ಪ್ರೇಮಿಗಳನ್ನು ಸೇರಿಸುವ ಗುಲಾಬಿ ಹೂವಿಗೂ ಇದೆ ಒಂದು 'ಪ್ರೀತಿಯ ಕಥೆ'

ಪ್ರೇಮಿಗಳನ್ನು ಸೇರಿಸುವ ಗುಲಾಬಿ ಹೂವಿಗೂ ಇದೆ ಒಂದು 'ಪ್ರೀತಿಯ ಕಥೆ'

LK   ¦    Feb 14, 2018 12:26:38 PM (IST)
ಪ್ರೇಮಿಗಳನ್ನು ಸೇರಿಸುವ ಗುಲಾಬಿ ಹೂವಿಗೂ ಇದೆ ಒಂದು 'ಪ್ರೀತಿಯ ಕಥೆ'

ವ್ಯಾಲೆಂಟೈನ್ ಡೇಯಲ್ಲಿ ಗುಲಾಬಿಗೆ ಎಲ್ಲಿಲ್ಲದೆ ಪ್ರಾಮುಖ್ಯತೆ ನೀಡುವುದೇಕೆ? ಪ್ರೇಮ ನಿವೇದನೆಗೆ ಗುಲಾಬಿ ಹೂವೇ ಏಕೆ ಬೇಕು? ಹೀಗೆ ಪ್ರೇಮಕ್ಕೂ ಗುಲಾಬಿ ಹೂವಿಗೂ ಇರುವ ಸಂಬಂಧಗಳ ಬಗ್ಗೆ ನೂರೆಂಟು ಪ್ರಶ್ನೆಗಳು ನಮ್ಮಲ್ಲಿ ಹುಟ್ಟುತ್ತಾ ಹೋಗುತ್ತದೆ.

ಪ್ರೇಮಿಯೊಬ್ಬ ತನ್ನ ಪ್ರಿಯತಮೆಯ ಕೈಗೆ ಚೆಂಗುಲಾಬಿಯನ್ನಿಟ್ಟು ಮೆಲ್ಲಗೆ ಐ ಲವ್ ಯೂ ಎಂದು ಉಸುರಿಬಿಟ್ಟರೆ ಸಾಕು ಅವಳು ನಾಚಿ ನೀರಾಗಿ ಬಿಡುತ್ತಾಳೆ. ಅದರಲ್ಲಿ ಅಷ್ಟೋಂದು ಶಕ್ತಿಯಿದೆ.

ಪ್ರೇಮ ನಿವೇದನೆ ಸಂದರ್ಭವೆಲ್ಲಾ ಈ ಹೂವೇ ಪ್ರೇಮ ಸೇತುವಾಗಿ ಕಾರ್ಯನಿರ್ವಹಿಸುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಬಹಳಷ್ಟು ಸಂದರ್ಭಗಳಲ್ಲಿ ಲಕ್ಷಾಂತರ ರೂಪಾಯಿಗಳ ಉಡುಗೊರೆಗಳು ಮಾಡಲಾಗದ ಕೆಲಸವೊಂದನ್ನು ಈ ಚೆಂಗುಲಾಬಿಯೊಂದು ಸದ್ದಿಲ್ಲದೆ ಮಾಡಿ ಮುಗಿಸಿಬಿಟ್ಟಿರುತ್ತದೆ.

ಇಷ್ಟಕ್ಕೂ ಗುಲಾಬಿಗೂ-ಪ್ರೇಮಕ್ಕೂ ಏನಪ್ಪಾ ಸಂಬಂಧ? ಪ್ರೇಮ ನಿವೇದನೆಯಲ್ಲಿ ಇದೇ ಹೂವನ್ನು ಏಕೆ ಬಳಸುತ್ತಾರೆ ಎಂಬುವುದರ ಮೂಲ ಹುಡುಕಿಕೊಂಡು ಹೋದರೆ ಪ್ರೇಮಲೋಕದಲ್ಲಿ ಹಲವು ಸಂಗತಿಗಳಿರುವುದು ಗೋಚರಿಸುತ್ತಾ ಹೋಗುತ್ತದೆ.

ಅದೇನೆಂದರೆ ಮುಳ್ಳಿನ ಗಿಡದಲ್ಲಿ ಅರಳುವ ಹೂ ಮೃದುವಾಗಿಯೂ ಸೊಗಸಾಗಿಯೂ ಇರುತ್ತದೆ. ಹಾಗೆಂದು ಮೈಮರೆತು ಕೈ ಹಾಕಿದರೆ ಗಿಡದ ಮೇಲಿರುವ ಮುಳ್ಳು ಚುಚ್ಚುತ್ತದೆಯಲ್ಲವೆ? ಪ್ರೇಮವೂ ಅಷ್ಟೆ ಅದು ಸುಖದ ಸುಪ್ಪತ್ತಿಗೆ ಅಲ್ಲ ಮುಳ್ಳಿನ ಹಾದಿಯೇ... ಇದನ್ನು ಅರಿತು ಮುಳ್ಳಿನ ಗಿಡದಲ್ಲಿ ಹೇಗೆ ಸುಂದರ ಹೂ ಅರಳುತ್ತದೆಯೋ ಹಾಗೆಯೇ ನಮ್ಮ ಪ್ರೀತಿಯೂ ಅರಳಬೇಕು ಎಂಬ ಉದ್ದೇಶದಿಂದಲೇ ಗುಲಾಬಿ ಹೂವನ್ನು ಬಳಸಲಾಗುತ್ತಿದೆ.

