ತ್ರಿವಿಧ ದಾಸೋಹದ ಮಹಾಯೋಗಿ ಡಾ.ಶಿವಕುಮಾರಸ್ವಾಮೀಜಿ

ತ್ರಿವಿಧ ದಾಸೋಹದ ಮಹಾಯೋಗಿ ಡಾ.ಶಿವಕುಮಾರಸ್ವಾಮೀಜಿ

B.M.Lavakumar   ¦    Mar 31, 2018 11:34:20 AM (IST)
ತ್ರಿವಿಧ ದಾಸೋಹದ ಮಹಾಯೋಗಿ ಡಾ.ಶಿವಕುಮಾರಸ್ವಾಮೀಜಿ

ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಶತಾಯುಷಿ, ಪುಣ್ಯ ಪುರುಷ ಡಾ. ಶಿವಕುಮಾರ ಸ್ವಾಮೀಜಿ ಅವರಿಗೀಗ 111ರ ಪ್ರಾಯ. 1907 ಏಪ್ರಿಲ್ 1ರಂದು ಜನಿಸಿದ ಅವರ ಹುಟ್ಟು ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಲೂರು ಹೋಬಳಿಯ ವೀರಾಪುರದ  ಸುಸಂಸ್ಕೃತ ಮನೆತನದ ಹೊನ್ನೇಗೌಡ ಮತ್ತು ಗಂಗಮ್ಮ ದಂಪತಿಗಳ ಹದಿಮೂರು ಮಂದಿ ಮಕ್ಕಳಲ್ಲಿ ಕಿರಿಯವರಾಗಿ ಜನಿಸಿದರು. ಇವರ ಹುಟ್ಟು ಹೆಸರು ಶಿವಣ್ಣ.

ಹುಟ್ಟುವಾಗಲೇ ಏನೋ ಒಂದು ತೇಜಸ್ಸು ಹೊಂದಿದ ಇವರು ಮುಂದೆ ಈ ಭರತಭೂಮಿಯಲ್ಲಿ ಶಾಶ್ವತವಾಗಿ ನೆಲೆಯೂರುವಂತಹ ಮಹಾನ್ ವ್ಯಕ್ತಿಯಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಅವರ ದೈವತ್ವ ಅವರಿಂದ ಹತ್ತಾರು ಪುಣ್ಯ ಕಾರ್ಯಗಳನ್ನು ಮಾಡುವಂತೆ ಮಾಡಿತ್ತಲ್ಲದೆ, ಇವತ್ತು ಮಹಾ ಯೋಗಿಯಾಗಿ ನಡೆದಾಡುವ ದೇವರಾಗಿ, ಅನ್ನ, ಜ್ಞಾನ ದಾಸೋಹದ ಸ್ವರ್ಗವಾಗಿರುವ ಸಿದ್ಧಗಂಗ ಮಠದ ಮಠಾಧೀಶರಾಗಿ ಕಾರ್ಯನಿರ್ವಹಿಸುತ್ತಾ ಅವರು ಮಾಡಿರುವ ಸಾಧನೆಗಳು ಇಡೀ ಜಗತ್ತೇ ನಿಬ್ಬ್ಬೆರಗಾಗಿ ನೋಡುವಂತಾಗಿದೆ.

ಅಂದಿನ ಶಿವಣ್ಣ ಬಳಿಕ ಡಾ.ಶಿವಕುಮಾರಸ್ವಾಮಿಯಾಗಿ ಬೆಳೆದಿದ್ದರ ಹಿಂದೆ ಘಟನೆಯೊಂದು ಅಡಗಿದೆ. ಇವರು ತುಮಕೂರಿನಲ್ಲಿ ಹೈಸ್ಕೂಲ್ ವ್ಯಾಸಂಗ ಮಾಡುತ್ತಿದ್ದಾಗ ಅಲ್ಲಿ  ಭಯಂಕರ ಪ್ಲೇಗ್ ರೋಗ ಬಂದು ಜನರು ಜೀವಭಯದಿಂದ ತತ್ತರಿಸುವಂತೆ ಮಾಡಿತ್ತು. ಇಂತಹ ಸಂದರ್ಭದಲ್ಲಿ ಓದುವುದಾದರೂ ಹೇಗೆಂಬ ಆತಂಕ ಕಾಡತೊಡಗಿತು.  ಓದಿನಲ್ಲಿ ವಿಪರೀತ ಆಸಕ್ತಿ ಇದ್ದ ಅವರು ಓದನ್ನು ಅರ್ಧಕ್ಕೆ ನಿಲ್ಲಿಸದೆ  ಹೇಗಾದರೂ ಮಾಡಿ ಮುಂದೆ ಓದಬೇಕೆಂದು ಆಲೋಚಿಸತೊಡಗಿದರು.

