ಹಿಂದೂಗಳ ಚೌತಿಗೆ ಕ್ರೈಸ್ತರ ಗದ್ದೆಯಲ್ಲಿ ಬೆಳೆದ ತೆನೆ: ಹತ್ತಾರು ದೇವಾಲಯ, ಚರ್ಚ್ ಗಳಿಗೆ ಉಚಿತವಾಗಿ ತೆನೆ ನೀಡುವ ಅಪರೂಪದ ವ್ಯಕ್ತಿ...(ವೀಡಿಯೋ)

ಹಿಂದೂಗಳ ಚೌತಿಗೆ ಕ್ರೈಸ್ತರ ಗದ್ದೆಯಲ್ಲಿ ಬೆಳೆದ ತೆನೆ: ಹತ್ತಾರು ದೇವಾಲಯ, ಚರ್ಚ್ ಗಳಿಗೆ ಉಚಿತವಾಗಿ ತೆನೆ ನೀಡುವ ಅಪರೂಪದ ವ್ಯಕ್ತಿ...(ವೀಡಿಯೋ)

NB   ¦    Sep 09, 2017 09:06:21 PM (IST)

ಮಂಗಳೂರು: ಕರಾವಳಿ ಹಬ್ಬಗಳಿಗೆ, ಸಂಪ್ರದಾಯಗಳಿಗೆ ಜನಪ್ರಿಯವಾದುದು. ಇಲ್ಲಿ ವಿವಿಧ ಧರ್ಮಗಳು, ವಿವಿಧ ಸಂಪ್ರದಾಯಗಳು ತಮ್ಮದೇ ಆದ ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸುತ್ತದೆ. ಅದರಲ್ಲೂ ಕರಾವಳಿಯ ಜಿಲ್ಲೆಗಳಲ್ಲಿ ಹಿಂದೂ ಮತ್ತು ಕ್ರೈಸ್ತ ಸಮುದಾಯದವರು ವಿಶೇಷವಾಗಿ ಆಚರಿಸುವ ಪ್ರಕೃತಿ ಗೌರವದ ಹಬ್ಬ ತೆನೆ ಹಬ್ಬ.

ಈ ತೆನೆ ಹಬ್ಬದ ವಿಶೇಷ ಹೊಸ ಬೆಳೆಯ ಅಕ್ಕಿಯನ್ನು ಸಂಗ್ರಹಿಸಿ, ಪೂಜೆ ಮಾಡಿ ನಂತರ ಕುಟುಂಬಸ್ಥರೆಲ್ಲಾ ಸೇರಿ ಒಟ್ಟಿಗೆ ಊಟ ಮಾಡುವುದು. ಹಾಗಾಗಿ ಈ ಹಬ್ಬಕ್ಕೆ ಅಗತ್ಯವಿರುವ ಭತ್ತದ ತೆನೆಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಹಿಂದೂ ದೇವಾಲಯಗಳಲ್ಲಿ ತೆನೆ ಹಬ್ಬ ಆಚರಣೆಗೆ ಕ್ರೈಸ್ತರ ಗದ್ದೆಯಲ್ಲಿ ಬೆಳೆದ ಭತ್ತದ ತೆನೆ ರವಾನೆಯಾಗುತ್ತುರುವುದು ನಿಜಕ್ಕೂ ವಿಶೇಷ..

ಹೌದು...ಈ ವಾರ ನಮ್ಮ ವೀಕೆಂಡ್ ಸ್ಪೆಷಲ್ ವಿತ್ ಎನ್ ಕೆ ಟಿವಿ ಕಾರ್ಯಕ್ರಮದಲ್ಲಿ ನಾವು ಹೇಳಲು ಹೊರಟಿರುವ ಕಥೆ, ಜಪ್ಪಿನ ಮೊಗರು ಕಡೆಕಾರಿನ ಕೃಷಿಕರವರದ್ದು, ಇವರು ಒಂದು ದಶಕದಿಂದ ತೆನೆ ಹಬ್ಬ ಸಲುವಾಗಿಯೇ ಭತ್ತದ ಪೈರು ಬೆಳೆಸುತ್ತಿದ್ದಾರೆ. ನಗರದ ಹತ್ತಾರು ದೇವಾಲಯ, ಚರ್ಚ್ ಗಳಿಗೆ ಉಚಿತವಾಗಿ ತೆನೆ ನೀಡುವ ಇವರು ಇತರರಿಗೆ ಮಾದರಿಯಾಗಿರುವ ಸಾಮರಸ್ಯದ ಜೀವನವನ್ನು ನಡೆಸುತ್ತಿದ್ದಾರೆ.

