ಮೈಸೂರು ರಾಜರಿಗೆ ಶಾಪವಾಗಿ ಕಾಡಿದ ಅಲವೇಲಮ್ಮ!

ಮೈಸೂರು ರಾಜರಿಗೆ ಶಾಪವಾಗಿ ಕಾಡಿದ ಅಲವೇಲಮ್ಮ!

LK   ¦    Oct 18, 2018 09:54:41 AM (IST)
ಮೈಸೂರು ರಾಜರಿಗೆ ಶಾಪವಾಗಿ ಕಾಡಿದ ಅಲವೇಲಮ್ಮ!

ಇವತ್ತಿಗೂ ಮೈಸೂರು ವ್ಯಾಪ್ತಿಯಲ್ಲಿ ಅಲಮೇಲಮ್ಮ ಎಂದ ತಕ್ಷಣ ಜನ ಮೈಸೂರು ರಾಜರತ್ತ ಚಿತ್ತಹರಿಸಿ ಕಥೆ ಹೇಳಲಾರಂಭಿಸುತ್ತಾರೆ. ಇಷ್ಟಕ್ಕೂ ಮೈಸೂರು ರಾಜಮನೆತನಕ್ಕೂ ಅಲಮೇಲಮ್ಮನಿಗೂ ಏನು ಸಂಬಂಧ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಜತೆಗೆ ಮೈಸೂರು ದಸರಾ ಸಂದರ್ಭ ಅಲಮೇಲಮ್ಮನಿಗೂ ಪೂಜೆ ನಡೆಯುತ್ತದೆ ಎಂಬ ವಿಚಾರವೂ ಅಚ್ಚರಿ ಮೂಡಿಸುತ್ತದೆ.

ಇತಿಹಾಸವನ್ನು ಕೆದಕುತ್ತಾ ಹೋದರೆ ಮತ್ತು ಜನವಲಯದಲ್ಲಿ ಪ್ರಚಲಿತದಲ್ಲಿರುವ ಕಥೆಗಳನ್ನು ನೋಡಿದರೆ ಅಲಮೇಲಮ್ಮನನ್ನು ಮೈಸೂರು ರಾಜವಂಶಸ್ಥರು ಏಕೆ ಪೂಜಿಸುತ್ತಾರೆ ಎಂಬುದು ಮನದಟ್ಟಾಗಿ ಬಿಡುತ್ತದೆ. ವಿಜಯನಗರದ ಅರಸರ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣ ಪ್ರದೇಶವನ್ನು ಆಳುತ್ತಿದ್ದ ರಾಜ ಶ್ರೀರಂಗರಾಯನ ಪತ್ನಿಯೇ ಅಲಮೇಲಮ್ಮ.

ಮೈಸೂರಿನ ರಾಜಒಡೆಯರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ನಂತರ ಅಲ್ಲಿದ್ದ ಶ್ರೀರಂಗರಾಯ ತಲಕಾಡಿಗೆ ಓಡಿಹೋಗಿ ಅಲ್ಲಿಯೇ ಪತ್ನಿಯೊಡನೆ ವಾಸಿಸುತ್ತಿರುತ್ತಾನೆ. ಕೆಲದಿನಗಳ ನಂತರ ಶ್ರೀರಂಗರಾಯ ಮರಣ ಹೊಂದುತ್ತಾನೆ. ಆ ಸಮಯದಲ್ಲಿ ನವರಾತ್ರಿ ಉತ್ಸವಕ್ಕೆ ಶ್ರೀರಂಗನಾಥ ಸ್ವಾಮಿಯನ್ನು ಅಲಂಕರಿಸಲು ತಲಕಾಡಿನಲ್ಲಿದ್ದ ಅಲಮೇಲಮ್ಮನಿಗೆ ಅವಳಲಿದ್ದ ಒಡವೆಗಳನ್ನು ತಂದು ತಮಗೊಪ್ಪಿಸುವಂತೆ ರಾಜಾಜ್ಞೆ ಮಾಡಲಾಗುತ್ತದೆ. ಆದರೆ ಅಲಮೇಲಮ್ಮ ರಾಜಾಜ್ಞೆಯನ್ನು ತಿರಸ್ಕರಿಸುತ್ತಾಳೆ. ಆಗ ಆಕೆಯಿಂದ ಬಲವಂತವಾಗಿ ಒಡವೆಗಳನ್ನು ಕಿತ್ತುಕೊಂಡು ಬರುವಂತೆ ರಾಜಒಡೆಯರು ಅಪ್ಪಣೆ ಮಾಡುತ್ತಾರೆ. ಆಗ ರಾಜಧಾನಿ ಶ್ರೀರಂಗಪಟ್ಟಣದಿಂದ ರಾಜಭಟರು ಅಲಮೇಲಮ್ಮ ವಾಸವಿದ್ದ ತಲಕಾಡಿನತ್ತ ಹೊರಡುತ್ತಾರೆ.