ಇನ್ನು ಚೆಂಗುಲಾಬಿಯೇ ಏಕೆ ಪ್ರೇಮದ ಸಂಕೇತವಾಯಿತು? ಎಂಬ ಪ್ರಶ್ನೆಗೂ ಪ್ರೇಮಿಗಳ ವಲಯದಲ್ಲೊಂದು ಸೊಗಸಾದ ಕಥೆಯಿರುವುದನ್ನು ನಾವು ಕಾಣಬಹುದು.

ಪುಟ್ಟ ಹಕ್ಕಿಯೊಂದು ಬಿಳಿಗುಲಾಬಿಯನ್ನು ಗಾಢವಾಗಿ ಪ್ರೀತಿಸುತ್ತಿತ್ತು. ಅದನ್ನು ಹೇಳಿಯೂ ಇತ್ತು. ಆದರೆ ಹಕ್ಕಿಯ ಪ್ರೀತಿಯನ್ನು ಅರಿಯದ ಗುಲಾಬಿ ಮಾತ್ರ ಉದ್ದಟತನದಿಂದ ವರ್ತಿಸುತ್ತಿತ್ತು. ಒಂದು ದಿನ ಗೋಗರೆದು ಕೇಳಿದ್ದಕ್ಕೆ ಬಿಳಿ ಗುಲಾಬಿ ನನ್ನ ಬಣ್ಣ ಕೆಂಪಾಗಿ ಬದಲಾದ ದಿನದಿಂದಲೇ ನಿನ್ನನ್ನು ಪ್ರೀತಿಸುತ್ತೇನೆಂದು ಭಾಷೆ ನೀಡಿತು. ಹಕ್ಕಿ ಮಾತ್ರ ಗುಲಾಬಿ ಹೂ ಕೆಂಪಾಗುವುದನ್ನೇ ಕಾಯತೊಡಗಿತು. ಆದರೆ ದಿನ ಉರುಳಿ ವಾರವಾಯಿತು. ವಾರ, ತಿಂಗಳಾಗಿ ಕೊನೆಗೆ ವರ್ಷವಾದರೂ ಬಿಳಿ ಗುಲಾಬಿ ಮಾತ್ರ ಕೆಂಪಾಗಲಿಲ್ಲ. ಇದರಿಂದ ನಿರಾಶೆಗೊಂಡ ಹಕ್ಕಿಯು ಹೂವಿನ ಮೇಲೆ ಕುಳಿತು ಗಿಡದಿಂದ ಮುಳ್ಳನ್ನು ಕಿತ್ತು ತನ್ನ ಎದೆಗೆ ಚುಚ್ಚಿಕೊಂಡಿತು. ಆಗ ಹಕ್ಕಿಯ ಎದೆಯಿಂದ ಹೊರಬಂದ ರಕ್ತ ಬಿಳಿ ಗುಲಾಬಿಯನ್ನೆಲ್ಲಾ ತೊಯ್ದು ಕೆಂಪಾಗಿಸಿತು. ಆದರೆ ಅಷ್ಟರಲ್ಲಿಯೇ ಹಕ್ಕಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಇಷ್ಟೆಲ್ಲಾ ನಡೆದ ಮೇಲೆ ಗುಲಾಬಿಗೆ ಜ್ಞಾನೋದಯವಾಗಿತ್ತು. ತನ್ನ ಅಹಂಕಾರದಿಂದ ಹಕ್ಕಿಯ ಪ್ರಾಣವೇ ಹೋಯಿತಲ್ಲ ಎಂದು ಮಮ್ಮಲ ಮರುಗತೊಡಗಿತ್ತು. ತನಗೋಸ್ಕರ ಪ್ರಾಣವನ್ನೇ ತೆತ್ತ ಗೆಳೆಯನ ನೆನಪಿಗಾಗಿ ಇನ್ನು ಮುಂದೆ ಕೆಂಪು ಬಣ್ಣದಲ್ಲಿದ್ದುಕೊಂಡೇ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯನಿರ್ವಹಿಸುವುದಾಗಿ ಶಪಥ ಮಾಡಿತಂತೆ. ಅಂದಿನಿಂದ ಇಂದಿನವರೆಗೂ ಪ್ರೇಮಿಗಳಿಗೆ ಪ್ರೇಮ ಸೇತುವೆಯಾಗಿ ಕೆಂಪು ಗುಲಾಬಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆಯಂತೆ.

ನೆನಪಿರಲಿ... ಗುಲಾಬಿ ಹೂ ನೀಡಿದ ತಕ್ಷಣ ಪಡೆದವರು ನಿಮ್ಮನ್ನು ಇಷ್ಟಪಟ್ಟಿದ್ದಾರೆ ಎಂದರ್ಥವಲ್ಲ. ನೀವು ಒಲುಮೆಯಿಂದ ನೀಡಿದ ಹೂವನ್ನು ಅವರು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದರಷ್ಟೆ ನಿಮ್ಮ ಪ್ರೀತಿಗೆ ಆಕೆ ಒಪ್ಪಿಗೆ ದೊರೆತಿದೆ ಎಂದರ್ಥ. ಇಲ್ಲಾಂದ್ರೆ... ಬಲತ್ಕಾರವಾಗಿ ನೀಡುವ ವ್ಯರ್ಥ ಪ್ರಯತ್ನ ಖಂಡಿತಾ ಮಾಡಬೇಡಿ. ಅದು ಶೋಭೆಯೂ ಅಲ್ಲ.