ಮೈಸೂರಲ್ಲಿ ಪ್ರವಾಸಿಗರ ಮನಸೆಳೆಯುವ ಸುಂದರ ಕಾರಂಜಿಕೆರೆ

ಮೈಸೂರಲ್ಲಿ ಪ್ರವಾಸಿಗರ ಮನಸೆಳೆಯುವ ಸುಂದರ ಕಾರಂಜಿಕೆರೆ

B.M. Lavakumar.   ¦    Feb 19, 2018 09:55:37 AM (IST)
ಮೈಸೂರಲ್ಲಿ ಪ್ರವಾಸಿಗರ ಮನಸೆಳೆಯುವ ಸುಂದರ ಕಾರಂಜಿಕೆರೆ

ಮೈಸೂರಿನಲ್ಲಿ ಹತ್ತಾರು ಕೆರೆಯಿದ್ದರೂ ನಗರದೊಳಗೆ ಇರುವ ಕಾರಂಜಿಕೆರೆ ಪ್ರಮುಖ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ತನ್ನತ್ತ ಸೆಳೆಯುತ್ತಿದೆ. ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಸೇರುವ ಈ ಕೆರೆಯನ್ನು ನೋಡಲು, ದೋಣಿ ವಿಹಾರ ನಡೆಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಸದಾ ಜನಜಂಗುಳಿ, ಕೆಲಸ ಕಾರ್ಯಗಳಲ್ಲಿ ನಿರತರಾದವರು ಒಂದಷ್ಟು ಸಮಯಗಳನ್ನು ಕಳೆಯಲು ಇಲ್ಲಿಗೆ ಬರುತ್ತಾರೆ.

ಇವತ್ತು ಕಾರಂಜಿಕೆರೆ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಮೊದಲು ಇದು ಹೀಗಿರಲಿಲ್ಲ. ನಗರದಲ್ಲಿರುವ ಇತರೆ ಕೆರೆಗಳು ಹೇಗಿದ್ದವೋ ಹಾಗೆಯೇ ಇದು ಸಹ ಇತ್ತು. ಸುಮಾರು 90 ಎಕರೆಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ನೆಲೆನಿಂತು ಸುತ್ತಮುತ್ತಲಿನ ಹಳ್ಳಿಯ ರೈತರ ಭೂಮಿಗೆ ನೀರುಣಿಸುತ್ತಾ ಸಾಗಿತ್ತು. ಆದರೆ ನಗರ ಬೆಳೆದಂತೆಲ್ಲಾ ಸುತ್ತಮುತ್ತಲಿನ ಕೊಳಕು, ಹೂಳು ತುಂಬಿ ಕೆರೆ ಕಲ್ಮಷವಾಯಿತು. ಜನ ಕೆರೆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಹಾಗಾಗಿ ಕಾರಂಜಿಕೆರೆ ಬಹಳ ಸಮಯದವರೆಗೆ ಜನರ ಗಮನಸೆಳೆಯದೆ ತನ್ನ ಪಾಡಿಗೆ ತಾನು ಎಂಬಂತೆ ಇತ್ತು. ಕೆರೆಯ ಸುತ್ತಲೂ ಬೆಳೆದು ನಿಂತ ಮರಗಿಡ ಪೊದೆಗಳಲ್ಲಿ ದೂರದಿಂದ ಬಂದ ಹಕ್ಕಿಗಳು ಗೂಡು ಕಟ್ಟಿ ಸಂಸಾರ ಹೂಡುತ್ತಿದ್ದವು. ಗಣೇಶ ಚತುರ್ಥಿ ಸಂದರ್ಭ ಗಣಪತಿಯ ವಿಸರ್ಜನೆಗೆ ಇತ್ತ ಬಂದರೆ, ಉಳಿದಂತೆ ಹಳ್ಳಿಯ ರೈತರು ದನ ಮೇಯಿಸಲು ಬರುತ್ತಿದ್ದರು.

ಆದರೆ ತನ್ನದೇ ನಿಸರ್ಗ ಚೆಲುವನ್ನು ಮೈಗೂಡಿಸಿಕೊಂಡಿದ್ದ ಈ ಕೆರೆ 1967ರಲ್ಲಿ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬಂತು. ಆದರೆ ಕೆರೆಯನ್ನು ಅಭಿವೃದ್ಧಿಗೊಳಿಸಿ ಅದನ್ನು ಒಂದು ವಿಹಾರ ತಾಣವನ್ನಾಗಿ  ರೂಪುಗೊಳಿಸುವ ಐಡಿಯಾ ಯಾರಿಗೂ ಬಂದಿರಲಿಲ್ಲ. ಕೆಲವು ವರ್ಷಗಳ ಹಿಂದೆ ಕಾರಂಜಿಕೆರೆಯ ಬಳಿ ಚಿಟ್ಟೆಗಳು ವಾಸ್ತವ್ಯ ಹೂಡಿದ್ದನ್ನು ಕಂಡು ಚಿಟ್ಟೆ ಪಾರ್ಕ್ ಸ್ಥಾಪನೆ ಮಾಡಲಾಯಿತು. ವಿಶ್ವವಿದ್ಯಾಲಯದ ಸದಾನಂದ ಎಂಬುವರು ಈ ಚಿಟ್ಟೆ ಪಾರ್ಕ್ ಗೆ ಜೀವ ತುಂಬಿದರು. ಚಿಟ್ಟೆ ಪಾರ್ಕ್ ಸ್ಥಾಪನೆಯಾದ್ದರಿಂದೇನೂ ಕೆರೆ ಖ್ಯಾತಿಯಾಗಲಿಲ್ಲ.

