಲ್ಲಿ ಈ ಅದ್ಬುತ ಬಸದಿ ನಿರ್ಮಾಣವಾಗಬೇಕಾದರೆ ಅದೆಷ್ಟೋ ಕಲಾವಿದರರ ವರ್ಷಗಳು ಕಾಲ ಪ್ರಾಮಾಣಿಕವಾಗಿ ಶ್ರಮಿಸಿದ ಶ್ರಮವಿದೆ. ಅಂತಹ ಎಲ್ಲಾ ಅದ್ಬುತ ಕಲಾವಿದರಿಗೆ ನಮ್ಮದೊಂದು ನಮನ...