ಇತಿಹಾಸ ಸಾರುವ ವೀರಾಜಪೇಟೆಯ ಗಡಿಯಾರ ಕಂಬ

ಇತಿಹಾಸ ಸಾರುವ ವೀರಾಜಪೇಟೆಯ ಗಡಿಯಾರ ಕಂಬ

LK   ¦    Apr 11, 2018 06:57:22 PM (IST)
ಇತಿಹಾಸ ಸಾರುವ ವೀರಾಜಪೇಟೆಯ ಗಡಿಯಾರ ಕಂಬ

ಸಾಮಾನ್ಯವಾಗಿ ಹೆಚ್ಚಿನ ಪಟ್ಟಣಗಳಲ್ಲಿ ಗಡಿಯಾರ ಕಂಬ ಇರುವುದನ್ನು ನಾವು ಕಾಣಬಹುದಾಗಿದೆ. ಬಹಳಷ್ಟು ಗಡಿಯಾರ ಕಂಬಗಳಿಗೆ ಇತಿಹಾಸವೇ ಇದೆ. ಈ ಗಡಿಯಾರ ಕಂಬಗಳು ಕಳೆದು ಹೋದ ಕಾಲಮಾನಗಳಿಗೆ ಸಾಕ್ಷಿಯಾಗಿ ನಿಂತಿವೆ.

ಹಿಂದಿನ ಕಾಲದಲ್ಲಿ ಗಡಿಯಾರಗಳಿಲ್ಲದ ಅದೆಷ್ಟೋ ಮನೆಗಳಿದ್ದವು. ಹೆಚ್ಚಿನವರು ನೆರಳನ್ನೇ ನೋಡಿ ದೈನಂದಿನ ಚಟುವಟಿಕೆಗಳನ್ನು ನಡೆಸುತ್ತಿದ್ದರು. ರೇಡಿಯೋಗಳು ಬಂದ ಬಳಿಕ ಸಮಯ ತಿಳಿಯಲು ಅವುಗಳನ್ನು ಅನುಸರಿಸತೊಡಗಿದರು.

ಕೈಗಡಿಯಾರಗಳು ಅವತ್ತಿನ ಕಾಲದಲ್ಲಿ ಎಲ್ಲರಿಗೂ ಎಟಕುವ ವಸ್ತುವಾಗಿರಲಿಲ್ಲ. ಹೀಗಾಗಿ ಪಟ್ಟಣಗಳಿಗೆ ಬರುವ ಜನರಿಗೆ ಅನುಕೂಲವಾಗುವಂತೆ ಗಡಿಯಾರ ಕಂಬಗಳನ್ನು ನಿರ್ಮಿಸುವ ರೂಢಿ ಚಾಲ್ತಿಯಲ್ಲಿತ್ತು. ಅದರಂತೆ ವೀರಾಜಪೇಟೆಯಲ್ಲಿಯೂ ಗಡಿಯಾರ ಕಂಬವನ್ನು ನಿರ್ಮಾಣ ಮಾಡಲಾಗಿದೆ.

ಇವತ್ತು ವೀರಾಜಪೇಟೆ ಪಟ್ಟಣದಲ್ಲಿ ಟಿಕ್... ಟಿಕ್... ಸದ್ದು ಮಾಡುತ್ತಾ ಜನರಿಗೆ ಸಮಯದ ಅರಿವು ಮೂಡಿಸುತ್ತಾ ಬಂದಿರುವ ಐತಿಹಾಸಿಕ ಸ್ಮಾರಕ ಗಡಿಯಾರ ಕಂಬ ಈಗಾಗಲೇ ಶತಮಾನವನ್ನು ಪೂರೈಸಿದ ಖ್ಯಾತಿ ಪಡೆದಿದೆ.
ಹೃದಯಭಾಗದಲ್ಲಿರುವ ಈ ಗಡಿಯಾರ ಕಂಬ ಪಟ್ಟಣಕ್ಕೊಂದು ಮೆರಗು ಆಗಿದೆ. ಹೀಗಾಗಿ ಪಟ್ಟಣದಲ್ಲಿ ನಡೆಯುವ ಯಾವುದೇ ಮೆರವಣಿಗೆ, ಉತ್ಸವ, ಪ್ರತಿಭಟನೆಗಳು ಇದರ ಮೂಲಕವೇ ಹಾದು ಹೋಗುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.

ಕೊಡಗಿನಲ್ಲಿರುವ ಅದರಲ್ಲಿಯೂ ವೀರಾಜಪೇಟೆ ಪಟ್ಟಣದಲ್ಲಿರುವ ಕೆಲವೇ ಕೆಲವು ಸ್ಮಾರಕಗಳಲ್ಲಿ ಗಡಿಯಾರ ಕಂಬ ಒಂದಾಗಿದೆ. ಇದನ್ನು ದೇವಣಗೇರಿಯ ಸುಬೇದಾರ್ ರಾವ್ ಬಹುದ್ದೂರ್ ಮುಕ್ಕಾಟಿರ ಅಯ್ಯಪ್ಪರವರು ಕೊಲೋನೇಷನ್ ದರ್ಬಾರ್ ನಲ್ಲಿ ನಡೆದ ಜಾರ್ಜ್ ದೊರೆಯ ಅಧಿಕಾರ ಸ್ವೀಕಾರ ಸಮಾರಂಭದ ಸವಿನೆನಪಿಗಾಗಿ 1911ರಲ್ಲಿ ನಿರ್ಮಿಸಿದರೆಂದು ಇತಿಹಾಸ ಹೇಳುತ್ತದೆ.

ಎರಡು ಅಂತಸ್ತಿನ ಗೋಪುರದಲ್ಲಿ ಗಡಿಯಾರವನ್ನು ಅಳವಡಿಸಲಾಗಿದೆ. ಇದು ಬೇರೆಡೆಗಳಲ್ಲಿರುವ ಗಡಿಯಾರ ಕಂಬಗಳಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಭಿನ್ನವಾಗಿ ಗೋಚರಿಸುತ್ತದೆ.

ಈ ಗಡಿಯಾರ ಕಂಬದಲ್ಲಿನ ಗಡಿಯಾರ ಹಲವು ಬಾರಿ ದುರಸ್ತಿಗೊಳಗಾಗಿದೆ. ಆದರೂ ಅದನ್ನು ಮೂಲೆಗುಂಪು ಮಾಡದೆ ದುರಸ್ತಿಪಡಿಸಲಾಗಿದೆ. ಒಟ್ಟಾರೆ ಈ ಗಡಿಯಾರ ಕಂಬ ಶತಮಾನದ ಇತಿಹಾಸವನ್ನು ಸಾರುತ್ತಿರುವುದಂತು ಸತ್ಯ.