ಘಂಟೆಯ ಸದ್ದು ಕೇಳುತ್ತಿದ್ದಂತೆ ಗೂಳಿ ಪೂಜೆಗೆ ಹಾಜರ್!

ಘಂಟೆಯ ಸದ್ದು ಕೇಳುತ್ತಿದ್ದಂತೆ ಗೂಳಿ ಪೂಜೆಗೆ ಹಾಜರ್!

LK   ¦    Mar 21, 2018 12:44:55 PM (IST)
ಘಂಟೆಯ ಸದ್ದು ಕೇಳುತ್ತಿದ್ದಂತೆ ಗೂಳಿ ಪೂಜೆಗೆ ಹಾಜರ್!

ಚಾಮರಾಜನಗರ: ಆ ದೇಗುಲದ ಗಂಟೆಯ ಶಬ್ದ ಕೇಳುತ್ತಿದ್ದಂತೆಯೇ ಆ ಗೂಳಿ ದೇವರಗುಡಿ ಮುಂದೆ ಪ್ರತ್ಯಕ್ಷವಾಗುತ್ತದೆ. ದೇವರ ದರ್ಶನ ಪಡೆದು ಪೂಜಾರಿ ನೀಡುವ ನೈವೇದ್ಯ ಸೇವಿಸಿ ಅಲ್ಲಿಂದ ಹೊರಡುತ್ತದೆ. ಇದು ಪ್ರತಿ ನಿತ್ಯವೂ ನಡೆಯುತ್ತಿದೆ.

ಇಂತಹ ಅಪರೂಪದ ಘಟನೆ ನಡೆಯುತ್ತಿರುವುದು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ತ್ರಿಯಾಂಭಕಪುರ ದೇಗುಲದಲ್ಲಾಗಿದ್ದು, ಭಕ್ತರು ಇದನ್ನು ಅಚ್ಚರಿಯಿಂದ ನೋಡುತ್ತಾರಲ್ಲದೆ, ದೇವರ ಮಹಿಮೆ ಎಂದು ಕೈಮುಗಿಯುತ್ತಾರೆ.

ಎಲ್ಲ ಕಡೆಯೂ ದೇವಾಲಯಗಳಿರುತ್ತವೆ. ದೇವಾಲಯಗಳ ಆಸುಪಾಸಿನಲ್ಲಿ ಬೀಡಾಡಿ ದನಗಳು ಅಡ್ಡಾಡುತ್ತವೆ. ಅಲ್ಲಿಗೆ ಭೇಟಿ ನೀಡುವ ಭಕ್ತರು ನೀಡುವ ಪದಾರ್ಥಗಳನ್ನು ಸೇವಿಸುತ್ತವೆ. ಆದರೆ ಪ್ರತಿದಿನವೂ ದೇವರ ಗರ್ಭಗುಡಿಗೆ ಬಂದು ದೇವರ ದರ್ಶನ ಪಡೆದು ನೈವೇದ್ಯ ಸೇವಿಸಿ ಹೋಗುವ ಗೂಳಿ(ಹೋರಿ)ಯನ್ನು ಕಾಣುವುದು ಅಪರೂಪ. ಹೀಗಾಗಿಯೇ ತ್ರಿಯಾಂಭಕಪುರದಲ್ಲಿ ನಡೆಯುವ ಈ ದೃಶ್ಯ ಎಲ್ಲರ ಗಮನಸೆಳೆಯುತ್ತಿದೆ.

ಹಾಗೆ ನೋಡಿದರೆ ಇಲ್ಲಿರುವ ಶ್ರೀ ತ್ರಿಯಾಂಭಕೇಶ್ವರ ಮತ್ತು ಶ್ರೀ ತ್ರಿಯಾಂಭಕೇಶ್ವರಿ ದೇವಾಲಯಕ್ಕೆ ಶತಮಾನಗಳ ಇತಿಹಾಸವಿದೆ. ಈ ದೇಗುಲ ಕಾಲಗರ್ಭದಲ್ಲಿ ಹುದುಗಿಹೋಗಿತ್ತು. ಊರವರೆಲ್ಲರು ಸೇರಿ ಜೀರ್ಣೋದ್ಧಾರ ಮಾಡಿದ ಬಳಿಕ ದೇವಾಲಯಕ್ಕೊಂದು ಕರುವನ್ನು ಕಂದಾಯ ಇಲಾಖೆಯ ರಂಗಸ್ವಾಮಿ ಎಂಬುವರು ಹರಕೆಯಾಗಿ ಅರ್ಪಿಸಿದರು. ಇದು ಬೆಳೆದು ನಿಂತಿದ್ದು, ಚಿಕ್ಕಂದಿನಿಂದಲೂ ದೇವರ ಮಂತ್ರ, ಗಂಟೆಯ ನಿನಾದವನ್ನು ಕೇಳುತ್ತಾ ಬೆಳೆದಿದ್ದು, ಪ್ರತಿದಿನವೂ ದೇವರ ನೈವೇದ್ಯವನ್ನು ನೀಡುತ್ತಾ ಬಂದಿದ್ದರಿಂದ ಅದಕ್ಕೆ ಅಭ್ಯಾಸವಾಗಿದ್ದು, ಅದರಂತೆ ಪ್ರತಿ ದಿನ ದೇವಾಲಯದಲ್ಲಿ ಪೂಜೆಯ ವೇಳೆ ಮೊಳಗುವ ಗಂಟೆ ನಾದಕ್ಕೆ ದೇವರ ದರ್ಶನ ಪಡೆದು ಅರ್ಚಕರು ನೀಡುವ ಮಂಗಳಾರತಿ ಸ್ವೀಕರಿಸಿ, ಪ್ರಸಾದ ತಿಂದು ಹೋಗುತ್ತಿದೆ.

ತ್ರಿಯಾಂಭಕೇಶ್ವರ ದೇವಾಲಯದಲ್ಲಿ ಪ್ರತಿ ನಿತ್ಯ ಬರುವ ಗೂಳಿಗೆ ಇಲ್ಲಿನ ಅರ್ಚಕರು ಮತ್ತು ಗ್ರಾಮಸ್ಥರು ಯೋಗನಂದಿ ಎಂದು ಹೆಸರಿಟ್ಟಿದ್ದಾರೆ. ಯಾರಿಗೂ ಉಪಟಳ ನೀಡದ ಇದನ್ನು ಎಲ್ಲರೂ ಮುಟ್ಟಿ ನಮಸ್ಕರಿಸುತ್ತಾರೆ. ಅದರಲ್ಲಿ ಏನೋ ದೈವಾಂಶ ಇರಬಹುದೆಂದು ಭಕ್ತರು ನಂಬಿದ್ದಾರೆ.