ತೆನೆ ಹಬ್ಬವನ್ನು ಹಿಂದೂಗಳು ಚೌತಿಯಾಗಿ, ಕ್ರೈಸ್ತರು ಮೇರಿ ಮಾತೆಯ ಹಬ್ಬವಾಗಿ ಆಚರಿಸುತ್ತಿದ್ದು, ಇದು ಎರಡೂ ಧರ್ಮಗಳಲ್ಲೂ ಪವಿತ್ರವಾದ ಹಬ್ಬವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ತೆನೆ ಮಾಯವಾಗಿದ್ದು, ತೆನೆ ಹಬ್ಬಕ್ಕಾಗಿಯೇ ಹರ್ಬರ್ಟ್ ಡಿಸೋಜಾ ಪೈರು ಬೆಳೆಸುತ್ತಿದ್ದಾರೆ. ಮಂಗಳೂರಿನ ಶರವು ಶ್ರೀ ಮಹಾಗಣಪತಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ, ಕಡೇಕಾರು ಮಲ್ಲಿಕಾರ್ಜುನ ಹೀಗೆ ಹಲ್ಲವು ದೇವಸ್ಥಾನ, ವೆಲೆನ್ಸಿಯಾ, ಮಿಲಾಗ್ರಿಸ್, ಪೆರ್ಮನ್ನೂರು ಹೀಗೆ 20ಕ್ಕೂ ಅಧಿಕ ಚರ್ಚ್ ಗಳಿಗೆ ಇವರು ಬೆಳೆಸಿದ ತೆನೆ ರವಾನೆಯಾಗುತ್ತದೆ.

ಭತ್ತದ ಹೊಸ ಬೆಳೆ ಬಂದಾಗ ಅದನ್ನು ರೈತರು ಹೊಸ ಬೆಳೆಯ ಹಬ್ಬವಾಗಿ ಆಚರಿಸುತ್ತಿದ್ದು, ಚೌತಿಯಂದು ಹಿಂದೂಗಳಿಗೆ ಹೇಗೆ ತೆನೆ ಹಬ್ಬವಿದೆಯೋ ಅದೇ ರೀತಿ ಕರಾವಳಿಯ ಕಥೋಲಿಕ್ ಕ್ರೈಸ್ತರೂ ಕೂಡ ತೆನೆ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಕರಾವಳಿಯ ಕಥೋಲಿಕ್ ಕ್ರೈಸ್ತಿಗೆ ಸೆಪ್ಟೆಂಬರ್ 8 ಪವಿತ್ರದಿನವಾಗಿದ್ದು, ಈ ದಿನ ಕನ್ಯಾ ಮರಿಯಮ್ಮರವರ ಜನ್ಮದಿನವಾಗಿದ್ದು, ಈ ದಿನದಂದು ಹೊದ ಬೆಳೆಯನ್ನು ಚರ್ಚ್ ಗೆ ತಂದು ಪೂಜೆ ಮಾಡಲಾಗುತ್ತದೆ. ನಂತರ ಮನೆಗೆ ತೆನೆಯನ್ನು ಕೊಂಡೋಗಿ ಹಬ್ಬವನ್ನು ಆಚರಿಸುತ್ತಾರೆ.

ಮಕ್ಕಳು ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಈ ಹಬ್ಬದಲ್ಲಿ ಪಾಲ್ಗೊಂಡು, ಈ ದಿನದಂದು ಮಕ್ಕಳು ಹೂಗಳನ್ನು ಸಂಗ್ರಹಿಸಿ ತಂದು ಮಾತೆ ಮೇರಿಗೆ ಅರ್ಪಿಸುತ್ತಾರೆ. ಇದನ್ನು ನುವೇನಾ ಎಂದು ಕರೆಯುತ್ತಾರೆ. ಚರ್ಚ್ ನಲ್ಲಿ ಕೊಡುವ ತೆನೆ ಮತ್ತು ಕಬ್ಬನ್ನು ಮನೆಗೆ ಕೊಂಡೋಗಿ ಹೊಸ ಬೆಳೆಯ ಅಕ್ಕಿಯನ್ನು ಕುಟುಂಬಸ್ಥರೆಲ್ಲಾ ಒಟ್ಟಿಗೆ ಸೇರಿ ಊಟ ಮಾಡಿ ಮನೆಯಲ್ಲಿ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ.

ತೆನೆ ಹಬ್ಬವು ಹಿಂದುಗಳಲ್ಲಿ ಚೌತಿ, ಷಷ್ಡಿ, ನವರಾತ್ರಿ ಸಂದರ್ಭದಲ್ಲಿ ಮನೆ ತುಂಬಿಸುವುದು ಎಂಬ ಕಾರ್ಯಕ್ರಮದಲ್ಲಿ ನಡೆದರೆ, ಕ್ರೈಸ್ತರಲ್ಲಿ ಕನ್ಯಾ ಮರಿಯಮ್ಮ ಜನ್ಮದಿನಾಚರಣೆ ಉದ್ದೇಶವಾಗಿ ಕರಾವಳಿ ಜಲ್ಲೆಗಳಲ್ಲಿ ಹೆಚ್ಚಾಗಿ ಆಚರಿಸುತ್ತಾರೆ. ಜಾತಿ, ಮತ, ಭಾಷೆ, ಧರ್ಮಕ್ಕಾಗಿ ಹೋರಾಡುವ ಜನರ ನಡುವೆ ನಾವೆಲ್ಲರೂ ಒಂದೇ ಮತ್ತು ಹಬ್ಬ ಆಚರಣೆಗಳನ್ನು ಒಟ್ಟಾಗಿ ಸೇರಿ ಆಚರಿಸಬೇಕು ಎಂಬುದು ಹರ್ಬರ್ಟ್ ಡಿಸೋಜಾ ಮಾತು...

 

More Images