ರಾಜಭಟರು ತಲಕಾಡಿನತ್ತ ಬರುತ್ತಿರುವ ವಿಷಯ ತಿಳಿದ ಅಲಮೇಲಮ್ಮ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಲಕಾಡಿನಿಂದ ಮಾಲಂಗಿಯತ್ತ ಓಡಿಹೋಗುತ್ತಾಳೆ. ಆದರೆ ರಾಜಭಟರು ಅವಳ ಬೆನ್ನಟ್ಟುತ್ತಾರೆ. ಆಗ ಅವಳಿಗೆ ಅವರಿಂದ ತಪ್ಪಿಸಿಕೊಂಡು ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಬೇರೆ ದಾರಿ ಕಾಣದ ಆಕೆ ಕೋಪದಿಂದ ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಶಾಪ ನೀಡಿ ತನ್ನಲಿದ್ದ ಒಡವೆಗಂಟನ್ನು ಉಡಿಯಲ್ಲಿ ಕಟ್ಟಿಕೊಂಡು ಮಾಲಂಗಿ ಸಮೀಪದ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ.

ಅಲಮೇಲಮ್ಮನ ಶಾಪದ ಪ್ರಭಾವ ಎನ್ನುವಂತೆ ಅಂದಿನಿಂದ ಇಂದಿನ ತನಕವೂ ತಲಕಾಡು ಮರಳು ತುಂಬಿದ ಪ್ರದೇಶವಾಗಿದೆ. ಹಾಗೆಯೇ ಇದರ ಸಮೀಪದ ಮಾಲಂಗಿ ಕೂಡ ಮಡುವಾಗಿ ಭಯಂಕರ ಪ್ರಪಾತವಾಗಿದೆ. ಅಷ್ಟೇ ಅಲ್ಲ ಆ ಕಾಲದಿಂದಲೂ ಮೈಸೂರು ಅರಸರಿಗೆ ಮಕ್ಕಳಾಗದೆ ಅವರು ದತ್ತುಪಡೆದವರಿಗೆ ಮಾತ್ರ ಸಂತಾನ ಪ್ರಾಪ್ತವಾಗಿದೆ.

ಹೀಗಾಗಿಯೇ ಅಲಮೇಲಮ್ಮನ ಶಾಪ ನಿವಾರಣೆಗಾಗಿ ರಾಜ ಒಡೆಯರು ಅಲಮೇಲಮ್ಮನ ಚಿನ್ನದ ವಿಗ್ರಹವೊಂದನ್ನು ಮಾಡಿಸಿ ಅವರ ಕಾಲದಿಂದಲೇ ನವರಾತ್ರಿ ಹಬ್ಬದಲ್ಲಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಜಾರಿಗೆ ತಂದರು ಎನ್ನಲಾಗಿದ್ದು, ಅಲ್ಲಿಂದ ಇಲ್ಲಿವರೆಗೂ ನಿರಂತರವಾಗಿ ಪೂಜೆ ನಡೆದುಕೊಂಡು ಬಂದಿದೆ. ಈಗಲೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನಡೆಸಿಕೊಂಡು ಹೋಗುತ್ತಿದ್ದಾರೆ.

More Images