ಸ್ಕೂಟರ್ ನಲ್ಲೇ ತಾಯಿಗೆ ತೀರ್ಥಯಾತ್ರೆ ಮಾಡಿಸಿದ ಪುತ್ರ

ಸ್ಕೂಟರ್ ನಲ್ಲೇ ತಾಯಿಗೆ ತೀರ್ಥಯಾತ್ರೆ ಮಾಡಿಸಿದ ಪುತ್ರ

Lavakumar   ¦    Aug 27, 2018 06:03:19 PM (IST)
ಸ್ಕೂಟರ್ ನಲ್ಲೇ ತಾಯಿಗೆ ತೀರ್ಥಯಾತ್ರೆ ಮಾಡಿಸಿದ ಪುತ್ರ

ತೇತ್ರಾಯುಗದ ಶ್ರವಣಕುಮಾರ ತನ್ನ ತಂದೆ-ತಾಯಿಯನ್ನು ಹೊತ್ತು ತೀರ್ಥಯಾತ್ರೆ ಕೈಗೊಂಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಇಲ್ಲೊಬ್ಬ ಮಗ ತನ್ನ ತಾಯಿಯನ್ನು ಬಜಾಜ್ ಸ್ಕೂಟರ್ ಮೇಲೆ ಕೂರಿಸಿಕೊಂಡು ಬರೋಬ್ಬರಿ 25 ಸಾವಿರ ಕಿ.ಮೀ. ಸುತ್ತಾಡಿಸಿ ತೀರ್ಥಯಾತ್ರೆ ಮಾಡಿಸಿಕೊಂಡು ಬರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇವರ ಹೆಸರು ಡಿ.ಕೃಷ್ಣ ಕುಮಾರ್. ಮೂಲತಃ ಮೈಸೂರಿನವರಾದ ಇವರು ತನ್ನ ತಾಯಿಯ ಬಯಕೆಯನ್ನು ತೀರಿಸಿದ ಪರಿ ಎಲ್ಲರೂ ಅಚ್ಚರಿ ಪಡುವಂತಹದ್ದೇ ಆಗಿದೆ. ಇನ್ನು ಡಿ.ಕೃಷ್ಣ ಕುಮಾರ್ ಅವರು ಇಂತಹದೊಂದು ಕಾರ್ಯ ಮಾಡುವ ಕುರಿತಂತೆ ಆಲೋಚನೆ ಮಾಡಿದ್ದೇ ಆಕಸ್ಮಿಕ ಅದಕ್ಕೂ ಒಂದು ಕಾರಣವಿದೆ.

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣಕುಮಾರ್ ತಂದೆ ದಕ್ಷಿಣಮೂರ್ತಿ ಸಾವನ್ನಪ್ಪಿ ನಾಲ್ಕು ವರ್ಷವಾಗಿದ್ದು, ಅವರ ತಾಯಿ ಮೈಸೂರಿನಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಒಂದು ಬಾರಿ ಮೈಸೂರಿಗೆ ಹೋಗಿದ್ದ ಕೃಷ್ಣಕುಮಾರ್ ಬಳಿ ಹಂಪಿ, ಹಳೇಬಿಡು ನೋಡಬೇಕು ಎಂದು ತಮ್ಮ ಆಸೆ ಹೇಳಿದ್ದಾರೆ. ಆಗಲೇ ಅವರು ತನ್ನ ತಾಯಿಯನ್ನು ಹಳೇಬಿಡು ಮಾತ್ರವಲ್ಲ, ದೇಶಾದ್ಯಂತ ಸುತ್ತಾಡಿಸಬೇಕು ಎಂದು ನಿರ್ಧಾರಕ್ಕೆ ಬಂದು ಬಿಟ್ಟರು. ಅಲ್ಲದೆ ಅದಕ್ಕೆ ಬಳಸಿಕೊಂಡಿದ್ದು ಅವರು ತಮ್ಮ ತಂದೆಯ ಕಾಲದ 20 ವರ್ಷದ ಹಳೆಯ ಬಜಾಜ್ ಚೇತಕ್ ಸ್ಕೂಟರ್. ಈ ಸ್ಕೂಟರ್‍ ನ್ನು ಅವರು ಬಳಸಿಕೊಳ್ಳಲು ಕಾರಣವೂ ಇದೆ. ಇದು ತಂದೆಯವರು ಇಷ್ಟಪಟ್ಟು ತೆಗೆದ ವಾಹನವಾಗಿದ್ದು ಅದರಲ್ಲೇ ತೀರ್ಥಯಾತ್ರೆ ಮಾಡಿದರೆ ತಾಯಿ ಮಾತ್ರವಲ್ಲ ತಂದೆಯ ಆತ್ಮಕ್ಕೂ ಸಂತೋಷ ಸಿಗುತ್ತದೆ ಎಂಬುವುದು ಅವರ ಆಲೋಚನೆಯಾಗಿದೆ.