ಅದಕ್ಕಾಗಿ ತಮಗೆ ತೋಚಿದ ಮಾರ್ಗದಲ್ಲಿ ಹುಡುಕಾಟ ನಡೆಸಿದರು. ಆಗ ಅವರ ಕಣ್ಣಮುಂದೆ ಬಂದಿದ್ದು ಶ್ರೀ ಸಿದ್ಧಗಂಗ ಮಠ. ಅಲ್ಲಿಗೆ ತೆರಳಿದ ಅವರು ಆಗಿನ ಮಠಾಧೀಶರಾಗಿದ್ದ ಶ್ರೀ ಉದ್ಧಾನ ಶಿವಯೋಗಿಗಳಲ್ಲಿ ತನ್ನ ಸಂಕಷ್ಟವನ್ನು ಹೇಳಿಕೊಂಡು ಆಶ್ರಯ ಕೋರಿದರು. ಬಾಲಕನಲ್ಲಿದ್ದ ಜ್ಞಾನದಾಹವನ್ನು ಹತ್ತಿರದಿಂದ ನೋಡಿದ ಉದ್ಧಾನ ಶಿವಯೋಗಿಗಳು ಈ ಬಾಲಕನಲ್ಲಿ ಏನೋ ಒಂದು ಶಕ್ತಿಯಿದೆ ಎಂಬುದನ್ನು ಅರಿತುಕೊಂಡರಲ್ಲದೆ, ಈತನಿಗೆ ಆಶ್ರಯ ನೀಡಿದರೆ ಮುಂದೆ ಈತ ಮಹಾಯೋಗಿಯಾಗುವುದರಲ್ಲಿ ಸಂಶಯವಿಲ್ಲ ಎಂಬುದು ಗೊತ್ತಾಗಿತ್ತು. ಹೀಗಾಗಿ ಅವರು ಆಶ್ರಯ ನೀಡಿದರು.

ಸಿದ್ಧಗಂಗಾ ಮಠದಲ್ಲಿದ್ದುಕೊಂಡೇ ಹೈಸ್ಕೂಲ್ ವ್ಯಾಸಂಗ ಮುಗಿಸಿದ ಶಿವಕುಮಾರ ಸ್ವಾಮೀಜಿ ಅವರು ಆಗಲೇ ಆಧ್ಯಾತ್ಮ ಹಾಗೂ ಸಮಾಜಸೇವೆಯ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಅವರಲ್ಲಿನ ಈ ಆದರ್ಶಗುಣ ಉದ್ಧಾನಶಿವಯೋಗಿಗಳಲ್ಲಿ ಇವರ ಬಗ್ಗೆ ಇನ್ನಷ್ಟು ಹೆಚ್ಚಿನ ಪ್ರೀತಿ ಮೂಡಲು ಕಾರಣವಾಗಿತ್ತು. ಈ ಅಭಿಮಾನದ ಪ್ರೀತಿಯಿಂದಲೇ ಶಿವಕುಮಾರ ಸ್ವಾಮೀಜಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಆನಸರ್ ಪದವಿ ಪಡೆಯುತ್ತಿದ್ದಂತೆಯೇ 1930ರ ಮಾರ್ಚ್ 3ರಂದು ಉದ್ಧಾನ ಶ್ರೀಗಳು ಇವರನ್ನು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳನ್ನಾಗಿ ನೇಮಿಸಿದರು.