ಕಲುಷಿತ ನೀರು, ಹೂಳು ತುಂಬಿ ಗಬ್ಬೆದ್ದು ನಾರುತ್ತಿದ್ದ ಕೆರೆಗೊಂದು ಮರುಹುಟ್ಟನ್ನು ಮೃಗಾಲಯ ಪ್ರಾಧಿಕಾರ ನೀಡಿತು. ಪ್ರಾಧಿಕಾರದ ಆಗಿನ ಕಾರ್ಯನಿರ್ವಾಹಕ ನಿರ್ದೇಶಕರುಗಳಾದ ಕುಮಾರ್ ಪುಷ್ಕರ್ ಹಾಗೂ ಮನೋಜ್ ಕುಮಾರ್ ಅವರು ಕಾರಂಜಿಕೆರೆಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತರು. ಕೆರೆಯ ತುಂಬಾ ತುಂಬಿದ್ದ ಹೂಳನ್ನೆಲ್ಲಾ  ಹೊರ ತೆಗೆದರು. ಕೆರೆಗೆ ಬರುವ ಕೊಳಚೆ ನೀರನ್ನೆಲ್ಲಾ ತಪ್ಪಿಸಲು ಸಾಧ್ಯವಾಗದ ಕಾರಣ ಅದನ್ನು ಇಂಗುಗುಂಡಿಯ ಮೂಲಕ ಇಂಗಿಸಿ ತಿಳಿನೀರು ಮಾತ್ರ  ಕೆರೆಯತ್ತ ಹರಿಯುವಂತೆ ಮಾಡಿದರು. ಕೆರೆಗಳ ಮಧ್ಯೆ ಕೃತಕ ದ್ವೀಪಗಳನ್ನು ನಿರ್ಮಿಸಿ ಅಲ್ಲಿ ಮರ ಬೆಳೆಸಿ ವಲಸೆ ಬರುವ ಹಕ್ಕಿಗಳಿಗೆ ನೆಲೆ ಕಲ್ಪಿಸಿಕೊಟ್ಟರು. ಕೆರೆಯ ನೀರಲ್ಲಿ ಸವಾರಿ ಮಾಡಲು ಬರುವವರಿಗೆ ದೋಣಿಗಳ ವ್ಯವಸ್ಥೆ ಮಾಡಿದರು. ಕೆರೆಯ ದಂಡೆಯಲ್ಲಿ ಸುಂದರ ಮರಗಿಡಗಳನ್ನು ಬೆಳೆಸಿದರು. ಓಡಾಡಲು ಅನುಕೂಲವಾಗುವಂತೆ ಕಾಲುದಾರಿಗಳನ್ನು ನಿರ್ಮಿಸಿದರು. ಕೆರೆಯ ಸುತ್ತಲೂ ಏರಿ ನಿರ್ಮಿಸಿ ಸುಂದರವಾದ ಆಕರ್ಷಣೀಯವಾದ ಪ್ರವೇಶ ದ್ವಾರವನ್ನು ನಿರ್ಮಿಸಲಾಯಿತು. ಹೀಗೆ ನವೀಕರಣಗೊಂಡ ಕೆರೆಗೆ ಕಾರಂಜಿ ಪ್ರಕೃತಿ ಉದ್ಯಾನವನ ಎಂಬ ಹೆಸರನ್ನಿಟ್ಟು 2004 ಜನವರಿ 25 ರಂದು ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು. ಅಲ್ಲಿಂದ ಇಲ್ಲಿಯ ತನಕ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತಾ ಸೆಳೆಯುತ್ತಾ ಬಂದಿದೆ.

ಇವತ್ತು ಕಾರಂಜಿಕೆರೆಯಲ್ಲಿ ಮೀನು, ಮೊಸಳೆಯಂತಹ ಜಲಚರಗಳು, ಬ್ಲೂಜೆ, ಪೇಂಟೆಡ್ ಸ್ಟಾರ್ಕ್, ವೈಟ್ ಐಬೀಸ್, ಕಾಜಾಣಗಳಂತಹ ಬಾನಾಡಿಗಳು ಬೀಡು ಬಿಟ್ಟಿವೆ. ಸುಮಾರು ಎಪ್ಪತ್ತು ಪ್ರಭೇದದ ಚಿಟ್ಟೆಗಳು ವಾಸ್ತವ್ಯ  ಹೂಡಿವೆ. ಔಷಧಿವನ, ಶ್ರೀಗಂಧದ ಮರಗಳು ಇಲ್ಲಿವೆ.  ಪಕ್ಷಿಗಳ ಹಾರಾಟವನ್ನು ವೀಕ್ಷಿಸಲೆಂದೇ ವಾಚ್ಟವರ್ ನ್ನು ನಿರ್ಮಿಸಲಾಗಿದೆ. ದೋಣಿ ಸವಾರಿಗೂ ಅವಕಾಶ ಮಾಡಿಕೊಡಲಾಗಿದೆ. ಒಟ್ಟಾರೆ ಕಾರಂಜಿಕೆರೆ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

More Images