ಕೃಷ್ಣಕುಮಾರ್ ಅವರು 70 ವರ್ಷ ಪ್ರಾಯದ ತಾಯಿ ಚೂಡಾರತ್ನ ಅವರನ್ನು ಏಳು ತಿಂಗಳು, ಒಂದು ವಾರ ಕಾಲ ದಕ್ಷಿಣ ವಿಂದ್ಯ ಭಾಗದಲ್ಲಿನ ಬಹುತೇಕ ಎಲ್ಲಾ ರಾಜ್ಯಗಳ ಪುಣ್ಯ ಕ್ಷೇತ್ರಗಳಿಗೆ ಕರೆದೊಯ್ದು ತೋರಿಸಿದ್ದಾರೆ. ಆಶ್ರಯಕ್ಕಾಗಿ ಯಾವುದೇ ಹೋಟೆಲ್, ಅಥವಾ ವಸತಿ ಗೃಹಗಳಲ್ಲಿ ಉಳಿಯದೆ ಮಠಗಳು, ದೇವಸ್ಥಾನಗಳಲ್ಲಿ ಉಳಿದು ಕೊಳ್ಳುವ ಮೂಲಕ ತೀರ್ಥಯಾತ್ರೆ ಪೂರ್ಣಗೊಳಿಸಿದ್ದಾರೆ.

ಮಾತೃ ಸೇವಾ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಈ ವರ್ಷದ ಜನವರಿ 16 ರಿಂದ ಯಾತ್ರೆ ಆರಂಭಿಸಿದ ಈ ಇವರು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮತ್ತು ಮಹಾರಾಷ್ಟ್ರಗಳ ಎಲ್ಲಾ ದೇವಾಲಯಗಳನ್ನು ದರ್ಶನ ಮಾಡಿ ಬಂದಿದ್ದಾರೆ. ಬೆಂಗಳೂರಿಗೆ ವಾಪಾಸ್ಸಾಗುವಾಗ ಎಲ್ಲಿಯೂ ಸ್ಕೂಟರ್ ತೊಂದರೆ ಕೊಡಲಿಲ್ಲ. ಆದರೆ 16 ಸಾವಿರ ಕಿಲೋ ಮೀಟರ್ ನಂತರ ಪಂಚರ್ ಆಗಿತ್ತು. ಪ್ರವಾಸದ ಸಂದರ್ಭ ತಾಯಿ ಆಯಾಸಗೊಳ್ಳದಿರಲಿ ಎಂಬ ಕಾರಣದಿಂದ ಸೀಟ್ ಮೇಲೆ ದಿಂಬನ್ನು ಹಾಕಿ ವ್ಯವಸ್ಥೆ ಮಾಡಿದ್ದ ಎನ್ನುತ್ತಾರೆ ಕೃಷ್ಣ ಕುಮಾರ್.

ಒಂದು ವರ್ಷದ ಹಿಂದೆ ತಾಯಿ, ಮಗ ಬೆಂಗಳೂರಿನಿಂದ ಕಾಶ್ಮೀರದವರೆಗೂ ಪ್ರವಾಸ ಕೈಗೊಂಡಿದ್ದರು. ಆಗ ಕಾಶ್ಮೀರಿಪುರ ನಿವಾಸ ದೇವಾಲಯ ಮತ್ತಿತರ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ್ದಾಗಿ ಹೇಳುವ ಕೃಷ್ಣಕುಮಾರ್ ಸ್ಕೂಟರ್ ಹಳೆಯದಾದರೂ ಅದರಲ್ಲಿ ಹಣ್ಣು, ಅಕ್ಕಿ, ಚಾಕು, ರೈನ್ ಕೋಟ್, ಮತ್ತಿತರ ವಸ್ತುಗಳನ್ನು ಇಟ್ಟುಕೊಳ್ಳಬಹುದು. ದೇವಾಲಯ ನೋಡುತ್ತಿದ್ದರೆ ಹೊಟ್ಟೆ ಹಸಿವು ಗೊತ್ತಾಗುತ್ತಿರಲಿಲ್ಲ. ನಮ್ಮ ಬಗ್ಗೆ ತಿಳಿದವರು ಮನೆಗೆ ಆಹ್ವಾನಿಸುತ್ತಿದ್ದರು ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

ಕೃಷ್ಣಕುಮಾರ್ ಹಾಗೂ ಆತನ ತಾಯಿ ಹುಬ್ಬಳ್ಳಿ ಮಾರ್ಗದಲ್ಲಿನ ಹಲವು ದೇವಾಲಯಗಳಿಗೆ ಭೇಟಿ ನೀಡಿ ಆಗಸ್ಟ್ 30ರಂದು ಬೆಂಗಳೂರು ತಲುಪಲಿದ್ದಾರೆ.

ಅದೇನೇ ಇರಲಿ 45 ದಾಟುತ್ತಿದ್ದಂತೆ ಸಣ್ಣ ರೋಗಗಳಿಗೂ ದೊಡ್ಡ ಚಿಕಿತ್ಸೆ ಪಡೆಯುವ ಇಂದಿನ ಜನಾಂಗಕ್ಕೆ 70ರ ಹರೆಯದಲ್ಲೂ ನೆರಳಿನ ಆಶ್ರಯವಿಲ್ಲದೇ ದ್ವಿಚಕ್ರವಾಹನದಲ್ಲೇ ತೀರ್ಥ ಯಾತ್ರೆ ಮಾಡಿದ ಚೂಡಾ ರತ್ನರವರ ಮನೋಸ್ಥೈರ್ಯ ಮತ್ತು ಅವರ ಮನೋಅಭಿಲಾಷೆಯನ್ನು ಅರಿತು ಮಗ ಅದನ್ನು ಪೂರೈಸಿದ್ದು ನಿಜಕ್ಕೂ ಇತರರಿಗೆ ಮಾದರಿ ಎಂದರೆ ತಪ್ಪಾಗಲಾರದು.

More Images