ನಂತರದ ದಿನಗಳಲ್ಲಿ ಉದ್ದಾನ ಶಿವಯೋಗಿಗಳು ಕಾಲವಾದ ನಂತರ 1941 ರಲ್ಲಿ ಶಿವಕುಮಾರ ಸ್ವಾಮೀಜಿ ಸಿದ್ಧಗಂಗಾ ಮಠದ ಪೀಠವನ್ನೇರಿದರು. ಮುಂದೆ ಶ್ರೀ ಮಠದ ಅಭಿವೃದ್ಧಿಗಾಗಿ ಕಾಲಿಗೆ ಚಕ್ರ ಕಟ್ಟಕೊಂಡವರಂತೆ ಊರೂರು ಅಲೆದು ಸಾತ್ವಿಕ ಮನಸ್ಸಿನಿಂದ ಬೊಗಸೆಯೊಡ್ಡಿ ಬೇಡಿ ಮಠವನ್ನು ಮಹಾನ್ ಮಠವಾಗಿ ಬೆಳೆಸಿದರು. ತ್ರಿವಿಧ ದಾಸೋಹದ ಮೂಲಕ ಎಲ್ಲರೂ ಇತ್ತ ತಿರುಗಿ ನೋಡುವಂತೆ ಮಾಡಿದರು.

ಶ್ರೀ ಸಿದ್ಧಗಂಗಾ ಮಠಾಧೀಶರಾದಬಳಿಕ ಡಾ. ಶಿವಕುಮಾರ ಸ್ವಾಮೀಜಿ  ಅವರು ಕಳೆದ ಏಳೆಂಟು ದಶಕಗಳಿಂದಲೂ ಅನ್ನ, ಆಶ್ರಯ, ಅಕ್ಷರ ಈ ಮೂರನ್ನೂ ದೀನದಲಿತರಿಗೆ, ಬಡಬಗ್ಗರಿಗೆ, ಅಸಹಾಯಕರಿಗೆ ಧಾರೆಯೆರೆಯುತ್ತಾ ತ್ರಿವಿಧ ದಾಸೋಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರೆ ಅದು ಸುಲಭದ ಕೆಲಸವಲ್ಲ. ಇಲ್ಲಿ ಜ್ಞಾನ ಪಡೆದು ಹೊರಗೆ ಹೋಗಿ ಬದುಕು ಕಟ್ಟಿಕೊಂಡವರಲ್ಲಿ ಎಲ್ಲ ಜಾತಿ, ಧರ್ಮದವರು ಇದ್ದಾರೆ.

ಹಾಗೆ ನೋಡಿದರೆ ಸಿದ್ದಗಂಗಾಶ್ರೀಗಳು ಯಾವುದೋ ಒಂದು ಜನಾಂಗಕ್ಕೆ, ಜಾತಿಗೆ ಮಾತ್ರ ಸೀಮಿತವಾಗದೆ ಜಾತಿ, ಮತ, ಪಂಥ, ಧರ್ಮಗಳ ಭೇದಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ನೋಡುತ್ತಾ ಮಹಾಮಾನವತಾವಾದಿಯಾಗಿದ್ದಾರೆ. ಮಹಾಜ್ಞಾನಿಗಳೂ, ಮಹಾಯೋಗಿಗಳೂ ಆಗಿರುವ ಇವರು ಕ್ರಿಸ್ತ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಪೈಗಂಬರ್, ಪ್ಲೇಟೋ, ಅರಿಸ್ಟಾಟಲ್, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಮಹಾವೀರ ಮುಂತಾದ ವಿಶ್ವದ ನೂರಾರು ಚಿಂತಕರ ವಿಚಾರಧಾರೆಯನ್ನು ತಮ್ಮಲ್ಲಿ ಅಳವಡಿಸಿಕೊಂಡು ಶ್ರೀ ಸಿದ್ಧಗಂಗಾ ಮಠವನ್ನು ಜಗದೆತ್ತರಕ್ಕೆ ಕೊಂಡೊಯ್ದಿದ್ದಾರೆ.

ಇವತ್ತಿಗೂ ಅನ್ನಕ್ಕಾಗಿ ಸಿದ್ಧಗಂಗೆಯಲ್ಲಿ ಇವರು ಹಚ್ಚಿದ ಒಲೆ ಉರಿಯುತ್ತಲೇ ಇದೆ. ಆಶ್ರಯಕ್ಕಾಗಿ ಇವರು ಅಡಿಗಲ್ಲಿಟ್ಟ ತಾಣ ಸೇವಾಸೌಧವಾಗಿ ಬೆಳೆಯುತ್ತಲೇ ಇರುವುದನ್ನು ನಾವು ಕಾಣಬಹುದಾಗಿದೆ. ಇಷ್ಟೇ ಅಲ್ಲದೆ ಇವರು ವಿದ್ಯಾರ್ಥಿಗಳು ಜ್ಞಾನ ಪಡೆಯಲೆಂದು ಉರಿಸಿದ ಜ್ಞಾನದ ದೀಪ ಬೃಹದಾಕಾರವಾಗಿ ಬೆಳೆದಿದ್ದು, ಇಲ್ಲಿಂದ ಜ್ಞಾನ ಪಡೆದೆವರು ದೇಶ ಮಾತ್ರವಲ್ಲದೆ, ವಿಶ್ವದಗಲಕ್ಕೆ ಜ್ಞಾನವನ್ನು ಬೆಳಗುತ್ತಿದ್ದಾರೆ.

ಮಠದಲ್ಲಿ ಪ್ರತಿನಿತ್ಯ ಇಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಊಟ ಮಾಡುತ್ತಾರೆಂದರೆ ಊಹಿಸಿ ಹೇಗಿರಬಹುದು? ಅಷ್ಟೇ ಅಲ್ಲ ಇಲ್ಲಿನ ಸಂಸ್ಥೆಗಳಲ್ಲಿ ಸುಮಾರು ಅರ್ಧಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಂದರೆ ಅಚ್ಚರಿಯಾಗುತ್ತದೆ. ಆದರೆ ಇದರ ಹಿಂದೆ  ಇರುವ ಶಿವಕುಮಾರ ಸ್ವಾಮೀಜಿಯ ಅವರ ಸಾಧನೆ, ಕಾಯಕದ ಮಹಾಮಹಿಮೆ ಕಾರಣ ಎನ್ನಬಹುದು.

ಈ ಮಠದ ಮತ್ತೊಂದು ವಿಶೇಷತೆ ಏನೆಂದರೆ ಇಲ್ಲಿಗೆ ಬರುವ ಯಾರಿಗೂ ಜಾತಿ-ಮತಗಳ ತಾರತಮ್ಯವಿಲ್ಲ. ಎಲ್ಲ್ಲ ಭಾಷಿಕರ, ಎಲ್ಲ ಧರ್ಮೀಯರ, ಎಲ್ಲಾ ಜಾತಿಗಳ ಜನ ಇವರ ನೆರಳಿನಲ್ಲಿದ್ದು ಸರ್ವಧರ್ಮಗಳ ಮಹಾಸಂಗಮವೆನ್ನಬಹುದು. ಬುದ್ಧನ ಕರುಣೆ, ವಿವೇಕರ ಕೆಚ್ಚು, ಗಾಂಧಿಯ ಸಾಮಾಜಿಕ ಕಳಕಳಿ, ಅಂಬೇಡ್ಕರರ ಇಚ್ಛಾಶಕ್ತಿ, ಮದರ್ ತೆರೆಸಾರ ತಾಯ್ತನ..... ಹೀಗೆ ಎಲ್ಲ ಮಹನೀಯರ ತತ್ವಾದರ್ಶಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ.

ಇವರಿಗೆ ದೊರೆತ ಪ್ರಶಸ್ತಿ ಸನ್ಮಾನಗಳಿಗೆ ಲೆಕ್ಕವಿಲ್ಲ. ಕರ್ನಾಟಕರತ್ನ, ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಈಗಾಗಲೇ ಭಕ್ತವೃಂದ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸುತ್ತಿದೆ. ಆದರೆ ಇದ್ಯಾವುದರ ಬಗ್ಗೆ ತಿರುಗಿ ನೋಡದ ಅವರು ತಮ್ಮ ಇಳಿ ವಯಸ್ಸಿನಲ್ಲೂ ನಿತ್ಯ ಕಾಯಕದತ್ತ ಸದಾ ತೊಡಗಿಸಿಕೊಂಡು ಕಾಯಕವೇ ಕೈಲಾಸ  ಎಂಬುದನ್ನು ಸಾರುತ್ತಿದ್ದಾರೆ.

More Images